ಹೊಸಕೋಟೆ : ಹೊಸಕೋಟೆಯ ಜನಪದರು ಸಾಂಸ್ಕೃತಿಕ ವೇದಿಕೆ (ರಿ.) ಆಯೋಜಿಸಿದ ಪ್ರತಿ ತಿಂಗಳ ಎರಡನೇ ಶನಿವಾರದ ನಾಟಕ ಸರಣಿಯ ‘ರಂಗ ಮಾಲೆ -73’ರ ಕಾರ್ಯಕ್ರಮವು ದಿನಾಂಕ 12-08-2023ರಂದು ನಡೆಯಿತು. ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ‘ಸ್ವಾತಂತ್ರ್ಯ ಸಮರ ಕರುನಾಡು ಅಮರ’ ಎಂಬ ನಾಟಕವು ‘ಜನಪದರು ರಂಗಮಂದಿರ’ದಲ್ಲಿ ಪ್ರದರ್ಶನಗೊಂಡಿತು.
ಈ ನಾಟಕವು ಡಾ.ಟಿ.ಲಕ್ಷ್ಮೀನಾರಾಯಣ ಇವರ ರಚನೆಯಾಗಿದ್ದು, ಮಾಲೂರು ವಿಜಿ ನಿರ್ದೇಶನದಲ್ಲಿ ಮಾಲೂರಿನ ರಂಗ ವಿಜಯ ತಂಡ ಪ್ರಸ್ತುತ ಪಡಿಸಿತು. ಹೌಸ್ ಫುಲ್ ಪ್ರದರ್ಶನವನ್ನು ಉದ್ಧಾಟಿಸಿದ ವೇದಿಕೆ ಅಧ್ಯಕ್ಷರಾದ ಕೆ.ವಿ. ವೆಂಕಟರಮಣಪ್ಪ ಪಾಪಣ್ಣ ಕಾಟಂ ನಲ್ಲೂರು ಇವರು ಪ್ರೇಕ್ಷಕರಿಂದ ತುಂಬಿದ ಸಭಾಂಗಣವನ್ನು ಅಭಿನಂದಿಸಿ “ರಂಗ ಚಟುವಟಿಕೆಗಳಿಗೆ ನೀಡಿದ ಸಹಕಾರ ಸಂತಸ ತಂದಿದೆ” ಎಂದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ಬೆಂ.ಹಾ.ಉ. ಒಕ್ಕೂಟದ ಮಾಜಿ ನಿರ್ದೇಶಕ ಹುಸ್ಕೂರು ಸುಬ್ಬಣ್ಣನವರನ್ನು ಹಾಗೂ ನಾಟಕಕಾರ ಮತ್ತು ನಿರ್ದೇಶಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯ ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ್, ಸಿದ್ದೇಶ್ವರ ನನಸು ಮನೆ, ಸುರೇಶ್ ಎಂ. ಮತ್ತು ಮಮತ ಮುನಿರಾಜು ಮತ್ತಿತರರು ಉಪಸ್ಥಿತರಿದ್ದರು.