ನಾನು ಬರೆಯಲು ಆರಂಭಿಸಿದೆ…..!
ನಾ ಬರೆಯಲು ಹೊರಟಿರುವುದು ಒಬ್ಬ ವ್ಯಕ್ತಿಯ ಬದುಕಿನ ಹೊಸ ಅಧ್ಯಾಯವಲ್ಲ, ಹಾಗೆಂದು ಇದು ಮುಗಿದ ಅಧ್ಯಾಯವೂ ಅಲ್ಲ, ಬದಲಾಗಿ 1957ರಿಂದ ಮೊದಲ್ಗೊಂಡು ಈವರೆಗೆ ಸುಮಾರು 66 ವರುಷಗಳ ಕಾಲ ಬರವಣಿಗೆಗೆ ನಿಲುಕದೆ ಸಾಗುತ್ತಿರುವ ಒಬ್ಬ ವ್ಯಕ್ತಿಯ ಸಾಧನಾ ಚರಿತ್ರೆ.
ಬರೆಯಬೇಕು ಅಂದುಕೊಂಡರೂ ಅದಕ್ಕೊಂದು ಆರಂಭವೇ ಸಿಗುತ್ತಿಲ್ಲ, ಮುಗಿಸೋಣ ಎಂದರೆ ಅಂತ್ಯವೂ ಕಾಣುತ್ತಿಲ್ಲ, ರೋಚಕದ ಆರಂಭದೊಂದಿಗೆ ಮೊದಲ್ಗೊಂಡು ಕೊನೆಯೇ ಇಲ್ಲದ ಸಾಧನೆಗಳೊಂದಿಗೆ ಸಾಗುತ್ತಿರುವ ಬದುಕಿನ ಪರಿಚಯವನ್ನು ನಿಮಗೆ ಮಾಡಿಕೊಡುವ ಪ್ರಯತ್ನ ನನ್ನದು.
ಕೆಲ ವ್ಯಕ್ತಿಗಳು ವಿಶಿಷ್ಟತೆಯಿಂದ ಕೂಡಿದ ತನ್ನ ಊರಿನಿಂದಾಗಿ ಹೆಸರು ಮಾಡುತ್ತಾರೆ, ಇನ್ನು ಕೆಲವು ಊರುಗಳು ಒಬ್ಬ ವ್ಯಕ್ತಿಯ ಸಾಧನೆಯಿಂದಾಗಿ ಆತನ ಹೆಸರಿನ ಜೊತೆ ಸೇರಿಕೊಂಡು ವಿಶ್ವಮಾನ್ಯವಾಗುತ್ತದೆ. ಅಂತೆಯೇ ತನ್ನ ಅಪೂರ್ವ ಮತ್ತು ಅನನ್ಯ ಸಾಧನೆಯಿಂದಾಗಿ ಕಲ್ಮಾಡಿ ಎಂಬ ಊರನ್ನು ವಿಶ್ವಮಾನ್ಯಗೊಳಿಸಿದ ಸಾಧಕರು ಇವರು.
ಇವರು ವ್ಯಕ್ತಿಯಲ್ಲ, ಜಾನಪದ ಲೋಕದ ಅಶ್ವಶಕ್ತಿ. ನಾನು ಆರಂಭದಲ್ಲಿ ಇವರ ಹೆಸರನ್ನು ಹೇಳಿದ್ದರೆ ಹೋ.. ಇವರಾ ? ಎಂದು ನಿಮ್ಮಲ್ಲೊಂದು ಉದ್ಗಾರ ಹೊರ ಬರುತ್ತಿತ್ತು. ಏಕೆಂದರೆ ಆ ಹೆಸರು, ಆ ವ್ಯಕ್ತಿ ನಮಗೆ ಅಷ್ಟು ಚಿರಪರಿಚಿತ. ದಿನ ನಿತ್ಯ ಒಂದಲ್ಲ ಒಂದು ಕಾರಣದಿಂದ ನಾವವರನ್ನು ಕಾಣುತ್ತಲೇ ಇರುತ್ತೇವೆ. ಇಲ್ಲವೇ ಅವರ ಬಗ್ಗೆ ಕೇಳುತ್ತಲೇ ಇರುತ್ತೇವೆ. ಆದರೆ ಕಂಡರೂ ಅರಿವಿಗೆ ಬಾರದ, ತಿಳಿದರೂ ಅರಿಯಲಾಗದ ಅವರ ಸಾಧನೆಯನ್ನು ಹೇಳಿದರೇ ಮಾತ್ರ ಅವರ ಸಂಪೂರ್ಣ ವ್ಯಕ್ತಿತ್ವವನ್ನು ಅರಿಯಲು ಸಾಧ್ಯ.
ರಮೇಶ್ ಕಲ್ಮಾಡಿ… ಜಾನಪದ ನೃತ್ಯ ಲೋಕದ ನಡೆದಾಡುವ ವಿಶ್ವಕೋಶ ಇವರು. ತನ್ನ 66ರ ಇಳಿ ಹರೆಯದಲ್ಲೂ ಕಾಲಿಗೆ ಗೆಜ್ಜೆ ಕಟ್ಟಿ ಸಾವಿರಾರು ಮಕ್ಕಳಿಗೆ ಜಾನಪದ ನೃತ್ಯದ ಸೊಗಡನ್ನು ಪರಿಚಯಿಸಿ, ಜಾನಪದ ಕಲಾ ಲೋಕದ ಉಳಿವಿಗಾಗಿ ಅಹರ್ನಿಶಿ ದುಡಿಯುತ್ತಿರುವ ಕಲಾರಾಧಕರು.
ಭಾರತ ಪರಕೀಯರ ದಾಸ್ಯ ಸಂಕಲೆಯಿಂದ ಬಂಧಮುಕ್ತಗೊಂಡು ಹತ್ತು ವರುಷಗಳು ಕಳೆದಿದ್ದವು, ಅಂದರೆ ಅದು 1957ರ ಜೂನ್ ತಿಂಗಳು. ಧರೆಗೆ ತಂಪನೀಯಲು ವರುಣದೇವ ಧೋ ಎಂದು ಸುರಿಯುತ್ತಿದ್ದ ಮಳೆಗಾಲದ ದಿನ. ಅದು ಇಂದಿನ ಉಡುಪಿ ಜಿಲ್ಲೆ, ಅಂದಿನ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಒಂದು ಪುಟ್ಟ ಗ್ರಾಮ, ಹೆಸರು ಕಲ್ಮಾಡಿ. ಮಡಲು ತಟ್ಟಿಯ ಮನೆಯಲ್ಲಿ, ಬಡತನದಲ್ಲೂ ಸಂಪ್ರೀತಿಯ ಸಿರಿವಂತಿಕೆಯ ಕಂಡ ಕುಟುಂಬವದು. ರಾಮಾಯಣಕ್ಕೆ ಸವಾಲಿನಂತೆ ಅವರ ಜೋಡಿ, ಏಕೆಂದರೆ ಇಲ್ಲಿ ಸೀತೆಗೆ ಜೋಡಿಯಾಗಿದ್ದು ರಾಮನಲ್ಲ ಬದಲಾಗಿ ಲಕ್ಷ್ಮಣ. ಕಲ್ಮಾಡಿಯ ಸೀತಕ್ಕ ಮತ್ತು ಲಕ್ಷ್ಮಣ ಅವರದ್ದು ಬಡತನದ ಕುಟುಂಬ. ಅಂದಿನ ದುಡಿಮೆ ಅಂದಿನ ಹೊಟ್ಟೆಗೆ ಎನ್ನುವಂತಹ ಸ್ಥಿತಿಯಾದರೂ, ಅಪಾರವಾದ ದೈವ ಭಕ್ತಿಯ ಸಂಸಾರವದು. ಇವರ ಸುಖ ದಾಂಪತ್ಯಕ್ಕೆ 10-06-1957ರಲ್ಲಿ ಕುವರನೋರ್ವನ ಜನನವಾಗುತ್ತದೆ. ಅಂದಿನ ನವ ಮಾಸದ ನೋವನ್ನುಂಡು ಮಗುವನ್ನು ಭೂಮಿಗಿಳಿಸಿದಾಗಲೂ ಸೀತಕ್ಕ ಅಂದುಕೊAಡಿರಲಿಲ್ಲ, ನನ್ನ ಮಗ ಭವಿಷ್ಯದಲ್ಲಿ ಜಾನಪದ ಲೋಕದ ಮೇಧಾವಿಯಾಗುತ್ತಾನೆ ಎಂದು. ಭವಿಷ್ಯತ್‌ನ ಅರಿವು ತಾನೇ ಯಾರಿಗಿಹುದು ? ಮಳೆಗಾಲದ ಆ ದಿನದಲ್ಲಿ ಹುಟ್ಟಿದ ಕೂಸಿಗೆ ಹೆತ್ತವರು ಪ್ರೀತಿಯಿಂದ ಇಟ್ಟ ಹೆಸರೇ ರಮೇಶ. ಕಲಿಯುವುದರಲ್ಲಿ ಮೊದಲಿಗನಾಗಿ, ಕುಣಿಯುವುದರಲ್ಲಿ ಗಟ್ಟಿಗನಾಗಿ ಬೆಳೆದ ಕಲ್ಮಾಡಿಯ ಹುಡುಗ ತನ್ನ ಇಪ್ಪತ್ತರ ಹರೆಯದಲ್ಲೇ ಶಿಕ್ಷಕ ಶಿಕ್ಷಣವನ್ನು ಪೂರೈಸಿ, ದುಡಿಮೆಯ ಜೋಳಿಗೆಯನ್ನು ಹೆಗಲೇರಿಸಿಕೊಂಡು ಅಕ್ಷರದ ಬಂಡಸಾಲೆಗೆ ಶಿಕ್ಷಕನಾಗಿ ಪಾದಾರ್ಪಿಸಲು ಹೊರಟ.
1977 ಜನವರಿ 7 ರಮೇಶ್ ಕಲ್ಮಾಡಿಯವರ ಬದುಕಿನ ಅಧ್ಯಾಯದಲ್ಲಿ ವೃತ್ತಿ ಜೀವನದ ಪುಟ ತೆರೆಯಲ್ಪಟ್ಟ ದಿನ. ಉಡುಪಿಯ ಹೂಡೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗಣಿತ ಶಿಕ್ಷಕನಾಗಿ ಅವರು ಸೇರ್ಪಡೆಗೊಂಡರು. ಶಾಲೆಯಲ್ಲಿದ್ದಾಗಲೇ ನಾಟಕ, ಕುಣಿತ ಎಂದರೆ ಅದೇನೋ ಸೆಳೆತ. ಶಾಲೆಯ ಅವಧಿ ಮುಕ್ತಾಯವಾಯಿತೋ ಆ ಬಳಿಕದಿಂದ ಅವರು ಕಾಣಸಿಗುತ್ತಿದ್ದು ಸರಸ್ವತಿ ಯುವಕ ಮಂಡಲ ಮಲ್ಪೆ ಇದರ ಚಾವಡಿಯಲ್ಲಿಯೇ. ಕರ್ನಾಟಕ ರಾಜ್ಯ ಸರಕಾರ ಯುವ ಸಮುದಾಯದ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಮತ್ತು ಯುವ ಸಮುದಾಯದ ಸಬಲೀಕರಣಕ್ಕಾಗಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಒಳಗೊಂಡಿದ್ದ ಯುವಜನ ಮೇಳಗಳನ್ನು ಪ್ರತಿ ತಾಲೂಕು, ಜಿಲ್ಲೆ, ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ಆಯೋಜಿಸುತ್ತಿದ್ದವು. ಆ ದಿನದಲ್ಲಿ ಸರಸ್ವತಿ ಯುವಕ ಮಂಡಲ ಯುವಜನ ಮೇಳದಲ್ಲಿ ಉತ್ತಮ ಹೆಸರು ಮಾಡುತ್ತಿತ್ತು. 1977ರಲ್ಲಿ ಸರಸ್ವತಿ ಯುವಕ ಮಂಡಲದ ಮೂಲಕ ಜಾನಪದ ಸೊಗಡಿನ ಮೋಹಕ್ಕೆ ಒಳಗಾದ ರಮೇಶ್ ಕಲ್ಮಾಡಿ ಮತ್ತೆ ಹಿಂದಿರುಗಲೇ ಇಲ್ಲ. 20ರ ಹರೆಯದಲ್ಲಿ ಕುಣಿಯಲು ಆರಂಭಿಸಿದ್ದ ಹುಡುಗ ಇಂದು 66 ವರುಷದ ಹಿರಿಯ. ಆದರೆ ಬತ್ತದ ಅದೇ ಉತ್ಸಾಹ, ಅದೇ ನಡೆ, ಕಿರಿಯರೇ ನಾಚಬೇಕು ಇವರ ನೋಡಿ. ಇಂದಿಗೂ ಸಾವಿರಾರು ವಿದ್ಯಾರ್ಥಿಗಳಿಗೆ ಜಾನಪದ ಸೊಗಡನ್ನು ಪರಿಚಯಿಸುವ ಕಾಯಕ ಯೋಗಿಯಾಗಿದ್ದಾರೆ.
ಸರಕಾರದ ನಿಯಮಾನುಸಾರ ಶಿಕ್ಷಕ ವೃತ್ತಿಯಲ್ಲಿ ವರ್ಗಾವಣೆಯನ್ನು ಕಾಣುತ್ತಾ ಬಂದ ಕಲ್ಮಾಡಿ, ಹೂಡೆ ಶಾಲೆಯಿಂದ ಕೋಡಿಬೆಂಗ್ರೆಗೆ ವರ್ಗಗೊಂಡು ಬಂದರು. ವರ್ಗವಾಗಿ ಹೂಡೆಯಿಂದ ಕೋಡಿಬೆಂಗರೆಗೆ ಬಂದ ಕಲ್ಮಾಡಿ, ಮೊದಲು ಕಾಣಲು ತವಕಿಸಿದ್ದು ತಾನು ಕಲಿಸಬೇಕಿದ್ದ ಶಾಲೆಯನ್ನಲ್ಲ, ಬದಲಾಗಿ ಎಲ್ಲಾದರೂ ಯುವಕ ಮಂಡಲ ಇದೆಯೇ ? ಎಂದು. ಅಂದು ಅವರ ಕಣ್ಣಿಗೆ ಕಂಡಿದ್ದು ಅಭಿನಯ ಯುವಕ ಮಂಡಲ ಕೋಡಿಬೆಂಗರೆ. ಶಿಕ್ಷಕನಾಗಿರುವ ಯುವಕ ತಮ್ಮ ಯುವಕ ಮಂಡಲಕ್ಕೆ ಬಂದಿರುವುದು ಅಲ್ಲಿನ ಯುವಕರಿಗೂ ಒಂದು ರೀತಿಯ ಹುಮ್ಮಸ್ಸು. ಹೊಸ ತಂಡದೊAದಿಗೆ ಕಲಾ ಜೀವನದ ಆರಂಭ, ಯುವಜನಮೇಳದಲ್ಲಿ ಹೊಸಹೊಸ ರೀತಿಯ ಜಾನಪದ ಕುಣಿತ, ಹಾಡುಗಳ ಪ್ರಯೋಗ, ರಮೇಶ್ ಕಲ್ಮಾಡಿ ಬಲು ಬೇಗನೇ ಕಲಾ ಪ್ರಕಾರಗಳ ಜೀವಾಳ ಆಗಿ ಬಿಟ್ಟರು. ಕೋಡಿಬೆಂಗರೆಯಲ್ಲಿ ಕೆಲ ವರುಷ ಕಳೆಯುವಷ್ಟರಲ್ಲಿ ಬೆಳ್ತಂಗಡಿಯ ಬಾರ್ಯಕ್ಕೆ ವರ್ಗಾವಣೆ. ಇಲಾಖೆಯ ಆದೇಶಗಳಿಗೆ ನೋ ಎನ್ನುವಂತ್ತಿಲ್ಲ, ಹಾಗಾಗಿ ಬಾರ್ಯಕ್ಕೆ ಬರುವುದು ಅನಿವಾರ್ಯವಾದರೂ ಅಲ್ಲೂ ಕೈ ಹಿಡಿದಿದ್ದು ಯುವಕ ಮಂಡಲ. ಇಲ್ಲಿ ಕೆಲ ವರುಷ ಸೇವೆ ಸಲ್ಲಿಸುವಷ್ಟರಲ್ಲಿ ಬೆಳ್ತಂಗಡಿಯ ಬಳೆಂಜಕ್ಕೆ ಮತ್ತೆ ವರ್ಗ. ಆದರೆ ಈ ವರ್ಗ ರಮೇಶ್ ಕಲ್ಮಾಡಿ ಅವರ ಬದುಕಿನ ಶೈಲಿಯನ್ನೇ ಬದಲಾಯಿಸಿ ಬಿಟ್ಟಿತು. ಬಳೆಂಜ ಎಂಬ ಘಟ್ಟ ತಪ್ಪಲಿನ ಊರು, ನಿಧಾನವಾಗಿ ರಾಜ್ಯದಲ್ಲಿ ಹೆಸರು ಮಾಡಲು ಆರಂಭಿಸಿತ್ತು. ಅದಕ್ಕೆ ಮುಖ್ಯ ಕಾರಣ ರಮೇಶ್ ಕಲ್ಮಾಡಿ. ದೂರದೂರ ಮನೆಗಳಿರುವ ಹಳ್ಳಿಯ ಮನೆಮನೆಯನ್ನು ತಿರುಗಿ, ತನ್ನ ಶಾಲೆಯ ಹಳೆ ವಿದ್ಯಾರ್ಥಿಗಳನ್ನು, ಗ್ರಾಮದ ಉತ್ಸಾಹಿ ಯುವಕರನ್ನು ಸೇರಿಸಿ, ಯುವಜನಮೇಳಕ್ಕೆ ಬೇಕಾದ ಜಾನಪದ ಕುಣಿತ, ಜಾನಪದ ಹಾಡು, ಲಾವಣಿ ಕಲಿಸಿ ಗ್ರಾಮದ ಚಿತ್ರಣವನ್ನೇ ಬದಲಾಯಿಸಿ ಬಿಟ್ಟರು. ಬೆಳ್ತಂಗಡಿ ತಾಲೂಕಿನ ಪುಟ್ಟ ಗ್ರಾಮವಾಗಿದ್ದ ಬಳೆಂಜ, ಕಲ್ಮಾಡಿ ಅವರಿಂದಾಗಿ ಜಗಮಾನ್ಯಗೊಂಡಿತು. ಕಂಗೀಲು, ಆಟಿಕಳೆಂಜ, ಮಹಾಂಕಾಳಿ ಕುಣಿತ, ಚೆನ್ನು, ಮಾದಿರ, ಕೋಲಾಟ ವೀರಗಾಸೆ, ಹಾಲಕ್ಕಿ, ಸುಗ್ಗಿ, ಕಂಸಾಳೆ, ಪೂಜಾಕುಣಿತ, ಸೋಮನಕುಣಿತ, ನಂದಿಗೋಲು ಮುಂತಾದ ಜಾನಪದ ಕುಣಿತಗಳನ್ನು ಅಧ್ಯಯನ ನಡೆಸಿ ಅದರ ಮೂಲ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಅದನ್ನು ವೇದಿಕೆ ತಂದ ಹಿರಿಮೆ ಕಲ್ಮಾಡಿ ಅವರದ್ದು.
ಇವರ ನೇತೃತ್ವದಲ್ಲಿ ಬಳೆಂಜ ಯುವಕ ಮಂಡಲ ಅದೆಷ್ಟೋ ವರುಷ ರಾಜ್ಯಮಟ್ಟದ ಯುವಜನಮೇಳದಲ್ಲಿ ಕೋಲಾಟ ಮತ್ತು ಸುಗ್ಗಿ ನೃತ್ಯದಲ್ಲಿ ಪ್ರಥಮ ಸ್ಥಾನವನ್ನು ಬಗಲಿಗೆ ಹಾಕಿಕೊಂಡಿತ್ತು. ಇವರ ಕಲಾ ಪ್ರೌಢಿಮೆಯನ್ನು ಗುರುತಿಸಿದ ಬಳೆಂಜ ಗ್ರಾಮವೇ ಇವರ ಬೆನ್ನಿಗೆ ನಿಂತಿತು. ಜಾನಪದ ಆರಾಧಿಸುವ ಬಹುದೊಡ್ಡ ಯುವ ಸಮುದಾಯವೇ ಹುಟ್ಟಿಕೊಂಡು, ಸಾಂಸ್ಕೃತಿಕ ಸಂಗ್ರಾಮಕ್ಕೆ ನಾಂದಿ ಹಾಡಿತ್ತು.
ಸರಕಾರದ ನಿಯಮಾನುಸಾರ ಬಳೆಂಜದಿAದ ಪೊಲಿಪು, ಅಲ್ಲಿಂದ ಕೆಲ ವರುಷದಲ್ಲಿಯೇ ಕಾಪು ಪಡುವಿಗೆ, ತರುವಾಯ ಮುಟ್ಲುಪಾಡುವಿಗೆ ವರ್ಗಗೊಂಡ ಕಲ್ಮಾಡಿ ಅವರು ಮುಟ್ಲುಪಾಡಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಪದೊನ್ನತಿಯನ್ನು ಹೊಂದಿ. ಹಲವು ವರುಷ ಶಾಲೆಯನ್ನು ಮುನ್ನಡೆಸಿ ಮಾದರಿ ಶಾಲೆಯಾಗಿ ರೂಪಿಸಿದ್ದರು. ಶಾಲೆ ಬದಲಾದರೂ ಮನದೊಳಗಿನ ತುಡಿತ, ತುಮುಲಗಳು ಬದಲಾಗದೇ ಉಳಿದ ಕಾರಣದಿಂದ ಜಾನಪದ ಸೆಳೆತ ದಿನೇ ದಿನೇ ಜಾಸ್ತಿಯಾಯಿತು. ಜಾನಪದಕ್ಕೆ ಬೇಕಾದ ವೇಷಭೂಷಣ, ಹಿಮ್ಮೇಳ ವಸ್ತುಗಳು ಬೇಕೆಂದಾಗ ಸಿಗದೆ ತೊಂದರೆ ಉಂಟಾದಾಗ, ಸ್ವತಃ ಕೈಯಿಂದ ಹಣವನ್ನು ಹಾಕಿ ಜಾನಪದ ನೃತ್ಯ ವೇಷಭೂಷಣವನ್ನು ತಯಾರಿಸಿದರು. ಇದಕ್ಕೆ ಬೇಡಿಕೆ ಬರಲು ಆರಂಭಿಸಿದಾಗ, ಇನ್ನಷ್ಟು ವೇಷಭೂಷಣವನ್ನು ತಯಾರಿಸಿಕೊಂಡು ಅದನ್ನು ಅವಶ್ಯಕತೆ ಇರುವವರಿಗೆ ನೀಡಲು ಆರಂಭಿಸಿದರು. ವೇಷಭೂಷಣ ಸಿಗದೆ, ಸಿಕ್ಕರೂ ಅಧಿಕ ಬಾಡಿಗೆ ನೀಡಲು ಯುವಕ ಯುವತಿಯರು ಪರದಾಡಬಾರದು ಎನ್ನುವ ಕಾರಣಕ್ಕೆ ತಾನು ವಸ್ತç ಪರಿಕರ ನಿರ್ಮಿಸಿ ಅನ್ನು ರಿಯಾಯಿತಿ ದರದಲ್ಲಿ ನೀಡಲು ಆರಂಭಿಸಿದರು. ಕೆಲವು ಜೋಡಿ ವಸ್ತçದಿಂದ ಆರಂಭಗೊAಡ ಅವರ ಚಾತುರ್ಪುವಿನ ಪರಿಣಾಮ ಇಂದು 14 ಲಕ್ಷ ಮೌಲ್ಯದ ಜಾನಪದ ವೇಷಭೂಷಣ ವಾದ್ಯ ಪರಿಕರಗಳು ಅವರಲ್ಲಿದೆ. ಇದು ಸಾರ್ವಕಾಲಿಕ ದಾಖಲೆಯೇ ಸರಿ. ಕರುನಾಡ ಜಾನಪದ ಪರಂಪರೆ ಅಳಿಯಬಾರದು ಉಳಿಯಬೇಕು ಯುವ ಸಮುದಾಯಕ್ಕೆ ಅದರ ಅರಿವು ಮೂಡಬೇಕು ಎಂಬ ಆಶಯದಲ್ಲಿ ತನ್ನದೆ ಆದ ಕಲಾ ತಂಡವನ್ನು ಕಟ್ಟಿ ಆ ತಂಡದ ಮೂಲಕ ತುಳುನಾಡಿನ ಅದೆಷ್ಟೋ ಜಾನಪದ ಕುಣಿತಗಳನ್ನು ರಾಜ್ಯದಾದ್ಯಂತ ಪ್ರದರ್ಶಿಸಿದ ಕೀರ್ತಿ ಕಲ್ಮಾಡಿ ಅವರದ್ದು.
ಬಳೆಂಜದಲ್ಲಿ ಇವರ ಕಲಾ ಪೌಢಿಮೆ ಗುರುತಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಖಾವಂದರು ಕ್ಷೇತ್ರದಲ್ಲಿ ನಡೆಯುತ್ತಿದ್ದ ಕುಣಿತ ಭಜನಾ ಕಮ್ಮಟಕ್ಕೆ ಇವರನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿಸಿದರು. 24 ವರುಷ ಕಳೆದರೂ ಇಂದಿಗೂ ಕಲ್ಮಾಡಿಯವರು ಧರ್ಮಸ್ಥಳದ ಕುಣಿತ ಭಜನಾ ಕಮ್ಮಟದ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. 46 ವರುಷದಲ್ಲಿ ಸಾವಿರಾರು ಮಂದಿಗೆ ಜಾನಪದ ನೃತ್ಯ, ಜಾನಪದ ಹಾಡು ಮತ್ತು ಕುಣಿತ ಭಜನೆಯನ್ನು ಕಲಿಸಿದ ಅಪೂರ್ವ ಸಾಧನೆ ಇವರದ್ದು. ಇವರ ಈ ಅನನ್ಯ ಸಾಧನೆಯನ್ನು ಗುರುತಿಸಿ ಉಡುಪಿ ಜಿಲ್ಲಾಡಳಿತ ಇವರಿಗೆ ಸುವರ್ಣ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಸನ್ಮಾನವನ್ನು ನೀಡಿದೆ. ನೂರಾರು ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿದ್ದರೆ. 2020ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯು ಜಾನಪದ ಕ್ಷೇತ್ರದ ಅಪೂರ್ವ ಸಾಧನೆಗಾಗಿ ಜಾನಪದ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.
ಮುಂಬೈ, ಪೂನಾ ಮತ್ತು ಕರ್ನಾಟಕದ ಎಲ್ಲಾ ಭಾಗಗಳನ್ನು ಸುತ್ತಿ ಕಾರ್ಯಕ್ರಮ ನೀಡಿದ ಕಲ್ಮಾಡಿ ಅವರು ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲೂ ಬಲು ಬೇಡಿಕೆಯ ನೃತ್ಯ ಗುರುಗಳಾಗಿದ್ದಾರೆ. ಅಪಾರ ಶಿಷ್ಯ ವೃಂದವನ್ನೂ ಹೊಂದಿದ್ದಾರೆ. ತನ್ನ 66ರ ವಯಸ್ಸಿನಲ್ಲೂ ರಂಗ ತರಬೇತಿ ನೀಡುತ್ತಿರುವ ಕಲ್ಮಾಡಿ ಅವರು ಕರ್ನಾಟಕ ಸರಕಾರದ ಅಧಿಕೃತ ತೀರ್ಪುಗಾರರಾಗಿ ರಾಜ್ಯ ರಾಷ್ಟçಮಟ್ಟದಲ್ಲಿ ಭಾಗವಹಿಸಿದ್ದಾರೆ.
ಜಾನಪದ ಕಲಾ ಪ್ರಕಾರಗಳ ಮೂಲತನಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಅದನ್ನು ಬೆಳೆಸಿಕೊಂಡು ಹೋಗಬೇಕು ಎನ್ನುವ ಅದಮ್ಯ ಉತ್ಸಾಹ ಇವರದ್ದು. ಯಾವುದೇ ಸ್ಪರ್ಧೆಗೆ ತೆರಳಿದರೂ ಮಕ್ಕಳ ತಪ್ಪು ಒಪ್ಪುಗಳನ್ನು ಮನೋಜ್ಞವಾಗಿ ತಿಳಿಸಿ, ಅವರನ್ನು ಸರಿದಾರಿಗೆ ತರುವಂತೆ ಮಾಡುವ ಜಾಣ್ಮೆ ಇವರಿಂದ ಕಲಿಯ ಬೇಕಿದೆ. ಪ್ರತಿಯೊಂದು ಜಾನಪದ ಕುಣಿತಗಳ ಆಳ ಅಗಲವನ್ನು ಅರಿತುಕೊಂಡು ಅದನ್ನು ಯುವ ಸಮುದಾಯದ ಮುಂದಿಡುವ ಇವರ ಪ್ರಯತ್ನಕ್ಕೆ ಮೆಚ್ಚುಗೆ ಇದ್ದೇ ಇರುತ್ತದೆ. ಕಲಿಸುವ ಕುಣಿತಕ್ಕೆ, ಮಾಡುವ ಕಲಾ ಸೇವೆಗೆ ಪ್ರತಿಫಲ ಅಪೇಕ್ಷೆಯನ್ನೇ ಬಯಸದೇ ಅದನ್ನು ತಾಯಿ ಶಾರದೆ ಸೇವೆ ಎಂದು ಮಾಡುತ್ತಾ, ಕೊಡುವ ಹಣವನ್ನು ಎಣಿಸಿನೋಡದೆ ಕೊಟ್ಟದ್ದು ಕಡಿಮೆಯಾಯಿತೆನ್ನುವ ತಗಾದೆ ಇರದೇ ಕಲೆಯನ್ನು ಪ್ರೀತಿಸುವ, ಗೌರವಿಸುವ ಅವರ ಗುಣವೇ ಅವರನ್ನು ಎತ್ತರಕ್ಕೆ ಏರಿಸಿದೆ.
ಸಾಧನೆ ಎನ್ನುವುದು ಮಾಡವುದಲ್ಲ ಅದು ಮೂಡುವುದು. ಅವರಿಂದ ಮೂಡಿದ ಸಾಧನೆಗಳು ಲೆಕ್ಕಕ್ಕೆ ಸಿಕ್ಕಿಲ್ಲ, ಜಾನಪದದ ಉಳಿವಿಗಾಗಿ ಓಡಾಡುವ ದಿನವೂ ನಿಂತಿಲ್ಲ, ಜಾನಪದ ಕಲಿಸಿಕೊಡಬೇಕು ಎನ್ನುವ ಹಂಬಲವೂ ಕಡಿಮೆಯಾಗಿಲ್ಲ. ಹಾಗಾಗಿ ರಮೇಶ್ ಕಲ್ಮಾಡಿ ಎಂಬ ಜಾನಪದ ಲೋಕದ ದೈತ್ಯ ಶಕ್ತಿ ತನ್ನ ಬದುಕಿನ ಅಧ್ಯಾಯದ ಪುಟಗಳನ್ನು ತೆರೆದೆ ಇಟ್ಟಿದ್ದಾರೆ. ಏಕೆಂದರೆ ಅಲ್ಲಿ ಬರೆಯುವುದು ಇನ್ನೂ ಬಾಕಿ ಇದೆ.
ಲೇಖಕ: ಶ್ರೀ ನರೇಶ್ ಕುಮಾರ್ ಸಸಿಹಿತ್ಲು
ಶ್ರೀ ನರೇಶ್ ಕುಮಾರ್ ಸಸಿಹಿತ್ಲು ಇವರು 70 ವರ್ಷದ ಇತಿಹಾಸ ಇರುವ ಭಾರತ ಸರಕಾರ ಪ್ರವರ್ತಿಸಿದ ಹಿಂದ್ ಕುಷ್ಠ್ ನಿವಾರಣ್ ಸಂಘ್ ಮಂಗಳೂರು ಇದರ ಯೋಜನಾ ವ್ಯವಸ್ಥಾಪಕರಾಗಿ ಕಳೆದ 13 ವರ್ಷದಿಂದ ದುಡಿಯುವುದರೊಂದಿಗೆ ‘ಬಬ್ಲಿ ಸ್ಮರಣಿಕೆ ಮಳಿಗೆ’ ಎಂಬ ಸ್ವಂತ ಉದ್ಯಮ ನಡೆಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಲೇಖಕ, ನಾಟಕಕಾರ, ನಿರ್ದೇಶಕ, ನೃತ್ಯಪಟುವಾಗಿ ಗುರುತಿಸಿಕೊಂಡವರು. ಮೂಲ ಜಾನಪದ ಕುಣಿತಗಳ ಅಧ್ಯಯನ, ತರಬೇತಿ ಮತ್ತು ಪ್ರದರ್ಶನ ನೀಡಿದ ಹಿರಿಮೆ ಇವರದ್ದು. ದೇಶದ ಹತ್ತಕ್ಕೂ ಅಧಿಕ ರಾಜ್ಯಗಳ ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರತಿಷ್ಟಿತ ವೇದಿಕೆಗಳಲ್ಲಿ ಕಾರ್ಯಕ್ರಮ ಮತ್ತು ಚಂದನ ದೂರದರ್ಶನ ವಾಹಿನಿಯಲ್ಲಿ ಐದು ಬಾರಿ ತುಳು ಕಾರ್ಯಕ್ರಮಗಳನ್ನು ನೀಡಿದ ಧೀಮಂತ. ಒರಿಸ್ಸಾದ ಭುವನೇಶ್ವರದಲ್ಲಿ ಮತ್ತು ಅಸ್ಸಾಂ ರಾಜ್ಯದ ಸಿರಾಂಗ್ ಜಿಲ್ಲೆಯಲ್ಲಿ ನಡೆದ ಅಂತರ್ ರಾಜ್ಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಭಾಗವಹಿಸಿದ್ದಾರೆ.
‘ತಿಂಗೋಳ್ದ ಬೊಲ್ಪು’ ಎನ್ನುವ ತುಳು ಕಥಾ ಸಂಕಲನ, ಭಜನಾ ಸಿಡಿಗಳಿಗೆ ಉತ್ತಮ ಗೀತಾ ಸಾಹಿತ್ಯ, ಗಬ್ಬರ್ ಸಿಂಗ್ ಎಂಬ ತುಳು ಸಿನಿಮಾಕ್ಕೆ ಸಾಹಿತ್ಯ ಇತ್ಯಾದಿ ಬರವಣಿಗೆಗಳೊಂದಿಗೆ ಐದು ತುಳು ಸಿನಿಮಾಗಳಲ್ಲಿ ನಟಿಸಿರುವ ಇವರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ‘ಬಸವಶ್ರೀ ರಾಜ್ಯ ಯುವ ಪ್ರಶಸ್ತಿ’, ‘ಯುವ ಸಾಹಿತ್ಯ ಪ್ರಶಸ್ತಿ’, ‘ಯುಗ ಪುರುಷ ರಾಜ್ಯೋತ್ಸವ ಪ್ರಶಸ್ತಿ’, ‘ಜಿಲ್ಲಾ ಯುವ ಪ್ರಶಸ್ತಿ’ ಮತ್ತು ‘ರಾಷ್ಟ್ರೀಯ ಯುವ ಪ್ರಶಸ್ತಿ’ ಇವು ಇವರ ಬಹುಮುಖ ಪ್ರತಿಭೆಗೆ ಸಂದ ಗೌರವ.