ಯಕ್ಷಗಾನ ಕರ್ನಾಟಕದ ಕರಾವಳಿ ತೀರದ ವಿಶಿಷ್ಟ ಶಾಸ್ತ್ರೀಯ ಸಾಂಪ್ರದಾಯಿಕ ಕಲೆ. ಇಂದಿನ ಡಿಜಿಟಲ್ ಯುಗದಲ್ಲೂ ಈ ಗಂಡುಕಲೆ ಯಕ್ಷಗಾನ ಮನೆ ಮನಗಳಲ್ಲಿ ಗಟ್ಟಿಯಾಗಿ ಬೇರೂರಿದೆ. ಇಂತಹ ಶಾಸ್ತ್ರೀಯ ಹಾಗೂ ಶ್ರೀಮಂತ ಕಲೆಯಲ್ಲಿ ಯಶಸ್ಸಿನ ಮೆಟ್ಟಿಲು ಏರುತ್ತಿರುವ ಯುವ ಕಲಾವಿದ ಮುಖೇಶ್ ದೇವಧರ್ ನಿಡ್ಲೆ.
20.02.2000 ರಂದು ಮುಕುಂದ ದೇವಧರ್ ಹಾಗೂ ಶುಭಾ ದೇವಧರ್ ಇವರ ಮಗನಾಗಿ ಮುಖೇಶ್ ಅವರ ಜನನ. ಎಂ.ಎ (ಕನ್ನಡ) ಇವರ ವಿದ್ಯಾಭ್ಯಾಸ. ಅಜ್ಜ ಗಣಪತಿ ದೇವಧರ್ ಹವ್ಯಾಸಿ ತಾಳಮದ್ದಳೆ ಅರ್ಥಧಾರಿಗಳಾಗಿದ್ದರು ಹಾಗೂ ಊರಿನ ಯಕ್ಷಗಾನೀಯ ಪರಿಸರ ಯಕ್ಷಗಾನವನ್ನು ಕಲಿಯಲು ಪ್ರೇರಣೆಯಾಯಿತು ಎಂದು ಹೇಳುತ್ತಾರೆ ಮುಖೇಶ್.
ಯಕ್ಷಗಾನ ಗುರುಗಳು:
ಡಾ.ಕೋಳ್ಯೂರು ರಾಮಚಂದ್ರ ರಾವ್.
ಶ್ರೀ ಉಮೇಶ್ ಹೆಬ್ಬಾರ್.
ಶ್ರೀ ವಿಠ್ಠಲ ಹೆಬ್ಬಾರ್.
ಶ್ರೀ ಅರುಣ್ ಕುಮಾರ್ ಧರ್ಮಸ್ಥಳ.
ನೆಚ್ಚಿನ ಪ್ರಸಂಗಗಳು:
ಎಲ್ಲಾ ಪೌರಾಣಿಕ ಪ್ರಸಂಗಗಳು ಅಚ್ಚುಮೆಚ್ಚಿನ ಪ್ರಸಂಗಗಳಾಗಿದ್ದು, ಪ್ರಮುಖವಾಗಿ ಮಹಿರಾವಣ ಕಾಳಗ, ರಾವಣ ವಧೆ, ಕುರುಕ್ಷೇತ್ರ, ಕನ್ಯಾಂತರಂಗ, ಚೂಡಾಮಣಿ, ಕುಮಾರವಿಜಯ, ಅತಿಕಾಯ ಮೋಕ್ಷ ನೆಚ್ಚಿನವು.
ನೆಚ್ಚಿನ ವೇಷಗಳು:
ರಾವಣ, ಅಜಮುಖಿ, ಯಮ ಮುಂತಾದವು ನೆಚ್ಚಿನ ವೇಷಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:
ಪ್ರಸಂಗದಲ್ಲಿ ಬರುವ ಪಾತ್ರಗಳು ಹಾಗೂ ಪ್ರಸಂಗದ ದೃಶ್ಯಗಳನ್ನು ನೋಡಿಕೊಂಡು ಬಳಿಕ ಮಾಡುವ ಪಾತ್ರಗಳು ಹಾಗೂ ಜೊತೆ ಅಥವಾ ಎದುರು ಪಾತ್ರಗಳ ಬಗ್ಗೆ ತಿಳಿದುಕೊಳ್ಳುವುದು. ಭಾಗವತರಲ್ಲಿ ಹಾಗೂ ಹಿರಿಯ ಕಲಾವಿದರಲ್ಲಿ ಪಾತ್ರ ಚಿತ್ರಣವನ್ನು ಕೇಳಿ ತಿಳಿದುಕೊಳ್ಳುವುದು ಹಾಗೂ ಪಾತ್ರಕ್ಕೆ ಬೇಕಾದ ಅರ್ಥಗಾರಿಕೆಯ ತಯಾರಿಯನ್ನು ಮಾಡಿಕೊಳ್ಳುವುದು.
ನೀವು ತಿರುಗಾಟ ಮಾಡುವ ಹನುಮಗಿರಿ ಮೇಳದಲ್ಲಿ ಅನೇಕ ಹಿರಿಯ ಹಾಗೂ ಅನುಭವಿ ಕಲಾವಿದರು ಇದ್ದಾರೆ. ಅವರ ಜೊತೆಗಿನ ನಿಮ್ಮ ತಿರುಗಾಟದ ಅನುಭವ:
ನಾನು ಹನುಮಗಿರಿ ಮೇಳಕ್ಕೆ ಬರುವ ಮೊದಲು ಕಟೀಲು ಮೇಳದಲ್ಲಿದ್ದಾಗ ಅಂಡಾಲ ಭಾಗವತರು ಹಲವಾರು ಅವಕಾಶಗಳನ್ನು ನೀಡಿ ವೇಷಗಳನ್ನು ಮಾಡಿಸಿದ್ದಾರೆ. ಹಾಗೆಯೇ ಹಿರಿಯ ಕಲಾವಿದರಾದ ವಿಷ್ಣು ಶರ್ಮರು , ದಿನಕರ ಗೋಖಲೆಯವರು, ಮೋಹನ ಬಾಯಾರು ಅವರು ಹಾಗೂ ಸರ್ವ ಕಲಾವಿದರು ಮಾರ್ಗದರ್ಶನವನ್ನು ನೀಡಿದ್ದಾರೆ.
ಹಾಗೆಯೇ ಪ್ರಸ್ತುತ ತಿರುಗಾಟವನ್ನು ನಡೆಸುತ್ತಿರುವ ಹನುಮಗಿರಿ ಮೇಳದಲ್ಲಿ ಇರುವ ಎಲ್ಲಾ ಕಲಾವಿದರೂ ಅನುಭವಿಗಳೇ ಆಗಿರುತ್ತಾರೆ. ಮುಖ್ಯವಾಗಿ ಪೂಜ್ಯ ಧಣಿಗಳವರು ಪ್ರಸಂಗಗಳ ಅಪಾರ ಜ್ಞಾನವುಳ್ಳವರಾಗಿದ್ದು ಆಶೀರ್ವದಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಕಲಾವಿದರುಗಳಾದ ಶ್ರೀ ವಾಸುದೇವ ರಂಗಾ ಭಟ್ಟರು, ಪೆರ್ಮುದೆ ಜಯಪ್ರಕಾಶ್ ಶೆಟ್ಟಿಯವರು, ಉಬರಡ್ಕ ಉಮೇಶ ಶೆಟ್ಟರು, ಸದಾಶಿವ ಶೆಟ್ಟಿಗಾರರು, ದಿವಾಕರ ರೈ ಸಂಪಾಜೆಯವರು, ಪೆರ್ಲ ಜಗನ್ನಾಥ ಶೆಟ್ಟರು, ಜಗದಾಭಿರಾಮ ಪಡುಬಿದ್ರೆಯವರು, ಸದಾಶಿವ ಕುಲಾಲರು, ಪ್ರಜ್ವಲ್ ಗುರುವಾಯನಕೆರೆಯವರು, ಸವಣೂರರು, ಹಿಲಿಯಾಣರು, ಪಡ್ರೆಯವರು ಹಾಗೆಯೇ ಎಲ್ಲಾ ಹಿರಿ ಕಿರಿಯ ಕಲಾವಿದರು ಮಾರ್ಗದರ್ಶನ ಸಲಹೆಗಳನ್ನಿತ್ತು ಪ್ರೋತ್ಸಾಹಿಸುತ್ತಿದ್ದಾರೆ. ಅಂತೆಯೇ ಭಾಗವತರು ಹಿಮ್ಮೇಳ ಕಲಾವಿದರೆಲ್ಲರೂ ಮಾರ್ಗದರ್ಶಕರಾಗಿದ್ದಾರೆ.
ಬಣ್ಣದ ವೇಷ ಮಾಡುವಾಗ ಮೇಳದಲ್ಲಿ ಇರುವ ಹಿರಿಯ ಕಲಾವಿದರಾದ ಸದಾಶಿವ ಶೆಟ್ಟಿಗಾರ್ ಸಿದ್ಧಕಟ್ಟೆ ಅವರು ಯಾವ ರೀತಿಯಲ್ಲಿ ನಿಮಗೆ ಮಾರ್ಗದರ್ಶನ ಮಾಡುತ್ತಾರೆ:
ವೇಷಗಳನ್ನು ಮಾಡುವ ಮೊದಲು ಪಾತ್ರದ ಬಗೆಗಾಗಲಿ, ರಂಗನಡೆಗಳಲ್ಲಾಗಲಿ, ಬಣ್ಣಗಾರಿಕೆಯಲ್ಲಾಗಲಿ ತಪ್ಪಿದಲ್ಲಿ ತಿದ್ದಿ ಪಾತ್ರವನ್ನು ಚಂದಗಾಣಿಸಿಕೊಡುವಲ್ಲಿ ಗುರುಸ್ಥಾನದಲ್ಲಿದ್ದು ಉತ್ತೇಜಿಸುತ್ತಾರೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:
ಮೊದಲಿನ ಕಾಲಕ್ಕೆ ಹೋಲಿಸಿದರೆ ಇಂದು ಯಕ್ಷಗಾನ ಬಹಳಷ್ಟು ವಿಸ್ತಾರವಾದ ವ್ಯಾಪ್ತಿಯನ್ನು ಹೊಂದಿದೆ. ಹಿಂದಿನ ಕಲಾವಿದರ ಕಷ್ಟಗಳು ಈಗ ಇಲ್ಲ, ಕಾರಣ ಹಲವಾರಿವೆ. ಸಾರಿಗೆ ವ್ಯವಸ್ಥೆಯಲ್ಲಿ, ಸಂಭಾವನೆಯಲ್ಲಿ, ಸೌಲಭ್ಯಗಳಲ್ಲಿ ಬಹಳಷ್ಟು ಸುಧಾರಣೆಗಳಾಗಿವೆ. ಪ್ರಸಂಗ ಮಾಹಿತಿ ಇದ್ದು, ಯಕ್ಷಗಾನವನ್ನು ಆಸ್ವಾದಿಸುವ ಉತ್ತಮ ಪ್ರೇಕ್ಷಕರು ಈಗಲೂ ಇದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಪ್ರದರ್ಶನಗಳನ್ನು ದೇಶ ವಿದೇಶಗಳಲ್ಲಿನ ಕಲಾಭಿಮಾನಿಗಳು ವೀಕ್ಷಿಸುತ್ತಾರೆ ಹಾಗೂ ಅಲ್ಲಿಯೂ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದಾರೆ. ನನ್ನಂತೆ ಅನೇಕ ಯುವ ಕಲಾವಿದರೂ ಯಕ್ಷಗಾನದತ್ತ ಒಲವನ್ನು ಹರಿಸುತ್ತಿದ್ದಾರೆ. ಬಹಳ ಸಂತೋಷವಾಗುತ್ತದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:
ಹಿಂದಿನಂತೆಯೇ ಈಗಲೂ ಪ್ರೇಕ್ಷಕರು ಆಸಕ್ತಿಯಿಂದ ಆಟಗಳನ್ನು ವೀಕ್ಷಿಸುತ್ತಾರೆ. ಕೆಲಸದ ಒತ್ತಡಗಳಿದ್ದರೂ ಕಾಲಮಿತಿ ಪ್ರದರ್ಶನಗಳೇ ಹೆಚ್ಚಾಗಿ ಆಗುವ ಕಾರಣ ಪ್ರೇಕ್ಷಕರು ಬಂದು ವೀಕ್ಷಿಸಲು ಸಹಾಯಕವಾಗಿದೆ. ಕಲಾವಿದರಲ್ಲಿ ಬಂದು ಮಾತನಾಡಿ ಪ್ರದರ್ಶನಗಳ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅನೇಕ ಕಲಾಭಿಮಾನಿಗಳಿದ್ದಾರೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:
ಹಿರಿಯರು ಹಾಕಿಕೊಟ್ಟ ಚೌಕಟ್ಟಿಗೆ ಚ್ಯುತಿ ಬಾರದಂತೆ ನಡೆದುಕೊಂಡು ಒಬ್ಬ ಉತ್ತಮ ಕಲಾವಿದ ಎನ್ನಿಸಿಕೊಳ್ಳಬೇಕು ಎಂಬ ಆಸೆ ಇದೆ. ಅದರ ಜೊತೆಯಲ್ಲಿ ಸ್ವಂತಿಕೆಯನ್ನು ಅಳವಡಿಸಿಕೊಂಡು ಪಾತ್ರ ನಿರ್ವಹಿಸುವೆ.
ಸನ್ಮಾನ ಹಾಗೂ ಪ್ರಶಸ್ತಿ:
ಕಾಲೇಜು ದಿನಗಳಲ್ಲಿ ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ತಂಡ ಹಾಗೂ ವೈಯಕ್ತಿಕ ಪ್ರಶಸ್ತಿಗಳು.
2025ರ ಪಟ್ಲ ಸಂಭ್ರಮದಲ್ಲಿ ಯುವ ಯಕ್ಷ ಕಲಾವಿದರ ಯಕ್ಷಗಾನ ಸ್ಪರ್ಧೆಯಲ್ಲಿ ತಂಡ ಹಾಗೂ ವೈಯಕ್ತಿಕ ಪ್ರಶಸ್ತಿಗಳು.
ಕಟೀಲು ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಹನುಮಗಿರಿ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.
ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವುದು .
ಯಕ್ಷಗಾನ ಹಾಗೂ ತಾಳಮದ್ದಳೆಗಳನ್ನು ವೀಕ್ಷಿಸುವುದು, ಟ್ರಾವೆಲ್ಲಿಂಗ್ ಇವರ ಹವ್ಯಾಸಗಳು.
ತಂದೆ, ತಾಯಿ, ಮನೆಯವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಹನುಮಗಿರಿ ಮೇಳದ ಯಜಮಾನರಾದ ಟಿ. ಶ್ಯಾಮ್ ಭಟ್, ಮೇಳದ ಪ್ರಬಂಧಕರಾದ ಹರೀಶ್ ಬಳಂತಿಮೊಗರು, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಮುಖೇಶ್ ದೇವಧರ್ ನಿಡ್ಲೆ.
ಶ್ರವಣ್ ಕಾರಂತ್ ಕೆ.
ಶಕ್ತಿನಗರ, ಮಂಗಳೂರು