ವೃತ್ತಿಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕ, ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದರಾಗಿ ಮಿಂಚುತ್ತಿರುವವರು ವಾಸುದೇವ.
ಉಡುಪಿ ಜಿಲ್ಲೆಯ ಪಡುಬಿದ್ರಿಯ ದಿ.ಸುಬ್ಬರಾವ್ ಮತ್ತು ದಿ.ರೇವತಿ ಇವರ ಮಗನಾಗಿ 10.02.1977ರಂದು ಜನನ.
ವಿದ್ಯಾಭ್ಯಾಸ:
ಕಳತ್ತೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಅಭ್ಯಾಸ. ಶಿರ್ವದ ಸಂತ ಮೇರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲೆ ಮತ್ತು ವಿಜ್ಞಾನ ವಿಭಾಗದಲ್ಲಿ ಪದವಿಪೂರ್ವ ಅಧ್ಯಯನ, ಉಡುಪಿಯ ಮಹಾತ್ಮ ಗಾಂಧಿ ಸ್ಮಾರಕ ಮಹಾವಿದ್ಯಾಲಯದಲ್ಲಿ ಬಿ.ಎಸ್ ಸಿ, ಕರ್ನಾಟಕ ಪ್ರಾದೇಶಿಕ ತಾಂತ್ರಿಕ ವಿದ್ಯಾಲಯ (ಕೆ ಆರ್ ಈ ಸಿ) ಮತ್ತು ಮಂಗಳೂರು ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿ, ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ(ಎನ್.ಐ.ಟಿ.ಕೆ)ದಿಂದ ಗಣಿತ ಮತ್ತು ಗಣಕಶಾಸ್ತ್ರದಲ್ಲಿ ಪಿ ಹೆಚ್ ಡಿ ಪದವಿ. ಪ್ರಸ್ತುತ ನಿಟ್ಟೆಯ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕ.
ಯಕ್ಷಗಾನ ಗುರುಗಳು:
ಬಾಲಪಾಠ ಕಳತ್ತೂರಿನ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಮಂಡಳಿಯ ವಾರದ ತಾಳಮದ್ದಲೆ ಮತ್ತು ವಾರ್ಷಿಕ ಬಯಲಾಟಗಳಲ್ಲಿ ಭಾಗವಹಿಸುತ್ತ ಕಲಿತದ್ದು. ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಶ್ರೀಕರಯ್ಯನವರಿಂದ ಉಳಿದಂತೆ ಯಕ್ಷಗಾನ ನೋಡಿ ಕಲಿತದ್ದೆ ಜಾಸ್ತಿ. ಪಾತ್ರಕ್ಕೆ ಬೇಕಾದಷ್ಟು ಕಲಿಯುತ್ತ ಬಂದು ಸುಧಾರಿಸುತ್ತ ಬಂದದ್ದು. ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಶ್ರೀ ಬನ್ನಂಜೆ ಸಂಜೀವ ಸುವರ್ಣರಿಂದ ಬಡಗಿನ ಬಾಲ ಪಾಠ (ಪದವಿ ವಿದ್ಯಾಭ್ಯಾಸ ಕಾಲಕ್ಕೆ ವಾರ್ಷಿಕೋತ್ಸವದ ಯಕ್ಷಗಾನದಲ್ಲಿ ನಿರ್ವಹಿಸಿದ ಪಾತ್ರಕ್ಕೆ ಬೇಕಷ್ಟು).
ಯಕ್ಷಗಾನ ಅದರ ಬಹುಮುಖಿ ಸಾಧ್ಯತೆಗಳು, ಒಂದೆ ರಂಗದಲ್ಲಿ ಬಹು ಆಯಾಮಗಳ ಕಲಾಭಿವ್ಯಕ್ತಿಯ (ಗಾಯನ, ನರ್ತನ, ಅಭಿನಯ, ವೇಷಗಾರಿಕೆ, ಮಾತುಗಾರಿಕೆ, ಮುಖವರ್ಣಿಕೆ ಇತ್ಯಾದಿ) ವಿಸ್ತಾರ ಈ ಕಲೆಯತ್ತ ಎಳೆಯಿತು. ತಂದೆ ತಾಯಿ ಅಣ್ಣಂದಿರ (ಮುಖ್ಯವಾಗಿ ನೋಡುವ) ಯಕ್ಷಗಾನಾಸಕ್ತಿಯೂ ಪೂರಕವಾಯಿತು.
ನೆಚ್ಚಿನ ಪ್ರಸಂಗಗಳು:
ಮೂಲ ರಾಮಾಯಣ, ಮಹಾಭಾರತ, ಭಾಗವತ ಮತ್ತಿತರ ಪುರಾಣಗಳ ಆಧಾರಿತ ಪ್ರಸಂಗಗಳು. ನವರಸಗಳ ಅಭಿವ್ಯಕ್ತಿಗೆ ಆಸ್ಪದವಿರುವ ಪ್ರಸಂಗಗಳು.
ನೆಚ್ಚಿನ ವೇಷಗಳು:
ಮೊದಲು ಬಣ್ಣಹಚ್ಚಿದ್ದು ಒಂದನೇ ತರಗತಿಯಲ್ಲಿದ್ದಾಗ ಪಾಂಚಜನ್ಯ ಪ್ರಸಂಗದಲ್ಲಿ ಸಾಂದೀಪನಿ ಮುನಿಗಳ ಮಗನಾಗಿ ಮೊದಲ ಪರಿಪೂರ್ಣ ಮಟ್ಟದ ವೇಷವಾಗಿ. ಮಿತವಾದ ನೃತ್ಯ, ಮಾತಿಗೆ ಆಸ್ಪದವಿರುವ ವೇಷಗಳು. ಕಿರೀಟ ವೇಷಗಳಲ್ಲಿ ಆಸಕ್ತಿ ಹೆಚ್ಚು. ಮೊದಲು ಪರಿಪೂರ್ಣ ಮಟ್ಡದ ವೇಷವಾಗಿ ನಿರ್ವಹಿಸಿದ್ದು ನಾಲ್ಕನೇ ತರಗತಿಯಲ್ಲಿರುವಾಗ ಸುಧನ್ವ ಮೋಕ್ಷದ ಪ್ರಭಾವತಿ. ಸ್ತ್ರೀ ವೇಷ ಅದೇ ಮೊದಲು ಅದೇ ಕೊನೆ. ಮೆಚ್ಚಿನ ವೇಷಗಳು ಪರಂಪರೆಯ ಹನುಮಂತ, ದೇವೇಂದ್ರ, ಈಶ್ವರ, ಲೋಹಿತನೇತ್ರ, ಕೌರವ, ರಕ್ತಬೀಜ, ಶಿಶುಪಾಲ ಇತ್ಯಾದಿ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:
ಮುಖ್ಯವಾಗಿ ಪಾತ್ರದ ಅಧ್ಯಯನ (ಮೂಲ ಕಥೆಯಲ್ಲಿ ಬರುವಂತೆ), ಸ್ವಭಾವದ ತಿಳುವಳಿಕೆ ಅದಕ್ಕೆ ಪೂರಕವಾಗಿ ಸಂಭಾಷಣೆಯ ಸಿದ್ಧತೆ, ಆಟದ ಮೊದಲು ಭಾಗವತರೊಂದಿಗೆ ಕುಳಿತು ರಂಗನಡೆಯ ಮಾಹಿತಿ (ಒಂದು ಪಾತ್ರವನ್ನು ಎಷ್ಟೆ ಸಲ ಮಾಡಿರಲಿ, ಭಾಗವತರ ನಿರ್ದೇಶನದಂತೆಯೇ ನನ್ನ ರಂಗನಡೆ), ಪದ್ಯಗಳ ಮಾಹಿತಿ (ಅವರು ಹೇಳಿದಷ್ಟಕ್ಕೆ ನನ್ನ ನಿರ್ವಹಣೆ. ಅವರಾಗಿ ಕೇಳಿದರೆ ಒಂದೆರಡು ಹೆಚ್ಚು ಕೇಳುವುದುಂಟು). ನನ್ನ ಎದುರು/ಸಹ ಪಾತ್ರಧಾರಿಗಳ ಜತೆಯೂ ಚರ್ಚಿಸುತ್ತೇನೆ, ಪಾತ್ರ ನಿರ್ವಹಣೆ ಉತ್ತಮವಾಗುವುದಕ್ಕೆ ನನ್ನ ಜತೆ ಉಳಿದವರ ಪಾತ್ರವೂ ಸಮಸಮವಾಗಿರುತ್ತದೆ ಅನ್ನುವುದು ನನ್ನ ನಂಬಿಕೆ. ಪಾತ್ರದ ಪ್ರವೇಶಕ್ಕೆ ಕನಿಷ್ಟ ಪಕ್ಷ ೧೦ ನಿಮಿಷ ಮೊದಲು ವೇಷ ತಯಾರಾಗುವ ಹಾಗೆ ಸಿದ್ಧನಾಗ್ತೇನೆ. ಹವ್ಯಾಸಿಯಾಗಿ ಆಟ ಸುರುವಾಗುವ ಮೊದಲೇ ಚೌಕಿಯಲ್ಲಿ ಇರುವುದಕ್ಕೆ ನನ್ನ ಆದ್ಯತೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:
ಕಾಲಮಿತಿ ಎಲ್ಲದಕ್ಕೂ ಮಿತಿ ಹೇರುತ್ತಿದೆಯೆಂದು ಕಂಡರೂ ಕೆಲವೊಂದು ಮಿತಿ ಮೀರುತ್ತಿವೆ (ಅತಿಯಾದ ಕುಣಿತ, ಸಂದರ್ಭದ ಔಚಿತ್ಯದ ನಿರ್ಲಕ್ಷ್ಯ, ಅನುಚಿತ ಹಾಸ್ಯ ಇತ್ಯಾದಿ). ಯಕ್ಷಗಾನದ ವೈಶಿಷ್ಟ್ಯಗಳು ಕಣ್ಮರೆಯಾಗುತ್ತಿವೆ. ಬಯಲಾಟಗಳ ಸಮಷ್ಟಿ ಪ್ರದರ್ಶನಗಳಾಗಿ ರಂಜಿಸುವ ಬದಲು ವ್ಯಕ್ತಿ ಕೇಂದ್ರಿತವಾಗುತ್ತಿವೆ. ಅಧ್ಯಯನದ ಕೊರತೆ ಕಾಣಿಸುತ್ತಿದೆ. ಯಕ್ಷಗಾನ ಕಲಿಯುತ್ತಿರುವವರ, ಕಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಸಂತೋಷವಿದೆ. ಆದರೆ ಹಾಡು ಕುಣಿತ ಹೆಚ್ಚಾಗಿ, ಮಾತು ಕಡಿಮೆಯಾಗುತ್ತಿದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:
ಯಕ್ಷಾಭಿಮಾನಿಗಳಿಗಿಂತ ಕಲಾವಿದರ ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ. ನೆಚ್ಚಿನ ಕಲಾವಿದರ ಅಸಂಬದ್ಧಗಳನ್ನೂ ಮೆಚ್ಚುವವರಿದ್ದಾರೆ. ಸಣ್ಣ ವಿಡಿಯೊಗಳನ್ನು ನೋಡಿ ಇಡೀ ಪ್ರಸಂಗ ವಿಮರ್ಶಿಸುವವರ ಸಂಖ್ಯೆ ಬೆಳೆಯುತ್ತಿದೆ. ಅನೌಚಿತ್ಯವನ್ನು ಸಿಳ್ಳೆ ಹೊಡೆದು ಅಭಿನಂದಿಸುವ ಚಾಳಿ ಕಲೆಯ ಮತ್ತು ಕಲಾವಿದನ ಪ್ರಗತಿಗೆ ಮಾರಕವೆ. ಯಕ್ಷಗಾನ ನೋಡುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಪೂರ್ತಿ ಗಮನಿಸಿ ನೋಡುವವರ ಸಂಖ್ಯೆ ಕಡಿಮೆಯಾಗುತ್ತಿದೆ.
ಯಕ್ಷರಂಗದಲ್ಲಿ ಮುಂದಿನ ಯೋಜನೆ:
ಸಾಧ್ಯವಾದಷ್ಟು ಕಾಲ ಗೆಜ್ಜೆ ಕಟ್ಟಿ ಕುಣಿವ ಹಂಬಲವಿದೆ. ವೃತ್ತಿಗೆ ಬದ್ಧತೆ ಮೊದಲ ಆದ್ಯತೆ. ವೃತ್ತಿ ಬದುಕಿಗೆ ರಜೆ ಹಾಕಿ ಯಕ್ಷಗಾನದಲ್ಲಿ ಭಾಗವಹಿಸುವ ಆದ್ಯತೆ ಖಂಡಿತ ಇಲ್ಲ. ಯಕ್ಷಗಾನಕ್ಕೆ ನಾನು ಅನಿವಾರ್ಯ ಅಲ್ಲ. ಅಂಥ ಸಾಧಕನೂ ಅಲ್ಲ ಅನ್ನುವ ಪ್ರಜ್ಞೆ, ಅರಿವು ನನಗಿದೆ. ಅವಕಾಶವಿದ್ದಾಗ ಯಕ್ಷಗಾನ ನೋಡುವ, ಮಾಡುವ ಪ್ರವೃತ್ತಿ ಖಂಡಿತ ಮುಂದುವರೆಸುವೆ. ಉಡುಪಿಯ ಯಕ್ಷಗಾನ ಕಲಾರಂಗದ ಸದಸ್ಯನಾಗಿ ಯಕ್ಷಗಾನಕ್ಕೆ ನನ್ನಿಂದಾಗುವ ಸೇವೆ ಸಲ್ಲಿಸುವ ಬಯಕೆಯಿದೆ.
ಅಧ್ಯಯನ, ಕನ್ಟಡ ಸಾಹಿತ್ಯ ಅಧ್ಯಯನ ಮತ್ತು ಬರವಣಿಗೆ, ಉಳಿದಂತೆ ನನ್ನ ವೃತ್ತಿಗೆ ಸಂಬಂಧಪಟ್ಡಂತೆ ಸಂಶೋಧನೆ ಇತ್ಯಾದಿ ಇವರ ಹವ್ಯಾಸಗಳು.
ವಾಸುದೇವ ಅವರು 11.02.2008ರಂದು ಪ್ರೇಮಲತಾ ಅವರನ್ನು ಮದುವೆಯಾಗಿ ಮಗಳು ಸಂಹಿತಾ, ಮಗ ಸಮೀಹನ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ. ತಂದೆ, ತಾಯಿ, ತಮ್ಮ ಹಾಗೂ ಪತ್ನಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ವಾಸುದೇವ.
ಶ್ರವಣ್ ಕಾರಂತ್ ಕೆ.
ಶಕ್ತಿನಗರ, ಮಂಗಳೂರು