ಯಕ್ಷಗಾನ – ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ ಇಂತಹ ಶಾಸ್ತ್ರೀಯ ಕಲೆಯಲ್ಲಿ ತಮ್ಮ ಪ್ರತಿಭೆಯನ್ನು ಕಲಾ ಪ್ರಪಂಚದಲ್ಲಿ ಪ್ರದರ್ಶನ ನೀಡುತ್ತಿರುವ ಯಕ್ಷ ದಂಪತಿ ಆನಂದ ಭಟ್ ಕೆಕ್ಕಾರು ಹಾಗೂ ವಿದ್ಯಾ ಆನಂದ ಭಟ್ ಕೆಕ್ಕಾರು.
ಆನಂದ ಭಟ್ ಕೆಕ್ಕಾರು:
ಹೊನ್ನಾವರದ ಕೆಕ್ಕಾರಿನ ಗಣಪತಿ ಭಟ್ ಮತ್ತು ದಿ. ವಿಜಯಲಕ್ಷ್ಮಿ ಭಟ್ ಇವರ ಮಗನಾಗಿ 13.06.1988 ರಂದು ಜನನ. ಮೆಕ್ಯಾನಿಕ್ ಇಂಜಿನಿಯರ್ ಇವರ ವಿದ್ಯಾಭ್ಯಾಸ.
ಮನೆಯಲ್ಲಿ ಯಕ್ಷಗಾನ ವಾತಾವರಣ, ದೊಡ್ಡಪ್ಪ ಜಿ ಡಿ ಭಟ್ ನಾಟಕ ಕಲಾವಿದ ಜೊತೆಗೆ ಗಣಪತಿ ಮೂರ್ತಿಕಾರ, ತಂದೆಯು ನಾಟಕಕಾರ ಹಾಗೂ ತಾಯಿ ಕೂಡ ಸಾಂಸ್ಕೃತಿಕ ಆಸಕ್ತಿ ಇದ್ದುದರಿಂದ ಕೆಕ್ಕಾರು ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು. ಯಕ್ಷಗಾನವನ್ನು ನೋಡಿಯೇ ಕಲಿತದ್ದು ಆದ್ರೆ ಮಂಡಿ ಭಾಸ್ಕರ್ ಭಟ್ ಅನ್ನುವರು ಮಾರ್ಗದರ್ಶನ ಮಾಡಿ ಯಕ್ಷಗಾನ ರಂಗದಲ್ಲಿ ಒಳ್ಳೆಯ ಕಲಾವಿದರಿಗೆ ರೂಪುಗೊಂಡರು.
ಭೀಷ್ಮ ವಿಜಯ, ಕರ್ಣ ಪರ್ವ, ದಮಯಂತಿ, ಹರೀಶ್ಚಂದ್ರ, ವಾಲಿವಧೆ ಇತ್ಯಾದಿ ನೆಚ್ಚಿನ ಪ್ರಸಂಗಗಳು.
ಭೀಷ್ಮ, ಪರಶುರಾಮ, ಕರ್ಣ, ದಶರಥ, ಸುಗ್ರೀವ, ರಾಮ, ಕೃಷ್ಣ, ಶಿವಾಜಿ ನೆಚ್ಚಿನ ವೇಷಗಳು.
ಹಿರಿಯರಾದ ಎಂ.ಕೆ ರಮೇಶ್ ಆಚಾರ್ಯ ಅವರಲ್ಲಿ ಕೇಳಿ ತಿಳಿದುಕೊಂಡು, ಸಹ ಕಲಾವಿದರಲ್ಲಿ ಕೇಳಿ, ತಾಳಮದ್ದಳೆ ಕೇಳಿ ಆಟ ನೋಡಿ, ಮಾತುಗಾರಿಕೆಯ ಕುರಿತು ಸದಾಶಿವ ಆಳ್ವ ತಲಪಾಡಿ ಅವರಲ್ಲಿ ಕೇಳಿ ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಆನಂದ ಭಟ್ ಕೆಕ್ಕಾರು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:
ಒಳ್ಳೆಯದೇ ಇದೆ ನಮ್ಮಂಥ ಯುವಕರು ನಾವು ಮಾಡಿದ್ದೆ ಸರಿ ಏನದೇ ಹಿರಿಯರ ಮಾರ್ಗದರ್ಶನ ಪಡೆದು ಪಾತ್ರದ ಭಾವ ತಿಳಿದು ಕಥೆಯ ಹುರುಳು ಅರಿತು ನಡೆದರೆ ಉತ್ತಮ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- ಪ್ರಜ್ಞಾವಂತರೂ… ಕಲಾವಿದ ತಪ್ಪು ಮಾಡಿದಲ್ಲಿ ಅಲ್ಲೇ ಖಂಡಿಸಿದರೆ ಉತ್ತಮ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:
ಕಲಿಯುವ ಬಯಕೆ.. ತಾಯಿಯ ಹೆಸರಲ್ಲಿ ಜೀವಿ ಪ್ರತಿಷ್ಠಾನ ಎಂಬುದನ್ನು ಸ್ಥಾಪಿಸಿ ವರ್ಷಕ್ಕೆ ಒಬ್ಬರಿಗೆ ಸನ್ಮಾನ ಮತ್ತು ಸಹಾಯ ಮಾಡುತ್ತ ಬಂದಿದ್ದೇನೆ ಇದನ್ನು ಮುಂದುವರೆಸಿ ಪ್ರತಿಷ್ಠಾನದ ಮೂಲಕ ಇನ್ನೂ ಅನೇಕ ಕಲಾವಿದರಿಗೆ ಸಹಾಯ ಮಾಡಬೇಕು ಎಂಬ ಯೋಜನೆ ಇದ್ದೆ ಎಂದು ಹೇಳುತ್ತಾರೆ ಆನಂದ ಭಟ್ ಕೆಕ್ಕಾರು.
ಸನ್ಮಾನ ಹಾಗೂ ಪ್ರಶಸ್ತಿ:
- ನಾಟಕದ ಅಭಿನಯಕ್ಕೆ ಅತ್ಯುತ್ತಮ ಬಾಲ ನಟ ಪ್ರಶಸ್ತಿ.
- ಯಕ್ಷರಾತ್ರಿ ಪುರಸ್ಕಾರ.
- ಹವ್ಯಕ ಸಂಘ ಪುರಸ್ಕಾರ.
- ಸಾಸ್ತಾನದಲ್ಲಿ ರಮೇಶ್ ರಾವ್ ಕೊಡಮಾಡುವ ಯುವ ಯಕ್ಷ ರತ್ನ ಪುರಸ್ಕಾರ ಹಾಗೂ ಹಲವು ಸಂಘ ಸಂಸ್ಥೆಗಳು ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಗುತ್ತ್ಯಮ್ಮ ಮೇಳ, ಗೋಳಿಗರಡಿ, ಪೆರ್ಡೂರು, ದೆಂತಡ್ಕ ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಮೆಕ್ಕೆಕಟ್ಟು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ ಆನಂದ ಭಟ್ ಕೆಕ್ಕಾರು.
ಯಕ್ಷಗಾನ ಜೊತೆಗೆ ತಾಳಮದ್ದಳೆ ಅರ್ಥಗಾರಿಕೆ, ಜೊತೆಗೆ ಕಳೆದ 8ವರ್ಷದಿಂದ ಟೋಟಲ್ ಹೋಂ ಮೇಕರ್ಸ್ ಎಂಬ ಇಂಟರಿಯರ್ ಸಂಸ್ಥೆ ನಡೆಸುತ್ತಿದ್ದೇನೆ. ಸಮಯ ಸಿಕ್ಕಾಗ ಓದುವುದು, ತಾಳಮದ್ದಳೆ ಕೇಳೋದು, ನಾಟಕ ನಟನೆ, ಗಣಪತಿ ಮೂರ್ತಿ ತಯಾರಿಕೆಯಲ್ಲಿ ಸಹಾಯ ಇವರ ಹವ್ಯಾಸಗಳು.
ವಿದ್ಯಾ ಆನಂದ ಭಟ್ ಕೆಕ್ಕಾರು:
23.04.1996ರಂದು ಶಂಕರನಾರಾಯಣ ಭಟ್ ಹಾಗೂ ವಿಜಯ ಲಕ್ಷ್ಮಿ ಇವರ ಮಗಳಾಗಿ ಕುಂಟಿಕಾನದಲ್ಲಿ ಜನನ. M.Sc geology, ಪ್ರಸ್ತುತ P.hd in geology (ಸಂಶೋಧನೆ – ಭೂಗರ್ಭ ಶಾಸ್ತ್ರ ವಿಷಯದಲ್ಲಿ) ವ್ಯಾಸಂಗವನ್ನು ಮಾಡುತ್ತಿದ್ದಾರೆ. ಬಾಲ್ಯದಲ್ಲಿ ಅಪ್ಪ ಮತ್ತು ಅಕ್ಕನೊಂದಿಗೆ ಯಕ್ಷಗಾನ ಬಯಲಾಟಗಳು ನೋಡಲು ಹೋಗುತ್ತಿದ್ದರು ಹೀಗೆ ಯಕ್ಷಗಾನ ನೋಡುತ್ತಾ ಯಕ್ಷಗಾನದ ಮೇಲೆ ಒಲವು ಬೆಳೆಯಿತು.
ಸೂರ್ಯನಾರಾಯಣ ಪದಕಣ್ಣಾಯ ಬಾಯಾರ, ಕಾಲೇಜು ಕಲೋತ್ಸವದ ಸಂದರ್ಭದಲ್ಲಿ ದಿವಾಣ ಶಿವಶಂಕರ ಭಟ್ ಇವರ ಯಕ್ಷಗಾನ ಗುರುಗಳು.
ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಅದರಲ್ಲೂ ಕಂಸ ವಧೆ, ಸುಧನ್ವಾರ್ಜುನ ಅಚ್ಚುಮೆಚ್ಚು.
ಸುಧನ್ವ, ಸುದರ್ಶನ, ಅಕ್ರೂರ, ಅತಿಕಾಯ ನೆಚ್ಚಿನ ವೇಷಗಳು.
ಗುರುಗಳಲ್ಲಿ ಪ್ರಸಂಗದ ನಡೆ, ಪಾತ್ರದ ಸ್ವಭಾವಗಳನ್ನು ಕೇಳಿ ತಿಳಿದು ಪ್ರಸಂಗ ಪುಸ್ತಕ, ಪುರಾಣ ಪುಸ್ತಕಗಳನ್ನು ಓದಿ, ಅನುಭವೀ ಕಲಾವಿದರ ವಿಡಿಯೋಗಳನ್ನು ನೋಡಿ, ಯಕ್ಷಗಾನದ ದಿನ ಭಾಗವತರಲ್ಲಿ, ಸಹ ವೇಷಧಾರಿಗಳೊಂದಿಗೆ ಮಾತನಾಡಿ ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ವಿದ್ಯಾ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:
ಯಕ್ಷಗಾನ ಹೊಸ ರೀತಿಯಲ್ಲಿ ಆಧುನಿಕತೆಗೆ ಬೇಕಾದ ಹಾಗೆ ಪರಂಪರೆಗೆ ಧಕ್ಕೆ ಬಾರದ ಹಾಗೆ ಬೆಳೆಯುತ್ತಿದೆ ಹಾಗೂ ಕಲೆ ಕಲಾವಿದರನ್ನು ಬೆಳೆಸುತ್ತಿದೆ. ಇಂದಿನ ಯಾಂತ್ರಿಕ ಯುಗದಲ್ಲಿಯೂ ಅನೇಕ ಮಕ್ಕಳು ಮಹಿಳೆಯರು ಯಕ್ಷಗಾನವನ್ನು ಪ್ರೀತಿಸಿ ಗೌರವಿಸಿ ತಮ್ಮನ್ನು ಅದರಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಯಕ್ಷಗಾನದಲ್ಲಿ ನಾಟ್ಯ ಹಾಗೂ ಮಾತಿಗೆ ಸಮಪ್ರಮಾಣದ ಮೌಲ್ಯವನ್ನು ಕೊಟ್ಟು ವೇಷ ಮಾಡುವುದು ಸೂಕ್ತ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:
ಅನೇಕ ಪ್ರೌಢ ಪ್ರೇಕ್ಷಕರು ಸಮರ್ಥ ವಿಮರ್ಶಕರು ಯಕ್ಷಗಾನದ ಆಸ್ತಿ. ಕಲಾವಿದನಾದವನು ಬೆಳೆಯುವುದು, ತನ್ನ ಪಾತ್ರದ ಒಳಿತು ಕೆಡುಕುಗಳನ್ನು ತಿಳಿಸುವ ಪ್ರಜ್ಞಾವಂತ ಪ್ರೇಕ್ಷಕರಿಂದ.. ಅಂತಹ ಅನೇಕ ವಿಮರ್ಶಕರು, ಸ್ನೇಹಿತರು ನಮ್ಮ ನಡುವೆ ಇದ್ದಾರೆ. ಅವರೆಲ್ಲರೂ ಕಲಾವಿದರಿಗೆ ಸ್ಪೂರ್ತಿ. ಛಾಯಾಚಿತ್ರಗ್ರಾಹಕರು, ನಿಮ್ಮಂತಹ ಅನೇಕ ಬರಹಗಾರರು ತೆರೆಮರೆಯ ಕಲಾವಿದರ ಪರಿಚಯಕ್ಕೆ ಸಹಕಾರಿ.
ಯಕ್ಷಗಾನ ವಿಷಯದಲ್ಲಿ ಇನ್ನಷ್ಟು ಅಧ್ಯಯನ ಮಾಡಬೇಕು, ಕಲಿತ ವಿದ್ಯೆಯನ್ನು ಇತರರಿಗೆ ಕಲಿಸಬೇಕು ಅದರೊಂದಿಗೆ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬೇಕು ಎಂಬ ಯೋಜನೆ ಇದೆ.
ಸನ್ಮಾನ ಹಾಗೂ ಪ್ರಶಸ್ತಿ:
- ಹವ್ಯಕ ವಿದ್ಯಾರತ್ನ.
- ಯುವಸಾಧಕಿ.
- ಯಕ್ಷ ಯುವ ಪ್ರತಿಭೆ.
ಕೆಲವು ಸಂಘ ಸಂಸ್ಥೆಗಳಲ್ಲಿ ಕಳೆದ 15 ವರ್ಷಗಳಿಂದ ವೇಷ ಮಾಡ್ತಾ ಇದ್ದೇನೆ. ನಾನೂ ಇಂದು ಕಲಾವಿದೆಯಾಗಿ ಬೆಳೆಯಲು ನಾನು ಕಲಿತ, ಕಲಿಯುತ್ತ ಇರುವ ಸಂಸ್ಥೆ ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕ.
ಯಕ್ಷಗಾನ ವೀಕ್ಷಣೆ, ಪುಸ್ತಕಗಳನ್ನು ಓದುವುದು, ಹಾಡು ಕೇಳುವುದು ಇವರ ಹವ್ಯಾಸಗಳು.
ಆನಂದ ಭಟ್ ಕೆಕ್ಕಾರು ಹಾಗೂ ವಿದ್ಯಾ ಕುಂಟಿಕಾನ ಅವರು 17.02.2021ರಂದು ಮದುವೆಯಾಗಿ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ಇಂತಹ ಅಪರೂಪದ ಯಕ್ಷ ದಂಪತಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
ದಕ್ಷಿಣ ಕನ್ನಡ ಜಿಲ್ಲಾ ಗಮಕ ಸಮ್ಮೇಳನದ ಸಮಾರೋಪ ಸಮಾರಂಭ – Roovari
ಜನಮನ ರಂಜಿಸಿದ ‘ಯವಕ್ರೀತೋಪಾಖ್ಯಾನ’ ಯಕ್ಷಗಾನ – Roovari
ಬದಿಯಡ್ಕದ ಇಕ್ಕೇರಿ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಯಕ್ಷಗಾನ ಪ್ರದರ್ಶನ – Roovari
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.