ಶಶಿಧರ ಕೋಟೆಯವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಕಳಂಜ ಗ್ರಾಮದ ಕೋಟೆ ವಸಂತ ಕುಮಾರ್ ಹಾಗೂ ಶ್ರೀಮತಿ ಪಾರ್ವತಿ ವಸಂತ ಕುಮಾರ್ ಇವರ ಸುಪುತ್ರ. 21.08.1965ರಂದು ಜನಿಸಿದ ಇವರು ಎಂ.ಎ ಇಂಗ್ಲಿಷ್ ಪದವಿ ಪಡೆದು, 4 ವರ್ಷ ಉಪನ್ಯಾಸ ಸೇವೆಯನ್ನು ಸಲ್ಲಿಸಿ ಸಂಗೀತದ ಮೇಲಿನ ಪ್ರೀತಿಯಿಂದ ಉಪನ್ಯಾಸಕ ಸೇವೆಯನ್ನು ಬಿಟ್ಟು 1992ರಲ್ಲಿ ಸಂಗೀತ ಕ್ಷೇತ್ರದ ಹೆಚ್ಚಿನ ಸಾಧನೆಗೆ ಬೆಂಗಳೂರಿಗೆ ಆಗಮಿಸಿದರು.
ಶಶಿಧರ್ ಕೋಟೆಯವರು ಬಾಲಮುರಳಿ ಹಾಗೂ ಜೇಸುದಾಸ್ ಇವರಿಬ್ಬರ ಅಭಿಮಾನಿ ಹಾಗೂ ಇಬ್ಬರೂ ನನಗೆ ಮಾನಸ ಗುರುಗಳು ಇದ್ದ ಹಾಗೆ ಮತ್ತು ಇಬ್ಬರನ್ನೂ ನಾನು ಆರಾಧನೆ ಮಾಡುತ್ತೇನೆ ಎಂದು ಹೇಳುತ್ತಾರೆ.
ಸಂಗೀತ ಕ್ಷೇತ್ರದಲ್ಲಿ 30 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿರುವ ಕೋಟೆಯವರು. ಪೂರ್ಣಾವಧಿ ಗಾಯಕರಾಗಿ 5000ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಬರಹಗಾರನಾಗಿ, ಕಿರುತೆರೆ ನಿರೂಪಕನಾಗಿ, ನಟನಾಗಿ, ಚಲನಚಿತ್ರಗಳಲ್ಲಿ ಅಭಿನಯಿಸಿದ ಖ್ಯಾತಿ ಇವರದ್ದು. ದೂರದರ್ಶನ, ಆಕಾಶವಾಣಿ ಹಾಗೂ ಅನೇಕ ಧ್ವನಿ ಸುರುಳಿಗಳಲ್ಲಿ ಹಾಡಿದ ಅನುಭವಿ. ಬಾಲ್ಯದಿಂದಲೂ ಸಂಗೀತ, ಯಕ್ಷಗಾನ, ಸಾಹಿತ್ಯ, ಚದುರಂಗ ಇತ್ಯಾದಿ ಚಟುವಟಿಕೆಯಲ್ಲಿ ಬಹುಮುಖ ಪ್ರತಿಭೆ ಹಾಗೂ ಅನೇಕ ಪ್ರಶಸ್ತಿ ವಿಜೇತರು.
ಆನಂದ ಭೈರವಿ, ಹಿಂದೋಳ, ಮೋಹನ, ಕಲ್ಯಾಣಿ, ರೇವತಿ, ಕಲ್ಯಾಣ ವಸಂತ, ಕಾನಡ, ಮಧ್ಯಮಾವತಿ, ಸಿಂಹೇಂದ್ರ ಮಧ್ಯಮ, ಹಂಸಧ್ವನಿ, ಹಂಸಾನಂದಿ, ಶಿವರಂಜಿನಿ, ಕರ್ಣ ರಂಜಿನಿ, ಚಂದ್ರಕೌನ್ಸ್, ಖರಹರಪ್ರಿಯ, ವಾಸಂತಿ, ಹಂಸಾನಂದಿ, ವಾಗಧೀಶ್ವರಿ, ನಾಸಿಕ ಭೂಷಿಣಿ, ದುರ್ಗಾ ರಾಗ, ದೇಶ್ ರಾಗ, ವೃಂದಾವನ ಸಾರಂಗ ಇತ್ಯಾದಿ ನೆಚ್ಚಿನ ರಾಗಗಳು.
ಯಾವ ರೀತಿಯ ಹಾಡು ಹಾಡುವುದೆಂದರೆ ನಿಮಗೆ ಇಷ್ಟ:-
ನನಗೆ ಮೂಲತಃ ಸಂಗೀತ ಸಪ್ತ ಸ್ವರಗಳ ಲೋಕ. ಅದು ಸಪ್ತಸ್ವರ ಇದ್ದದ್ದು 12 ಸ್ವರಗಳಾಗುತ್ತವೆ. ಶಾಸ್ತ್ರೀಯ, ಸುಗಮ ಸಂಗೀತ, ಚಿತ್ರಗೀತೆಗಳು, ಯಕ್ಷಗಾನದ ಹಾಡುಗಳು, ಜಾನಪದ ಹಾಡುಗಳು ಎಲ್ಲವೂ ಇಷ್ಟ. ಶ್ರುತಿ, ರಾಗ, ಭಾವ ಎಲ್ಲವೂ ಇರುವ ಹಾಡು ಇಷ್ಟ. ಅಂತಹ ಹಾಡುಗಳು ನೆನಪಿನಲ್ಲಿ ಇರುತ್ತವೆ. ಇಂತಹ ಎಲ್ಲಾ ಪ್ರಕಾರಗಳು ನನಗೆ ಇಷ್ಟ. ಜೊತೆಗೆ ಭಕ್ತಿ ಸಂಗೀತದ ಕಡೆಗೆ ಹೆಚ್ಚು ಒಲವು. ಅದು ಕೊಡುವ ಸಂತೋಷ ಬೇರೆ ಯಾವ ಪ್ರಕಾರಗಳೂ ಕೊಡುವುದಿಲ್ಲ. ದಾಸವಾಣಿ, ವಚನ, ಭಕ್ತಿಗೀತೆಗಳಲ್ಲಿ ದೇವರ ಜೊತೆ ಮಾತನಾಡುವ ಹಾಗೆ ಅನಿಸುತ್ತದೆ..
ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತಕ್ಕೆ ಇರುವ ವ್ಯತ್ಯಾಸ:-
ಮೂಲ ಎರಡೂ ನಾದೋಪಾಸನೆಯೇ. ಯಾವುದೇ ಸಂಗೀತವನ್ನು ಭಕ್ತಿಯಿಂದ ಸಮರ್ಪಣೆ ಮಾಡಿದಾಗ ಅದು ಉಪಾಸನೆ. “Music is always Divine”. ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಇರಬಹುದು ಅಥವಾ ಬೇರೆ ಯಾವುದೇ ಪ್ರಕಾರಗಳಿರಬಹುದು ಅದು ಉಪಾಸನೆ.. ಪೂಜೆ…
ಶಾಸ್ತ್ರೀಯ ಸಂಗೀತದಲ್ಲಿ ರಾಗಕ್ಕೆ ಹೆಚ್ಚು ಪ್ರಾಶಸ್ತ್ಯ. ಶಾಸ್ತ್ರೀಯ ಸಂಗೀತದಲ್ಲಿ ಸಾಹಿತ್ಯ ಕೂಡಾ ತುಂಬ ಪ್ರಾಮುಖ್ಯತೆಯನ್ನು ಹೊಂದಿದೆ. ಆದರೆ ರಾಗ ತುಂಬಾ ಮುಖ್ಯವಾಗಿರುತ್ತದೆ. ರಾಗ ವೈಭವೀಕರಿಸುತ್ತದೆ. ರಾಗದ ಸಂಪೂರ್ಣ ಚಿತ್ರಣ ಸಿಗುವುದು ಶಾಸ್ತ್ರೀಯ ಸಂಗೀತದಲ್ಲಿ, ಅಂದರೆ ಶಾಸ್ತ್ರೀಯ ಸಂಗೀತದಲ್ಲಿ ಸಾಹಿತ್ಯ ಪೂರಕ, ರಾಗ ಪ್ರಾಧಾನ್ಯ..
ಸುಗಮ ಸಂಗೀತಕ್ಕೆ ಬಂದಾಗ ಸಂಗೀತ ಅಥವಾ ರಾಗ ಪೂರಕವಾಗಿದ್ದುಕೊಂಡು ಸಾಹಿತ್ಯ ಪ್ರಾಧಾನ್ಯ. ಉದಾಹರಣೆಗೆ ಭಾವಗೀತೆಯಲ್ಲಿ ಅಥವಾ ಭಕ್ತಿಗೀತೆಯಲ್ಲಿ ತುಂಬ ಸಂಗತಿಗಳನ್ನು ತೆಗೆದುಕೊಂಡು ರಾಗವನ್ನೇ ಹೈಲೈಟ್ ಮಾಡಲು ಸಾಧ್ಯವಿಲ್ಲ, ಸುಗಮ ಸಂಗೀತದಲ್ಲಿ ಸಾಹಿತ್ಯಕ್ಕೆ ಹೆಚ್ಚು ಪ್ರಾಶಸ್ತ್ಯತೆ.
ಸಂಗೀತ ಕ್ಷೇತ್ರದ ಈಗಿನ ಸ್ಥಿತಿಗತಿ:-
ಈಗ ಅದ್ಭುತವಾಗಿದೆ. ಸಂಗೀತ ಕ್ಷೇತ್ರ ತುಂಬಾ ಚೆನ್ನಾಗಿ ಬೆಳೆಯುತ್ತಾ ಇದೆ. ಎಷ್ಟೋ ಪ್ರತಿಭಾನ್ವಿತ ಗಾಯಕರು ಬರುತ್ತಿದ್ದಾರೆ. ಎಲ್ಲಾ ಪ್ರಕಾರಗಳಲ್ಲಿಯೂ ಅದ್ಭುತ ಪ್ರತಿಭೆಗಳನ್ನು ನೋಡುತ್ತಿದ್ದೇವೆ. ಸಾಧಕರನ್ನು ನೋಡುತ್ತಿದ್ದೇವೆ. ಅದರ ಜೊತೆಗೆ ಸುಲಭವಾಗಿ ಸಂಗೀತವನ್ನು ಸಿದ್ಧಿ ಮಾಡಿಕೊಳ್ಳಲು ತುಂಬಾ ಜನ ಹೋಗುತ್ತಾರೆ. ಎಲ್ಲರಿಗೂ ಹಾಡುವ ಆಸೆ ತುಂಬಾ ಇರುತ್ತದೆ. ಆದ್ರೆ ಸಾಧನೆ ಸ್ವಲ್ಪ ಮಟ್ಟಿಗೆ ಕೆಲವರಲ್ಲಿ ಕಡಿಮೆ ಕಾಣುತ್ತದೆ. ತಾಂತ್ರಿಕತೆಯನ್ನು ನಂಬಿಕೊಂಡು ಹಾಡುವುದು ಅಲ್ಲ. ನಾವು ಒಳ್ಳೆಯ ಗುರುಗಳಿಂದ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು. ಕೇಳಿದ್ದನ್ನೆ ಕೇಳಿ ಕೇಳಿ ಅನುಸರಿಸುವುದು ಬೇರೆ. ಒಳ್ಳೆಯ ಗುರುಗಳಿಂದ ಕೇಳಿ ಪಡೆದರೆ ಅದರ ಸಂತೋಷವೇ ಬೇರೆ.
ಸಂಗೀತ ಯಾವತ್ತೂ ಕೂಡಾ ನಿಂತ ನೀರಲ್ಲ. ಅದು ಹರಿಯುವ ನದಿ. ಆದರೆ ಸಾಧನೆ ಮಾಡುವಾಗ ತಪಸ್ಸಿನಂತೆ ಮಾಡಬೇಕು. ಹಾಗಿದ್ದಾಗ ಮಾತ್ರ ನೀವು ಒಂದು ಹಂತವನ್ನು ತಲುಪಲು ಸಾಧ್ಯ. ಯಾವುದೇ ಕಲೆಯಲ್ಲಿ ಸಾಧನೆ ಮಾಡಲು ಸುಲಭವಾದ ಮಾರ್ಗ ಇಲ್ಲವೇ ಇಲ್ಲ. ದೊಡ್ಡ ದೊಡ್ಡ ಕಲಾವಿದರ ಅನುಕರಣೆ ದಾಟಿ ಅನುಸರಣೆಯ ಹಂತಕ್ಕೆ ಬರಬೇಕು. ಆಮೇಲೆ ನಮ್ಮದೇ ಆದ ಶೈಲಿಯಲ್ಲಿ ನಮ್ಮ ಸಹಜ ಧ್ವನಿಯಲ್ಲಿ ಹಾಡಬೇಕು.
ನೀವು ಶೋತ್ರುಗಳನ್ನಾಗಲೀ ಅಥವಾ ವೀಕ್ಷಕರನ್ನಾಗಲೀ ತಲುಪದಿದ್ದರೆ ನಿಮ್ಮ ಸಂಗೀತ ಸಾರ್ಥಕತೆಯನ್ನು ಕಾಣಲು ಸಾಧ್ಯವಿಲ್ಲ. ಜನರ ನಾಡಿಮಿಡಿತವನ್ನು ಅರಿತುಕೊಂಡು ಹಾಡಿ. ಜನರಿಗೆ ಖುಷಿ ಆಗಬೇಕು. ಕಿರಿಯರಿಗೆ ಹೇಳುವುದು ಏನೆಂದರೆ… ಸಂಗೀತ ಯಾವತ್ತಿಗೂ ದೊಡ್ಡದು. ನಾವು ಸಂಗೀತದಲ್ಲಿ ಕಲಿಯಲು ಅನೇಕ ಇದೆ ಅನ್ನುವಂತಹ ಭಾವನೆಯಲ್ಲಿ ಹಾಡು ಕಲಿಯಬೇಕು.
ನಾನು ಕಿರಿಯರಿಗೆ ಹೇಳುವ ಕಿವಿಮಾತು ಏನೆಂದರೆ,
Fusionನ ವಿರೋಧಿ ನಾನಲ್ಲ, Fusion ಬೇಕು ಆದರೆ Fusion ಹೆಸರಿನಲ್ಲಿ confusion ಬೇಡ. ನಿಮ್ಮ Creativity ಬೇಡ ಅಂತ ಹೇಳುವುದಿಲ್ಲ. ಆದರೆ ಹಳೆಯ ಸಂಗೀತ ಹಾಡುಗಳು ಅದ್ಭುತ, ಯಾಕಂದ್ರೆ ಅಷ್ಟು ಒಳ್ಳೆಯ ಸಾಹಿತ್ಯ ಸಂಗೀತ ಗಾಯನ. ಹಾಗಾಗಿ ಹಳೆಯ ಹಾಡುಗಳು ನೆನಪಿನಲ್ಲಿ ಇರುತ್ತವೆ. ಯಾವಾಗಲೂ ನಮ್ಮ ಸಂಸ್ಕೃತಿಗೆ ಅನುಗುಣವಾಗಿ ನಮ್ಮ ಸಂಗೀತ ಇರಬೇಕು. ಸಂಗೀತ ಒಂದು ವೃತ್ತಿ ಮಾತ್ರ ಅಲ್ಲ. ಜನರನ್ನು ಪ್ರೀತಿ ಮಾಡುವಂಥಹ ಮಾಧ್ಯಮ. ಕಲಾವಿದರಾಗಿ ಮತ್ತು ಒಳ್ಳೆಯ ವ್ಯಕ್ತಿಗಳಾಗಿ ಸಮಾಜಕ್ಕೆ ಆದರ್ಶವಾಗಿರಬೇಕು. ಎಲ್ಲರನ್ನೂ ಪ್ರೀತಿಯಿಂದ ನೋಡಿ. ನಾವು ಚಿಕ್ಕವರಿರುವಾಗ ಅವಕಾಶಗಳು ವಿಫುಲವಾಗಿತ್ತು. ಈಗಿನ ಮಕ್ಕಳಿಗೆ ಬೇಕಾದಷ್ಟು ಅವಕಾಶ ಇದೆ. ನಿಜವಾದ ಸಂಗೀತವನ್ನು ತೋರಿಸಿ.
ಸಂಗೀತದ ಈಗಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ನಾವು ಒಳ್ಳೆಯದನ್ನು ಕೊಟ್ರೆ ಅದನ್ನು ಸ್ವೀಕರಿಸುವ ಪ್ರೇಕ್ಷಕರು, ಅದು ಮಕ್ಕಳಾಗಿರಲಿ, ಹಿರಿಯರಾಗಿರಲಿ ಅಥವಾ ಮಧ್ಯ ವಯಸ್ಕರಿರಬಹುದು ಎಲ್ಲರೂ ಇಷ್ಟ ಪಡುತ್ತಾರೆ. ಪ್ರೇಕ್ಷಕರ ಮನ ಮುಟ್ಟುವ ಹಾಗೆ ನಾವು ಕಾರ್ಯಕ್ರಮವನ್ನು ನೀಡಬೇಕು.
ಸಂಗೀತ ಕ್ಷೇತ್ರದ ಮುಂದಿನ ಯೋಜನೆ:-
ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆಯನ್ನು ಮಾಡಬೇಕು ಎಂಬ ಆಸೆ ಇದೆ.”ಕೋಟೆ ಮ್ಯೂಸಿಕ್ ಫೌಂಡೇಶನ್” ಎಂಬ ನಮ್ಮದೇ ಸಂಸ್ಥೆಯ ಮೂಲಕ ಇನ್ನಷ್ಟು ಹೆಚ್ಚಿನ ತರಬೇತಿ ಕೊಡಬೇಕು ಅನ್ನುವಂತಹ ಯೋಜನೆ ಇದೆ.
ಮ್ಯೂಸಿಕ್ ಥೆರಪಿ ಬಗ್ಗೆ ಹೆಚ್ಚಿನ ಆಸಕ್ತಿ ಇದೆ. ಮನೋ ರೋಗಿಗಳಿಗೆ ಡಾಕ್ಟರ್ ಗಳು ಸಂಗೀತದ ಮೂಲಕ ಚಿಕಿತ್ಸೆ ನೀಡುತ್ತಾರೆ. ಅದರ ಬಗ್ಗೆ ಕಲಿತು ನನ್ನದೇ ಆದಂಥಹ ಕಿರು ಕಾಣಿಕೆಯನ್ನು ನೀಡಬೇಕು ಎಂಬ ಬಯಕೆ ಇದೆ.
ಸಂಗೀತ ಕ್ಷೇತ್ರದ ಸಾಧನೆಗೆ ನಿಮ್ಮ ಕುಟುಂಬದವರ ಸಹಕಾರ ಹೇಗಿತ್ತು:-
ಮೊದಲಿಗೆ ನನ್ನ ತಂದೆ ತಾಯಿ ನನ್ನ ಸಾಧನೆಗೆ ತುಂಬಾ ಸಹಕಾರ ನೀಡಿದ್ದಾರೆ. ಅಕ್ಕ ಶಶಿಕಲಾ, ತಮ್ಮ ರಘುರಾಮ ಕೋಟೆ, ಜೊತೆಗೆ ಭರತನಾಟ್ಯ ಕಲಾವಿದೆ, ರಂಗಭೂಮಿ ಕಲಾವಿದೆ, ಚಲನಚಿತ್ರ ಮತ್ತು ಧಾರಾವಾಹಿ ನಟಿಯಾದ ಮಡದಿ ಸೀತಾ ಕೋಟೆ, ಮಗ ಸಾಗರ್ ಕೋಟೆ… ಇವರೆಲ್ಲರ ಸಹಕಾರದಿಂದ ಇಂದು ನಾನು ಸಂಗೀತ ಕ್ಷೇತ್ರದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಯಿತು.
ಗಾನ ಗಂಧರ್ವ, ಗಾನ ಕೋಗಿಲೆ, ಸಿರಿ ಕಂಠದ ಗಾಯಕ, ಗಾನ ಗಾರುಡಿಗ, ಕರ್ನಾಟಕ ಚೇತನ, ಬೆಂಗಳೂರು ರತ್ನ, ವಿಶ್ವ ಮಾನವ, ಸ್ವರ ಮಂದಾರ ಇತ್ಯಾದಿ ಬಿರುದುಗಳು ಕೋಟೆಯವರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಸಂದ ಗೌರವವಾಗಿದೆ.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು