ಸಾಂಸ್ಕೃತಿಕ ನಗರಿ ಎಂದು ಕರೆಸಿಕೊಳ್ಳುವ ಶಿವಮೊಗ್ಗ ಜಿಲ್ಲೆಯು ಬೇರೆ ಬೇರೆ ಕಲೆಗಳ ಜೊತೆಗೆ ಯಕ್ಷಗಾನವನ್ನು ಆರಾಧಿಸುವ ಜಿಲ್ಲೆಯಾಗಿ, ಯಕ್ಷಗಾನಕ್ಕೆ ಸ್ತ್ರೀ, ಪುರುಷ ಭೇದವಿಲ್ಲದೇ ಅನೇಕ ಪ್ರಸಿದ್ಧ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಕೆಲವರು ಯಕ್ಷಗಾನ ಪ್ರಿಯರು ಸಿಗಬಹುದು, ಆದರೆ ಯಕ್ಷಗಾನ ಪ್ರೀತಿಸುವುದರ ಜೊತೆಗೆ ಕಲಾವಿದರ ಕುಟುಂಬ ಕೂಡ ಇದೆ ಎಂದು ಗೊತ್ತಾಗಿದ್ದು ಆಗ್ನೇಯ ಭಟ್ ಕ್ಯಾಸನೂರು ಅವರ ಪರಿಚಯ ಆದ ಮೇಲೆಯೇ.
ಹವ್ಯಾಸಿ ಯಕ್ಷಗಾನ ಕಲಾವಿದರಾದ ಆಗ್ನೇಯ ಭಟ್ ಕ್ಯಾಸನೂರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರಿನ ಅಶೋಕ ಭಟ್ ಹಾಗೂ ಪೂರ್ಣಿಮಾ ದಂಪತಿಯರ ಮಗನಾಗಿ, ಅಪೂರ್ವ ದುರ್ಗಪ್ರಸಾದ್ ಜೋಯ್ಸ್ ಇವರ ಪ್ರೀತಿಯ ತಮ್ಮನಾಗಿ 17-10-1995ರಂದು ಜನನ. MA, B.Ed in samskrutha ಇವರ ವಿದ್ಯಾಭ್ಯಾಸ. ಅಧ್ಯಾಪಕ ವೃತ್ತಿ, ಯಕ್ಷಗಾನ ಪ್ರವೃತ್ತಿ. ಇದರ ಜೊತೆಗೆ ಪ್ರಸ್ತುತ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಚಾಮರಾಜಪೇಟೆ ಬೆಂಗಳೂರು ಇದರ ಅಡಿಯಲ್ಲಿ ಪಿಎಚ್ಡಿ ಕೂಡ ಮಾಡುತ್ತಿದ್ದಾರೆ, ಜ್ಯೋತಿಷ್ಯ ಶಾಸ್ತ್ರವನ್ನು ಮುಖ್ಯ ವಿಷಯವಾಗಿಟ್ಟುಕೊಂಡು ಅದರಲ್ಲಿ PhD ಮಾಡುತ್ತಿದ್ದಾರೆ. ತಂದೆ ಅಶೋಕ ಭಟ್ ಇವರ ಯಕ್ಷಗಾನದ ಮೊದಲ ಗುರು. ಸಂಗೀತದ ಗುರುಗಳು ವಸುಧಾ ಶರ್ಮಾ ಹಳೆ ಇಕ್ಕೇರಿ. ತಬಲಾ ಗುರುಗಳು ಭಾಸ್ಕರ ಹೆಗಡೆ ಮುತ್ತಿಗೆ, ಎರಡರಲ್ಲೂ ಜೂನಿಯರ್ ಎಕ್ಸಾಮ್ ಅನ್ನು ಪೂರ್ಣಗೊಳಿಸುತ್ತಾರೆ.
ನನ್ನ ತಂದೆಯವರೆ ಮೊದಲ ಗುರುಗಳು, ತಂದೆಯವರು ಕೂಡ ಯಕ್ಷಗಾನ ಕಲಾವಿದರು. ಉಡುಪಿ ಕೇಂದ್ರದಲ್ಲಿ ಯಕ್ಷಗಾನವನ್ನು ಅಭ್ಯಸಿಸಿ ಹೇರಂಜಾಲು ಗೋಪಾಲ ಗಾಣಿಗರನ್ನು ಗುರುವಾಗಿ ಸ್ವೀಕರಿಸಿ ಯಕ್ಷಗಾನದ ಎಲ್ಲಾ ವಿಭಾಗದಲ್ಲೂ ಕೂಡ ಅವರು ಕೂಡ expert ಆಗಿ ಮೊದಲು ಕಮಲಶಿಲೆ, ಮಾರಣಕಟ್ಟೆ ಮೇಳದಲ್ಲಿ ಮೊದಲು ವೇಷಧಾರಿಯಾಗಿದ್ದು, ನಂತರ ವೇಷವನ್ನು ಬಿಟ್ಟು ಚೆಂಡೆಯನ್ನು ಅಭ್ಯಾಸ ಮಾಡಿ ಈಗಲೂ ಕೂಡ ಹವ್ಯಾಸಿ ಚೆಂಡೆ ವಾದಕರಾಗಿದ್ದಾರೆ. ಕಮಲಶಿಲೆ, ಸಾಲಿಗ್ರಾಮ, ಸಿತೂರು, ಜಲವಳ್ಳಿ ಮೇಳದಲ್ಲಿ ಚೆಂಡೆ ವಾದಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಆ ಕಾರಣದಿಂದಾಗಿ ನನ್ನ ತಂದೆಯವರೇ ಗುರುಗಳು ಎಂದು ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಜೊತೆಗೆ ಈ ಕಲೆಯಲ್ಲಿ ಮುಂದುವರೆಯಲು ಅಮ್ಮ, ಅಕ್ಕ ಭಾವ, ಹೆಂಡ್ತಿಯ ಸಹಕಾರವನ್ನು ಯಾವತ್ತೂ ಕೂಡ ಮರೆಯುವುದಕ್ಕೆ ಆಗುವುದಿಲ್ಲ. ತಂದೆಯವರು ಯಕ್ಷಗಾನ ಕಲಾವಿದರಾಗಿದ್ದರಿಂದ ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು. ಅಪ್ಪ ಬೇರೆಯವರಿಗೆ ತರಬೇತಿ ನೀಡುತ್ತಿರುವಾಗ ನೋಡಿ ಕೇಳಿ ಕಲಿತೆ. ಯಕ್ಷಗಾನದ ಮೂಲ ಪಾಠಗಳನ್ನು ತಂದೆಯವರಿಂದಲೆ ಕಲಿತದ್ದು. ಯಕ್ಷಗಾನ ವೇಷ ಮೊದಲು ಮಾಡಿದ್ದು ಶೃಂಗೇರಿಯಲ್ಲಿ ಹೈಸ್ಕೂಲ್ ಓದುತ್ತಿರುವಾಗ (jcs) ಪ್ರತಿವರ್ಷ ಶಾಲಾ ವಾರ್ಷಿಕೋತ್ಸವದಲ್ಲಿ ಯಕ್ಷಗಾನ ಕಾರ್ಯಕ್ರಮ ಮಾಡುವಂತಹ ಅವಕಾಶ ಇತ್ತು. ಅದರಲ್ಲಿ ನಾನು ಸೇರಿದ ಮೊದಲ ವರ್ಷ ಮಾಡಿದ ಪ್ರಸಂಗ ಅಭಿಮನ್ಯು ಕಾಳಗ. ತಾಯಿಯಿಂದ ಅಪ್ಪಣೆಯನ್ನು ಪಡೆದು ಚಕ್ರವ್ಯೂಹಕ್ಕೆ ಹೋಗುವ ಅಭಿಮನ್ಯು ಪಾತ್ರವನ್ನು ಮಾಡಿದ್ದೆ. 2 ನೇ ವರ್ಷ ಜಾಂಬವತಿ ಕಲ್ಯಾಣದಲ್ಲಿ ಕೃಷ್ಣನ ಪಾತ್ರವನ್ನು ಮಾಡಿದ್ದೆ, ಅದುವೇ ನನ್ನ ಮೊದಲ ರಂಗ ಪ್ರವೇಶ. ಆಮೇಲೆ ಉಜಿರೆಯಲ್ಲಿ PU ಶಿಕ್ಷಣವನ್ನು ಪಡೆಯುವಾಗ ಕೋಳ್ಯೂರು ರಾಮಚಂದ್ರ ರಾವ್ ಇವರಲ್ಲಿ ತೆಂಕಿನ ಯಕ್ಷಗಾನವನ್ನು ಅಭ್ಯಾಸ ಮಾಡಿದ್ದೇನೆ.
PU ಮುಗಿದ ನಂತರ ಮತ್ತೆ ಶೃಂಗೇರಿಗೆ ಬಂದು ಶೃಂಗೇರಿಯಲ್ಲಿ ಜ್ಯೋತಿಷ್ಯದಲ್ಲಿ BA ಯನ್ನು ಮಾಡಿ ಆಮೇಲೆ B.Ed ಅನ್ನು ಮಾಡಿ ಆಮೇಲೆ ಎಂ.ಎ ಅನ್ನು ಮಾಡಿದ್ದೇನೆ. ಜೊತೆಗೆ ಉಜಿರೆಯಲ್ಲಿ SDM ಕಾಲೇಜಿನಲ್ಲಿ ಓದಿದ್ದು, ಆಮೇಲೆ ಶೃಂಗೇರಿಯಲ್ಲಿ ರಾಜೀವ್ ಗಾಂಧಿ ಕಾಲೇಜು ಮೆಣಸೆ, ಸೆಂಟ್ರಲ್ ಸಂಸ್ಕೃತ ಯೂನಿವರ್ಸಿಟಿ ಅಂಡರ್ ಅಲ್ಲಿ ಬರುವಂತಹ ಕಾಲೇಜ್. ಅದರಲ್ಲಿ BA,MA,BEd ಎಲ್ಲವನ್ನೂ ಕೂಡ ಓದಿದ್ದೇನೆ. ಶೃಂಗೇರಿಯಲ್ಲಿ ಓದುತ್ತಿರುವಾಗ ಯಕ್ಷಗಾನ ಕ್ಲಾಸ್ ನೀಡುತ್ತಿದ್ದೆ. ತುಂಬಾ ಜನ ವಿದ್ಯಾರ್ಥಿಗಳಿಗೆ ನನಗೆ ಗೊತ್ತಿರುವ ಯಕ್ಷಗಾನವನ್ನು ಹೇಳಿಕೊಟ್ಟು ಪ್ರದರ್ಶನವನ್ನು ಕೊಡಿಸಿದ್ದೇನೆ. ಯಕ್ಷದೀಕ್ಷಾ ಸಂಸ್ಥೆಯಡಿಯಲ್ಲಿ ಯಕ್ಷಗಾನ ತರಬೇತಿ ಕೊಟ್ಟು ತುಂಬಾ ಕಡೆಯಲ್ಲಿ ಪ್ರದರ್ಶನವನ್ನು ಕೊಟ್ಟಿರುತ್ತೇವೆ. (ನಾನೇ ಸ್ಥಾಪಿಸಿದ ಸಂಸ್ಥೆ). ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಪರೀಕ್ಷೆಯನ್ನು ಬರೆದಿದ್ದೇನೆ. ಸೀನಿಯರ್ ಅಭ್ಯಾಸ ಮಾಡಿದ್ದೇನೆ.
ಜೊತೆಗೆ ತಬಲಾ ವಾದನದಲ್ಲಿ ಕೂಡ ಜೂನಿಯರ್ ಪರೀಕ್ಷೆಯನ್ನು ಬರೆದು ಉನ್ನತ ಶ್ರೇಣಿಯಲ್ಲಿ ಪಾಸ್ ಆಗಿದ್ದೇನೆ. ಜೊತೆಗೆ ನನ್ನ ಎಜುಕೇಶನ್ ಅನ್ನು ಮುಗಿಸಿ ಅಧ್ಯಾಪಕ ವೃತ್ತಿಗೆ ಬೆಂಗಳೂರಿಗೆ ಬಂದಾಗ, ಬೆಂಗಳೂರಿನಲ್ಲಿ ಕೂಡ ಅಧ್ಯಾಪಕ ವೃತ್ತಿಯ ಜೊತೆಗೆ ಯಕ್ಷಗಾನವನ್ನು ಪ್ರವೃತ್ತಿಯಾಗಿಸಿಕೊಂಡು ಯಕ್ಷಗಾನದ ಎಲ್ಲಾ ವಿಭಾಗಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. (ಸಂಗೀತ ಕಲಿತ ಕಾರಣದಿಂದಾಗಿ ಯಕ್ಷಗಾನ ತಾಳಗಳೆಲ್ಲ ಗೊತ್ತಿರುವ ಕಾರಣ ಭಾಗವತಿಕೆಯನ್ನು ಮಾಡಬಲ್ಲೆ. ಆದರೆ ಇಲ್ಲಿಯವರೆಗೆ ಯಾವ ಪ್ರದರ್ಶನದಲ್ಲಿಯೂ ಭಾಗವತಿಕೆ ಮಾಡಲಿಲ್ಲ) ಶೃಂಗೇರಿಯಲ್ಲಿ ಇರುವಾಗ ‘ವಾಗರ್ಥ ಸಭೆ’ ಎಂಬ ತಾಳಮದ್ದಳೆ ತಂಡವನ್ನು ಮಾಡಿ, ಕೆಲವೊಂದು ತಾಳಮದ್ದಳೆಯಲ್ಲಿ ಭಾಗವತನಾಗಿ ಭಾಗವತಿಕೆಯನ್ನು ಮಾಡಿದ್ದೇನೆ. ಜೊತೆಗೆ ಈಗ ಬೆಂಗಳೂರಿನಲ್ಲಿ ಕ್ರೈಸ್ಟ್ ಪದವಿ ಪೂರ್ವ ಕಾಲೇಜ್ ನಲ್ಲಿ ಸಂಸ್ಕೃತ ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದೇನೆ. ಜೊತೆಗೆ ಇಲ್ಲಿ ಬರುವಂತಹ ಹವ್ಯಾಸಿ ತಂಡಗಳಿಗೆ ಹೋಗಿ ಭಾಗವಹಿಸುತ್ತೇನೆ.
ಬೆಂಗಳೂರಿನಲ್ಲಿ ಆಸಕ್ತಿ ಇರುವವರಿಗೆ ಯಕ್ಷಗಾನ ತರಬೇತಿ ನೀಡಬೇಕು ಎಂಬ ಆಸೆ / ಯೋಜನೆ ಇದೆ.
ಯಕ್ಷಗಾನದ ಹಿನ್ನೆಲೆಯಿಂದ ಬಂದಂತಹ ನಾನು, ನನ್ನ ಅಜ್ಜ ಅಪ್ಪ ಯಕ್ಷಗಾನಕ್ಕೆ ಕರೆದುಕೊಂಡು ಹೋದುದರಿಂದ ರಾಮಾಯಣ ಮಹಾಭಾರತದ ಬಗ್ಗೆ ತಿಳಿಯಿತು ಎಂದು ಹೆಮ್ಮೆಯಿಂದ ಹೇಳುತ್ತಾರೆ ಆಗ್ನೇಯ ಭಟ್ ಕ್ಯಾಸನೂರು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿಯನ್ನು ಹೇಗೆ ಮಾಡಿಕೊಳ್ಳುತ್ತೀರಿ:-
ಹೆಚ್ಚಿನ ಪೌರಾಣಿಕ ಪ್ರಸಂಗಗಳು ಕಂಠಸ್ಥದಲ್ಲೇ ಇರುವುದರಿಂದ ಹೆಚ್ಚಿನ ತಯಾರಿಯನ್ನು ನಾನು ಮಾಡಿಕೊಳ್ಳುವುದಿಲ್ಲ. ಅಂದ್ರೆ ಪ್ರದರ್ಶನಕ್ಕೆ ಹೋಗುವ ಮೊದಲು ಯಾವ ಪ್ರಸಂಗ, ಕಲಾವಿದರು ಯಾರು, ಸಹ ಕಲಾವಿದರು ಯಾರು, ಪ್ರಸಂಗದ ಬಗ್ಗೆ ತಿಳಿದುಕೊಂಡು, ಪ್ರಸಂಗದಲ್ಲಿ ಯಾವ ಯಾವ ಪಾತ್ರಗಳು ಬರುತ್ತವೆ, ಜೊತೆಗೆ ಯಾವ ಯಾವ ಪಾತ್ರಗಳಿಗೆ ಎಷ್ಟು ಪ್ರಾಮುಖ್ಯತೆ ಇದೆ, ಯಾರು ಯಾವ ರೀತಿಯಲ್ಲಿ ಕುಣಿಯಬಹುದು ಎಂದು ತಿಳಿದುಕೊಂಡು ಅದಕ್ಕೆ ಬೇಕಾದ ಸಿದ್ಧತೆಯನ್ನು ನಾನು ಮಾಡಿಕೊಳ್ಳುತ್ತೇನೆ. ಅಂದ್ರೆ ಮುಖ್ಯವಾಗಿ ಸಹ ಕಲಾವಿದರ ಮೇಲೆ ನಮ್ಮ ತಯಾರಿ ಮಾಡಿಕೊಂಡು ಪ್ರದರ್ಶನಕ್ಕೆ ಹೋಗುತ್ತೇನೆ. ಪ್ರಸಂಗದಲ್ಲಿ ಬರುವ ಸಂದರ್ಭಗಳು, ಯಾವ ಯಾವ ಪಾತ್ರಗಳು ಪ್ರಮುಖವಾಗಿವೆ, ಯಾವ ಪದ್ಯಗಳು ಪ್ರಾಮುಖ್ಯವಾಗಿವೆ ಎಂದು ತಿಳಿದುಕೊಂಡು ಪ್ರದರ್ಶನಕ್ಕೆ ಹೋಗುತ್ತೇನೆ.
ರಂಗದಲ್ಲಿ ಬರುವ ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಗೋಪಾಲ್ ಗಾಣಿಗ ಹಾಗೂ ಪ್ರಸನ್ನ ಭಟ್ ಬಾಳ್ಕಲ್ ನೆಚ್ಚಿನ ಭಾಗವತರು. ವೀರಮಣಿ, ರುದ್ರಕೋಪ, ಹನುಮಂತ ನೆಚ್ಚಿನ ವೇಷಗಳು. ಎನ್.ಜಿ. ಹೆಗಡೆ, ಸುನೀಲ ಭಂಡಾರಿ ಇವರ ನೆಚ್ಚಿನ ಮದ್ದಳೆ ವಾದಕರು; ರಾಕೇಶ್ ಮಲ್ಯ, ತಂದೆ ಅಶೋಕ ಭಟ್ ನೆಚ್ಚಿನ ಚೆಂಡೆ ವಾದಕರು.
ಯಕ್ಷಗಾನ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಈಗಿನ ಜನರ ಮನಸ್ಥಿತಿಯ ಪ್ರಕಾರ ಯಕ್ಷಗಾನದ ಮೌಲ್ಯ, ಯಕ್ಷಗಾನದಲ್ಲಿ ಇರುವಂತಹ ಸತ್ವ, ಇದು ಈಗಿನ ಜನರಿಗೆ ಯಾರಿಗೂ ಕೂಡ ಬೇಕಾಗಿಲ್ಲ. ಯಕ್ಷಗಾನದಿಂದ ಜನರು ಇಷ್ಟ ಪಡುತ್ತಿರುವುದು ಕೇವಲ ಮನರಂಜನೆ. ಅದರಲ್ಲೂ ಹೆಚ್ಚಾಗಿ ಸಿನಿಮಾ ಆಧಾರಿತ ಸಾಮಾಜಿಕ ಕಥೆಗಳು, ಅದರಲ್ಲೂ 8 ತಾಸು ಯಕ್ಷಗಾನ ಅಂತಾದರೆ 6 – 7 ತಾಸು ಹಾಸ್ಯವನ್ನೇ ಇಷ್ಟ ಪಡುವಂತಹ ಜನರು. ಇದು ಯಕ್ಷಗಾನಕ್ಕೆ ಮಾರಕವಾಗಿ ಬದಲಾಗ್ತಾ ಇದೆ. ಯಕ್ಷಗಾನದ ಅಂತಃಸತ್ವ ಏನಿದೆ, ಇದು ಈಗಿನ ಕಾಲದಲ್ಲಿ ಬರ್ತಾ ಇಲ್ಲ. ಜನರು ಆ ತರ ಇಷ್ಟಪಡುವ ತಪ್ಪೋ ಅಥವಾ ಕಲಾವಿದರು ಆ ರೀತಿ ಮಾಡುವುದಕ್ಕೆ ಜನರು ಇಷ್ಟ ಪಡುತ್ತಾರೆಯೋ ಗೊತ್ತಾಗುವುದಿಲ್ಲ. ಇದು ಬದಲಾಗಬೇಕು. ಜನರ ಮನಸ್ಥಿತಿಯೋ, ಅಥವಾ ಕಲಾವಿದರ ನಿರ್ವಹಣೆ ಬದಲಾದರೆ ತುಂಬಾ ಒಳ್ಳೆಯದು. ಮುಂಚೆ ಯಕ್ಷಗಾನ ಹೇಗಿತ್ತೋ ಅದು ಈಗಲೂ ಕೂಡ ಮುಂದುವರೆದರೆ ಯಕ್ಷಗಾನ ಅನ್ನುವಂತದ್ದು ಉಚ್ಛಾಯ ಸ್ಥಾನ ಪಡೆದು ಉನ್ನತ ಸ್ಥಿತಿಗೆ ಹೋಗುತ್ತದೆ. ಅನಂತರ ಈಗ ಯಕ್ಷಗಾನ ಕಲಾವಿದರು ಅಂತ ಯಾರು ಇರ್ತಾರೆ ಇವರೆಲ್ಲರಿಗೂ ಹಳೆಯ ನಡೆ ಇರಬಹುದು ಅಥವಾ ಹಳೆಯ ಮಟ್ಟುಗಳು ಇರಬಹುದು ಎಲ್ಲವೂ ಕೂಡ ಗೊತ್ತಿರುವ ಕಲಾವಿದರೇ ಇದ್ದಾರೆ. ಅವರು ಅದನ್ನು ಯಾಕೆ ಬಳಸಿಕೊಂಡು ಹೋಗುತ್ತಿಲ್ಲ ಅನ್ನುವಂತದ್ದು ಪ್ರಶ್ನಾರ್ಥಕ ಅಂತ ಹೇಳಬಹುದು, ಜೊತೆಗೆ ಅದನ್ನು ಅಕಸ್ಮಾತ್ ಈಗಿನ ಕಲಾವಿದರು ಅದನ್ನು ಮಾಡಿದರೆ ಪ್ರೇಕ್ಷಕರು ಅವನಿಗೆ ಏನೂ ಗೊತ್ತಿಲ್ಲ. ಇವ ಏನೋ ಮಾಡ್ತಿದ್ದಾನೆ ಅನ್ನುವಂತಹ ಭಾವನೆ ಪ್ರೇಕ್ಷಕರದ್ದು. ಯಕ್ಷಗಾನದಲ್ಲಿ ಆಗಿನ ಕಾಲದಿಂದಲೂ ಯಕ್ಷಗಾನವನ್ನು ಮಾಡಿಕೊಂಡು ಬಂದಂತಹ ಹಿರಿಯ ಕಲಾವಿದರುಗಳೆಲ್ಲಾ ಇದ್ದಾರೆ. ಈಗಲೂ ಕೂಡ ಮಾಡ್ತಿದ್ದಾರೆ. ಅವರು ಅದೇ ಪದ್ಧತಿಯನ್ನು ಅನುಸರಿಸಿಕೊಂಡು ಬಂದರೆ ಹಳೆಯ ಮಟ್ಟುಗಳು, ತಿಟ್ಟುಗಳನ್ನು ಅನುಸರಿಸಿಕೊಂಡು ಬರುವವರು ಇದ್ದಾರೆ. ಬಯಲಾಟ ಮೇಳ, ಟೆಂಟ್ ಮೇಳ ಅಂತ ಅಲ್ಲ. ಎಲ್ಲಾ ಮೇಳಗಳಲ್ಲಿ ಕೂಡ ಇದ್ದಾರೆ. ಆದರೆ ಅವರಿಗೆ ಏನಾಗ್ತಿದೆ ಅಂದರೆ ಸಿಗಬೇಕಾದ ಗೌರವಗಳು ಪುರಸ್ಕಾರಗಳು ಸಿಗುತ್ತಿಲ್ಲ. ಯಾಕಂದ್ರೆ ಈಗಿನ ಜನರ ಮನಸ್ಥಿತಿ ಅದೇ ರೀತಿ ಇರುವುದರಿಂದ ಅವರು ಆ ಹಳೆಯ ಮಟ್ಟುಗಳು ಮತ್ತು ತಿಟ್ಟುಗಳನ್ನು ಮಾಡಿಕೊಂಡು ಬಂದರೆ ಏನು ಗೊತ್ತಿಲ್ಲ ಅನ್ನುವ ರೀತಿಯಲ್ಲಿ ಭಾವನೆಯನ್ನು ಬಿತ್ತರಿಸುತ್ತಿದ್ದಾರೆ. ಇದು ಒಂಥರಾ ಬೇಸರದ ಸಂಗತಿ. ಯಕ್ಷಗಾನವನ್ನು ಸರಿಯಾಗಿ ಹೇಗಿದೆ ಅಂತ ಪರಿಚಯ ಇರುವಂತಹ ಜನರು ಕೂಡ ಇದ್ದಾರೆ. ಅಂತವರಿಗೆ ಇದು ಬೇಸರದ ಸಂಗತಿ. ಯಕ್ಷಗಾನದಲ್ಲಿ ಸಾಮಾಜಿಕ ಕಥೆಗಳಲ್ಲಿ ಒಳ್ಳೆಯ ನೀತಿಯನ್ನು ಕೊಡುವಂತಹ ಕಥೆಗಳು ಬಂದರೆ ಒಳ್ಳೆಯದು. ಅದರಲ್ಲಿ ಸಿನಿಮೀಯ ಮಾದರಿಯ ಹಾಡುಗಳನ್ನು ಬಳಸುವುದು ಒಳ್ಳೆಯದಲ್ಲ. ನಮ್ಮ ಭಾವನೆಯಲ್ಲಿ ಯಕ್ಷಗಾನ ಅಂದರೆ ಬೆಳಕಿನ ಸೇವೆ.
ಯಕ್ಷಗಾನದಲ್ಲಿ ನಿಮ್ಮ ಮುಂದಿನ ಯೋಜನೆ:-
ಪೌರಾಣಿಕ ಪ್ರಸಂಗ ಯಾವುದು ಪ್ರಚಲಿತದಲ್ಲಿ ಇಲ್ಲವೋ, ಅಥವಾ ಯಕ್ಷಗಾನ ರೂಪದಲ್ಲಿ ಯಾವ ಕಥೆ, ಪ್ರಸಂಗ ಇಲ್ಲವೋ ಅದನ್ನು ಪ್ರಸಂಗ ಬರೆಯಬೇಕು ಎಂಬ ಯೋಜನೆ ಇದೆ. ಜೊತೆಗೆ ಯಕ್ಷಗಾನವನ್ನು ಯಾವ ರೀತಿಯಾಗಿ ನಾವು ಕಾಪಾಡಬೇಕು ಎನ್ನುವುದರ ಬಗ್ಗೆ ತುಂಬಾ ಕಾಳಜಿ ಇರುವಂತಹ ಮನುಷ್ಯ ಆದುದರಿಂದ ಅದೇ ರೀತಿಯಲ್ಲಿ ಮುಂದೆ ಸಾಗುವಂತಹ ಯೋಜನೆ ಇದೆ. ಅಂದರೆ; ಯಕ್ಷಗಾನದ ಔಚಿತ್ಯತೆಯನ್ನು ಬಿಟ್ಟು ಅದರ ಹೊರಗಡೆ ಬಂದು ಯಾವುದೇ ರೀತಿಯ ವ್ಯವಹಾರವನ್ನು ನಾನು ಮಾಡಬಾರದು ಅನ್ನುವಂತಹ ನಿರ್ಧಾರವನ್ನು ಮಾಡಿಕೊಂಡಿದ್ದೇನೆ. ಯಕ್ಷಗಾನದಲ್ಲಿ ಬರುವಂತಹ ಹೊಸತನವನ್ನು ಬಳಸುವುದಕ್ಕೋಸ್ಕರ ಹಳೆತನವನ್ನು ಬಿಟ್ಟು ಮುಂದೆ ಹೋಗಬಾರದು. ಹಳೇತನವನ್ನು ಉಳಿಸಿಕೊಂಡು ಹೊಸತನವನ್ನು ಬೆಳೆಸಿಕೊಂಡು, ಹೊಸತನ ಹಳೆತನ ಎರಡನ್ನೂ ಸಾಮರಸ್ಯದಿಂದ ಮುಂದುವರೆಸಿಕೊಂಡು ಹೋಗಬೇಕು ಅನ್ನುವಂತಹ ನಿರ್ಧಾರ ಇದೆ.
ಯಕ್ಷಗಾನದ ಈಗಿನ ಸ್ಥಿತಿಗತಿ:-
ಸ್ಥಿತಿಗತಿಯನ್ನು ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಈಗ ತಾನೆ ಯಕ್ಷಗಾನ ರಂಗದಲ್ಲಿ ಕಾಣಿಸಿಕೊಳ್ಳುತ್ತಿರುವಂತಹ ವ್ಯಕ್ತಿ ನಾನು. ಜೊತೆಗೆ ಇಲ್ಲಿ ನಾನು ಹೇಳಿರುವುದೆಲ್ಲವೂ ನನ್ನ ಅಭಿಪ್ರಾಯ. ಯಾವ ವ್ಯಕ್ತಿ, ಮೇಳ, ಪ್ರಸಂಗಕರ್ಥರ ಬಗ್ಗೆ ಯಾವುದೇ ರೀತಿಯ ದ್ವೇಷ ಇಲ್ಲ, ಯಾರನ್ನು ಕೂಡ ವೈಯಕ್ತಿಕವಾಗಿ ಟಾರ್ಗೆಟ್ ಮಾಡಿ ಹೇಳಿರುವುದು ಅಲ್ಲ. ಸಾಮಾನ್ಯವಾಗಿ ಈಗಿನ ಯಕ್ಷಗಾನ ಹೇಗಿದೆ ಎಂದು ಯಕ್ಷಗಾನದ ಒಳ್ಳೆಯ ಅಭಿರುಚಿಯುಳ್ಳವನಾಗಿ, ಯಕ್ಷಗಾನದ ಒಳ್ಳೆಯ ಅಭಿಮಾನಿಯಾಗಿ, ಪ್ರೇಕ್ಷಕನಾಗಿ ವ್ಯಕ್ತಪಡಿಸುತ್ತೇನೆ.
ಯಕ್ಷಗಾನವನ್ನು ಪ್ರದರ್ಶನವನ್ನು ನೀಡುತ್ತಿರುವಂತಹ ನಾನು ಯಕ್ಷಗಾನದಲ್ಲಿ ಹಿರಿಯ ಕಲಾವಿದರಿರಬಹುದು ಕಿರಿಯ ಕಲಾವಿದರಿರಬಹುದು ಅವರಿಂದ ನಾನು ಏನನ್ನು ಕಲಿಯಬೇಕೊ ಅಥವಾ ಅವರಲ್ಲಿ ಯಾವುದೇ ಒಂದು ಅಂಶವನ್ನು ಕಲಿಯಲಿಕ್ಕಿದೆಯೋ ಎಂಬ ಅಂಶವನ್ನು ಕೂಡ ಹಿರಿಯವರಾಗಲಿ ಕಿರಿಯವರಾಗಲಿ ಅವರಿಂದ ಕೂಡ ಕಲಿತುಕೊಂಡು ನನ್ನ ತಪ್ಪನ್ನು ನಾನು ಒಪ್ಪಿಕೊಂಡು ಯಕ್ಷಗಾನ ಕ್ಷೇತ್ರದಲ್ಲಿ ಇನ್ನೂ ಉನ್ನತ ಮಟ್ಟದಲ್ಲಿ ಸಾಧನೆಯನ್ನು ಮಾಡುವಂತಹ ಮನಸ್ಥಿತಿಯನ್ನು ಹೊಂದಿದ್ದೇನೆ.
ಶೃಂಗೇರಿಯಲ್ಲಿ ಸಂಸ್ಕೃತ ಕಾಲೇಜ್ ನಲ್ಲಿ ಓದುವಾಗ ಎಲ್ಲಾ ಸಂಸ್ಕೃತ ಸೆಂಟ್ರಲ್ ಯೂನಿವರ್ಸಿಟಿ ಅಂಡರ್ ಬರುವಂತಹ 12 ಕಾಲೇಜುಗಳಲ್ಲಿ ನಾಟಕ ಸ್ಪರ್ಧೆ ಆಗುತ್ತಿತ್ತು. ಅದರಲ್ಲಿ ನಮ್ಮ ಕಾಲೇಜಿನಿಂದ 3 ವರ್ಷ ಕಾಲೇಜ್ ನಾಟಕದ ತಂಡದಲ್ಲಿ ಭಾಗವಹಿಸಿ ನ್ಯಾಷನಲ್ ಲೆವೆಲ್ ಡ್ರಾಮಾ ಸ್ಪರ್ಧೆಯಲ್ಲಿ ಭಾಗವಹಿಸಿ 2 ಸಲ ಪ್ರೈಜ್ ಪಡೆದುಕೊಂಡಿದ್ದೇನೆ. ದೆಹಲಿಯಲ್ಲಿ ನಡೆದಂತಹ ಸ್ಪರ್ಧೆ ಹಾಗೂ ಕೆಲವೊಂದು ಯಕ್ಷಗಾನ ಪ್ರದರ್ಶನಗಳಿಗೆ ಹೋದಾಗ ಗೌರವಾಭಿನಂದನೆ ಸಲ್ಲಿಸಿರುತ್ತಾರೆ.
ಹಟ್ಟಿಯಂಗಡಿ, ಸೀತೂರು ಮೇಳ, ಕಾರಣಗಿರಿ, ಅಲಸೆ ಮೇಳದಲ್ಲಿ ತಿರುಗಾಟ ಮಾಡಿದ ಅನುಭವ ಹಾಗೂ ಬೆಂಗಳೂರಿನ ಎಲ್ಲಾ ಯಕ್ಷಗಾನ ತಂಡಗಳಲ್ಲಿ ಭಾಗವಹಿಸಿರುತ್ತಾರೆ. ಹಾಡುಗಾರಿಕೆ, ತಬಲಾ, ಯಕ್ಷಗಾನ ಹೇಳಿಕೊಡುವುದು, ಚೆಂಡೆ ಹಾಗೂ ಮದ್ದಳೆ ನುಡಿಸುವುದು ಇವರ ಹವ್ಯಾಸಗಳು.
ಆಗ್ನೇಯ ಭಟ್ ಕ್ಯಾಸನೂರು ಅವರು 14.12.2022 ರಂದು ಶೃತಿ ಭಟ್ ಬೇಗಾರ್ ಅವರನ್ನು ಮದುವೆಯಾಗಿ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು