ಜೀವನದ 56 ವಸಂತಗಳಲ್ಲಿ 44 ವರ್ಷ ಯಕ್ಷಗಾನದ ವೀರ ವಾದ್ಯವೆನಿಸಿದ ಚಂಡೆಯ ನುಡಿಸಾಣಿಕೆಯಲ್ಲಿ ನೈಪುಣ್ಯತೆಯನ್ನು ಸಾಧಿಸಿ ಚಂಡೆಯ ಗಂಡುಗಲಿ ಎಂದು ಖ್ಯಾತನಾಮರಾದವರು ಕೋಟ ಶಿವಾನಂದ. ಕೋಟದ ದಿ| ರಾಮಕೃಷ್ಣ ಮೆರಟ ಮತ್ತು ಜಲಜಾಕ್ಷಮ್ಮನ ಪುತ್ರನಾಗಿ 01-06-1967ರಲ್ಲಿ ಜನಿಸಿದ ಇವರು ಗಿಳಿಯಾರು ಶಾಂಭವಿ ಶಾಲೆಯಲ್ಲಿ 7ನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಮಾಡಿದವರು.
ಅಮೃತೇಶ್ವರಿ ಮೇಳಕ್ಕೆ ಬಾಲಗೋಪಾಲ ವೇಷಧಾರಿಯಾಗಿ ಆಯ್ಕೆ ಮಾಡಿ ಅಂದಿನ ಭಾಗವತ ನಾರಣಪ್ಪ ಉಪ್ಪೂರರ ಮಾರ್ಗದರ್ಶನದಲ್ಲಿ 4ವರ್ಷ ವೃತ್ತಿ ಮೇಳದ ತಿರುಗಾಟ ಮಾಡಿದ ಶಿವಣ್ಣ ಚಂಡೆ ವಾದನದ ಗೀಳನ್ನು ಹತ್ತಿಸಿಕೊಂಡು ಮನೆಯಲ್ಲಿ ಡಬ್ಬವನ್ನು ಬಾರಿಸುತ್ತ ಗುರುವಿಲ್ಲದೆ ಚಂಡೆವಾದಕರಾದರು. ಮನೆಯ ಪಕ್ಕದ ಹಿರೇ ಮಹಾಲಿಂಗೇಶ್ವರ ದೇವಸ್ಥಾನದಲ್ಲಿದ್ದ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಪ್ರೋತ್ಸಾಹವು ಶಿವಣ್ಣರ ಕಲಿಕೆಗೆ ಪ್ರೇರಣೆಯಾಯಿತು. ಹಿರೇ ಮಹಾಲಿಂಗೇಶ್ವರ ಮತ್ತು ಪಂಚಲಿಂಗೇಶ್ವರ ಮೇಳಕ್ಕೆ ಚಂಡೆ ವಾದಕರಾಗಿ ಸೇರ್ಪಡೆಗೊಂಡು ಬಳಿಕ ಕಾಳಿಂಗ ನಾವಡರಿಂದ ಆಹ್ವಾನ, ಸಾಲಿಗ್ರಾಮ ಮೇಳಕ್ಕೆ ಸೇರ್ಪಡೆ. ಅಲ್ಲಿ ಹೊಳೆಗದ್ದೆ ದುರ್ಗಪ್ಪ ಗುಡಿಗಾರ ಮತ್ತು ಮಂದಾರ್ತಿ ರಾಮಕೃಷ್ಣರ ಸಾಮಿಪ್ಯದಲ್ಲಿ ಪರಿಪೂರ್ಣ ಚಂಡೆ ವಾದಕರಾಗಿ ರೂಪುಗೊಂಡ ಶಿವಾನಂದರು ಮುಂದೆ ಸಾಲಿಗ್ರಾಮ ಮೇಳದ ಪ್ರಧಾನ ಚಂಡೆವಾದಕರಾದರು.
ದಿ.ನಾರಣಪ್ಪ ಉಪ್ಪೂರರು, ದಿ.ನೆಬ್ಬೂರು ನಾರಾಯಣ ಭಾಗವತರು, ದಿ.ಕಾಳಿಂಗ ನಾವಡರು, ಧಾರೇಶ್ವರರು, ಕೆ.ಪಿ ಹೆಗಡೆ, ಹಾಲಾಡಿ ರಾಘವೇಂದ್ರ ಮಯ್ಯ ನೆಚ್ಚಿನ ಭಾಗವತರು.
ನೆಚ್ಚಿನ ಚೆಂಡೆ ಹಾಗೂ ಮದ್ದಲೆ ವಾದಕರು:-
ಚೆಂಡೆಗಾರರು:-ಕೆಮ್ಮಣ್ಣು ಆನಂದ, ರಾಮಕೃಷ್ಣ ಮಂದಾರ್ತಿ, ಹೊಳೆಗದ್ದೆ ಗಜಾನನ ಭಂಡಾರಿ, ರಾಕೇಶ್ ಮಲ್ಯ.
ಮದ್ದಳೆವಾದಕರು:-ದುರ್ಗಪ್ಪ ಗುಡಿಗಾರರು, ಶಂಕರ ಭಾಗವತರು, ಪ್ರಭಾಕರ ಭಂಡಾರರು.
ಎಲ್ಲಾ ಹಳೆಯ ಪ್ರಸಂಗಗಳು, ಕಾಲ್ಪನಿಕ ಪ್ರಸಂಗಗಳಲ್ಲಿ ಧರ್ಮಸಂಕ್ರಾಂತಿ, ಮೇಘ ಮಯೂರಿ, ಶೃಂಗ ಸಾರಂಗ, ಚೈತ್ರ ಪಲ್ಲವಿ, ಚಂದ್ರಮುಖಿ ಸೂರ್ಯಸಖಿ, ಕಸ್ತೂರಿ ತಿಲಕ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ಮೊದಲಿಗಿಂತ ಹೆಚ್ಚು ಅಭಿವೃದ್ಧಿಯೂ ಆಗಿದೆ, ಜೊತೆಗೆ ಕೆಲ ಅಸಂಬದ್ಧತೆಗಳೂ ಅಲ್ಲಲ್ಲಿ ನುಸುಳಿವೆ. ಅವುಗಳನ್ನು ಹೊರತುಪಡಿಸಿ ಯಕ್ಷಗಾನ ಸುಧಾರಿಸಿದೆ ಹಾಗೂ ಹೊರರಾಜ್ಯ ರಾಷ್ಟ್ರಗಳಲ್ಲೂ ಪ್ರಸಿದ್ಧಿಪಡೆದಿದೆ. ಅದೆಷ್ಟೋ ಇನ್ನು ಪೌರಾಣಿಕ ಪ್ರಸಂಗಗಳಿವೆ. ಅವುಗಳು ಹಲವಾರು ಬೆಳಕಿಗೆ ಬರದೇ ಉಳಿದಿವೆ, ಅವುಗಳನ್ನು ಪ್ರದರ್ಶಿಸುತ್ತಿಲ್ಲ, ಪ್ರದರ್ಶಿಸಿದ ಪ್ರಸಂಗಗಳನ್ನೇ ಅತಿಯಾಗಿ ಪ್ರದರ್ಶಿಸುತ್ತಿದ್ದಾರೆ. ಬೆಳಕಿಗೆ ಬರದ ಪ್ರಸಂಗಗಳ ಪ್ರದರ್ಶನವೂ ಆಗಬೇಕು. ಕಲೆಗೆ ಅದರದ್ದೇ ಚೌಕಟ್ಟಿದೆ. ಕಲೆಯ ಮೂಲ ಸೌಂದರ್ಯಕ್ಕೆ ಹಾನಿಯಾಗದಂತೆ ಪ್ರದರ್ಶನ ಉಚಿತ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- ಕಲೆಯ ಬೆಳವಣಿಗೆ ಹಾಗೂ ಉಳಿವಿಗೆ ಪ್ರೇಕ್ಷಕರು ಅಗತ್ಯ. ಆ ನಿಟ್ಟಿನಲ್ಲಿ ಯಕ್ಷಗಾನಕ್ಕೀಗ ಎಲ್ಲಾ ವರ್ಗದ ಪ್ರೇಕ್ಷಕರಿದ್ದಾರೆ. ಯುವಜನತೆ ಯಕ್ಷಗಾನದತ್ತ ಆಸಕ್ತಿ ತೋರುತ್ತಿರುವುದು ನೋಡಿದರೆ ಯಕ್ಷಗಾನ ಅಳಿವಿರದ ಕಲೆ ಎಂಬುದು ಖಚಿತವಾಗುತ್ತದೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು:-
ಮಳೆಗಾಲದಲ್ಲಿ ಬಡಗಿನ ಚೆಂಡೆ ಕಲಿಯಲು ಆಸಕ್ತಿ ಇರುವವರಿಗೆ ನನ್ನ ‘ನಾದಾಮೃತ’ ಸಂಸ್ಥೆಯ ಮುಖೇನ ಚೆಂಡೆ ಕಲಿಕೆಯ ತರಬೇತಿ ನೀಡಲು ಪ್ರಾರಂಭಿಸಿ ೨ ವರ್ಷಗಳಾಯ್ತು. ಅದನ್ನು ಮುಂದುವರೆಸಿಕೊಂಡು ಹೋಗಬೇಕೆಂಬ ಆಸೆಯಿದೆ.
ಸನ್ಮಾನ ಹಾಗೂ ಪ್ರಶಸ್ತಿ:-
ದೆಹಲಿಯ ಪೂಲ್ವೋಲೋಂಕಿ ಸೈರ್,
ಜನಪದ ದತ್ತಿನಿಧಿ ಪ್ರಶಸ್ತಿ,
ಶಾಂತಾರಾಮ ಪ್ರಶಸ್ತಿ,
ಮಹಾಬಲ ಕಾರಂತ ಪ್ರಶಸ್ತಿ,
ಅಶ್ವಿನೀ ಸ್ಮಾರಕ ಪ್ರಶಸ್ತಿ,
ಯಕ್ಷಸೌರಭ ಪ್ರಶಸ್ತಿ,
ಯಕ್ಷರಾಜ ಪ್ರಶಸ್ತಿ ಹೀಗೆ ದೇಶ-ವಿದೇಶಗಳಲ್ಲಿ ಹಲವಾರು ಸನ್ಮಾನ ಪ್ರಶಸ್ತಿಗಳು ಕೋಟ ಶಿವಾನಂದ ಅವರಿಗೆ ಸಿಕ್ಕಿರುತ್ತದೆ.
ದಿನಪತ್ರಿಕೆ ಓದುವುದು, ಕಿರುತೆರೆ, ಹಿರಿತೆರೆ ನಟನೆಯ ಆಸಕ್ತಿ ಇವರ ಹವ್ಯಾಸಗಳು.
ಅಮೃತೇಶ್ವರಿ ಮೇಳ, ಪಂಚಲಿಂಗೇಶ್ವರ, ಹಿರೇಮಹಾಲಿಂಗೇಶ್ವರ, ಸೌಕೂರು ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಸಾಲಿಗ್ರಾಮ ಮೇಳದಲ್ಲಿ ತಿರುಗಾಟವನ್ನು ಮಾಡುತ್ತಿದ್ದಾರೆ.
ಕೋಟ ಶಿವಾನಂದ ಅವರು 18.04.1994 ರಂದು ಸುರೇಖಾ ಇವರನ್ನು ಮದುವೆಯಾಗಿ ಮಗಳು ಸಂಧ್ಯಾ ಹಾಗೂ ಶಶಿಧರ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು