ಯಕ್ಷಗಾನದಲ್ಲಿ ಬಣ್ಣದ ವೇಷಗಳು ತಮ್ಮ ಅಟ್ಟಹಾಸ, ಮುಖವರ್ಣಿಕೆ, ಕುಣಿತ, ತೆರೆಕುಣಿತ, ನಡೆ ಇವುಗಳಿಂದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿವೆ. ಒಡ್ಡೋಲಗ ವೈಭವವನ್ನು ನೋಡುವುದೆಂದರೆ ಪ್ರೇಕ್ಷಕರ ಕಣ್ಣುಗಳಿಗೆ, ಕಿವಿಗಳಿಗೆ ಅದೊಂದು ಹಬ್ಬವೇ ಹೌದು. ಪ್ರಸಂಗದ ಕೊನೆಯಲ್ಲಿ ಯಾ ಬೆಳಗಿನ ಹೊತ್ತು ಬಣ್ಣದ ವೇಷಗಳು ರಂಗವೇರಿದರೆ ನೋಟಕರ ನಿದ್ದೆಯನ್ನು ಬಡಿದೆಬ್ಬಿಸಿ ಅವರನ್ನು ರೋಮಾಂಚನಗೊಳಿಸುತ್ತವೆ. ಆದರೂ, ಈಗೀಗ ಈ ವಿಭಾಗವು ಅವಜ್ಞೆಗೊಳಗಾಗುತ್ತಿದೆಯೇ? ಎಂಬ ಸಂಶಯವು ಕಲಾಭಿಮಾನಿಗಳಿಗೆ ಬಾರದಿರದು. ಅದಕ್ಕೆ ಹಲವು ಕಾರಣಗಳೂ ಇರಬಹುದು. ಹಾಗಾಗಬಾರದು. ಬಣ್ಣದ ವೇಷಗಳ ನಿಜಸೌಂದರ್ಯವನ್ನು ಸದಾ ಆಸ್ವಾದಿಸುವ ಅವಕಾಶಗಳು ಕಲಾಭಿಮಾನಿಗಳಿಗೆ ಸಿಗಲೇಬೇಕು. ಕಲಾವಿದರೂ, ಪ್ರೇಕ್ಷಕರೂ ಯಕ್ಷಗಾನಕ್ಕೆ ಬಣ್ಣದ ವೇಷಗಳ ಅನಿವಾರ್ಯತೆ ಮತ್ತು ಮಹತ್ತ್ವಗಳನ್ನು ಅರಿತು ಸ್ಪಂದಿಸಬೇಕಾದುದು ಯೋಚಿಸಬೇಕಾದ ವಿಚಾರ. ಹಿರಿಯ ಕಲಾವಿದರನೇಕರು ರಂಗವೇರಿ ಅಬ್ಬರಿಸಿ ಗಂಡುಕಲೆಯ ‘ಬಣ್ಣ’ ವಿಭಾಗಕ್ಕೆ ನ್ಯಾಯವನ್ನೂ ಶ್ರೀಮಂತಿಕೆಯನ್ನೂ ನೀಡಿದ್ದರು. ಹಳೆಯ ತಲೆಮಾರಿನ ಹಲವು ಕಲಾವಿದರನ್ನು ನಾವು ನೋಡಿಲ್ಲ. ಆದರೆ ಹೆಸರನ್ನು ಕೇಳಿದ್ದೇವೆ. ಯಾಕೆಂದರೆ ಅವರು ಕೀರ್ತಿವಂತರಾಗಿಯೇ ಇಹದ ವ್ಯವಹಾರವನ್ನು ಮುಗಿಸಿದ್ದರು. ಇನ್ನು ಕೆಲವು ಹಿರಿಯ ಕಲಾವಿದರ ವೇಷಗಳನ್ನು ನೋಡಿದ ಅನುಭವವು ಕಲಾಭಿಮಾನಿಗಳಿಗಿರಬಹುದು. ಬಣ್ಣದ ಮಹಾಲಿಂಗ, ಚಂದ್ರಗಿರಿ ಅಂಬು, ಬಣ್ಣದ ಕುಟ್ಯಪ್ಪು, ಕಾಟುಕುಕ್ಕೆ ಕುಂಞರಾಮ ಮಣಿಯಾಣಿ, ಪಕಳಕುಂಜ ಕೃಷ್ಣ ನಾಯ್ಕ, ತ್ರಿವಿಕ್ರಮ ಶೆಣೈ, ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಸಂಜೀವ ಚೌಟರು ಮೊದಲಾದವರ ಸಾಧನೆ, ಕೊಡುಗೆಗಳು ಪ್ರಶಂಸನೀಯವಾದುದು. ಅವರು ಹಾಕಿಕೊಟ್ಟ ದಾರಿ, ರೀತಿಗಳು ಖಂಡಿತಾ ಅಳಿಯದೆ ಉಳಿದುಕೊಂಡಿದೆ. ಹಾಗಾಗಿ ಯಕ್ಷಗಾನದಲ್ಲಿ ‘ಬಣ್ಣ’ ಬಡವಾಗದು ಖಂಡಿತ. ಇಂದು ಉದಯೋನ್ಮುಕರನೇಕರು ಬಣ್ಣದ ವೇಷಧಾರಿಗಳಾಗಿ ಕಲಾಸೇವೆ ಮಾಡುತ್ತಿರುವುದನ್ನು ನಾವು ಗಮನಿಸಬಹುದು. ಅವರಲ್ಲೊಬ್ಬರು ಶ್ರೀ ಹರಿನಾರಾಯಣ ಭಟ್ ಎಡನೀರು.
ಶ್ರೀ ಹರಿನಾರಾಯಣ ಭಟ್ಟರು ಕಾಸರಗೋಡು ಜಿಲ್ಲೆಯ ಚೆಂಡೆತ್ತೋಡಿ ಪುಂಡೂರು ಎಂಬಲ್ಲಿ 18-8-1974 ರಂದು ಶ್ರೀ ಡಿ. ಕೃಷ್ಣ ಭಟ್ ಮತ್ತು ಇಂದಿರಾ ದಂಪತಿಗಳಿಗೆ ಮಗನಾಗಿ ಜನಿಸಿದರು. ಇವರ ಮೂಲಮನೆ (ತರವಾಡು) ಬಂಟ್ವಾಳ ತಾಲೂಕು ಮುರುವ ಗ್ರಾಮದ ದೈತೋಟ. ಹರಿನಾರಾಯಣ ಭಟ್ಟರು ಚಿಕ್ಕವರಿದ್ದಾಗ ಇವರ ತಂದೆ ತಾಯಿಯರು ಚೊಕ್ಕಾಡಿ ಸಮೀಪ ವಾಸ್ತವ್ಯವಿದ್ದರು. ಎಸ್.ಎಸ್.ಎಲ್.ಸಿ. ವರೆಗೆ ಕುಕ್ಕುಜಡ್ಕ ಪ್ರೌಢಶಾಲೆಯಲ್ಲಿ ಓದಿ, ಕಾವು ಸಮೀಪದ ಪೆರ್ನಾಜೆ ಸೀತಾರಾಘವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದರು. ಇವರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿ. ಪರಿಸರದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳಿಗೆ ಇವರು ಖಾಯಂ ಪ್ರೇಕ್ಷಕ. ತಾನೂ ಕಲಾವಿದನಾಗಬೇಕೆಂಬ ಆಸೆ ಸಹಜವಾಗಿ ಮೂಡಿತು. ಬಾಲ್ಯದಲ್ಲಿ ಬಡತನವೂ ಇತ್ತು. 1993ರಲ್ಲಿ★ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರವನ್ನು ಸೇರಿಕೊಂಡರು. ಪ್ರಖ್ಯಾತ ಸ್ತ್ರೀಪಾತ್ರಧಾರಿ ಶ್ರೀ ಕೋಳ್ಯೂರು ರಾಮಚಂದ್ರ ರಾವ್ ಅವರು ಅಲ್ಲಿ ನಾಟ್ಯಗುರುಗಳಾಗಿದ್ದರು. ಅವರಿಂದ ನಾಟ್ಯ ಕಲಿತರು. ಕೇಂದ್ರದಲ್ಲಿ ಗುರುಗಳಾಗಿದ್ದ ಶ್ರೀ ಹರಿನಾರಾಯಣ ಬೈಪಾಡಿತ್ತಾಯ ದಂಪತಿಗಳಿಂದ ಭಾಗವತಿಕೆಯನ್ನೂ ಅಭ್ಯಸಿಸಿದರು. ಖ್ಯಾತ ಕಲಾವಿದ ಪುತ್ತೂರು ನಾರಾಯಣ ಹೆಗ್ಡೆಯವರ ಪುತ್ರ ಶ್ರೀ ಗಿರೀಶ್ ಹೆಗ್ಡೆಯವರು ಕೇಂದ್ರದಲ್ಲಿ ಹರಿನಾರಾಯಣ ಭಟ್ಟರ ಸಹಪಾಠಿ. ಗಿರೀಶ ಹೆಗ್ಡೆಯವರು ಭಾಗವತಿಕೆ ಅಲ್ಲದೆ ವೇಷವನ್ನೂ ಮಾಡುತ್ತಾರೆ. ಪ್ರಸ್ತುತ ಧರ್ಮಸ್ಥಳ ಮೇಳದ ಮೆನೇಜರ್. ಕೇಂದ್ರದ ವಿದ್ಯಾರ್ಥಿಯಾಗಿ ಹರಿನಾರಾಯಣ ಭಟ್ಟರು ದೇವೇಂದ್ರನಾಗಿ ಮೊದಲು ರಂಗಪ್ರವೇಶ ಮಾಡಿದ್ದರು. ಅಲ್ಲದೆ ಶೂರ್ಪನಖಿ ಪಾತ್ರವನ್ನೂ ಮಾಡಿದ್ದರು. ಕೇಂದ್ರದ ವಿದ್ಯಾರ್ಥಿಗಳ ಪ್ರದರ್ಶನಕ್ಕೆ ಭಾಗವತಿಕೆಯನ್ನೂ ಮಾಡಿದ್ದರು. ಶ್ರೀ ಹರಿನಾರಾಯಣ ಭಟ್ಟರು 1993ರಲ್ಲಿ ಕಲ್ಲಾಡಿ ವಿಠಲ ಶೆಟ್ಟರ ಯಜಮಾನಿಕೆಯ ಕಟೀಲು ಮೇಳದಲ್ಲಿ ತನ್ನ ತಿರುಗಾಟ ಆರಂಭಿಸಿದರು.
ಪೂರ್ವರಂಗದಲ್ಲಿ ಕೋಡಂಗಿ, ಬಾಲಗೋಪಾಲರು ಹೀಗೆ ಹಂತ ಹಂತವಾಗಿ ಬೆಳೆದು ಬಂದವರು. ಪ್ರಸಂಗದಲ್ಲಿ ಸಣ್ಣಪುಟ್ಟ ವೇಷಗಳನ್ನು ಮಾಡುತ್ತಾ ನಿದ್ದೆ ಮಾಡದೆ ಆಟವನ್ನು ಶ್ರದ್ಧೆಯಿಂದ ನೋಡುತ್ತಾ ಕಲಿತರು.
ರಂಗಕ್ಕೆ ಹೋಗುವ ಮುನ್ನ ಬಣ್ಣ ಹಚ್ಚುವ ಮುಖದ ಅಲಂಕಾರದ ಬಗ್ಗೆ ಗಮನ. ಅದರ ಮೊದಲು ಪ್ರಸಂಗದ ನಡೆ ತಿಳಿದುಕೊಂಡು (ನಾನು ಮಾಡುವ ವೇಷದ ಬಗ್ಗೆ) ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಹರಿನಾರಾಯಣ ಭಟ್ ಎಡನೀರು.
ದೇವಿ ಮಹಾತ್ಮೆ, ಮೈರಾವಣ ಕಾಳಗ, ರಾವಣ ವಧೆ, ಕುಮಾರ ವಿಜಯ, ವೀರವರ್ಮ ಕಾಳಗ, ವೀರಮಣಿ ಕಾಳಗ, ನರಕಾಸುರ ಮೋಕ್ಷ, ಹಿಡಿಂಬಾ ವಿವಾಹ, ಪೂತನಿ ಸಂಹಾರ, ಗದಾಯುದ್ಧ ಇತ್ಯಾದಿ ನೆಚ್ಚಿನ ಪ್ರಸಂಗಗಳು.
ಯಕ್ಷಗಾನಕ್ಕೆ ಬರುವವರಿಗೆ, ನೋಡುವವರಿಗೆ ತಿಳಿದೀತು, ಈಗ ಯಕ್ಷಗಾನ ಹೇಗಿದೆ ಎಂದು ಎಲ್ಲರಿಗೂ ಗೊತ್ತಿದೆ.
ಕಲಾವಿದರ ಒಗ್ಗಟ್ಟಿನ ಗುಟ್ಟೇ ಒಳ್ಳೆಯ ಪ್ರದರ್ಶನ.
ಯಾವುದಕ್ಕೆ ಮಹತ್ವ, ಯಾವುದು ಒಳ್ಳೆಯದು ಕೆಟ್ಟದ್ದು ಎಂದು ಸಾಮಾನ್ಯನೂ ಅರ್ಥ ಮಾಡಿಕೊಳ್ಳಬಲ್ಲ, ವಿದ್ವಾಂಸನೂ ತಿಳಿದುಕೊಳ್ಳಬಲ್ಲ. ಕೆಲವೊಂದು ಪ್ರಸಂಗಗಳಲ್ಲಿ ಅವಕಾಶವಿದೆ. ಇನ್ನು ಕೆಲವು ಪ್ರಸಂಗಗಳಲ್ಲಿ ಕಡಿಮೆ. ಸಮಯವಿದ್ದರೆ ತೆರೆ ಕ್ಲಾಸು, ನಿತ್ಯ ವಿಧಿ. ಇಲ್ಲದಿದ್ದರೆ ಇಲ್ಲ. ಕೆಲವು ವೇಷಗಳಿಗೆ ಬೇಕು. ಸಮಯದ ಅಭಾವ. ನಾವು ಹೊಂದಿಕೊಳ್ಳಬೇಕು. ಅಷ್ಟೇ.. ನಾನು ನನ್ನ ವೇಷಗಳನ್ನು ಸಮರ್ಪಕವಾಗಿ ಮಾಡಲು ಸಾಧ್ಯವೇ ಎಂದು ಆಲೋಚಿಸುತ್ತೇನೆ. ಕೆಲವೊಮ್ಮೆ ಬೇಸರವಾಗಬಹುದು, ಸಂತೋಷವಾಗಬಹುದು. ಪ್ರಸಂಗದ ಒಂದು ವೇಷದ ಸಮಯವನ್ನು ಇನ್ನೊಂದು ಪಾತ್ರಧಾರಿ ಕಸಿದುಕೊಂಡಾಗ, ಭಾಗವತರು ಬಣ್ಣದ ವೇಷವನ್ನು ಕಡೆಗಣಿಸಿದಾಗ ಬೇಸರವಾಗುತ್ತದೆ. ಎಲ್ಲವನ್ನೂ ತಾಯಿಗೆ ಒಪ್ಪಿಸಿ ಮುಂದೆ ನಡೆಯುವುದು ನನ್ನ ನಡೆ. ಪ್ರೇಕ್ಷಕರಿಗೆ ಎಲ್ಲವನ್ನೂ ಕೊಡಲು ಸಾಧ್ಯವಿಲ್ಲ.
ಮೇಳಕ್ಕೆ ಸೇರಿದ ವರ್ಷಗಳಲ್ಲಿ ಪ್ರಸಿದ್ಧ ಬಣ್ಣದ ವೇಷಧಾರಿ ಶ್ರೀ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರು ಇದ್ದರು. ಅವರೊಂದಿಗೆ ಅನೇಕ ಬಾರಿ ರಕ್ಕಸ ಬಲ ವೇಷ ಮಾಡಿದ್ದೂ ಇದೆ. ಆದರೆ ವಿಷಯವೆಂದರೆ ರಾವಣನ ಮತ್ತು ನಿಶುಂಭನ ಬಣ್ಣದ ರೇಖೆಗಳನ್ನು ಅವರೇ ನನಗೆ ಹೇಳಿ ಕೊಟ್ಟಿದ್ದಾರೆ. ಅವರೊಂದಿಗೆ ಭೀಮ – ದುಶ್ಯಾಸನ, ವಾಲಿ – ಸುಗ್ರೀವ, ರಾವಣ – ಕುಂಭಕರ್ಣ, ರಾವಣ – ಮೈರಾವಣ ಪಾತ್ರಗಳನ್ನು ಮಾಡಿದ್ದೇನೆ. ಹಾಗೆಯೇ ಅದೇ ವೇಷಗಳನ್ನು ಗೇರುಕಟ್ಟೆ ಗಂಗಯ್ಯ ಶೆಟ್ಟರೊಂದಿಗೂ ಮಾಡಿದ್ದೇನೆ. ಅವರೊಂದಿಗೆ ಮಾಡಿದ ಅನೇಕ ವೇಷಗಳು ರಂಗದಲ್ಲಿ ನಡೆಗಳನ್ನು ಹೇಳಿಕೊಟ್ಟಿವೆ. ಕಲಾಮಾತೆಯ ಅದ್ಭುತ ರತ್ನಗಳು. ಸೂರ್ಯ ತಾನು ಬೆಳಗುವುದರೊಂದಿಗೆ ಚಂದ್ರನನ್ನು ಬೆಳಗುವಂತೆ.. ಈ ಇಬ್ಬರು ಕಲಾ ತಪಸ್ವಿಗಳು ನನ್ನನ್ನು ಸಿದ್ಧಗೊಳಿಸಿದ್ದಾರೆ. ಭಾಗವತ ಶ್ರೇಷ್ಠ ಪೂಂಜರು ಬರೆದ ಪ್ರಸಂಗಗಳಲ್ಲಿ ನಾನು ಪಾತ್ರ ಮಾಡಿದ್ದೇನೆ ಎಂಬುದೇ ದೊಡ್ಡ ಸಂಗತಿ. ಹಿಡಿಂಬೆ, ಘಟೋತ್ಕಚ, ಲವಣಾಸುರ, ಕಿರಾತ, ರಾವಣ, ವಾಲಿ (ಮಾತಂಗ ಕನ್ಯೆ), ಮೊದಲಾದ ಪಾತ್ರಗಳು.
ಗುರುಗಳಾದ ವಿಶ್ವಣ್ಣರೊಂದಿಗೆ ಹಲವು ಜೊತೆವೇಷಗಳನ್ನು ಮಾಡಿದ್ದೇನೆ. ನಾಟಕೀಯ ಮಧು – ಕೈಟಭ, ಶುಂಭ – ರಕ್ತಬೀಜ, ಭೀಮ – ಕೌರವ, ರಾವಣ – ಅತಿಕಾಯ, ವೀರಮಣಿ – ಹನುಮಂತ. ಹಾಗೇ ಒಂದನೇ ತಂಡದಲ್ಲಿದ್ದ ಇನ್ನೊಬ್ಬರು ಕಲಾವಿದರು ಕಾಸರಗೋಡು ಸುಬ್ರಾಯ ಹೊಳ್ಳರು. ಅವರೊಂದಿಗೆ ಹಿರಣ್ಯಾಕ್ಷ – ವರಾಹ, ಶುಂಭ – ರಕ್ತಬೀಜ, ರಾವಣ – ಇಂದ್ರಜಿತು, ರಾವಣ – ಕಾರ್ತವೀರ್ಯ, ಭೀಮ – ಕೌರವ, ಭೀಮ – ಅರ್ಜುನ. ಇಂತಹ ಪಾತ್ರಗಳನ್ನು ನಿರ್ವಹಿಸುವಲ್ಲಿ ಹೊಳ್ಳಣ್ಣರನ್ನು ನೆನಪಿಸಿಕೊಳ್ಳುತ್ತೇನೆ.
ನಿಪುಣನಲ್ಲ ಆದರೂ ಗಜಮುಖದವಗೆ ಗಣಪಗೆ ಅಲ್ಲಿಂದ ತೊಡಗಿ ಪೂರ್ವ ರಂಗದಲ್ಲಿ ಪ್ರಸಂಗಗಳಲ್ಲೂ ಹಾಡಿದ್ದೇನೆ. ಆ ಮೂಲಕ ಮೇಳದಲ್ಲಿ ಆಪತ್ಕಾಲಕ್ಕೆ ಸಹಕಾರವನ್ನು ನೀಡಿದ್ದೇನೆ ಎಂಬ ಸಮಾಧಾನವೂ ತೃಪ್ತಿಯೂ ಇದೆ.
ಯಕ್ಷ ಮಂಜೂಷ ತಂಡದಲ್ಲಿ ಇಡೀ ಭಾರತವನ್ನು ಸುತ್ತಿ ಕನ್ನಡದಲ್ಲೂ ಹಿಂದಿಯಲ್ಲೂ ವೇಷಗಳನ್ನು ಮಾಡಿದ್ದೇನೆ. ಅಮೆರಿಕ ದೇಶಕ್ಕೂ 3 ಬಾರಿ ಆ ತಂಡದಲ್ಲಿ ಹೋಗಿದ್ದೇನೆ. ಶ್ರೀಮತಿ ವಿದ್ಯಾ ಕೋಳ್ಯೂರು ಹಾಗೂ ಸರವು ಕೃಷ್ಣ ಭಟ್ಟರು ಅವಕಾಶ ಮಾಡಿ ಕೊಟ್ಟಿದ್ದಾರೆ. ಅಯೋಧ್ಯೆ, ಹರಿದ್ವಾರ, ವಾರಣಾಸಿ, ಜಮ್ಮು ಕಾಶ್ಮೀರ, ಕಲ್ಕತ್ತಾ, ಸೂರತ್, ಅಹಮದಾಬಾದ್, ಇಂಧೋರ್, ಆಗ್ರಾ, ಹೈದರಾಬಾದ್, ಮುಂಬೈ, ಪೂನಾ, ಮದ್ರಾಸ್, ಮೈಸೂರು, ಬೆಂಗಳೂರು ನಗರಗಳಲ್ಲಿಯೂ; ಅಮೆರಿಕದಲ್ಲಿ ವಾಷಿಂಗ್ಟನ್, ನ್ಯೂಯಾರ್ಕ್, ನ್ಯೂ ಜರ್ಸಿ, ಕ್ಯಾಲಿಫೋರ್ನಿಯಾ, ಸಾನ್ ಪ್ರಾನ್ಸಿಸ್ಕೋ, ಮೊದಲಾದ ಕಡೆಗಳಲ್ಲಿ ಅಲ್ಲಿ ನೆಲೆಸಿರುವ ಭಾರತೀಯರ ಸಮ್ಮುಖದಲ್ಲಿ ಯಕ್ಷಗಾನ ಮಾಡಿದ್ದೇವೆ. ಆ ತಂಡದಲ್ಲಿದ್ದ ಎಲ್ಲಾ ಕಲಾವಿದರೂ ಒಟ್ಟಿಗೆ ಒಂದೇ ಮನೆಯವರ ಹಾಗೆ ಇದ್ದದ್ದು ಜೀವನದ ವಿಶೇಷ ಅನುಭವ. ಶಾಲಾ ಕಾಲೇಜುಗಳಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ, ವೇಷ ಭೂಷಣಗಳ ಬಣ್ಣಗಾರಿಕೆ ಮಾಹಿತಿಯನ್ನು ನೀಡಿದ್ದೇವೆ.
ಕಟೀಲು 1ನೇ ತಂಡದಲ್ಲಿ 20 ವರ್ಷಗಳಿಗೂ ಅಧಿಕ ತಿರುಗಾಟ. 9 ವರ್ಷ 6ನೇ ತಂಡದಲ್ಲಿ ಮತ್ತು ಈ ವರ್ಷ 1ನೇ ತಂಡದಲ್ಲಿ ಇದ್ದೇನೆ. ಎಷ್ಟು ವರ್ಷ ಸಾಧ್ಯವೋ ಅಷ್ಟು ತಿರುಗಾಟ ಮಾಡುವ ಮನಸ್ಸು ಇದೆ. ಆದರೆ ನಡೆಸುವವಳು ತಾಯಿ, ನಡೆಯುವವನು ನಾನು. ಮೇಳದ ಕಟೀಲಿನ ಶಕ್ತಿಗಳಾದ ಮಹಾಗಣಪತಿ ದೇವರೂ ದುರ್ಗಾ ಪರಮೇಶ್ವರಿ ಅಮ್ಮನೂ ಹರಸಿದರೆ ಮಾತ್ರ ಸಾಧ್ಯ ಎನ್ನುವುದು ಗೊತ್ತಿದೆ.
ಕದ್ರಿ ವಿಷ್ಣು ಪ್ರಶಸ್ತಿ, ಕೈಕಂಬ ಘಟಕದ ಪಟ್ಲ ಫೌಂಡೇಶನ್ ಪ್ರಶಸ್ತಿ, ಎಲ್ಲೂರಿನಲ್ಲಿ 100 ಜನ ಕಲಾವಿದರಿಗೆ ನಡೆದ ಸನ್ಮಾನದಲ್ಲಿ ನಾನೂ ಒಬ್ಬ. ಹೀಗೆ ಕೆಲವು ಸನ್ಮಾನ ಹಾಗೂ ಪ್ರಶಸ್ತಿ ಹರಿನಾರಾಯಣ ಭಟ್ ಎಡನೀರು ಅವರಿಗೆ ಸಿಕ್ಕಿರುತ್ತದೆ.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡುವುದು, ಕ್ರಿಕೆಟ್ ಆಡುವುದು ಮತ್ತು ನೋಡುವುದು ಹವ್ಯಾಸಗಳು.
ಎಡನೀರು ಮಠದಲ್ಲಿ ನಡೆಯುತ್ತಿದ್ದ ಅನೇಕ ಯಕ್ಷಗಾನ ಕಾರ್ಯಕ್ರಮಗಳಲ್ಲಿ, ಚಂದನ ವಾಹಿನಿಯಲ್ಲಿ ಪಾತ್ರ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟ ಹಿಂದಿನ ಹಿರಿಯ ಸ್ವಾಮೀಜಿಯನ್ನು (ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ತೀರ್ಥ ಸ್ವಾಮೀಜಿ) ಸ್ಮರಿಸಿಕೊಳ್ಳಲೇಬೇಕು. ಹಾಗೆಯೇ ಹಲವು ವರ್ಷ ಮಳೆಗಾಲದಲ್ಲಿ ಮಠದಲ್ಲಿ ಕೆಲಸವನ್ನು ಕೊಟ್ಟಿದ್ದಾರೆ. ಬೆಂಗಳೂರು, ಮುಂಬೈ, ಉಡುಪಿ ಸಪ್ತಾಹಗಳಲ್ಲಿ ವೇಷಗಳನ್ನು ಮಾಡಿಸಿದ್ದಾರೆ.
ಕಲ್ಲುಗುಂಡಿಯಲ್ಲಿ ಶ್ರೀ ಶ್ಯಾಮ್ ಭಟ್ಟರು ಸುಮಾರು 27 ವರ್ಷಗಳಿಂದ ಸಂಪಾಜೆ ಯಕ್ಷೋತ್ಸವದಲ್ಲಿ ವೇಷಗಳನ್ನು ಕೊಟ್ಟಿದ್ದಾರೆ. ಅವರನ್ನು ನಾನಿಲ್ಲಿ ನೆನಪಿಸಿಕೊಳ್ಳುತ್ತೇನೆ. ಹಾಗೆಯೇ ಕಲಾರಂಗ ಕೂಡಾ ನನ್ನನ್ನು ಯಕ್ಷಗಾನದ ಪ್ರಾತ್ಯಕ್ಷಿಕೆ ಕಮ್ಮಟ ಪ್ರದರ್ಶನಗಳಲ್ಲಿ ಕಾಣಿಸುವಂತೆ ಮಾಡಿದೆ. ಮೇಳದಲ್ಲಿ ತಿರುಗಾಟ ನಡೆಸಲು ನನ್ನನ್ನು ಉಳಿಸಿಕೊಂಡ ಮೊದಲಿನ ಧನಿಗಳು ಕಲ್ಲಾಡಿ ವಿಠ್ಠಲ ಶೆಟ್ಟರು ಹಾಗೂ ಈಗಿನ ಯಜಮಾನರು ಕಲ್ಲಾಡಿ ದೇವಿಪ್ರಸಾದ್ ಶೆಟ್ಟರನ್ನು ಅಡಿಗಡಿಗೆ ನೆನಪಿಸಿಕೊಳ್ಳುತ್ತೇನೆ ಎನ್ನುತ್ತಾರೆ ಹರಿನಾರಾಯಣ ಭಟ್ಟರು.
ಸಾಂಸಾರಿಕವಾಗಿಯೂ ತೃಪ್ತರು. 2010ರಲ್ಲಿ ವಿವಾಹ. ಬಾಳಸಂಗಾತಿ ಅರುಣಕುಮಾರಿ. ಹರಿನಾರಾಯಣ ಭಟ್ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಅನುಶ್ರೀ ಹಾಗೂ ಪುತ್ರ ಅರವಿಂದಕೃಷ್ಣ ಇವರೊಂದಿಗೆ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photos By:- Yaksha Madhava, Prashanth Malyadi, C.B.M, Yaksha Naveena.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು