ಉತ್ತರ ಕೇರಳದ ಕಾಸರಗೋಡು, ಉತ್ತರ ಕನ್ನಡದ ಗೋಕರ್ಣ, ಅತ್ತ ಕನ್ನಡದ ಮಲೆನಾಡಲ್ಲೂ ಪಸರಿಸಿರುವ ಸರ್ವಾಂಗ ಸುಂದರ ಕಲೆಯೇ “ಯಕ್ಷಗಾನ”. ಯಕ್ಷರಂಗದಲ್ಲಿ ತಮ್ಮದೇ ಆದ ಛಾಪನ್ನು ತೋರಿಸುತ್ತಾ ಮಿಂಚುತ್ತಿರುವ ಯುವ ಕಲಾವಿದರು ಪವನ್ ಆಚಾರ್ಯ ನೀರ್ಚಾಲು.
ಕೇರಳದ ಕಾಸರಗೋಡು ಜಿಲ್ಲೆಯ ನೀರ್ಚಾಲಿನ ಪುರೋಹಿತ ವಾಸುದೇವ ಆಚಾರ್ಯ ಹಾಗೂ ಪುಷ್ಪಲತಾ ಇವರ ಮಗನಾಗಿ 27.04.1999ರಂದು ಜನನ. MA in mass communication and journalism (MCJ) ಇವರ ವಿದ್ಯಾಭ್ಯಾಸ. ವಿಶ್ವ ವಾಣಿ ದಿನಪತ್ರಿಕೆಯಲ್ಲಿ ಉಪ ಸಂಪಾದಕನಾಗಿ ವೃತ್ತಿ ಜೀವನ ಆರಂಭ ಮಾಡಿ ಪ್ರಸ್ತುತ ಬೆಂಗಳೂರು ವಿಜಯವಾಣಿ ದಿನಪತ್ರಿಕೆಯ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಶ್ರೀಯುತ ದಯಾನಂದ ಪಿಳಿಕೂರು, ತಲಪಾಡಿ ಇವರ ಯಕ್ಷಗಾನ ಗುರುಗಳು.
ತಂದೆಗೆ ಯಕ್ಷಗಾನದಲ್ಲಿ ತುಂಬಾ ಆಸಕ್ತಿ ಇತ್ತು. ಆಟ ನೋಡಲು ಹೋಗುತ್ತಿದ್ದೆ. ಅದೊಂದು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾದರೆ, ಹತ್ತನೇ ತರಗತಿಯಲ್ಲಿ ಇರುವಾಗ ಮೊದಲು ಶ್ರೀ ಕಾಳಿಕಾಂಬ ಮಠ ಮಧೂರು ಅಲ್ಲಿ ಯಕ್ಷಗಾನ ತರಬೇತಿಯನ್ನು ನಾಟೇಕಲ್ಲಿನ ಹವ್ಯಾಸಿ ಕಲಾವಿದರಾದ ನವೀನ್ ಎಂಬವರು ಪ್ರಾರಂಭ ಮಾಡಿದ್ದರು, ಬಳಿಕ ಆ ತರಬೇತಿ ಮೂಲಕ ಅವರು ತುಂಬಾ ಪ್ರೇರಣೆ ನೀಡಿದ್ದಾರೆ. ಅಲ್ಲಿಂದ ಒಂದಷ್ಟು ವರ್ಷ ಹವ್ಯಾಸಿ ಕಲಾವಿದನಾಗಿ ವೇಷ ಮಾಡಿದೆ, ಆದ್ರೆ ವೃತ್ತಿಪರ ಕಲಾವಿದ ಆಗಲು ಪ್ರೇರಣೆ ನೀಡಿದ ಇಬ್ಬರನ್ನು ಯಾವತ್ತೂ ಮರೆಯುವಂತಿಲ್ಲ. ಒಂದು ದೇವಕಾನ ಕೃಷ್ಣ ಭಟ್, ಪ್ರೀತಿಯಿಂದ ಎಲ್ಲರೂ ಪುಟ್ಟಣ್ಣ ಅಂತ ಕರೀತಾರೆ, ಎಡನೀರು ಮೇಳ ತಿರುಗಾಟದ ಕೊನೆ ವರ್ಷದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟವರು. ಮತ್ತೊಬ್ಬರು ಕಟೀಲು ಅಮ್ಮನ ಸೇವೆ ಮಾಡಲು ಅವಕಾಶ ಕೊಟ್ಟ ಸವ್ಯಸಾಚಿ ಕಲಾವಿದ ಲಕ್ಷ್ಮಣ ಕುಮಾರ್ ಮರಕಡ, ಪ್ರೀತಿಯಿಂದ ಎಲ್ಲರೂ ಲಚ್ಚು ಅಣ್ಣ ಅಂತ ಕರೀತಾರೆ. ಈಗಲೂ ಉತ್ತಮ ಮಾರ್ಗದರ್ಶನ ನೀಡುತ್ತಾ ಪ್ರೇರಣೆ ನೀಡುತ್ತಿದ್ದಾರೆ.
ಮಾನಿಷಾದ, ಕೃಷ್ಣ ಲೀಲೆ, ದೇವಿ ಮಹಾತ್ಮೆ, ಉತ್ತರನ ಪೌರುಷ, ಅಭಿಮನ್ಯು ಕಾಳಗ, ಅಗ್ರಪೂಜೆ ಇತ್ಯಾದಿ ನೆಚ್ಚಿನ ಪ್ರಸಂಗಗಳು.
ಶ್ರೀಕೃಷ್ಣ, ಅಭಿಮನ್ಯು, ಚಂಡ ಮುಂಡ, ರಕ್ತಬೀಜ, ಮಹಿಷಾಸುರ ಇತ್ಯಾದಿ ನೆಚ್ಚಿನ ವೇಷಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಮೊದಲು ಪಾತ್ರಕ್ಕೆ ಇರುವ ಪದ್ಯಗಳನ್ನು ಚೆನ್ನಾಗಿ ಓದಿ ಅರ್ಥೈಸಿಕೊಳ್ಳುವೆ. ಮತ್ತೆ ಮುಖವರ್ಣಿಕೆ, ವೇಷ ಭೂಷಣದ ಕಡೆಗೂ ಹೆಚ್ಚು ಗಮನ. ಗೊತ್ತಿಲ್ಲದ ಪಾತ್ರವಾದರೆ ಹಿರಿಯರು ಮಾಡಿದ ಪಾತ್ರಗಳ ವಿಡಿಯೋ ತುಣುಕುಗಳನ್ನು ನೋಡಿ ರಂಗಕ್ರಮದ ಬಗ್ಗೆ ತಿಳಿದುಕೊಂಡು, ತನ್ನದೇ ಆದ ಶೈಲಿಯಲ್ಲಿ ಆ ಪಾತ್ರವನ್ನು ಹೀಗೆ ಮಾಡಬಹುದು ಎಂದು ತಯಾರಿ ಮಾಡಿ, ಸ್ವಲ್ಪ ವಿಭಿನ್ನವಾಗಿ ಹೀಗೆ ಮಾಡಬಹುದು ಎಂದು ಯೋಚಿಸುತ್ತೇನೆ ಎಂದು ಹೇಳುತ್ತಾರೆ ಪವನ್ ಆಚಾರ್ಯ ನೀರ್ಚಾಲು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ಪ್ರದರ್ಶನಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಕಳೆದ ವರ್ಷ ಇದ್ದ ಕಾರ್ಯಕ್ರಮ ಈ ವರ್ಷ ಇಲ್ಲ ಅಂತ ಆದಾಗ ಮೊದಲು ತಿಳಿಯುವುದೇ ಕಲಾವಿದರಿಗೆ. ವಿದೇಶಗಳಲ್ಲಿ, ರಾಜ್ಯದಿಂದ ಹೊರಗೆ ಯಕ್ಷಗಾನ ಪ್ರದರ್ಶನಗಳು ಹೆಚ್ಚುತ್ತಿರುವುದು ಇನ್ನೊಂದೆಡೆ ಹೆಮ್ಮೆಯ ವಿಷಯ. ನಾನು ಯಾವತ್ತೂ ಯಕ್ಷಗಾನದಲ್ಲಿ ಹೊಸತನ್ನು ಬಯಸುವವನು. ಹೊಸ ಪ್ರಯೋಗಗಳು, ವಿಭಿನ್ನ ಕಾರ್ಯಕ್ರಮಗಳು ಇತ್ಯಾದಿ. ನಾಟ್ಯವೈಭವ, ಗಾನ ವೈಭವ ಹೀಗೆ ಎಲ್ಲವನ್ನೂ ಅಸ್ವಾದಿಸುತ್ತೇನೆ. ಆದ್ರೆ ವೈಭವಗಳು ಯಕ್ಷಗಾನ ಬಯಲಾಟದ ಸಂಖ್ಯೆಯನ್ನು ಕಡಿತಾಗಿಸುತ್ತಿದೆಯೆ ಎಂಬ ಸಂದೇಹ. ಎಲ್ಲವೂ ಯಕ್ಷ ರಂಗದ ಬೆಳವಣಿಗೆಗೆ ಪೂರಕವಾದರೂ, ಹಲವು ಮೇಳಗಳಲ್ಲಿ ದುಡಿಯುವ ಬಡ ಕಲಾವಿದರಿಗೆ ಎಲ್ಲರಿಗೂ ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಇರುವುದಿಲ್ಲ. ಆ ನಿಟ್ಟಿನಲ್ಲಿ ಆಲೋಚಿಸಿದಾಗ ಇಂತಹ ಪ್ರಯೋಗಗಳು ಹೆಚ್ಚಿದರೆ, ಬಡ ಕಲಾವಿದರಿಗೆ ತೊಂದರೆ ಆಗಬಹುದೇ ಎಂಬ ಕಾಳಜಿ ಅಷ್ಟೇ.. ಅಭಿಪ್ರಾಯ ನನ್ನದು.
ಇಂದಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷ ಪ್ರೇಕ್ಷಕರು ಕಾಲಮಿತಿಗೆ ಒಗ್ಗಿಕೊಂಡರೆ ಅದಕ್ಕಿಂತ ದುಃಖದ ಸಂಗತಿ ಇನ್ನೊಂದಿಲ್ಲ. ನಿಜಕ್ಕೂ ರಾತ್ರಿ ಪೂರ್ತಿ ಯಕ್ಷಗಾನ ನೋಡುವುದೇ ಖುಷಿ. ಆದ್ರೆ ಈಗ ಪರಿಸ್ಥಿತಿ ಬದಲಾಗಿದೆ. ಆದರೂ ಯಕ್ಷ ಪ್ರೇಕ್ಷಕರು ಕಲೆಯನ್ನು ಯಾವತ್ತೂ ಬಿಟ್ಟುಕೊಟ್ಟಿಲ್ಲ. ಕಾಲಮಿತಿಯಿಂದ ಪರಂಪರೆಗೆ, ಯಕ್ಷಗಾನದ ಕಲಾ ಸಂಪತ್ತಿಗೆ ಧಕ್ಕೆ ಆದರೂ ನಿಗದಿತ ಸಮಯದಲ್ಲಿ ಕಲಾವಿದರು ಉಣ ಬಡಿಸುವ ರಸದೌತಣವನ್ನು ಸವಿಯುವಲ್ಲಿ ಪ್ರೇಕ್ಷಕರೂ ಮೊದಲ ಸರತಿಯಲ್ಲಿ ಇದ್ದಾರೆ ಎನ್ನುವುದು ಹೆಮ್ಮೆ. ಹಿಂದೊಮ್ಮೆ ನಾನೇ ಬರೆದಿದ್ದೆ: ಯಕ್ಷಗಾನ ಕಲಾವಿದ ಆಗುವುದು ಮಾತ್ರ ದೊಡ್ಡದಲ್ಲ, ಪ್ರೇಕ್ಷಕನಾಗಿ ಇರುವುದು ಶ್ರೇಷ್ಠವೆ. ಯಾಕೆಂದರೆ ಯಕ್ಷಗಾನ ಪ್ರೇಕ್ಷಕನಿಗೂ ಪುರಾಣ ಜ್ಞಾನ, ಭಾಷಾ ಜ್ಞಾನ, ಅದರಲ್ಲೂ ಯಕ್ಷಗಾನದ ಶೈಲಿಯ ಅರಿವು ಬೇಕು, ಆಗ ಮಾತ್ರ ಪೂರ್ಣ ಪ್ರಮಾಣದಲ್ಲಿ ಕಲೆಯನ್ನು ಆಸ್ವಾದಿಸಲು ಆಗುತ್ತದೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:- ಯಕ್ಷಗಾನದ ಪ್ರಸಂಗವೊಂದನ್ನು ಸಿನಿಮೀಯವಾಗಿ ಚಿತ್ರಿಸುವ ಒಂದು ಯೋಜನೆ ಇದೆ. ವೃತ್ತಿ ನಿಮಿತ್ತ ಬೆಂಗಳೂರಿನಲ್ಲಿ ಇರುವುದರಿಂದ ಊರಿನ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಡಿಮೆ ಆಗಿದೆ. ಆದರೂ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶವಿದೆ.
ಯಾವ ಎಲ್ಲಾ ಮೇಳದಲ್ಲಿ ತಿರುಗಾಟವನ್ನು ಮಾಡಿದ ಅನುಭವ:-
ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ಎಡನೀರು, ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಮೇಳದಲ್ಲಿ ತಿರುಗಾಟವನ್ನು ಮಾಡಿದ ಅನುಭವ.
2019ರಲ್ಲಿ ಮಂಗಳೂರಿನ ಯೂನಿವರ್ಸಿಟಿ ಕಾಲೇಜಿನಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಹೆಸರಿನಲ್ಲಿರುವ ಎಕನಾಮಿಕ್ಸ್ ಗೋಲ್ಡ್ ಮೆಡಲ್ ಪವನ್ ಆಚಾರ್ಯ ನೀರ್ಚಾಲು ಅವರಿಗೆ ಲಭಿಸಿದೆ ಹಾಗೂ ಯಕ್ಷಗಾನ ಪೋಷಕರು, ಸಂಘಟಕರಿಂದ ಕಾರ್ಯಕ್ರಮದ ಮಧ್ಯೆ ಗೌರವ, ಸಮುದಾಯದ ಹಿರಿಯರಿಂದಲು ಸನ್ಮಾನ ಪವನ್ ಅವರಿಗೆ ದೊರೆತಿರುತ್ತದೆ.
ಓದು, ಬರಹ, ಫಿಲ್ಮ್ ಮೇಕಿಂಗ್, ಟ್ರಾವೆಲಿಂಗ್ ಇತ್ಯಾದಿ ಇವರ ಹವ್ಯಾಸಗಳು.
ತಂದೆ, ತಾಯಿಯ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಪವನ್ ಆಚಾರ್ಯ ನೀರ್ಚಾಲು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.