ಬೆಂಗಳೂರು : ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿಯು ಶಿಷ್ಯವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾ ಕೀರ್ತನ ಮತ್ತು ಗಮಕ ಕಲೆಗಳಲ್ಲಿ ಅಭ್ಯಾಸಮಾಡುತ್ತಿರುವ 15ರಿಂದ 24 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ ತಿಳಿಸಿದ್ದಾರೆ.
2026-27ನೇ ಸಾಲಿನ ಶಿಷ್ಯವೇತನಕ್ಕೆ ಆಯ್ಕೆ ಪ್ರಕ್ರಿಯೆಯನ್ನು ಮೊಬೈಲ್/ವಿಡಿಯೊ ಚಿತ್ರೀಕರಣದ ಮೂಲಕ ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ. ಶಿಷ್ಯವೇತನ ಅರ್ಜಿಗಳ ಬಗ್ಗೆ ಮಾಹಿತಿಯನ್ನು ಅಕಾಡೆಮಿ ಫೇಸ್‌ಬುಕ್ facebook.com/karnatakasangeetanrityaacademy ಮೂಲಕ ಮಾಹಿತಿ ಪಡೆದು ವೆಬ್‌ಸೈಟ್ : sangeetanrityaacademy.karnataka.gov.in ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಅರ್ಜಿಯನ್ನು ಆಯಾ ಜಿಲ್ಲೆಯ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದಾಗಿದೆ.
ಸಂದರ್ಶನದ ಬದಲಿಗೆ ಅಭ್ಯರ್ಥಿಗಳು ಇನ್ನು ಮುಂದೆ ಅರ್ಜಿಯಲ್ಲಿ ನೀಡಿರುವ ಪಠ್ಯಕ್ರಮವನ್ನು ಮೊಬೈಲ್/ವಿಡಿಯೊ ಚಿತ್ರೀಕರಿಸಿ ಪೆನ್‌ಡ್ರೈವ್‌ನಲ್ಲಿ ಅಳವಡಿಸಿ ದಿನಾಂಕ 15 ಸೆಪ್ಟೆಂಬರ್ 2026ರೊಳಗೆ ಅರ್ಜಿ ಸಲ್ಲಿಸಬೇಕು. ರಿಜಿಸ್ಟ್ರಾರ್, ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು-02 ಕಾರ್ಯಾಲಯಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸಬಹುದು. ಆಯಾ ಕಲಾ ಪ್ರಕಾರಕ್ಕೆ ಅನುಗುಣವಾಗಿ ತೀರ್ಪುಗಾರರು ಅಭ್ಯರ್ಥಿಗಳು ಚಿತ್ರೀಕರಿಸಿ ಕಳುಹಿಸಿಕೊಟ್ಟಿರುವ ಪೆನ್‌ಡ್ರೈವ್ ಪರಿಶೀಲಿಸಿ ಶಿಷ್ಯವೇತನಕ್ಕೆ ಆಯ್ಕೆ ಮಾಡುತ್ತಾರೆ.
