18 ಏಪ್ರಿಲ್ 2023, ಉಡುಪಿ: ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭೂಮಿಕಾ ಹಾರಾಡಿ ಸಹಕಾರದಲ್ಲಿ ದಿನಾಂಕ 13-04-2023 ಗುರುವಾರದಂದು ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನ ಮಕ್ಕಳ ಮಂಟಪದಲ್ಲಿ ನಡೆದ ನಾಡಿನ ಜಾನಪದ ಕಲೆಗಳ ಅನಾವರಣ `ಜಾನಪದ ವೈಭವ ‘ ಕಾರ್ಯಕ್ರಮ ಅಪಾರ ಜನಾಕರ್ಷಣೆ ಪಡೆಯಿತು.
ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸರ್ವೋತ್ತಮ ಗಾಣಿಗ ಹಾರಾಡಿ ಅವರಿಗೆ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ವತಿಯಿಂದ `ಜಾನಪದ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಹಾಗೂ ಕರ್ನಾಟಕ ಜಾನಪದ ಪರಿಷತ್‌ನ ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, “ಯಕ್ಷಗಾನ ಕ್ಷೇತ್ರಕ್ಕೆ ಹಾರಾಡಿ ಮನೆತನದ ಕೊಡುಗೆ ಅಪಾರ. ಹಾರಾಡಿ ಮನೆತನದ ಕೊನೆಯ ಕೊಂಡಿ ಸರ್ವೋತ್ತಮ ಗಾಣಿಗ ಅವರಿಗೆ ಜಾನಪದ ಪ್ರಶಸ್ತಿ ನೀಡುತ್ತಿರುವುದು ಸಂತೋಷ ತಂದಿದೆ ಎಂದರು. ನಾಡಿನ ಜಾನಪದ ಕಲೆಗಳು ಉಳಿಯಬೇಕು, ಕಲಾವಿದರು ಬೆಳೆಯಬೇಕು ಎನ್ನುವ ಉದ್ದೇಶದಿಂದ ವಿವಿಧ ಕಡೆಗಳಲ್ಲಿ 10ಕ್ಕೂ ಅಧಿಕ `ಜಾನಪದ ವ್ಯಭವ ‘ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಈ ಕಾರ್ಯದಲ್ಲಿ ಸಂಘ ಸಂಸ್ಥೆಗಳು ಕೈ ಜೋಡಿಸಲು ಮುಂದಾಗಬೇಕು” ಎಂದು ಮನವಿ ಮಾಡಿದರು.
ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಅವರು ಮಾತನಾಡಿ, “ಈ ಮಣ್ಣಿನ ಸತ್ವವಾಗಿರುವ ಜಾನಪದ ಕಲೆ, ಸಂಸ್ಕೃತಿಯನ್ನು ಉಳಿಸುವ ದೃಷ್ಟಿಯಿಂದ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ ಪ್ರಯತ್ನ ಪ್ರಶಂಸನೀಯ. ನಮ್ಮ ಜಾನಪದ ಕಲೆಗಳ ಬಗ್ಗೆ ವಿದೇಶಿಯರು ಮನಸೋತಿದ್ದಾರೆ. ಹಲವಾರು ಮಂದಿ ಸಂಶೋಧನೆ ಕೂಡಾ ನಡೆಸಿದ್ದಾರೆ. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಇಂದಿನ ಯುವ ಪೀಳಿಗೆ ಮುಂದುವರೆಯುತ್ತಿದ್ದರೂ, ಈ ನಾಡಿನ ಮಣ್ಣಿನ ಸೊಗಡನ್ನು ಅದು ಬಿಟ್ಟುಕೊಟ್ಟಿಲ್ಲ. ಅದು ಮತ್ತೆ ಚಿಗುರುತ್ತಿದೆ. ಈ ನಿಟ್ಟಿನಲ್ಲಿ ನಮ್ಮೆಲ್ಲರ ಸಾಂಘಿಕ ಪ್ರಯತ್ನ ಅಗತ್ಯ” ಎಂದರು.
ಕಾರ್ಯಕ್ರಮದಲ್ಲಿ ಮುದ್ರಾಡಿಯ ರಂಗಕರ್ಮಿ ಸುಕುಮಾರ್ ಮೋಹನ್ ಅವರನ್ನು ಭೂಮಿಕಾ ಹಾರಾಡಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಭೂಮಿಕಾ ಹಾರಾಡಿಯ ರಾಮ್ ಶೆಟ್ಟಿ ಅವರನ್ನು ತಲ್ಲೂರು ಫ್ಯಾಮಿಲಿ ಟ್ರಸ್ಟ್ ವತಿಯಿಂದ ಗೌರವಿಸಲಾಯಿತು.
ಗಿರಿಜಾ ಹೆಲ್ತ್ಕೇರ್ ಆಂಡ್ ಸರ್ಜಿಕಲ್ಸ್ ಉಡುಪಿ ಸಂಸ್ಥೆಯ ಮುಖ್ಯಸ್ಥ ಶ್ರೀ ರವೀಂದ್ರ ಶೆಟ್ಟಿ, ರೋಟರಿ ಬ್ರಹ್ಮಾವರ ರೋಯಲ್ ಅಧ್ಯಕ್ಷ ಶ್ರೀ ವಿಶ್ವನಾಥ ಶೆಟ್ಟಿ, ಉದ್ಯಮಿ ಶ್ರೀ ಚಂದ್ರಶೇಖರ ನಾಯರಿ, ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಟ್ರಸ್ಟಿ ಶ್ರೀಮತಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಸ್ಥಳೀಯರಾದ ಶ್ರೀ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.
ಕರ್ನಾಟಕ ಜಾನಪದ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ರವಿರಾಜ್ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭೂಮಿಕಾ ಹಾರಾಡಿಯ ರಾಮ್ ಶೆಟ್ಟಿ ಪರಿಚಯಿಸಿದರು. ಶ್ರೀ ರವಿ ಎಸ್.ಪೂಜಾರಿ ಬೈಕಾಡಿ ಸ್ವಾಗತಿಸಿದರು. ರಕ್ಷಿತ್ ಅಂಜಾರು ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಉಡುಪಿಯ ಪ್ರಸಿದ್ಧ ಕಲಾ ಸಂಘಟನೆ `ಕಲಾಮಯಂ ಉಡುಪಿ ‘ ವತಿಯಿಂದ ವೈವಿಧ್ಯಮಯ ಜಾನಪದ ನೃತ್ಯ ವಿವಿಧ್ಯ ಪ್ರದರ್ಶನಗೊಂಡಿತು.