ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಗುರಿಕ್ಕಾನದ ಸುಂದರ ರೈ ಹಾಗೂ ಗುಲಾಬಿ ರೈ ಇವರ ಮಗನಾಗಿ 1.06.1984ರಂದು ಮನೋಹರ್ ರೈ ಬೆಳ್ಳಾರೆ ಅವರ ಜನನ. ಪದ್ಮನಾಭ ಪೂಜಾರಿ ಇವರ ನಾಟ್ಯ ಗುರುಗಳು, ಸುಣ್ಣoಬಳ ವಿಶ್ವೇಶ್ವರ ಭಟ್ ಹಾಗೂ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಇವರ ಅರ್ಥಗಾರಿಕೆ ಗುರುಗಳು. ತಂದೆ ಹಾಗೂ ತಾಯಿ ಬೆಳ್ಳಾರೆಯವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ.
ಕಥೆಯ ಸಾರಾಂಶ ಕೇಳಿಕೊಂಡು ಪದ್ಯ ನೋಡಿಕೊಂಡು ಅರ್ಥಗಾರಿಕೆ ತಿಳಿದುಕೊಂಡು ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಬೆಳ್ಳಾರೆ.
ನಳ ದಮಯಂತಿ, ಸತ್ಯ ಹರಿಶ್ಚಂದ್ರ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.
ದಮಯಂತಿ, ಮಾನಿಷಾದದ ಸೀತೆ, ಅಂಬೆ, ಯಶೋಮತಿ, ವಸ್ತ್ರಾಪಹಾರ ದ್ರೌಪದಿ, ದೇವಿ ಇತ್ಯಾದಿ ಇವರ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನದ ಇಂದಿನ ಸ್ಥಿತಿ ಒಳ್ಳೆಯ ರೀತಿಯಲ್ಲಿ ಇದೆ. ಕಾಲಮಿತಿ ಆದ ಕಾರಣ ಕಲಾವಿದರು ಸಿಗುತ್ತಾರೆ. ಯಾಕಂದ್ರೆ ತಂದೆ ತಾಯಂದಿರು ಮಕ್ಕಳಿಗೆ ಒಳ್ಳೆ ವಿದ್ಯೆ ನೀಡಿ ಒಳ್ಳೆ ಕೆಲಸಕ್ಕೆ ಹೋಗಬೇಕು ತನ್ನ ಮಕ್ಕಳು ಎಂದು ಬಯಸುತ್ತಾರೆ. ಅಂತಹ ಮಕ್ಕಳು ಕಲೆಯ ಮೇಲೆ ಅಭಿಮಾನದಿಂದ ಅತ್ತ ಉದ್ಯೋಗನೂ ಮಾಡುತ್ತಾರೆ ಇತ್ತ ವೇಷನೂ ಮಾಡುತ್ತಾರೆ. ನಿದ್ದೆಗೂ ಸಮಸ್ಯೆ ಆಗುವುದಿಲ್ಲ. ಆದ್ದರಿಂದ ಈಗಿನ ಕಾಲಘಟ್ಟದಲ್ಲಿ ಯಕ್ಷಗಾನ ಸ್ಥಿತಿ ಒಳ್ಳೆಯದು ಎಂದು ಕಾಣುತ್ತಿದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಕಾಲಮಿತಿ ಯಕ್ಷಗಾನ ಆದ್ದರಿಂದ ಪ್ರೇಕ್ಷಕರು ಬಹುತೇಕ ಮಂದಿ ಸೇರುತ್ತಾರೆ. ಬೆಳಗ್ಗಿನ ಜಾವದ ತನಕ ಆಟ ನೋಡುವ ತಾಳ್ಮೆ ಯಾರಿಗೂ ಇಲ್ಲ. ಈಗ ಅರ್ಧ ರಾತ್ರೀಯಲ್ಲೇ ಸಭೆ ಖಾಲಿ ಆಗುತ್ತದೆ. ಯಾಕಂದ್ರೆ ಮರುದಿನ ಅವರ ಉದ್ಯೋಗಕ್ಕೆ ಕೊರತೆ ಆಗಬಾರದಲ್ಲ. ಒಂದು ಲೆಕ್ಕದಲ್ಲಿ ಪ್ರೇಕ್ಷಕರಿಗೂ ಕಲಾವಿದರಿಗೂ ಈ ಕಾಲ ಘಟ್ಟದ ಕಾಲಮಿತಿ ಯಕ್ಷಗಾನವೇ ಸರಿ.
ಕಲಾಭಿಮಾನಿಗಳು “ಮನೋಹರ ಯಕ್ಷ ಚಿರ ಕನ್ನಿಕೆ” ಎಂಬ ಬಿರುದು ಕೊಟ್ಟಿರುತ್ತಾರೆ.
17 ವರ್ಷ ಕಟೀಲು ಮೇಳ, 2 ವರ್ಷ ಕುಂಟಾರು ಮೇಳ, 2 ವರ್ಷ ಮಂಗಳಾದೇವಿ ಮೇಳ, 2 ವರ್ಷ ಬೆಂಕಿನಾಥೇಶ್ವರ ಮೇಳದಲ್ಲಿ ತಿರುಗಾಟ ನಡೆಸಿ, ಪ್ರಸ್ತುತ 2 ವರ್ಷದಿಂದ ಹಿರಿಯಡ್ಕ ಮೇಳದಲ್ಲಿ ತಿರುಗಾಟವನ್ನು ಮಾಡುತ್ತಿದ್ದಾರೆ ಮನೋಹರ್ ರೈ ಬೆಳ್ಳಾರೆ.
ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಮನೋಹರ್ ರೈ ಬೆಳ್ಳಾರೆ.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.