ಮಂಗಳೂರು : ಅಡ್ಯಾರ್ ಗಾರ್ಡನ್‌ನಲ್ಲಿ ದಿನಾಂಕ 26-05-2024ರಂದು ನಡೆಯಲಿರುವ ‘ಯಕ್ಷಧ್ರುವ ಪಟ್ಲ ಸಂಭ್ರಮ’ದ ಸಿದ್ಧತೆ ಕುರಿತು ಕರೆದಿದ್ದ ಪೂರ್ವಭಾವಿ ಸಭೆಯು ದಿನಾಂಕ 05-03-2024ರಂದು ಪತ್ತುಮುಡಿ ಸೌಧದಲ್ಲಿ ನಡೆಯಿತು.
ಈ ಸಭೆಯಲ್ಲಿ ಮಾತನಾಡಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ “ಯಕ್ಷಧ್ರುವ ಯಕ್ಷ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿದೆ. ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ಯಕ್ಷ ಶಿಕ್ಷಣದಲ್ಲಿ ಸುಮಾರು 4,000 ಮಕ್ಕಳು ಭಾಗವಹಿಸಿದ್ದರು. ಯಕ್ಷ ಕಲೆ ಪಸರಿಸುವ ದೃಷ್ಟಿಯಿಂದ ಯುರೋಪ್ ರಾಷ್ಟ್ರದಲ್ಲಿ ಈ ವರ್ಷ ಪಟ್ಲ ಫೌಂಡೇಶನ್ ಟ್ರಸ್ಟಿನ ಘಟಕ ರಚನೆಯಾಗಲಿದೆ. ಪಟ್ಲ ಫೌಂಡೇಶನ್ ಟ್ರಸ್ಟ್ ಈವರೆಗೆ 24 ಮನೆಗಳನ್ನು ನಿರ್ಮಿಸಿ ಕಲಾವಿದರಿಗೆ ಹಸ್ತಾಂತರಿಸಿದೆ. ಯಕ್ಷಾಶ್ರಯ ವಸತಿ ಯೋಜನೆಯಡಿ 25ನೇ ಮನೆಯ ಹಸ್ತಾಂತರ ದಿನಾಂಕ 22-03-2024ರಂದು ಕುಂಬಳೆಯ ಸಮೀಪ ನಡೆಯಲಿದೆ. ಸುಮಾರು 200 ಮನೆಗಳ ದುರಸ್ತಿಗೆ ಆರ್ಥಿಕ ಸಹಾಯ ಮಾಡಲಾಗಿದೆ. ಆರೋಗ್ಯ, ವಿದ್ಯಾರ್ಥಿವೇತನ, ಶಿಕ್ಷಣ, ವೈದ್ಯಕೀಯ ಸೇರಿದಂತೆ ಕಲಾವಿದರಿಗೆ ಕೋಟ್ಯಂತರ ರೂಪಾಯಿ ನೆರವು ನೀಡಲಾಗಿದೆ. ಈ ವರ್ಷ ಯಕ್ಷಗಾನ ಕಲಾವಿದರಿಗೆ ಮಾತ್ರವಲ್ಲ, ರಂಗಭೂಮಿ ಕಲಾವಿದರು ಹಾಗೂ ದೈವಾರಾಧನೆಯ ನರ್ತನ ಪರಿಚಾರಕರಿಗೂ ವಿಮಾ ಸೌಲಭ್ಯ ವಿಸ್ತರಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. 2024ನೇ ಸಾಲಿನ ‘ಪಟ್ಲ ಪ್ರಶಸ್ತಿ’ಯನ್ನು ಬಡಗುತಿಟ್ಟಿನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರಿಗೆ ನೀಡಲಾಗುವುದು. ಪಟ್ಲ ಸಂಭ್ರಮದಲ್ಲಿ ಪಟ್ಲ ಫೌಂಡೇಶನ್‌ನ ಮಹಾಪೋಷಕರು, ಮಹಾದಾನಿಗಳು ಉದ್ಯಮಿ ಬರೋಡಾದ ಶಶಿಧರ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 15 ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು” ಎಂದು ತಿಳಿಸಿದರು.
ತಾಳಮದ್ದಲೆ ಅರ್ಥಧಾರಿ ಉಜಿರೆ ಅಶೋಕ ಭಟ್ ಮಾತನಾಡಿ “ಪಟ್ಲ ಫೌಂಡೇಶನ್ ಯಕ್ಷ ಶಿಕ್ಷಣ ಕ್ರಾಂತಿಯನ್ನೇ ಮಾಡಿದೆ” ಎಂದರು. ಪೂಂಜಾಲಕಟ್ಟೆ ಘಟಕದ ವಾರ್ಷಿಕೋತ್ಸವದ ನಂತರ ಉಳಿಕೆಯಾದ ಮೊತ್ತವನ್ನು ಅಧ್ಯಕ್ಷ ಯಶೋಧರ ಶೆಟ್ಟಿ ತಂಡದವರು ಕೇಂದ್ರೀಯ ಸಮಿತಿಗೆ ದೇಣಿಗೆ ರೂಪದಲ್ಲಿ ಅರ್ಪಿಸಿದರು. ಇದೇ ಸಂದರ್ಭದಲ್ಲಿ ದಿನಾಂಕ 22-03-2024ರಂದು ಜರುಗುವ ಪಟ್ಲ ಫೌಂಡೇಶನ್ ಕೇಂದ್ರ ಮಹಿಳಾ ಘಟಕದ 7ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಟ್ರಸ್ಟಿ ಶೇಡಿಕೋಡ್ಲು ವಿಠಲ ಶೆಟ್ಟಿ, ಭುಜಬಲಿ ಧರ್ಮಸ್ಥಳ, ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿ.ಎ. ಸುದೇಶ್ ಕುಮಾರ್ ರೈ, ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕನಗರ, ಸಂಘಟನಾ ಕಾರ್ಯದರ್ಶಿಗಳಾದ ಬಾಳ ಜಗನ್ನಾಥ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ ಉಪಸ್ಥಿತರಿದ್ದರು.