Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವ್ಯಕ್ತಿ ಪರಿಚಯ | “ಸಂಪನ್ನ ಕಲೋತ್ತಮ” ಅವಿನಾಶ್ ಬೈಪಾಡಿತ್ತಾಯ
    Article

    ವ್ಯಕ್ತಿ ಪರಿಚಯ | “ಸಂಪನ್ನ ಕಲೋತ್ತಮ” ಅವಿನಾಶ್ ಬೈಪಾಡಿತ್ತಾಯ

    September 15, 2023No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಅವಿನಾಶ್ ಬೈಪಾಡಿತ್ತಾಯ ಹುಟ್ಟಿದ್ದು 14.09.1974 ರಂದು ಈಗಿನ ಕಡಬ ತಾಲೂಕಿನ, ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕೆಂಚಭಟ್ರೆ ಎಂಬ ಗ್ರಾಮದಲ್ಲಿ. ಅಪ್ಪ ಹರಿನಾರಾಯಣ ಬೈಪಾಡಿತ್ತಾಯ, ಅಮ್ಮ ಲೀಲಾವತಿ ಬೈಪಾಡಿತ್ತಾಯ. ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸದ ಬಳಿಕ ಮನೆಯ ಆರ್ಥಿಕ ಸ್ಥಿತಿಗತಿ ಅನುಕೂಲವಿಲ್ಲದ ಕಾರಣದಿಂದಾಗಿ ತಿಪಟೂರಿನಲ್ಲಿ ಎಕ್ಕಾರಿನ ಸದಾನಂದ ರಾಯರ ಕೃಪೆಯಿಂದ ಅವರ ಹೋಟೆಲಲ್ಲಿ ಕೆಲಸ ಮಾಡುತ್ತಾ, ಕಲ್ಪತರು ಕಾಲೇಜಿನಲ್ಲಿ ಬಿಎಸ್ಸಿ (ಸಿಬಿಝಡ್) ವಿದ್ಯಾಭ್ಯಾಸ ಪೂರೈಸಿದೆ.

    ಕಡಬ, ಕೆಂಚಭಟ್ರೆ ಸುತ್ತಮುತ್ತ ಯಾವುದೇ ಪೂಜೆ, ಪುನಸ್ಕಾರ ಅಥವಾ ಶುಭ ಸಮಾರಂಭಗಳಲ್ಲಿ ಸಂಜೆ ಯಕ್ಷಗಾನ ತಾಳಮದ್ದಳೆ ಇರುತ್ತಿತ್ತು. ಅದೇ ರೀತಿ ಆ ಪರಿಸರವೇ ಯಕ್ಷಗಾನದ ಪರಿಸರವಾಗಿತ್ತು. ಹೀಗಾಗಿ, ಅಪ್ಪ ಅಮ್ಮನ ಜೊತೆಗೆ ಹೋಗುತ್ತಿದ್ದೆ. ರಕ್ತಗತವಾಗಿ ಯಕ್ಷಗಾನದ ಆಕರ್ಷಣೆಯಿತ್ತು. ಸಣ್ಣವನಿರುವಾಗಲೇ ಅಂದರೆ ನಾನಿನ್ನೂ ಅಂಗನವಾಡಿಯಲ್ಲಿರುವಾಗಲೇ ಅಪ್ಪ-ಅಮ್ಮ ಇಬ್ಬರೂ ಸೇರಿಕೊಂಡು ಅಣ್ಣನಿಗೆ ಚೆಂಡೆ, ನನಗೆ ಮದ್ದಳೆ ಕಲಿಸಿದರು. ಅದು ಶಾಸ್ತ್ರೀಯವಾದ ಕಲಿಕೆ ಆಗಿರಲಿಲ್ಲ. ತಾಳಕ್ಕೆ ಮತ್ತು ಪದ್ಯಕ್ಕೆ ನುಡಿಸುವುದನ್ನು ಮನೆಯಲ್ಲೇ ಹೇಳಿಕೊಟ್ಟಿದ್ದರು. ಆ ಕಾಲದಲ್ಲಿ ಹಿಮ್ಮೇಳದವರು ಕಡಿಮೆ. ಹೀಗಾಗಿ ಬಾಲವಾಡಿಯಲ್ಲಿರುವಾಗಲೇ ರಾಮಕುಂಜದ ಶಾಲೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಮೊದಲ ಬಾರಿಗೆ ರಂಗ ಏರಿದ್ದೆ. ಅಪ್ಪ ಚೆಂಡೆ, ಅಮ್ಮ ಪದ್ಯಕ್ಕೆ ಹಾಗೂ ನನ್ನದು ಮದ್ದಳೆ. ಇದಕ್ಕಾಗಿಯೇ ಪೀಠಿಕೆಗೆ, ಏರು ಪದ್ಯಕ್ಕೆ ಹೇಗೆ ಎಡ ಕೊಡಬೇಕೆಂಬುದನ್ನು ಅಪ್ಪ ಮನೆಯಲ್ಲಿ ಎರಡು ದಿನ ಸತತ ಹೇಳಿಕೊಟ್ಟು ನನ್ನನ್ನು ತಯಾರು ಮಾಡಿದ್ದ ನೆನಪು. ನಿಧಾನ ಪದ್ಯಕ್ಕೆಲ್ಲ ಅವರೇ ಮದ್ದಳೆಗೆ ಬಂದು ಕೂರುತ್ತಿದ್ದರು. ಅದು ಉತ್ತರನ ಪೌರುಷ, ಕೀಚಕ ವಧೆ ಪ್ರಸಂಗ. ಹೇಗೆ ಮದ್ದಳೆ ನುಡಿಸಿದ್ದೆ ಎಂಬುದು ಗೊತ್ತಿಲ್ಲ. ಆದರೆ, ಸೈರಂಧ್ರಿಯನ್ನು ಕೀಚಕ ಸೆಳೆಯುವ ದೃಶ್ಯವನ್ನು ನೋಡಿ, ರಂಗಸ್ಥಳದಲ್ಲಿ ಭಯದಿಂದ, ಆಶ್ಚರ್ಯದಿಂದ ನೋಡುತ್ತಾ ಬಾಕಿ. ಮದ್ದಲೆಯ ಸದ್ದಿರಲಿಲ್ಲ. ಆಮೇಲೆ ಅಪ್ಪ ಜೋರಾಗಿ ಚೆಂಡೆ ಬಾರಿಸಿ, ಅಮ್ಮನ ಮೂಲಕ ನನ್ನನ್ನು ಆ ಲೋಕದಿಂದ ಈ ಲೋಕಕ್ಕೆ ಮರಳುವಂತೆ ಮಾಡಿದ್ದು ನೆನಪಿದೆ. ಆಗ ಐದು ರೂಪಾಯಿಯನ್ನು ಆಟ ಆಡಿಸಿದ ಆತೂರು ಮೋಹನ ರಾಯರು ನೀಡಿದ್ದರು.

    ಬಜಪೆಯ ತಲಕಳ ಮೇಳದಲ್ಲಿ ಒಂದಿಷ್ಟು ಕಾಲ ಅಲ್ಪಾವಧಿಗೆ ತಿರುಗಾಟ ಮಾಡಿದ್ದೆ. ಅದಕ್ಕಿಂತ ಮೊದಲು ಮುಂಬಯಿಯಲ್ಲಿದ್ದ ಎರಡು ವರ್ಷ ಅಲ್ಲಿನ ಶ್ರೀನಾರಾಯಣ ಗುರು ಯಕ್ಷಗಾನ ಮಂಡಳಿಯ ಆಟಗಳಿಗೆ ಹೋಗುತ್ತಿದ್ದೆ. ಅದಕ್ಕಿಂತಲೂ ಮೊದಲು ಸಣ್ಣವನಿರುವಾಗ, ಶಾಲೆಯ ಬೇಸಿಗೆ ರಜೆಯಲ್ಲಿ ಅರುವ (ಅಳದಂಗಡಿ) ಶ್ರೀ ದೇವಿ ಸೋಮನಾಥೇಶ್ವರಿ ಯಕ್ಷಗಾನ ಮಂಡಳಿಯಲ್ಲಿ ಅಪ್ಪ ಅಮ್ಮನೊಂದಿಗೆ ಹೋಗುತ್ತಿದ್ದೆ. ರಾತ್ರಿ ಚಕ್ರತಾಳ ನುಡಿಸುವುದು ನಮ್ಮ ಕಾಯಕ. ಅಲ್ಲಿ ವಾರಕ್ಕೆ ಐದು ರೂಪಾಯಿ ಸಿಗುತ್ತಿತ್ತು. ತಿರುಗಾಟದ ಸಂದರ್ಭ ಒಂದು ದಿನ ಬಜಪೆ ರಾಘವದಾಸ್ ಅವರಿಂದ ಪ್ರವೇಶದ ಹೆಜ್ಜೆಗಳನ್ನು ಕಲಿತು, ಕೋಟಿ ಚೆನ್ನಯ ಪ್ರಸಂಗದಲ್ಲಿ ಬಾಲಕ ಕೋಟಿ-ಚೆನ್ನಯನ ಪಾತ್ರದಲ್ಲಿ ನಾನು ಮತ್ತು ಅಣ್ಣ ಗುರುಪ್ರಸಾದ ವೇಷ ಹಾಕಿದ್ದಿದೆ. ನಾನು ಅದೇ ಮೊದಲು ಮತ್ತು ಕೊನೆ ವೇಷ ಮಾಡಿದ್ದು. ಇದು 1980ರ ದಶಕದಲ್ಲಿ. ಅರುವ ಮೇಳದ ಮುಂಬಯಿ ತಿರುಗಾಟಕ್ಕೂ ಟೆಂಪೋದಲ್ಲಿ ಕೂತು ಹೋಗಿದ್ದೆ. ಬಳಿಕ ತಲಕಳ ಮೇಳದಲ್ಲಿ, ಮಂಗಳೂರಿನಲ್ಲಿ ಕೆಲವು ಆಟಗಳಿಗೆ ಹೋಗಿದ್ದಿದೆ. ಈಗಲೂ ಬೆಂಗಳೂರಿನಲ್ಲಿ ಹಾಗೂ ಸಿಬಂತಿ ಪದ್ಮನಾಭ – ಆರತಿ ಪಟ್ರಮೆ ಅವರ ನೇತೃತ್ವದಲ್ಲಿ ತುಮಕೂರಿನ ಯಕ್ಷದೀವಿಗೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ.

    ಉದ್ಯೋಗ ನಿಮಿತ್ತ ಚೆನ್ನೈಗೆ ಹೋದ ಸಂದರ್ಭದಲ್ಲಿ ಯಕ್ಷಗಾನ ನೋಡುವುದಕ್ಕೂ ಇಲ್ಲದೆ ಚಡಪಡಿಸುತ್ತಿದ್ದೆ. ಬಹುಶಃ ಅದೇ ಕಾರಣಕ್ಕೆ ಚೆನ್ನೈ ಬಿಟ್ಟೆ. ಬೆಂಗಳೂರಿಗೆ ಬಂದ ಮೇಲೆ, ಇತ್ತೀಚೆಗೆ ನಿಧನರಾದ ಎಸ್.ಎನ್.ಪಂಜಾಜೆ ಅವರ ಪರಿಚಯವಾಯಿತು. ಅವರ ಮೂಲಕ ಸಾಕಷ್ಟು ಕಾರ್ಯಕ್ರಮಗಳಿಗೆ ಹೋದೆ. ದಿ.ಬಲಿಪ ನಾರಾಯಣ ಭಾಗವತರು, ದಿ.ಪದ್ಯಾಣ ಗಣಪತಿ ಭಟ್ಟರು, ಸಿರಿಬಾಗಿಲು ರಾಮಕೃಷ್ಣ ಮಯ್ಯರು, ಪಟ್ಲ ಸತೀಶ್ ಶೆಟ್ರು, ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ರೈ ಕಕ್ಕೆಪದವು ಮುಂತಾದವರು ಬೆಂಗಳೂರಿಗೆ ಬಂದಾಗ ಅವರಿಗೆ ಮದ್ದಲೆ ನುಡಿಸುವ ಸೌಭಾಗ್ಯ ನನ್ನದಾಗಿತ್ತು. ಜೊತೆಗೆ, ಬಡಗು ತಿಟ್ಟಿನ ಕೆಲವೊಂದು ಕಾರ್ಯಕ್ರಮಗಳ ವೀರರಸದ ಸನ್ನಿವೇಶಗಳಿಗೆ ತೆಂಕಿನ ಚೆಂಡೆ ನುಡಿಸುವ ಅವಕಾಶ ದೊರೆತಿತ್ತು. ಕೃಷ್ಣಮೂರ್ತಿ ತುಂಗರು ಬಡಗಿನ ಕೆಲವು ಹಾಡುಗಳಿಗೆ ಮದ್ದಲೆ ನುಡಿಸಲು ಕಲಿಸಿ, ನನ್ನ ಮೇಲೆ ವಿಶ್ವಾಸವಿಟ್ಟು ಆಂಧ್ರಪ್ರದೇಶದಲ್ಲೊಂದು ಆಟಕ್ಕೆ ಕರೆದುಕೊಂಡುಹೋಗಿದ್ದರು.

    ನನ್ನ ನೆಚ್ಚಿನ ಭಾಗವತರೆಂದರೆ ನನ್ನಮ್ಮನೇ. ಸಿರಿಬಾಗಿಲು ರಾಮಕೃಷ್ಣ ಮಯ್ಯ, ದಿ.ಬಲಿಪ ನಾರಾಯಣ ಭಾಗವತರು ಹಾಗೂ ಪ್ರಸಾದ ಭಾಗವತರ ಹಾಡುಗಳು, ಪುತ್ತಿಗೆ ರಘುರಾಮ ಹೊಳ್ಳ, ಕುರಿಯ ಗಣಪತಿ ಶಾಸ್ತ್ರಿ ಪದಗಳು ನನಗಿಷ್ಟ. ಈಗಿನ ಭಾಗವತರಲ್ಲಿ ಪ್ರದೀಪ್ ಕುಮಾರ್ ಗಟ್ಟಿ, ಪುತ್ತೂರು ರಮೇಶ ಭಟ್, ದೇವಿಪ್ರಸಾದ್ ಆಳ್ವ ತಲಪಾಡಿ, ಕನ್ನಡಿಕಟ್ಟೆ, ಕಾವ್ಯಶ್ರೀ ನಾಯಕ್ ಮುಂತಾದವರ ಯಕ್ಷಗಾನ ಪದಗಳು ಇಷ್ಟ. ಇಷ್ಟದ ಭಾಗವತರು ತುಂಬ ಮಂದಿ ಇದ್ದರೂ ಯಕ್ಷಗಾನದ ಮಟ್ಟಿನಲ್ಲಿ ಹಾಡುವ ಎಲ್ಲರೂ ಇಷ್ಟವಾಗುತ್ತಾರೆ. ಚೆಂಡೆ-ಮದ್ದಲೆಯಲ್ಲಿ ನನಗೆ ಅಪ್ಪನೇ ಆದರ್ಶ. ಬಲ್ಲಾಳರು, ಕಡಬ ನಾರಾಯಣ ಆಚಾರ್ಯ, ಪದ್ಯಾಣ ಶಂಕರಣ್ಣ, ದೇಲಂತಮಜಲು, ಮಣಿಮುಂಡ ಶಾಸ್ತ್ರಿಗಳು, ಲಕ್ಷ್ಮೀಶ ಅಮ್ಮಣ್ಣಾಯ ಅವರ ಚೆಂಡೆ-ಮದ್ದಳೆ ನುಡಿತಗಳು ಅತ್ಯಂತ ಇಷ್ಟ. ಅಂತೆಯೇ ಹೊಸ ಪೀಳಿಗೆಯಲ್ಲಿ ಉಳಿತ್ತಾಯರು, ರಾಮಪ್ರಕಾಶ್ ಕಲ್ಲೂರಾಯ, ಚೈತನ್ಯ ಪದ್ಯಾಣ, ಶ್ರೀಧರ ವಿಟ್ಲ, ಸವಿನಯ ನೆಲ್ಲಿತೀರ್ಥ, ಚಂದ್ರಶೇಖರ ಆಚಾರ್ಯ – ಇವರೆಲ್ಲ ಚೆಂಡೆ ಮದ್ದಲೆಯ ಅಸಾಧಾರಣ ಪ್ರತಿಭೆಗಳು.

    ಯಕ್ಷಗಾನದ ಇಂದಿನ ಸ್ಥಿತಿ ಗತಿ:-
    ಯಕ್ಷಗಾನದ ಇಂದಿನ ಸ್ಥಿತಿಗತಿ ಬಗ್ಗೆ ಹೇಳುವುದಾದರೆ, ಯಕ್ಷಗಾನಕ್ಕೆ ಬೇರೆ ಕಲೆಗಳ ಸಂಕರ ಆಗಿಬಿಟ್ಟಿದೆ. ಶೇಣಿಯವರ ಮಾತು ಯಾವಾಗಲೂ ಕಿವಿಯಲ್ಲಿ ಅನುರಣಿಸುತ್ತಿದೆ. ಯಕ್ಷಗಾನವೇ ಸಮೃದ್ಧವಾದ ಪರಿಪೂರ್ಣ ಕಲೆ ಆಗಿರುವಾಗ ಅದಕ್ಕೆ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಸಿನಿಮಾ, ಜಾನಪದ – ಮುಂತಾದವುಗಳನ್ನು ಎರವಲು ತಂದು ಸೇರಿಸುವುದೇಕೆ ಅಂತ. ಯಾಕೆಂದರೆ, ಯಕ್ಷಗಾನದ ಸತ್ವ ಮತ್ತು ಆಳವನ್ನು ಅರಿತವರು ಈಗಲೂ ಯಕ್ಷಗಾನವನ್ನು ಆನಂದಿಸುತ್ತಾರೆ ಮತ್ತು ಯಕ್ಷಗಾನದ್ದಲ್ಲದ ಹೊರಗಿನ ಸರಕಿನ ಬಗ್ಗೆ ಅವರಿಗೆ ಅಸಮಾಧಾನವಿದ್ದೇ ಇದೆ. ಯಕ್ಷಗಾನವನ್ನು ಯಕ್ಷಗಾನವಾಗಿ ಉಳಿಸಿಕೊಳ್ಳುವುದೇ ಈಗ ಗುರುಗಳಾಗಿ ಕೆಲಸ ಮಾಡುತ್ತಿರುವವರ ಅತ್ಯಂತ ಆದ್ಯ ಮತ್ತು ಪವಿತ್ರ ಕರ್ತವ್ಯ. ಈಗ ಕಿರಿಯ ಪ್ರಾಯದವರು ಕೂಡ ಗುರುಗಳೇ ಆಗಿದ್ದಾರೆ, ಸಾಕಷ್ಟು ಗುರುಗಳಿದ್ದಾರೆ, ಆದರೂ ಯಕ್ಷಗಾನ ಟ್ರ್ಯಾಕ್ ತಪ್ಪುತ್ತಿರುವುದೇಕೆ? ಇದು ನನ್ನನ್ನು ಕಾಡುವ ಪ್ರಶ್ನೆ. ಯಕ್ಷಗಾನದ ಅಳಿವು – ಉಳಿವಿನಲ್ಲಿ ಪ್ರೇಕ್ಷಕರ ಪಾತ್ರವೂ ಇದೆ. ಯಕ್ಷಗಾನೇತರವಾದದ್ದು ರಂಗದಲ್ಲಿ ಬಂದರೆ ಅದನ್ನು ಚಪ್ಪಾಳೆ-ಶಿಳ್ಳೆಗಳಿಂದ ಪ್ರೋತ್ಸಾಹಿಸುವ ಬದಲು, ಅಲ್ಲೇ ಖಂಡಿಸುವ ಛಾತಿ ತೋರಿಸಬೇಕಿದೆ.

    ಗಾನವೈಭವ, ನಾಟ್ಯ ವೈಭವ ಇದು ನಿಜಾರ್ಥದ ವೈಭವ. ಕಲಾವಿದರ ಪ್ರತಿಭೆ ಪ್ರದರ್ಶನಕ್ಕೆ, ಸಾಮರ್ಥ್ಯ ಪ್ರದರ್ಶನಕ್ಕೆ ಇರುವ ವೇದಿಕೆ. ಅದು ಗಾಯನದ ಒಂದು ಕವಲು. ಆದರೆ ಇದು ಯಕ್ಷಗಾನದ ವೈಭವ ಅಲ್ಲವೇ ಅಲ್ಲ. ಯಾಕೆಂದರೆ, ಗಾನವೈಭವದಲ್ಲಿ ಚೆಂಡೆ-ಮದ್ದಳೆಗಳೊಂದಿಗೆ ಯಕ್ಷಗಾನದ ಸಾಹಿತ್ಯವನ್ನು, ವೈವಿಧ್ಯಮಯವಾಗಿ ಸ್ವಸಾಮರ್ಥ್ಯದಿಂದ ಯಾವುದೇ ರೀತಿಯಲ್ಲಿ, ಶಾಸ್ತ್ರೀಯ ಸಂಗೀತ, ಜಾನಪದ, ಸಿನಿಮಾ – ಹೀಗೆ ವೈವಿಧ್ಯಮಯ ಶೈಲಿಗಳಲ್ಲಿ ಹಾಡಬಹುದು. ಆದರೆ, ಅದುವೇ ಯಕ್ಷಗಾನ ಅಂತ ಹೊಸ ಪೀಳಿಗೆಯ ಮಂದಿ ಅನುಕರಿಸುವ ಅಪಾಯ ತಡೆಯಬೇಕಿದೆ. ಈ ಗಾನವೈಭವವು ಯಕ್ಷಗಾನದ ರಂಗಸ್ಥಳದೊಳಗೆ ಬಂದರೆ ಯಕ್ಷಗಾನದ ಸೌಂದರ್ಯ ಕೆಡುತ್ತದೆ. ಗಾನವೈಭವ ಗಾನವೈಭವವೇ ಆಗಿರಲಿ. ಯಕ್ಷಗಾನವು ಯಕ್ಷಗಾನವೇ ಆಗಿರಬೇಕು ಎಂಬುದು ನನ್ನ ಇಂಗಿತ.

    ಯಕ್ಷಗಾನಕ್ಕಾಗಿ ಸದ್ಯಕ್ಕೆ ನನಗೆ ತಿಳಿದದ್ದನ್ನು ಕೆಲವು ಆಸಕ್ತ ಮಕ್ಕಳಿಗೆ ಹೇಳಿಕೊಡುತ್ತಿದ್ದೇನೆ. ಹಾಗೆಯೇ ಅಪ್ಪ-ಅಮ್ಮನ ಹೆಸರಿನಲ್ಲಿ ಪ್ರತಿ ವರ್ಷ “ಡಿಜಿ ಯಕ್ಷ ಫೌಂಡೇಶನ್ (ರಿ)” ಮೂಲಕ ಯಕ್ಷಗಾನ ಕಲಾವಿದರನ್ನು ಗೌರವಿಸುವ, ಆ ದಿನ ಸಾಂಪ್ರದಾಯಿಕ ಯಕ್ಷಗಾನ ಪ್ರದರ್ಶಿಸುವ ಪರಿಪಾಠವನ್ನು ಆರಂಭಿಸಿದ್ದೇನೆ. ಅದು ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ. 2021ರಲ್ಲಿ ಮೊದಲ ಪ್ರಶಸ್ತಿ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರಿಗೆ, 2022ರ ಪ್ರಶಸ್ತಿ ಶ್ರೀ ಪೆರುವಾಯಿ ನಾರಾಯಣ ಭಟ್ ಅವರಿಗೆ, ಹಾಗೂ ಈ ಬಾರಿ 2023ರಲ್ಲಿ ನವೆಂಬರ್ ತಿಂಗಳಲ್ಲಿ ಹಿರಿಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಬೈಪಾಡಿತ್ತಾಯ ಶಿಷ್ಯವೃಂದದವರ ಸಂಪೂರ್ಣ ನೆರವಿನೊಂದಿಗೆ ಪ್ರತಿವರ್ಷ ನಡೆಯುವ ಈ ಕಾರ್ಯಕ್ರಮವನ್ನು ಬೇರೆ ಬೇರೆ ಕಡೆ ಆಯೋಜಿಸುವ ಇರಾದೆಯಿದೆ ಮತ್ತು ಯಕ್ಷಗಾನದ ಮಹಾನ್ ಕಲಾವಿದರು ನಮಗೆ ಹಾಕಿಕೊಟ್ಟ ದಾರಿಯನ್ನು, ಅದರ ಸಾರ ಸತ್ವವನ್ನು, ಮಟ್ಟುಗಳನ್ನು ಉಳಿಸಿ, ಪೋಷಿಸಿ, ಮುಂದಿನ ಪೀಳಿಗೆಗೂ ಕಾಪಾಡಿಕೊಳ್ಳುವಂತೆ ಮಾಡುವ ಯೋಜನೆಯೊಂದಿದೆ.

    ಅಮ್ಮನಂತೆ ಭಾಗವತಿಕೆ ಕಲಿಯಲಿಲ್ಲವಲ್ಲಾ ಎಂಬ ಕೊರಗು ಕಾಡುತ್ತಲೇ ಇದೆ. ಮುಂದೆ ಯಕ್ಷಗಾನಕ್ಕೆ ಸಂಬಂಧಿಸಿ ಸಾಕಷ್ಟು ಕೆಲಸಗಳನ್ನು ಮಾಡಬೇಕಿದೆ.

    ಯಕ್ಷಗಾನದ ಹೊರತಾಗಿ, ನಾನು ಪತ್ರಿಕೋದ್ಯೋಗಿ. ತಂತ್ರಜ್ಞಾನದ ಬಗ್ಗೆ ಆಸಕ್ತಿ, ಅದರ ಬಗ್ಗೆ ಜನರಿಗೆ ಅರ್ಥವಾಗುವಂತೆ ವಿವರಿಸುವುದು – ಇದು ಪತ್ರಿಕೋದ್ಯೋಗದಲ್ಲಿ ನನಗೆ ಹೆಸರು ತಂದುಕೊಟ್ಟ ಸಂಗತಿ. ತಂತ್ರಜ್ಞಾನ ಅಂಕಣಕಾರ, ಬರಹಗಾರ, ಜೊತೆಗೆ ಶಾಸ್ತ್ರೀಯ ಸಂಗೀತದ ಮೃದಂಗ, ಘಟಂ- ಅಲ್ಪಸ್ವಲ್ಪ ಮಟ್ಟಿಗೆ ನುಡಿಸುತ್ತೇನೆ.

    ಗೌರವಗಳ ಅಪೇಕ್ಷೆಯಿಲ್ಲ. ಪ್ರೇಕ್ಷಕರು ಖುಷಿಯಿಂದ, “ಹಿಮ್ಮೇಳ ಚಂದ ಆಗಿದೆ, ಇದರಿಂದಾಗಿ ಯಕ್ಷಗಾನವೂ ಚಂದ ಆಯಿತು” ಅನ್ನುವ ನುಡಿಗಳೇ ನನಗೆ ಸನ್ಮಾನ. ಬರವಣಿಗೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ ಸಿಕ್ಕಿದೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ್ದೇನೆ. ಸಾಹಿತ್ಯ ಪರಿಷತ್‌ನ ಸುವರ್ಣ ಸಂಪುಟದಲ್ಲಿ ನನ್ನ ಲೇಖನ ಪ್ರಕಟಿಸಿದ್ದಾರೆ, ಬೆಂಗಳೂರು ವಿವಿಗೆ ನನ್ನ ತಂತ್ರಜ್ಞಾನ ಕುರಿತಾದ ಲೇಖನವೊಂದು ಪಠ್ಯ ಪುಸ್ತಕದಲ್ಲಿ ಸ್ಥಾನ ಪಡೆದಿದೆ – ಜೊತೆಗೆ ಜನರು ತಂತ್ರಜ್ಞಾನ ಲೇಖನಗಳಿಗಾಗಿ ಮಾತಿಗೆ ಸಿಕ್ಕಾಗ, ಇಮೇಲ್ – ವಾಟ್ಸ್ಆ್ಯಪ್ ಮೂಲಕ ಖುಷಿಯಿಂದ ಪ್ರತಿಕ್ರಿಯಿಸಿದ್ದೇ ನನಗೆ ಗೌರವ.

    ಅವಿನಾಶ್ ಬೈಪಾಡಿತ್ತಾಯ ಅವರು ವಾಣಿ ಇವರನ್ನು ಮದುವೆಯಾಗಿ ಮಗ ಅಭಿಷೇಕ್ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

    • ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು

    Share. Facebook Twitter Pinterest LinkedIn Tumblr WhatsApp Email
    Previous Articleಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ‘ಹಿಂದಿ ದಿವಸ್’ ಕಾರ್ಯಕ್ರಮ
    Next Article ಕನ್ನಡ ಸಾಹಿತ್ಯ ಪರಿಷತ್ ಮೂಲ್ಕಿ ಘಟಕದಿಂದ ಕಟೇಲಿನಲ್ಲಿ ಹಿರೇಮಗಳೂರು ಕಣ್ಣನ್ ಜೊತೆ ಹರಟೆ 
    roovari

    Add Comment Cancel Reply


    Related Posts

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ತಾಳಮದ್ದಳೆ ಜ್ಞಾನಯಜ್ಞ’ | ಮೇ 26

    May 24, 2025

    ಮಂಗಳೂರು ವಿಶ್ವವಿದ್ಯಾನಿಲಯದ ‘ಯಕ್ಷಮಂಗಳ ಪ್ರಶಸ್ತಿ’ ಪ್ರಕಟ

    May 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.