ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯ ಶೇಖರ್ ಡಿ. ಶೆಟ್ಟಿಗಾರ್ ಯಕ್ಷಗಾನ ಕಲೆಯಲ್ಲಿ ಕೇಳಿ ಬರುವಂತಹ ಪ್ರಸಿದ್ಧ ಹೆಸರು. 11.02.1966ರಲ್ಲಿ ಪ್ರಸಿದ್ಧ ವೇಷಧಾರಿ, ವೇಷಭೂಷಣ ಪ್ರಸಾದನ ತಜ್ಞ, ಮೋಹಿನೀ ಕಲಾ ಸಂಪದ ಕಿನ್ನಿಗೋಳಿ ಸಂಸ್ಥೆಯ ಸ್ಥಾಪಕರಾದಂತಹ ದಿವಂಗತ ತಾಳಿಪಾಡಿ ದಾಮೋದರ ಶೆಟ್ಟಿಗಾರ್ ಮತ್ತು ಮೋಹಿನೀ ಡಿ ಶೆಟ್ಟಿಗಾರ್ ದಂಪತಿಯ ಸುಪುತ್ರನಾಗಿ ಜನನ. ಪ್ರಸ್ತುತ ದುಬಾಯಿ-ಯುಎಇಯ ಎನ್‌ಎಂಸಿ ಗ್ರೂಪ್ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು, ಉಚ್ಚಿಲದ ಮಹಾಲಕ್ಷ್ಮಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಶಾಂತಾ ಅವರನ್ನು ವಿವಾಹವಾಗಿ, ಸ್ವತಃ ಹಿಮ್ಮೇಳ-ಮುಮ್ಮೇಳದ ಕಲಾವಿದರಾಗಿ ರೂಪು ಪಡೆಯುತ್ತಿರುವ, ಹೃಷಿಕೇಶ್ ಮತ್ತು ವಿಘ್ನೇಶ್ ಎಂಬ ಇಬ್ಬರು ಗಂಡು ಮಕ್ಕಳನ್ನು ಇವರು ಹೊಂದಿದ್ದಾರೆ.
ಶೆಟ್ಟಿಗಾರ್ ಅವರ ಕುಟುಂಬವು ಏಳೆಂಟು ದಶಕಗಳಿಗೂ ಹೆಚ್ಚು ಕಾಲ ಈ ಸಾಂಪ್ರದಾಯಿಕ ಪ್ರಾಚೀನ ಯಕ್ಷಗಾನ ಕಲೆಯಲ್ಲಿ ತೊಡಗಿಸಿಕೊಂಡಿದೆ. ಅಜ್ಜ ವೀರಯ್ಯ ಶೆಟ್ಟಿಗಾರ್ ಶನಿ ಪೂಜೆಯ ಪ್ರಸಿದ್ಧ ಪ್ರವಚನಕಾರರಾಗಿದ್ದರೆ, ತಂದೆ ದಾಮೋದರ್ ಶೆಟ್ಟಿಗಾರ್ ಮೂರು ದಶಕಗಳಿಗೂ ಹೆಚ್ಚು ಕಾಲ ನಟ, ನೃತ್ಯ ಸಂಯೋಜಕ, ವೇಷಭೂಷಣ ವಿನ್ಯಾಸಕ ಮತ್ತು ಮೇಕಪ್ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ.
ಶೇಖರ್ ಅವರ ಅಕ್ಕ ವೇದಾವತಿ ಶೆಟ್ಟಿಗಾರ್ ಕೂಡ ಸುರತ್ಕಲ್ ಮತ್ತು ಅರುವ ತಂಡಗಳ ವಿವಿಧ ಯಕ್ಷಗಾನ ಪ್ರದರ್ಶನಗಳಲ್ಲಿ ಗೌರವಾನ್ವಿತ ಅತಿಥಿ ಕಲಾವಿದರಾಗಿ ಭಾಗವಹಿಸಿದ ಅನುಭವ ಉಳ್ಳವರಾಗಿದ್ದಾರೆ. ಅವರ ಸಹೋದರರಾದ ಸದಾಶಿವ ಶೆಟ್ಟಿಗಾರ್, ಗಂಗಾಧರ ಶೆಟ್ಟಿಗಾರ್ ಮತ್ತು ಬಾಲಕೃಷ್ಣ ಶೆಟ್ಟಿಗಾರ್ ಕೂಡ ಯಕ್ಷಗಾನ-ನಾಟಕಗಳಲ್ಲಿ ನಟನೆ, ಮೇಕಪ್ ಸೇರಿದಂತೆ ಯಕ್ಷಗಾನದ ವಿವಿಧ ಕ್ಷೇತ್ರಗಳಲ್ಲಿ ಭಾಗವಹಿಸುವ ಮೂಲಕ ಈ ಮಹಾನ್ ಕಲೆಗೆ ಕೊಡುಗೆ ನೀಡುತ್ತಿದ್ದಾರೆ.
ಉಳಿದಂತೆ ಅಕ್ಕನ ಮಕ್ಕಳು, ತಮ್ಮಂದಿರ ಮಕ್ಕಳು ಕೂಡ ಯಕ್ಷಗಾನಾಸಕ್ತರು, ವೇಷಧಾರಿಗಳು ಮತ್ತು ಅಭ್ಯಾಸಿಗಳು.
ಯಕ್ಷ ಶಿಕ್ಷಣ
ಬಾಲಪಾಠ ತಂದೆಯವರಿಂದ ಮತ್ತು ದಿವಂಗತ ಕಟೀಲು ಶ್ರೀನಿವಾಸ ಭಟ್, ಬಳಿಕ ಕೋಳ್ಯೂರು ರಾಮಚಂದ್ರ ರಾವ್, ಐ. ಲೋಕೇಶ್ ಕುಮಾರ್ ಕಟೀಲು, ಗಣೇಶ್ ಕೊಲಕಾಡಿ ( ಛಂದಸ್ಸು – ಅರ್ಥಗಾರಿಕೆ).
ಅಜ್ಜ ದಿ. ವೀರಯ್ಯ ಶೆಟ್ಟಿಗಾರ್, ದೊಡ್ಡಪ್ಪ ಮಾಧವ ಶೆಟ್ಟಿಗಾರ್, ಮಾವ ಲಿಂಗಪ್ಪ ಶೆಟ್ಟಿಗಾರ್, ಚಿಕ್ಕಪ್ಪ ಮುಖ್ಯಪ್ರಾಣ ಕಿನ್ನಿಗೋಳಿ ಮುಂತಾದವರ ಸತತ ಪ್ರೋತ್ಸಾಹ ಮತ್ತು ಮಾರ್ಗದರ್ಶನ.
ವಿದ್ವಾನ್ ಕೊರ್ಗಿ ವೆಂಕಟೇಶ ಉಪಾಧ್ಯಾಯರು, ಮುರಳೀಧರ ಭಟ್ ಕಟೀಲು, ಸುಣ್ಣಂಬಳ ವಿಶ್ವೇಶ್ವರ ಭಟ್, ಹರೀಶ್ ಶೆಟ್ಟಿಗಾರ್ ಮುಚ್ಚೂರು, ದಯಾನಂದ ಶೆಟ್ಟಿಗಾರ್ ಮಿಜಾರು ಮುಂತಾದವರಿಂದ ಸತತ ಮಾರ್ಗದರ್ಶನ.
ಗುರು ಸಮಾನರಾಗಿ ಕಟೀಲು ಮೇಳದಲ್ಲಿ ಇರುವಾಗ ತಪ್ಪು ಒಪ್ಪುಗಳನ್ನು ಹೇಳಿ ಮಾರ್ಗದರ್ಶನ ಮಾಡಿದವರು ರಂಗನಾಯಕರೆಂದೇ ಖ್ಯಾತರಾದ ಭಾಗವತ ಕುರಿಯ ಗಣಪತಿ ಶಾಸ್ತ್ರಿಯವರು ಮತ್ತು ಮಾತನಾಡುವ ಬಣ್ಣದ ವೇಷದ ಖ್ಯಾತಿಯ ಗೇರುಕಟ್ಟೆ ಗಂಗಯ್ಯ ಶೆಟ್ಟಿ ಮತ್ತು ಮತ್ತೊಬ್ಬ ಬಣ್ಣದ ವೇಷಧಾರಿ ದಾಸನಡ್ಕ ರಾಮ ಕುಲಾಲ್ ಮೊದಲಾದವರು.
12ನೇ ವರ್ಷ ಪ್ರಾಯದಲ್ಲೇ ಮುಂಬಾಯಿಯ ಪ್ರಸಿದ್ಧ ಷಣ್ಮುಖಾನಂದ ಹಾಲ್ ನಲ್ಲಿ ಬಬ್ರುವಾಹನ ಕಾಳಗದ ಪ್ರದ್ಯುಮ್ನ ಮತ್ತು ಬಬ್ರುವಾಹನನ ದೂತನಾಗಿ ರಂಗ ಪ್ರವೇಶ. ಹವ್ಯಾಸಿಯಾಗಿ – ಮುಂಬಾಯಿಯ ನಾರಾಯಣ ಗುರುಸ್ವಾಮಿ ಯಕ್ಷಗಾನ ಮಂಡಳಿ, ವೀರಭದ್ರ ಯುವಕ ಮಂಡಲ ತಾಳಿಪಾಡಿ, ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಮುಂಡ್ಕೂರು, ನಂದಳಿಕೆ, ಕಡಂದಲೆ ಮಂಡಳಿಗಳಲ್ಲಿ ವೇಷಧಾರಿಯಾಗಿ ಭಾಗವಹಿಸಿದ್ದಾರೆ.
ಶ್ರೀ ಭಗವತಿ ಮೇಳ ಸಸಿಹಿತ್ಲು ( 2002 ರಿಂದ 2004) ಮತ್ತು ಶ್ರೀ ದುರ್ಗಾಪರಮೇಶ್ವರೀ ಮೇಳ ಕಟೀಲು ( 2004 ರಿಂದ 2008) ವೃತ್ತಿಪರ ಕಲಾವಿದನಾಗಿ ತಿರುಗಾಟ ಮಾಡಿದ ಅನುಭವವಿದೆ.
ಮಂಗಳೂರು ಆಕಾಶವಾಣಿ ತಾಳಮದ್ದಳೆಗಳಲ್ಲಿ ಭಾಗವಹಿಸುವಿಕೆ. ಇಂಗ್ಲಿಷ್ ಭಾಷಾ ಯಕ್ಷಗಾನಗಳಲ್ಲಿ ಪಾತ್ರ ನಿರ್ವಹಣೆ ಮಾಡಿದ ಅನುಭವವೂ ಇದೆ. ಗಲ್ಫ್ ರಾಷ್ಟ್ರದ ಬೆಹರಿನ್ ತಂಡದಲ್ಲಿಯೂ ಅತಿಥಿ ಕಲಾವಿದರಾಗಿ ಭಾಗವಹಿಸಿದ್ದಾರೆ.
ಪುಂಡು ವೇಷ, ಕಿರೀಟ ವೇಷ ಮತ್ತು ನಾಟಕೀಯ ವೇಷಗಳಲ್ಲಿ ಹೆಚ್ಚಿನ ಸಿದ್ಧಿ. ಯೌವನದಲ್ಲಿ ಸ್ತ್ರೀ ವೇಷ ಮಾಡಿದ್ದೂ ಇದೆ. ಅಗತ್ಯಕ್ಕೆ ಬಣ್ಣದ ವೇಷ ಹಾಸ್ಯ ಪಾತ್ರಗಳಿಗೂ ಸಿದ್ಧರಾಗಿ ಸಂಘಟಕರ ಅಗತ್ಯಗಳಿಗೆ ಸದಾ ಸ್ಪಂದಿಸುತ್ತಾ ಬಂದವರು.
ಪುಂಡು ವೇಷಗಳಲ್ಲಿ ಸುಧನ್ವ, ಬಬ್ರುವಾಹನ, ದೇವವೃತ, ರಾಮ, ಕೃಷ್ಣ, ವಿಷ್ಣು, ತರಣಿಸೇನ, ಚಂಡ ಮುಂಡ, ಕುಶ ಲವ.
ಕಿರೀಟ ವೇಷಗಳಲ್ಲಿ ದೇವೇಂದ್ರ, ಅರ್ಜುನ, ಶಂತನು, ದಕ್ಷ, ಕಾರ್ತ್ಯವೀರ್ಯಾರ್ಜುನ, ಬಲರಾಮ, ಶಿಶುಪಾಲ, ಕೌರವ, ಕೌಂಡ್ಲಿಕ, ಇಂದ್ರಜಿತು, ರಕ್ತಬೀಜ, ಹಿರಣ್ಯಾಕ್ಷ.
ನಾಟಕೀಯ ಪಾತ್ರಗಳಲ್ಲಿ ಮಧು ಕೈಟಭ, ಅರುಣಾಸುರ, ಶನೀಶ್ವರ, ಕಂಸ, ಹಿರಣ್ಯ ಕಶ್ಯಪ, ಭಂಡಾಸುರ, ಘಟೋತ್ಕಚ, ಕೋಟಿ ಚೆನ್ನಯ, ದೇವು ಪೂಂಜ.
ಸ್ತ್ರೀ ವೇಷಗಳಲ್ಲಿ ಶ್ರೀದೇವಿ, ದಾಕ್ಷಾಯಿಣಿ, ರುಕ್ಮಿಣಿ, ಮಾಲಿನಿ, ದ್ರೌಪದಿ, ಮಾಯಾ ಶೂರ್ಪನಖಿ, ನಂದಿನಿ ಇತ್ಯಾದಿ ಪಾತ್ರಗಳ ಮೂಲಕ ಯಕ್ಷಗಾನ ಅಭಿಮಾನಿಗಳನ್ನು ರಂಜಿಸಿದವರು.
ನಾಟ್ಯ ತರಬೇತಿ – ಪ್ರಸಂಗ ನಿರ್ದೇಶನ:-
1. ವೀರಭದ್ರ ಯುವಕ ಮಂಡಲದ ಬಾಲ ಕಲಾವಿದರ ತಂಡ.
2. ತೆಂಕ ಎರ್ಮಾಳು ಹಿ.ಪ್ರಾಥಮಿಕ ಶಾಲೆ
3. ಹಿರಿಯ ಪ್ರಾಥಮಿಕ ಶಾಲೆ ಉಲ್ಲಂಜೆ ಕಟೀಲು
4. ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ – ಮೂಡಬಿದ್ರೆ – ಪ್ರಾರಂಭದ 5 ವರ್ಷಗಳು. ಈಗಲೂ ರಂಗ ಪಠ್ಯದ ಒದಗಿಸುವಿಕೆ.
5. ಯಕ್ಷ ಮಿತ್ರರು ದುಬಾಯಿಯಲ್ಲಿ 9 ವರ್ಷಗಳು – 7 ವಾರ್ಷಿಕ ಪ್ರದರ್ಶನಗಳಿಗೆ ಮತ್ತು 2 ಮಸ್ಕತ್ ಪ್ರದರ್ಶನಗಳಿಗೆ ನಿರ್ದೇಶನ.
6. ಯಕ್ಷಗಾನ ಅಭ್ಯಾಸ ಕೇಂದ್ರ ದುಬಾಯಿ – ಹಲವು ಸಮಾನ ಆಸಕ್ತರೊಡನೆ ಕೂಡಿ ಸ್ಥಾಪನೆ. ಹತ್ತು ವರ್ಷಗಳಿಂದ ಸತತ ಅಧ್ಯಯನ.
7. 2016ರಲ್ಲಿ ದುಬಾಯಿಯಲ್ಲಿ ಪ್ರಥಮ ಬಾರಿಗೆ ಮಕ್ಕಳು ಮತ್ತು ಮಹಿಳಾ ಕಲಾವಿದರಿಂದಲೇ ಸಂಘಟಿಸಲ್ಪಟ್ಟ ಪಾಂಚಜನ್ಯ ತಂಡಕ್ಕೆ ನಿರ್ದೇಶನ.
8. ಅಬುಧಾಬಿ – ಶಾರ್ಜ ಕನ್ನಡ ಸಂಘಗಳಲ್ಲಿ ಪ್ರದರ್ಶನಗೊಂಡ ಮಕ್ಕಳ ಯಕ್ಷಗಾನ ಕಾರ್ಯಕ್ರಮಕ್ಕೆ ನಿರ್ದೇಶನ.
9. 2018ರ ಅಡ್ಯಾರ್ ಗಾರ್ಡನ್ ನಲ್ಲಿ ಪಟ್ಲ ಸಂಭ್ರಮ ಪ್ರಯುಕ್ತ ಮಕ್ಕಳ ಯಕ್ಷಗಾನ – ಮೋಹಿನಿ ಏಕಾದಶಿ ಪ್ರಸಂಗ ನಿರ್ದೇಶನ.
10. ಉಡುಪಿಯಲ್ಲಿ ನಡೆದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಪ್ರದರ್ಶನಗೊಂಡ ದುಬಾಯಿ ಕೇಂದ್ರದ ಪಾಂಚಜನ್ಯ ಪ್ರಸಂಗಕ್ಕೆ ನಿರ್ದೇಶನ.
ದುಬಾಯಿಯಲ್ಲಿಯೂ ಯಕ್ಷಗಾನವನ್ನು ಕಲಿಯುವ ಆಸಕ್ತರಿದ್ದಾರೆ ಎಂದು ಮನಗಂಡು ನಿರಂತರ ಅಧ್ಯಯನದ ಉದ್ದೇಶದಿಂದ ತರಗತಿ ಸ್ಥಾಪನೆ. ಮಾತ್ರವಲ್ಲದೆ ಕೇವಲ ವರ್ಷಕ್ಕೊಂದು ಪ್ರದರ್ಶನದ ಉದ್ದೇಶದಿಂದ ಹೆಜ್ಜೆಗಳ ಅಭ್ಯಾಸವಿಲ್ಲದೇ, ರಂಗ ಕ್ರಮಗಳ ಅಧ್ಯಯನವಿಲ್ಲದೆ, ಅನರ್ಥಗಳನ್ನೇ ಅರ್ಥವೆಂದು ಭಾವಿಸಿ, ಕೇವಲ ಅವಕಾಶ – ಪ್ರದರ್ಶನಗಳ ಉದ್ದೇಶದಿಂದ ರಂಗವೇರುವ ವೇಷಧಾರಿಗಳನ್ನು ಕಂಡು, ದುಬಾಯಿಯಲ್ಲಿ ಈ ವರ್ತನೆ ಬದಲಾವಣೆಯಾಗಬೇಕೆಂದು ಮನಸ್ಸು ಮಾಡಿ, ಸಂಚಾಲಕರಾಗಿ ಮುಂದಾಳತ್ವ ವಹಿಸಿರುವ ಕೊಟ್ಟಿಂಜ ದಿನೇಶ ಟಿ. ಶೆಟ್ಟಿ, ಮತ್ತು ಸಮಾನ ಆಸಕ್ತರ ಸಹಾಯ ಸಹಕಾರಗಳಿಂದ ಯಕ್ಷಗಾನ ಅಭ್ಯಾಸ ಕೇಂದ್ರ ಎಂಬ ಸಂಸ್ಥೆಯನ್ನು ಯುಎಇಯಲ್ಲಿ ಹುಟ್ಟುಹಾಕಿ, ಇದೀಗ 2025ರಲ್ಲಿ ಈ ಸಂಸ್ಥೆ ದಶಮಾನೋತ್ಸವ ಆಚರಣೆಗೆ ಸನ್ನದ್ಧವಾಗಿದೆ.
ಇವರು ನೀಡಿರುವ ಪ್ರಸಂಗ ನಿರ್ದೇಶನಕ್ಕೆ ತಂಡ ಪ್ರಶಸ್ತಿಗಳು, ವೈಯಕ್ತಿಕ ಸ್ಪರ್ಧಾ ಪ್ರಶಸ್ತಿಗಳು, ಅಂತರ ಕಾಲೇಜು ಯಕ್ಷಗಾನ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಪ್ರಶಸ್ತಿ ಸನ್ಮಾನಗಳು:-
2017ರಲ್ಲಿ ಅಬುಧಾಬಿ ಕರ್ನಾಟಕ ಸಂಘದಿಂದ “ದ.ರಾ. ಬೇಂದ್ರೆ ಪ್ರಶಸ್ತಿ”.
ಶಾರ್ಜ ಕನ್ನಡ ಸಂಘದಿಂದ “ಯಕ್ಷ ಮಯೂರ ” ಪ್ರಶಸ್ತಿ.
ಗಲ್ಫ್ ಕನ್ನಡ ರಾಜ್ಯೋತ್ಸವ ಸಮಿತಿಯಿಂದ 2023ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ.
ಪದ್ಮಶಾಲಿ ಕಮ್ಯೂನಿಟಿ ದುಬಾಯಿ ವತಿಯಿಂದ ಸನ್ಮಾನ.
ಆಳ್ವಾಸ್, ಎರ್ಮಾಳ್, ಉಲ್ಲಂಜೆ ತರಗತಿ ವತಿಯಿಂದ ಸನ್ಮಾನ.
ಹುಟ್ಟೂರು ಗೋಳಿಜೋರ ಯಕ್ಷಗಾನ ಬಯಲಾಟ ಸಮಿತಿ, ಹರಿಹರ ಶ್ರೀರಾಮ ಮಂದಿರ ಗೋಳಿಜೋರ ಇವರಿಂದ ಸನ್ಮಾನ.
2025ರ ಜಾನಪದ ಲೋಕ ಪ್ರಶಸ್ತಿ.
ಇವರ ಬಳಿ ಕಲಿತ ಪ್ರಸಾದ್ ಚೇರ್ಕಾಡಿ, ಪವನ್ ಕುಮಾರ್ ಕೆರ್ವಾಸೆ, ಹರಿರಾಜ್ ಶೆಟ್ಟಿಗಾರ್, ಶರತ್ ಕುಡ್ಲ, ದೀವಿತ್ ಕೋಟ್ಯಾನ್, ರಾಹುಲ್ ಕುಡ್ಲ ಮೊದಲಾದ ಶಿಷ್ಯರೇ ಇಂದು ಗುರುಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 500 ರಷ್ಟು ಮಂದಿ ವಿದ್ಯಾರ್ಥಿಗಳು ವಿವಿಧ ಕಡೆಯ ತರಗತಿಯಲ್ಲಿ ತರಬೇತಿ ಹೊಂದಿದ್ದಾರೆ. ಕೆಲವು ಮಂದಿ ಮೇಳದಲ್ಲಿ ವೃತ್ತಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಂದೆ, ತಾಯಿ, ಅಕ್ಕ ತಮ್ಮ, ಪತ್ನಿಯ ಪ್ರೋತ್ಸಾಹ, ಗುರುಗಳ ಸತತ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಶೇಖರ್ ಡಿ. ಶೆಟ್ಟಿಗಾರ್.
ಶ್ರವಣ್ ಕಾರಂತ್ ಕೆ.
ಶಕ್ತಿನಗರ ಮಂಗಳೂರು.