ಯಕ್ಷಗಾನವು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ರತ್ನವಾಗಿ ಉಳಿದಿದೆ, ಸಾಂಪ್ರದಾಯಿಕವಾಗಿ ಈ ಪ್ರದರ್ಶನ ಕಲಾ ಪ್ರಕಾರವನ್ನು ಪುರುಷ ಕಲಾವಿದರು ಜೊತೆಗೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಅಭ್ಯಾಸ ಮಾಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಮಹಿಳಾ ಕಲಾವಿದರು ಅದರಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸುತ್ತಿದ್ದಾರೆ ಮತ್ತು ಅವರು ಪ್ರಾಮುಖ್ಯತೆಯನ್ನು ಕಂಡುಕೊಳ್ಳುತ್ತಿದ್ದಾರೆ. ಈಗ ಅನೇಕ ಮಹಿಳಾ ಕಲಾವಿದರು ಈ ಕಲಾ ಪ್ರಕಾರವನ್ನು ಉತ್ಸಾಹದಿಂದ, ವಿಶೇಷವಾಗಿ ಮಂಗಳೂರು, ಉಡುಪಿ ಮತ್ತು ಕುಂದಾಪುರದಲ್ಲಿ ಹೇಗೆ ಅನುಸರಿಸುತ್ತಿದ್ದಾರೆ ಎಂಬುದನ್ನು ನೋಡುವುದು ಸಾಕಷ್ಟು ಉತ್ತೇಜನಕಾರಿಯಾಗಿದೆ. ಹೀಗೆ ಯಕ್ಷಗಾನ ರಂಗದಲ್ಲಿ ಧೀಶಕ್ತಿ ಮಹಿಳಾ ಯಕ್ಷಗಾನ ತಂಡವನ್ನು ಪುತ್ತೂರಿನಲ್ಲಿ ಕಟ್ಟಿ ಯಕ್ಷಗಾನದ ಕಂಪನ್ನು ಪಸರಿಸುತ್ತಿರುವ ಕಲಾವಿದೆ ಪದ್ಮಾ ಕೆ ಆರ್ ಆಚಾರ್ಯ.
ಗಡಿನಾಡ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಎಡನೀರು ಇವರ ಹುಟ್ಟೂರು. ಅಲ್ಲಿರುವ ಶ್ರೀ ಎಡನೀರು ಮಠವು, ಪ್ರಸಿದ್ಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿದೆ. ಯಕ್ಷಗಾನ, ಕಲೆ, ಸಾಹಿತ್ಯ ಚಟುವಟಿಕೆಗಳ ಆಶ್ರಯ ತಾಣ. ಶ್ರೀ ಮಠದ ಮ್ಯಾನೇಜರ್ ಹುದ್ದೆಯನ್ನು ಬಹು ದೀರ್ಘ ಕಾಲ ನಿರ್ವಹಿಸಿದ ಶ್ರೀ ರಾಮಕೃಷ್ಣರಾವ್, ಎಡನೀರು ಮತ್ತು ಶ್ರೀಮತಿ ಸತ್ಯವತಿ ರಾವ್ ದಂಪತಿಗಳ ದ್ವಿತೀಯ ಪುತ್ರಿಯಾಗಿ ಡಿಸೆಂಬರ್ 19 ರಂದು ಪದ್ಮಾರವರ ಜನನ. ಬಿ.ಎ, ಎಲ್.ಎಲ್.ಬಿ ಇವರ ವಿದ್ಯಾಭ್ಯಾಸ.
ಶಾಲಾ ದಿನಗಳಿಂದಲೇ ನೃತ್ಯ, ನಾಟಕ, ಸಂಗೀತ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಪದ್ಮಾರವರು ಮುಂದೆ ಕನ್ನಡ ಸಾಹಿತ್ಯ ಕ್ಷೇತ್ರದತ್ತ ತನ್ನ ಗಮನ ಹರಿಸಿ ಕವನ, ಲೇಖನ ಬರೆಯಲಾರಂಭಿಸಿದರು. ಭಾಷಣ ಮತ್ತು ಧಾರ್ಮಿಕ ಪ್ರವಚನಗಳಲ್ಲಿ ಕೂಡಾ ತನ್ನನ್ನು ತೊಡಗಿಸಿಕೊಂಡ ಇವರು, ಕಾನೂನು ಪದವೀಧರೆಯಾಗಿದ್ದು, ಒಂದು ವರ್ಷ ಕಾಸರಗೋಡಿನ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ಸೇವೆಯನ್ನು ಸಲ್ಲಿಸಿ, 05.05.1991ರಲ್ಲಿ ಪುತ್ತೂರಿನ ಖ್ಯಾತ ನ್ಯಾಯವಾದಿಗಳಾದ ಶ್ರೀಯುತ ಕೆ.ಆರ್.ಆಚಾರ್ಯ ಅವರನ್ನು ವರಿಸಿ ಇಬ್ಬರು ಗಂಡು ಮಕ್ಕಳ ಜೊತೆಗೆ ಸುಖಿ ಸಂಸಾರ ನಡೆಸುತ್ತಿದ್ದಾರೆ. ಮೊದಲ ಮಗ ಆಕಾಶ್ ಆಚಾರ್ಯ ಬೆಂಗಳೂರಲ್ಲಿ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಎರಡನೇ ಮಗ ಡಾ.ಆಶಿಶ್ ಆಚಾರ್ಯ ಅಪೋಲೋ ಆಸ್ಪತ್ರೆ – ಚೆನ್ನೈಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಲ್ಲಿ, ಯಕ್ಷಗಾನದ ಆಡಂಬೋಲವಾದ ಶ್ರೀಮಠದಲ್ಲಿ ಆಗುತ್ತಿದ್ದ ಯಕ್ಷಗಾನ ತಾಳಮದ್ದಲೆಗಳಲ್ಲಿ ಯಕ್ಷದಿಗ್ಗಜರಾದ ಶೇಣಿ ಗೋಪಾಲಕೃಷ್ಣ ಭಟ್, ರಾಮದಾಸ ಸಾಮಗ, ಪೆರ್ಲ ಕೃಷ್ಣ ಭಟ್, ದೇರಾಜೆ ಸೀತಾರಾಮಯ್ಯ ಮೊದಲಾದವರ ಅರ್ಥವನ್ನು ಆಲಿಸುತ್ತಾ ಇದ್ದುದು ಯಕ್ಷಗಾನ ಕ್ಷೇತ್ರದಲ್ಲಿ ಆಸಕ್ತಿ ಮೂಡಲು ಕಾರಣವಾಯಿತು.
ಪುತ್ತೂರಿನಲ್ಲಿ 2005ರಲ್ಲಿ ಆಂಜನೇಯ ಯಕ್ಷಗಾನ ಸಂಘದ ವತಿಯಿಂದ ಮಹಿಳಾ ತಾಳಮದ್ದಲೆ ಸಂಘವನ್ನು ಸ್ಥಾಪಿಸಿ, ಅದರ ಉದ್ಘಾಟನೆಯ ಸಂದರ್ಭದಲ್ಲಿ, ದಿ|ಅನಂತ ಕೃಷ್ಣ ಬರೆಪ್ಪಾಡಿಯವರ ಮಾರ್ಗದರ್ಶನದಲ್ಲಿ ಖರಾಸುರ ವಧೆಯ ಶ್ರೀರಾಮನ ಅರ್ಥ ಹೇಳುವ ಮೂಲಕ ಯಕ್ಷಗಾನ ಕ್ಷೇತ್ರಕ್ಕೆ ಪಾದಾರ್ಪಣೆ. ಮುಂದಿನ ದಿನಗಳಲ್ಲಿ ಆಂಜನೇಯ ಯಕ್ಷಗಾನ ಸಂಘದ ಅಧ್ಯಕ್ಷರಾದ ಶ್ರೀ ಭಾಸ್ಕರ್ ಬಾರ್ಯರ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸಿದ ಅನುಭವ.
ಶ್ರೀ ಕೃಷ್ಣ ರಾಯಭಾರ, ಸುಧನ್ವ ಮೋಕ್ಷ, ಸುದರ್ಶನ ವಿಜಯ, ಜಾಂಬವತಿ ಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕ, ಕರ್ಣಾವಸಾನ, ಶ್ರೀರಾಮ ನಿರ್ಯಾಣ, ಉತ್ತರನ ಪೌರುಷ, ಶ್ರೀರಂಗ ತುಲಾಭಾರ, ವೀರಮಣಿ ಕಾಳಗ, ಸಮರ ಸೌಗಂಧಿಕಾ ಮೊದಲಾದುವು ನೆಚ್ಚಿನ ಪ್ರಸಂಗಗಳು.
ಶ್ರೀಕೃಷ್ಣ, ಸುಧನ್ವ, ಕರ್ಣ, ರುಕ್ಮಾಂಗದ, ಉತ್ತರ, ಹನುಮಂತ, ಶ್ರೀರಾಮ ಇತ್ಯಾದಿ ನೆಚ್ಚಿನ ಪಾತ್ರಗಳು.
ಪುತ್ತೂರಿನ ಶಶಾಂಕ್ ನೆಲ್ಲಿತ್ತಾಯ ಅವರಲ್ಲಿ ಯಕ್ಷಗಾನ ನೃತ್ಯವನ್ನು ಕಲಿತಿದ್ದು ಯಕ್ಷಗಾನ ವೇಷದಲ್ಲಿ ಕೂಡ ಮಿಂಚಿದ್ದಾರೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಮಹಿಳಾ ಯಕ್ಷಗಾನ ತಂಡದ ಸದಸ್ಯೆಯಾಗಿದ್ದರು. ನರಕಾಸುರ ವಧೆಯ ಶ್ರೀ ಕೃಷ್ಣನ ಪಾತ್ರ ಅತ್ಯಂತ ಪ್ರಿಯವಾದದ್ದು. ತಾಳಮದ್ದಲೆ ಕ್ಷೇತ್ರದಲ್ಲಿ ತನ್ನನ್ನು ಬಲು ಆಸಕ್ತಿಯಿಂದ ತೊಡಗಿಸಿಕೊಂಡುದರಿಂದ ಯಕ್ಷಗಾನ ವೇಷಧಾರಣೆಯನ್ನು ಮುಂದುವರಿಸಲು ಸಮಯದ ಅಭಾವದಿಂದ ಸಾಧ್ಯವಾಗಲಿಲ್ಲ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ಪ್ರಸಂಗದ ಪದ್ಯಗಳನ್ನೆಲ್ಲ ಸರಿಯಾಗಿ ನೋಡಿ, ಕಾಲಮಿತಿಗೆ ಅನುಗುಣವಾಗಿ ಪದ್ಯಗಳನ್ನು ಆಯ್ದುಕೊಂಡು, ಅದಕ್ಕೆ ಬೇಕಾದಂಥಹ ಅರ್ಥಗಳನ್ನು ಸಿದ್ಧಪಡಿಸಿಕೊಳ್ಳುವುದು. ಅನುಭವಿ ಕಲಾವಿದರ ಅರ್ಥಗಳನ್ನು ಆಲಿಸುವುದು. ರಾಮಾಯಣ, ಮಹಾಭಾರತ ಮೊದಲಾದ ಪುರಾಣ ಪುಸ್ತಕಗಳನ್ನು ಓದುವುದು. ಪ್ರಸಂಗ ಪದ್ಯದ ಚೌಕಟ್ಟಿನ ಒಳಗೆ ಅರ್ಥವಿವರಣೆ ಹಾಗೂ ಅದಕ್ಕೆ ಪೂರಕವಾದಂತಹ ವಿಷಯಗಳನ್ನು ತುಂಬಿಸುವುದು.
ಧೀಶಕ್ತಿ ಮಹಿಳಾ ಯಕ್ಷ ಬಳಗದ ಸ್ಥಾಪನೆ ಹಾಗೂ ಬಳಗದ ಯೋಜನೆಗಳು:-
2013ರಲ್ಲಿ ಮಹಿಳಾ ಯಕ್ಷಗಾನ ತಾಳಮದ್ದಳೆ ಸ್ಪರ್ಧೆಯ ಬಗ್ಗೆ ಪತ್ರಿಕೆಯಲ್ಲಿ ನೋಡಿ ಭಾಗವಹಿಸುವುದೆಂದು ನಿರ್ಧರಿಸಿ, ಆಯೋಜಕರನ್ನು ಸಂಪರ್ಕಿಸಿದಾಗ, ತಂಡ ಒಂದು ಹೆಸರಿನ ಮೂಲಕ ಭಾಗವಹಿಸಬೇಕೆಂದು ಹೇಳಿದಕ್ಕಾಗಿ ‘ಧೀಶಕ್ತಿ ಮಹಿಳಾ ಯಕ್ಷ ಬಳಗ’ ಎನ್ನುವ ಹೆಸರಿನ ಮೂಲಕ ತಂಡ ಅಸ್ತಿತ್ವಕ್ಕೆ ಬಂತು. ಕೇವಲ ಐದು ಮಂದಿ ಸದಸ್ಯೆಯರಿಂದ ಪ್ರಾರಂಭಿಸಿದ ತಂಡದಲ್ಲಿ ಈಗ ಮೂವತ್ತಕ್ಕೂ ಹೆಚ್ಚು ಹಿರಿಯ, ಕಿರಿಯ ಸದಸ್ಯೆಯರು ಇದ್ದಾರೆ.
ತಾಳಮದ್ದಳೆ ಸಂಬಂಧಿತ ಯಕ್ಷಗಾನ ಸಂಘವನ್ನು ಸಮಾನ ಮನಸ್ಕರೊಂದಿಗೆ ಸೇರಿ 2013ರಲ್ಲಿ ಆರಂಭಿಸಿದ ಬಳಿಕ, ತಾಳಮದ್ದಳೆ ತಂಡದ ಮುಖ್ಯಸ್ಥರಾಗಿ ತಂಡದ ಜವಾಬ್ದಾರಿಯನ್ನು ಹೊತ್ತರು. ಧೀಶಕ್ತಿ ಬಳಗ ಸ್ಥಾಪನೆಯಾದ ಪ್ರಾರಂಭಿಕ ಹಂತದಲ್ಲಿ ಶ್ರೀ ಹರೀಶ್ ಬಳಂತಿಮೊಗರು ಅವರ ಮಾರ್ಗದರ್ಶನದಲ್ಲಿ ಪ್ರಸಂಗ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಕ್ರಮೇಣ ಪದ್ಮಾರವರು ತಾವೇ ಹಲವಾರು ಪ್ರಸಂಗಗಳನ್ನು ಆಯ್ದು – ನಿರ್ದೇಶನ ಮಾಡಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಮಾರ್ಗದರ್ಶನ ನೀಡುವ ಕಾಯಕದಲ್ಲಿ ತೊಡಗಿಸಿಕೊಂಡರು.
ಇದೀಗ ಹತ್ತು ವರ್ಷ ತುಂಬಿದ ಧೀಶಕ್ತಿ ಮಹಿಳಾ ಯಕ್ಷ ಬಳಗದ ಮೂಲಕ ಸುಮಾರು ಐನ್ನೂರಕ್ಕೂ ಅಧಿಕ ತಾಳಮದ್ದಳೆ ಕಾರ್ಯಕ್ರಮಗಳ ಪ್ರದರ್ಶನ ನೀಡಿರುವುದು ಮಾತ್ರವಲ್ಲ 2020ರಲ್ಲಿ, ಧೀಶಕ್ತಿ ಬಾಲಿಕಾ ಯಕ್ಷಬಳಗ ಎಂದು ಮಕ್ಕಳಿಗಾಗಿಯೂ ಹೊಸ ತಂಡವೊಂದನ್ನು ಕಟ್ಟಿದ್ದಾರೆ. ಬೆಂಗಳೂರು, ಮೈಸೂರು, ಕುಶಾಲನಗರ, ಮಡಿಕೇರಿ, ಕುಂದಾಪುರ, ಉಡುಪಿ, ಮಂಗಳೂರು, ಸುರತ್ಕಲ್, ಸುಬ್ರಹ್ಮಣ್ಯ, ಸುಳ್ಯ, ಮೂಡಬಿದಿರೆ, ಮೊದಲಾದ ಕಡೆಗಳಲ್ಲಿ; ಕೇರಳದ ಗಡಿ ಪ್ರದೇಶವಾದ ಪೆರ್ಲ, ಕಾಸರಗೋಡು, ಎಡನೀರು, ಮಧೂರು, ಕೂಡ್ಲು ಮೊದಲಾದೆಡೆ; ಮಾತ್ರವಲ್ಲದೆ ಮಹಾರಾಷ್ಟ್ರದ ಮುಂಬೈ ಮಹಾನಗರಿ ಮುಂತಾದ ಕಡೆಗಳಲ್ಲಿ 500ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ ಹೆಗ್ಗಳಿಕೆ ಧೀಶಕ್ತಿ ಮಹಿಳಾ ಯಕ್ಷಬಳಗದ್ದು.
(ಮುಂಬಯಿನ ಕಲಾಪ್ರಕಾಶ ಪ್ರತಿಷ್ಠಾನದವರು ಇವರ ತಂಡದವರನ್ನು ಕರೆಯಿಸಿ ತಾಳಮದ್ದಳೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ)
ಶ್ರೀ ಕೃಷ್ಣ ರಾಯಭಾರ, ಸುಧನ್ವ ಮೋಕ್ಷ, ಸಂಜಯ ರಾಯಭಾರ, ಸುದರ್ಶನ ವಿಜಯ, ಸುಭದ್ರಾ ಕಲ್ಯಾಣ, ಜಾಂಬವತಿ ಕಲ್ಯಾಣ, ಪಟ್ಟಾಭಿಷೇಕ, ಕರ್ಣಾವಸಾನ, ಶ್ರೀರಾಮ ನಿರ್ಯಾಣ, ದಕ್ಷ ಯಜ್ಞ, ವೀರಮಣಿ ಕಾಳಗ, ಇಂದ್ರಜಿತು ಕಾಳಗ, ಉತ್ತರನ ಪೌರುಷ, ಶ್ರೀರಂಗ ತುಲಾಭಾರ, ಭೀಷ್ಮ ಪರ್ವ, ಭೀಷ್ಮ ವಿಜಯ ಮೊದಲಾದ ಪ್ರಸಂಗಗಳನ್ನು ಆಯ್ದುಕೊಂಡು, ಪ್ರದರ್ಶನಗಳನ್ನು ನೀಡುತ್ತಿದ್ದಾರೆ ಧೀಶಕ್ತಿ ಮಹಿಳಾ ಯಕ್ಷಬಳಗದವರು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಉತ್ತಮವಾಗಿಯೇ ಇದೆ. ವಿದ್ಯಾವಂತರು ಈ ಕ್ಷೇತ್ರದತ್ತ ಆಕರ್ಷಿತರಾಗುತ್ತಿದ್ದಾರೆ. ಕಲಾವಿದರು ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸಬೇಕು. ಯಾವತ್ತೂ ಅಧ್ಯಯನಶೀಲರಾಗಿರಬೇಕು. ಪ್ರೇಕ್ಷಕರು ಉತ್ತಮ ಗುಣಮಟ್ಟದ ಕಾರ್ಯಕ್ರಮವನ್ನು ಬಯಸುತ್ತಾರೆ. ಆದರೆ ಇಂದು ಎಲ್ಲವೂ ಮಾಧ್ಯಮದ ಮೂಲಕ ವೀಕ್ಷಿಸಲು ಸಿಗುವ ಕಾರಣ ಎಲ್ಲಾ ಕಾರ್ಯಕ್ರಮಗಳಲ್ಲೂ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತದೆ. ಯಾವುದೇ ಕಲೆಯನ್ನು ನಮ್ಮ ಮನಸ್ಸಿನ ಸಂತೃಪ್ತಿಗಾಗಿ ನಾವು ಸ್ವೀಕರಿಸಬೇಕು. ನಾವು ಅದರಲ್ಲಿ ಪೂರ್ಣ ಮನಸ್ಸಿನಿಂದ ತೊಡಗಿಸಿಕೊಂಡರೆ ಮಾತ್ರ ನಾವು ಅದರಿಂದ ಸಂತೃಪ್ತರಾಗಲು ಸಾಧ್ಯ.
ಮಹಿಳಾ ಕಲಾವಿದೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ವೇದಿಕೆಯನ್ನು ಒದಗಿಸುವ ಮೂಲಕ ಅವರ ಹಿಂಜರಿಕೆಯನ್ನು ಹೋಗಲಾಡಿಸುವ ಮತ್ತು
ಯಕ್ಷಗಾನ ತಾಳಮದ್ದಳೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಮೂಲಕ ಈ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ.
ಇನ್ನಷ್ಟು ಹೊಸ ಚಿಂತನೆಗಳೊಂದಿಗೆ ತಂಡವನ್ನು ಸದಾ ಕ್ರಿಯಾಶೀಲವಾಗಿರುವಂತೆ ಇರಿಸಿಕೊಳ್ಳಲು ಬೇಕಾದ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.
ಸನ್ಮಾನ ಹಾಗೂ ಪ್ರಶಸ್ತಿಗಳು:-
ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲು ಇವರಿಂದ ಯಕ್ಷಗಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸನ್ಮಾನ.
ಯಕ್ಷಕಲಾ ಪುರಸ್ಕಾರ – ಯಕ್ಷ ಆರಾಧನಾ ಕಲಾಕೇಂದ್ರ ಉರ್ವ ಮಂಗಳೂರು ಇವರಿಂದ ತಾಳಮದ್ದಳೆ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ.
ಕಲಾಭಿವರ್ಧನ ಕರಾವಳಿ ಕಲಾನಿಕೇತನ ಮೈಸೂರು ಇವರಿಂದ ಧೀಶಕ್ತಿ ಮಹಿಳಾ ಯಕ್ಷ ಬಳಗ ಸಂಘಟನೆಗೆ – ಸನ್ಮಾನ
ಅಕ್ಷರೋತ್ಸವ ಪ್ರಶಸ್ತಿ- ಅಕ್ಷರದೀಪ ಸಾಹಿತ್ಯ ಬಳಗದವರಿಂದ – ಸಾಹಿತ್ಯ ಕಲಾ ಸೇವೆಗಾಗಿ.
ಹಾಗೂ ಕೆಲವು ಸಂಘ ಸಂಸ್ಥೆಗಳಿಂದ ಸನ್ಮಾನಗಳು ನಡೆದಿದೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ, ಭಕ್ತಿ ಗೀತೆ, ಭಾವಗೀತೆ, ಜಾನಪದ ಗೀತೆ, ರುಬಾಯಿ, ಗಝಲ್, ಚುಟುಕು ಛಂದೋಬದ್ಧ ಕಾವ್ಯಗಳನ್ನು ರಚಿಸಿದ್ದಾರೆ. ಎರಡು
ಯಕ್ಷಗಾನ ಪ್ರಸಂಗಗಳ ರಚನೆಯನ್ನು ಮಾಡಿದ್ದಾರೆ. “ಪದುಮನಾಭ ಪದಪಲ್ಲವ” ಎನ್ನುವ ಮುಕ್ತಕ ಸಂಕಲನ ಇತ್ತೀಚೆಗೆ ಪ್ರಕಟಗೊಂಡಿದೆ.
ಯಕ್ಷಗಾನ ಮಾತ್ರವಲ್ಲದೆ ಪುತ್ತೂರಿನಲ್ಲಿ ಇತರ ಸಂಘ ಸಂಸ್ಥೆಗಳಾದ ಇನ್ನರ್ ವೀಲ್, ಜೇಸಿರೆಟ್, ಕುಶಲ ಹಾಸ್ಯ ಸಂಘ ಮೊದಲಾದ ಸಂಘಟನೆಗಳಲ್ಲಿ ಪ್ರಮುಖ ಹುದ್ದೆಗಳ ನಿರ್ವಹಿಸಿದ್ದಾರೆ.
ಪ್ರಸ್ತುತ ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ರೇಡಿಯೋ ಪಾಂಚಜನ್ಯದ ಸಂಚಾಲಕರಾಗಿ, ಸಂಸ್ಕಾರ ಭಾರತಿ ಪುತ್ತೂರು ಇದರ, ವಿಧಾ ಪ್ರಮುಖರಾಗಿ, ಪುತ್ತೂರು ದಸರಾ ನಾಡಹಬ್ಬ ಸಮಿತಿಯ ಸಹ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.