ಕಳೆದ ಎರಡು ದಶಕಗಳಿಂದ ಯಕ್ಷಗಾನ ಸೇವೆಯಲ್ಲಿ ತೊಡಗಿ, 500ಕ್ಕೂ ಹೆಚ್ಚು ತಾಳಮದ್ದಳೆ ಮತ್ತು ಯಕ್ಷಗಾನಗಳಲ್ಲಿ ಭಾಗವಹಿಸಿ; “ಕಾಶ್ಯಪ ಮಹಿಳಾ ಯಕ್ಷಗಾನ ತಂಡ”ದ ಮುಂಚೂಣಿ ಕಲಾವಿದೆಯಾಗಿ ಮತ್ತು “ಯಕ್ಷ ಕಲಾಸಂಗಮ” ಎಂಬ ತಂಡವನ್ನು ಕಟ್ಟಿ ಪೋಷಿಸುತ್ತಿರುವ ಕಲಾವಿದೆ ಶ್ರೀಮತಿ ಸುಮಾ ವೆಂಕಟ್ರಮಣ ಹೆಗಡೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನಡುಗೋಡು ಎಂಬ ಪುಟ್ಟ ಗ್ರಾಮದ ಮಹಾಬಲೇಶ್ವರ ಭಟ್ಟ ಹಾಗೂ ಲಲಿತಾ ಭಟ್ ಇವರ ಮಗಳಾಗಿ 14.12.1973ರಂದು ಜನನ. ವಿದ್ವಾನ್ ಸುಬ್ರಾಯ ಭಟ್ಟ ಗಡಿಗೆಹೊಳೆ ಅವರಲ್ಲಿ ಯಕ್ಷಗಾನ ಸಾಹಿತ್ಯಾಭ್ಯಾಸ, ಹಿರಿಯ ಕಲಾವಿದ ಗಣಪತಿ ಭಾಗವತ್ ಕವ್ವಾಳೆ ಇವರಲ್ಲಿ ನೃತ್ಯಾಭ್ಯಾಸ.
ನಾನಾಗ ಏಳನೇ ಕ್ಲಾಸಿನಲ್ಲಿ ಓದುತ್ತಿದ್ದೆ. ಬೆಳಗಿನ ಜಾವ ಮೂರರವರೆಗೆ ಗದಾಯುದ್ಧ ಯಕ್ಷಗಾನ ಪ್ರಸಂಗವನ್ನು ನೋಡಿ ಬಂದು ಮಲಗಿದ್ದೆ. ಕನಸಿನಲ್ಲಿ ನಾನೇ ಭೀಮನ ಪಾತ್ರ ಕಟ್ಟಿದ್ದೆ. ಮುಖದ ಮೇಲೆ ಎರಡಿಂಚು ದಪ್ಪದ ಮೀಸೆ, ಮೈಮೇಲೆ ಮಿರಿ ಮಿರಿ ಮಿನುಗುವ ಆಭರಣಗಳು, ಹಳದಿ ಕೆಂಪು ಚೌಕುಳಿ ಬಟ್ಟೆಯ ಯಕ್ಷ ವೇಷ… ಹೀಗೆ ಸಾಗಿತ್ತು ನನ್ನ ಕನಸು. ಬೆಳಗಿನ ಜಾವದಲ್ಲಿ ಕಂಡ ಸ್ವಪ್ನ ಯಾವತ್ತೋ ಒಂದು ದಿನ ನಿಜವಾಗುತ್ತದೆ ಎಂಬ ಮಾತಿನಂತೆ ಪುಟಾಣಿ ಹುಡುಗಿಯಾಗಿದ್ದಾಗ ಗದಾಯುದ್ಧ ನೋಡಿ ಮಲಗಿದ ಬೆಳಗಿನ ಜಾವ ಭೀಮನ ಪಾತ್ರ ಕಟ್ಟಿದಂಥ ಕನಸು ನನಸಾಯಿತು. ಸರಿ ಸುಮಾರು 400★★ ಯಕ್ಷಗಾನ ಪ್ರದರ್ಶನ ಕೊಟ್ಟಿರುವ ನನಗೆ, ಭೀಮನಾಗಿ ಯಕ್ಷ ಪಾತ್ರ ಕಟ್ಟುವಾಗೆಲ್ಲ ಚಿಕ್ಕವಳಿರುವಾಗ ಯಕ್ಷಗಾನ ಕುಣಿದ ಕನಸು ಕಂಡ ಘಟನೆಯ ನೆನಪಾಗುತ್ತದೆ. ಚಿಕ್ಕಂದಿನಿಂದಲೂ ಯಕ್ಷಗಾನದ ವಾತಾವರಣದಲ್ಲಿ ಬೆಳೆದವಳಾದರೂ ಓದು, ಮದುವೆ, ಮಕ್ಕಳ ನಂತರದಲ್ಲಿ ಈ ಯಕ್ಷಗಾನ ಜಗತ್ತಿಗೆ ತೆರೆದುಕೊಂಡವಳು ನಾನು. 2005ರಲ್ಲಿ ಯಕ್ಷ ಪಯಣ ಪ್ರಾರಂಭವಾಯಿತು.
ಯಕ್ಷಗಾನದ ಪ್ರಸಂಗ ಯಾವುದು ಅಂತ ನಿರ್ಣಯ ಆದ ತಕ್ಷಣ. ಆ ಕಥೆಯ ಬಗ್ಗೆ, ಅದರ ಹಾಡಿಗೆ ತಕ್ಕುದಾದ ಕುಣಿತ ತಿಳಿದು, ಹಾಡಿನ ಸಾಹಿತ್ಯವನ್ನು ಸರಿಯಾಗಿ ತಿಳಿದು, ಹಾಗೇ ಆ ಪಾತ್ರದ ಔಚಿತ್ಯ ತಿಳಿದು, ಪ್ರಾಕ್ಟಿಸ್ ಮಾಡಿ ತದನಂತರ ರಂಗದಲ್ಲಿ ಪ್ರಯೋಗ ನಡೆಸುವದಾಗಿದೆ. ಇನ್ನು ತಿಳಿದವರಲ್ಲಿ ಕೇಳಿ ಕಲಿತು ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿಯನ್ನು ನಡೆಸುತ್ತೇನೆ ಎಂದು ಹೇಳುತ್ತಾರೆ ಹೆಗಡೆಯವರು.
ಕರ್ಣಪರ್ವ, ಭೀಷ್ಮ ವಿಜಯ, ಭೀಷ್ಮಾರ್ಜುನ, ಗದಾಪರ್ವ, ವಿಕ್ರಮ ಬೇತಾಳ, ರಾವಣವಧೆ ಇತ್ಯಾದಿ ನೆಚ್ಚಿನ ಪ್ರಸಂಗಗಳು.
ಭಸ್ಮಾಸುರ, ಭೀಷ್ಮ, ರಾವಣ, ವಿಕ್ರಮಾದಿತ್ಯ, ಕರ್ಣ, ಭೀಮ, ಈಶ್ವರ, ಅರ್ಜುನ, ರಾಮ, ಕೃಷ್ಣ, ಮಹಿಷಾಸುರ, ಶಿಶುಪಾಲ, ದುಷ್ಟಬುದ್ಧಿ, ಹೀಗೆ ವಿವಿಧ ಪಾತ್ರಗಳನ್ನು ಮಾಡಿರುತ್ತಾರೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ಇಂದು ಅತ್ಯಂತ ಒಳ್ಳೆಯ ಸ್ಥಿತಿಯಲ್ಲಿದೆ ಅಂತ ಹೇಳಬಹುದು. ಅಲ್ಲಲ್ಲಿ ಯಕ್ಷಗಾನದ ತರಬೇತಿ ಕೇಂದ್ರಗಳು ತೆರೆದಿವೆ. ಮಹಿಳೆಯರು ಮತ್ತು ಮಕ್ಕಳು ಸಾಕಷ್ಟು ಯಕ್ಷಗಾನದಲ್ಲಿ ಮುಂದುವರೆಯುತ್ತಿದ್ದಾರೆ. ಅವಕಾಶಗಳು ಬೇಕಷ್ಟು ಸಿಗುತ್ತಿವೆ. ನನ್ನ ಸದ್ಯದ ಪ್ರಯಾಣ ಅಮೆರಿಕದ ಕಡೆಗಾಗಿತ್ತು. ಅಲ್ಲಿಯ ಯಕ್ಷಗಾನದ ಅನುಭವ ರೋಚಕವಾದುದು. ಹೇಳಲು ಸಾಕಷ್ಟಿದೆ. ನಮ್ಮಂತಹ ಕಲಾವಿದರನ್ನು ದೇವರಂತೆ ಕಾಣುತ್ತಾರೆ. ಅಲ್ಲಿ ಹಲವಾರು ಶಿಷ್ಯರನ್ನು ತಯಾರು ಮಾಡಿದ ಅನುಭವ ನನ್ನದು. ಅಲ್ಲಿಯ ಮುಂದಿನ ಪೀಳಿಗೆಗೆ ನಮ್ಮ ಯಕ್ಷಗಾನದ ರುಚಿ ತೋರಿಸಿ ಬಂದ ಹೆಮ್ಮೆ ನನ್ನದು. ಒಟ್ಟಾರೆ ಇಂದು ಯಕ್ಷಗಾನ ಉಚ್ಛಾಯ ಸ್ಥಿತಿಯಲ್ಲಿದೆ ಎನ್ನಬಹುದು.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನದ ಪ್ರಬುದ್ಧ ಪ್ರೇಕ್ಷಕರು ಇದ್ದಾರೆ. ಹಾಗೇ ವಿಭಿನ್ನ ರುಚಿಯ ಪ್ರೇಕ್ಷಕರನ್ನು ನಾವು ಕಾಣುತ್ತೇವೆ. ಯಾಕೆಂದರೆ ಸಿನೆಮಾ ಹಾಡಿನಂತೆ ಯಕ್ಷಗಾನದ ಹಾಡನ್ನು ನೋಡಲು ಬಯಸುವ ಯುವಪೀಳಿಗೆ ನೋಡಿ ಯಕ್ಷಗಾನದ ದಾರಿ ಎತ್ತ ಹೊರಟಿದೆ ಎನ್ನುವ ಭಯವೂ ಕಾಡುತ್ತದೆ. ಕಾಲವೇ ಉತ್ತರ ಹೇಳಬೇಕಷ್ಟೆ. ಆದರೆ ಹಿಂದಿನ ತಲೆಮಾರಿನವರು ಉಳಿಸಿಕೊಂಡು ಬಂದ ಸಂಪ್ರದಾಯ ಉಳಿಯಲಿ ಎನ್ನುವುದು ನಮ್ಮಾಸೆ.
ಯಕ್ಷಗಾನದ ಮುಂದಿನ ಯೋಜನೆ:-
ನಮ್ಮ ಭಾರತದ ಸಂಸ್ಕೃತಿಯ ಪ್ರತೀಕವಾದ ಹೆಮ್ಮೆಯ ಕಲೆ, ಶ್ರೀಮಂತ ಕಲೆ ಈ ಯಕ್ಷಗಾನ. ಮುಂದಿನ ಪೀಳಿಗೆಗೆ ಕೊಡಬೇಕಾದ ಕರ್ತವ್ಯ ನಮ್ಮದು. ಆ ದಿಶೆಯಲ್ಲಿ ನಾವು ಯಕ್ಷಗಾನ ಕಲಿಕಾ ಕೇಂದ್ರವನ್ನು ನಡೆಸುತ್ತಿದ್ದೇವೆ.
ವಿದ್ವಾನ್ ಸುಬ್ರಾಯ ಭಟ್ಟ ಅವರ ಪ್ರೋತ್ಸಾಹದೊಂದಿಗೆ ಕೌವಾಳೆ ಗಣಪತಿ ಭಾಗವತರ ಮಾರ್ಗದರ್ಶನದಲ್ಲಿ ನಾವು ಹಲವಾರು ಮಹಿಳೆಯರು ಹೊರಟಿದ್ದೇವೆ.
ಯಕ್ಷಗಾನ ಕಲೆಯ ಉಳಿವಿಗಾಗಿ ಈ ಕಲೆಯನ್ನು ಮುಂದಿನ ಜನಾಂಗಕ್ಕೆ ಒಯ್ಯುವ ನಿಟ್ಟಿನಲ್ಲಿ ಮಹಿಳೆಯರಿಗೆ, ಮಕ್ಕಳಿಗೆ ಯಕ್ಷಗಾನ ತರಬೇತಿ ಪ್ರಾರಂಭ. ಸಮಾಜಕ್ಕೆ ಮತ್ತು ಮುಂದಿನ ಪೀಳಿಗೆಗೆ ನನ್ನಿಂದ ಏನಾದರೂ ಕೊಡಬೇಕು ಎಂಬ ನೆಲೆಯಲ್ಲಿ ಹುಟ್ಟಿದ ಸಂಸ್ಥೆ ಯಕ್ಷ ಕಲಾಸಂಗಮ (ರಿ) ಶಿರಸಿ ಮತ್ತು ಯಕ್ಷ ಕಲಾಸಂಗಮ (ರಿ) ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಕೇಂದ್ರ ಶಿರಸಿ ಸಂಸ್ಥೆಯ ಮೂಲಕ ಮಕ್ಕಳಿಗೆ ಉಚಿತವಾಗಿ ಬೇಸಿಗೆ ಶಿಬಿರ; ಆಸಕ್ತ ಮಹಿಳೆಯರಿಗೆ ಯಕ್ಷಗಾನ ತಾಳಮದ್ದಳೆಯ ತರಬೇತಿ; ಯಕ್ಷಗಾನ ಅಕಾಡೆಮಿಯವರ ಸಹಕಾರದಿಂದ “ಪ್ರೇರಣಾ” ಸಂಸ್ಥೆಯ ಮಕ್ಕಳಿಗೆ ಯಕ್ಷಗಾನ ತರಬೇತಿ; “ಗಣೇಶ ನೇತ್ರಾಲಯ ಶಿರಸಿ” ಇಲ್ಲಿಯ ನರ್ಸ್ ಗಳಿಗೆ ಯಕ್ಷಗಾನ ತರಬೇತಿ ನೀಡಿ ಕಾರ್ಯಕ್ರಮ ನೀಡಿದ್ದಾರೆ. ಕೊರೋನ ಕಾಲದಲ್ಲಿ ಆನ್ಲೈನ್ ತರಬೇತಿ ಮತ್ತು ಆನ್ಲೈನ್ ಕಾರ್ಯಕ್ರಮ ಎಲ್ಲಾ ನಡೆಸಿದ್ದೇವೆ.
“ಜನಪದ ರತ್ನ” ಎಂಬ ರಾಜ್ಯ ಮಟ್ಟದ ಪ್ರಶಸ್ತಿ, “ದೆಹಲಿ ಕರ್ನಾಟಕ ಸಂಘ” ಕರೆದು ಗೌರವಿಸಿ ಅವಕಾಶ, “ಮಿಯಾರ್ಡ್ಸ್ ಮೇಧಿನಿ ರಂಗ ಅಧ್ಯಯನ ಕೇಂದ್ರ ಶಿರಸಿ”, ಸಾಯಿಬಾಬಾ ಶಿರಡಿ ಹೀಗೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಗಳು ಲಭಿಸಿವೆ.
“ರಾಜ್ಯ ಮಟ್ಟದ ಸಂಸ್ಕೃತೋತ್ಸವ”ದಲ್ಲಿ ಸಂಸ್ಕೃತದಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ದತ್ತು ಮಕ್ಕಳ ಕುರಿತು ಸಾಮಾಜಿಕ ಜಾಗೃತಿ ಯಕ್ಷಗಾನ ಪ್ರದರ್ಶನ.
ರಾಜ್ಯ ಮಟ್ಟದ ಕೃಷಿ ಮೇಳ, ಅಖಿಲ ಭಾರತ ಯಕ್ಷಗಾನ ಬಯಲಾಟ ಉತ್ಸವ, ದೆಹಲಿ ಕರ್ನಾಟಕ ಸಂಘ, ಪರಿಸರ ಯಕ್ಷಗಾನ, ಹವ್ಯಕ ಮಹಿಳಾ ಜಾಗತಿಕ ಸಮಾವೇಶ, ಮಹಿಳಾ ಯಕ್ಷೋತ್ಸವ, ಯಕ್ಷ ರಂಗೋತ್ಸವ ಹಳದೀಪುರ ಬೆಂಗಳೂರು, ಮಂಗಳೂರು, ಶಿವಮೊಗ್ಗ, ಸಾಗರ, ಕಾರವಾರ, ಕೈಗಾ, ಅಂಕೋಲಾ, ಹುಬ್ಬಳ್ಳಿ, ಧಾರವಾಡ, ಗದಗ, ಹೀಗೆ ದೇಶದ ಹಲವೆಡೆ ಯಕ್ಷಗಾನ ಪ್ರದರ್ಶನ ನೀಡಿರುತ್ತಾರೆ ಸುಮಾ ವೆಂಕಟ್ರಮಣ ಹೆಗಡೆ.
ಯಕ್ಷಗಾನ, ಹೂವಿನ ಗಿಡ, ತರಕಾರಿ ಬೆಳೆಯುವದು, ಕಾರು, ಬೈಕು ಓಡಿಸುವುದು, ಪ್ರವಾಸಕ್ಕೆ ಹೋಗುವುದು ಇವರ ಹವ್ಯಾಸಗಳು.
ಸುಮಾ ಅವರು 10.04.1992ರಂದು ವೆಂಕಟರಮಣ ಹೆಗಡೆ ಇವರನ್ನು ಮದುವೆಯಾಗಿ ಮಗ ಆನಂದ (ಕಾರ್ತಿಕ) (ಅಮೆರಿಕಾದಲ್ಲಿ ಪಿಎಚ್ಡಿ ಮುಗಿಸಿ ಸ್ವಂತ ಕಂಪನಿಯ ಓನರ್ ಆಗಿದ್ದಾನೆ), ಸೊಸೆ ಸ್ನೇಹಾ ಹೆಗಡೆ (ಡಾಕ್ಟರ್) ಹಾಗೂ ಮಗಳು ಐಶ್ವರ್ಯ ಹುಬ್ಬಳ್ಳಿಯ ಕೆಎಸ್ಎಲ್ ಯು ಯುನಿವರ್ಸಿಟಿಯಲ್ಲಿ ಓದುತ್ತಿದ್ದಾಳೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು