ಬೆಂಗಳೂರು : ಡಾ. ಶಿವರಾಮ ಕಾರಂತರಿಂದ ಉದ್ಘಾಟನೆಗೊಂಡು ‘ಜಾನಪದ ಜ್ಞಾನ ವಿಜ್ಞಾನ’ವನ್ನು ಭಾರತ ದೇಶದುದ್ದಗಲಕ್ಕೂ ಹರಡುತ್ತಲಿರುವ ‘ಜಾನಪದ ವಿಶ್ವ ಪ್ರತಿಷ್ಠಾನ’ವು 40 ವರ್ಷಗಳಿಂದ ‘ಜಾನಪದ ದೀಪಾರಾಧನೆ’ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಮತ್ತು ಜೊತೆಗೆ ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಜನಾನುರಾಗಿ ಸೇವಾನಿರತರಿಗೆ ಪ್ರಶಸ್ತಿಗಳನ್ನು ನೀಡುತ್ತ ಬಂದಿದೆ. 2023ನೆಯ ಸಾಲಿನ ‘ಕುವೆಂಪು ದೀಪ ಪ್ರಶಸ್ತಿ’ಗೆ ಬಹುಮುಖಿ ಚಿಂತಕರಾದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ‘ಕಾರಂತ ದೀಪ ಪ್ರಶಸ್ತಿ’ಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಡೀನ್ ಡಾ. ಸಿ.ನಾಗಭೂಷಣ, ‘ಕಲಾದೀಪ ಪ್ರಶಸ್ತಿ’ಗೆ ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದ ಶ್ರೀ ಎಚ್.ಎನ್. ಸುರೇಶ್, ‘ದೇವಮ್ಮ ರಾಮನಾಯಕ ದೀಪ ಪ್ರಶಸ್ತಿ’ಗೆ ಅಂಕೋಲದ ಕಮ್ಮಾರ ಶ್ರೀ ಚಂದ್ರಕಾಂತ ಮುಕುಂದ ಆಚಾರಿ, ‘ವಿದ್ಯಾರ್ಥಿ ದೀಪ ಪ್ರಶಸ್ತಿ’ಗೆ ಯೋಗಪಟು ಕುಮಾರಿ ಶ್ರೀನಿಧಿ ಪ್ರಕಾಶ್ ಗೌಡ ಇವರುಗಳು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ.6,000/- ನಗದು ಮತ್ತು ಸ್ಮರಣಿಕೆಯನ್ನೊಳಗೊಂಡಿದೆ. ಆಯ್ಕೆ ಸಮಿತಿಯಲ್ಲಿ ಡಾ. ಎನ್.ಆರ್. ನಾಯಕ, ನಾಗರಾಜ ಹೆಗಡೆ ಅಪಗಾಲ, ಅಭಿನವ ರವಿಕುಮಾರ್ ಮತ್ತು ಸಂಧ್ಯಾ ಹೆಗಡೆ ದೊಡ್ಡಹೊಂಡ ಇದ್ದರು.
ಉತ್ತರ ಕನ್ನಡ, ಹೊನ್ನಾವರದಲ್ಲಿರುವ ಜಾನಪದ ವಿಶ್ವ ಪ್ರತಿಷ್ಠಾನ (ರಿ.) ಪ್ರಸ್ತುತ ಪಡಿಸುವ ‘ಜನಪದ ದೀಪಾರಾಧನೆ 43’ ಪ್ರಶಸ್ತಿ ಪ್ರದಾನ, ಧ್ವನಿ ಸಾಂದ್ರಿಕೆ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭವು ದಿನಾಂಕ 05-09-2023ರ ಮಂಗಳವಾರ ಬೆಳಿಗ್ಗೆ 10 ಘಂಟೆಗೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿನ ಭಾರತೀಯ ವಿದ್ಯಾಭವನದ ಕೆ.ಆರ್.ಜಿ. ಹಾಲ್ ಇಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಭಾರತ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ ಎನ್. ಸಂತೋಷ ಹೆಗ್ಡೆ ಉದ್ಘಾಟಿಸಲಿದ್ದಾರೆ. ಡಾ. ಎನ್.ಆರ್. ನಾಯಕ ಮತ್ತು ಡಾ. ಶಾಂತಿ ನಾಯಕ ಪ್ರಶಸ್ತಿ ಪ್ರದಾನ ಮಾಡುವರು. ಡಾ. ಎನ್.ಆರ್. ನಾಯಕ್ ಅವರ ಬದುಕು ಮಹಾಕಾವ್ಯದ ಗೀತೆಗಳನ್ನು ಶ್ರೀಮತಿ ಎಂ.ಡಿ. ಪಲ್ಲವಿ ಪ್ರಸ್ತುತಪಡಿಸುವರು.
ಇದೇ ಸಂದರ್ಭದಲ್ಲಿ ಅಭಿನವ ಮತ್ತು ಜಾನಪದ ಪ್ರಕಾಶನ ಪ್ರಕಟಿಸಿರುವ ‘ಮಕ್ಕಳೇ ದೇವರು’ (ಡಾ. ಎನ್.ಆರ್. ನಾಯಕರ ಆಯ್ದ ಮಕ್ಕಳ ಕವಿತೆಗಳು) ಸಂ: ಆನಂದ ಪಾಟೀಲ. ಡಾ. ಎನ್.ಆರ್. ನಾಯಕರ ಕಾವ್ಯದ ಛಂದೋವಿನ್ಯಾಸ ಒಂದು ನೋಟ: ಪ್ರೊ.. ಆರ್.ಎಸ್. ನಾಯಕ, ಮುಖ್ಯಸ್ಥರು, ಕನ್ನಡ ವಿಭಾಗ, ಅಂಜುಮಾನ್ ಕಾಲೇಜು ಭಟ್ಕಳ, ಉ.ಕ. ಕೃತಿಗಳನ್ನು ಖ್ಯಾತ ಗಾಯಕಿ ಶ್ರೀಮತಿ ಎಂ.ಡಿ. ಪಲ್ಲವಿ ಸಂಗೀತ ಸಂಯೋಜಿಸಿರುವ ‘ಕಾದಲರು’ (ಎನ್.ಆರ್. ನಾಯಕರ ಬದುಕು ಮಹಾಕಾವ್ಯದ ಗೀತೆಗಳು) ಧ್ವನಿಸಾಂದ್ರಿಕೆಯನ್ನು ಬಿಡುಗಡೆಗೊಳಿಸಲಾಗುವುದು.
ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ: ಮಂಡ್ಯ ಜಿಲ್ಲೆಯ ನರಹಳ್ಳಿಯಲ್ಲಿ 1953 ಸೆಪ್ಟೆಂಬರ್ 5ರಂದು ಹುಟ್ಟಿದರು. 1973ರಲ್ಲಿ ಬಿ.ಎ. (ಆನರ್ಸ್), 1975ರಲ್ಲಿ ಎಂ.ಎ. ಪದವಿಗಳನ್ನು ಪ್ರಥಮ ರ್ಯಾಂಜಕ್ (ಚಿನ್ನದ ಪದಕಗಳೊಂದಿಗೆ) ಪಡೆದ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ರಾಜ್ಯಪ್ರಶಸ್ತಿ ಮನ್ನಣೆ ಗಳಿಸಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿರುವ ಇವರು ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಅನುಸಂಧಾನ’, ‘ನವ್ಯತೆ’, ‘ಇಹದ ಪರಿಮಳದ ಹಾದಿ’, ‘ಸಾಹಿತ್ಯ ಸಂಸ್ಕೃತಿ’, ‘ಕುವೆಂಪು ನಾಟಕಗಳ ಅಧ್ಯಯನ’, ಕುವೆಂಪು ಕಾವ್ಯ: ಸಂಸ್ಕೃತಿ ಚರಿತ್ರೆಯ ರೂಪಕ’, ‘ಅನಕೃ ಮತ್ತು ಕನ್ನಡ ಸಂಸ್ಕೃತಿ’, ‘ನೆಲಸಂಸ್ಕೃತಿ’, ‘ಸಂಸ್ಕೃತಿ ಪಥ’, ‘ಹಣತೆಯ ಹಾಡು’ ‘ಬಾ ಕುವೆಂಪು ದರ್ಶನಕೆ’ ಮುಖ್ಯ ವಿಮರ್ಶಾ ಕೃತಿಗಳು. ‘ಕನ್ನಡ ವಿಮರ್ಶಾ ವಿವೇಕ’, ‘ನೆಲದನಿ’ ಇವರಿಗೆ ಅರ್ಪಿಸಿದ ಗೌರವ ಗ್ರಂಥಗಳು. ವಿ.ಎಂ. ಇನಾಂದಾರ್ ಪ್ರಶಸ್ತಿ, ಜಿ.ಎಸ್.ಎಸ್. ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ಸ.ಸ. ಮಾಳವಾಡ ಪುರಸ್ಕಾರ, ವಿಶ್ವಮಾನವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗೋರಖನಾಥ ಪುರಸ್ಕಾರ, ಕೆಂಪೇಗೌಡ ಪ್ರಶಸ್ತಿ ಮೊದಲಾದ ಗೌರವಗಳಿಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಜಾನಪದ ವಿಶ್ವ ಪ್ರತಿಷ್ಠಾನ 2023ನೆಯ ಸಾಲಿನ ‘ಕುವೆಂಪು ದೀಪ ಪ್ರಶಸ್ತಿ’ ನೀಡಿ ಗೌರವಿಸುತ್ತಿದೆ.
ಡಾ. ಸಿ.ನಾಗಭೂಷಣ : ಹುಟ್ಟಿದ್ದು 13-06-1965ರಂದು, ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಇರಕಸಂದ್ರ ಕಾಲೋನಿಯಲ್ಲಿ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡವನ್ನು ಐಚ್ಚಿಕ ವಿಷಯವಾಗಿ ತೆಗೆದುಕೊಂಡು ಬಿ.ಎ., ಎಂ.ಎ. ಮತ್ತು ಪಿಎಚ್.ಡಿ ಪದವಿ. ಕನ್ನಡ ಅಧ್ಯಾಪಕರಾಗಿ, ವಿಭಾಗೀಯ ಮುಖ್ಯಸ್ಥರಾಗಿ, ಗುಲ್ಬರ್ಗಾ, ಬೆಂಗಳೂರು ವಿಶ್ವವಿದ್ಯಾನಿಲಯ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳಲ್ಲಿ, ಸಮಿತಿಗಳಲ್ಲಿ ಸೇವೆ. ಶಾಸನ ಶಾಸ್ತ್ರ, ಸಂಸ್ಕೃತಿ ಕ್ಷೇತ್ರ, ಗ್ರಂಥ ಸಂಪಾದನೆ, ಹಸ್ತಪ್ರತಿ ಶಾಸ್ತ್ರ, ಮಧ್ಯಕಾಲೀನ ಕನ್ನಡ ಸಾಹಿತ್ಯಗಳಲ್ಲಿ ತಲಸ್ಪರ್ಶಿ ಅಧ್ಯಯನ, ‘ಗುಬ್ಬಿ ಒಂದು ಸಾಂಸ್ಕೃತಿಕ ಅಧ್ಯಯನ’, ‘ಕೆಂಬಾವಿ ಭೋಗಣ್ಣ’, ‘ಶರಣ ಆದಯ್ಯ’, ‘ಕನ್ನಡ ಸಾಹಿತ್ಯ ಸಂಸ್ಕೃತಿ ಶೋಧನೆ’, ‘ಶರಣ ಸಾಹಿತ್ಯ ಸಂಸ್ಕೃತಿ ಕೆಲವು ಅಧ್ಯಯನಗಳು’, ‘ಹರಿದಾಸರ ಆಯ್ದ ಕೀರ್ತನೆಗಳು’, ‘ಆಲಂದೆಯ ಏಕಾಂತ ರಾಮಯ್ಯ’, ‘ಸಕಲೇಷ ಮಾದರಸ’, ‘ಎಡೆಯೂರ ಸಿದ್ದಲಿಂಗೇಶ್ವರ’ ಮುಂತಾಗಿ ಹಲವು ಪುಸ್ತಕಗಳ ಪ್ರಕಟಣೆ. ಹೈದ್ರಾಬಾದ್ ಕರ್ನಾಟಕ ಭಾಗದ ಲೇಖಕರಿಗೆ ನೀಡುವ ರಾಜ್ಯೋತ್ಸವ ಪ್ರಶಸ್ತಿ, ವಿದ್ಯಾಶಂಕರ ಪ್ರಶಸ್ತಿ, ಶರಣ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ. ಈಗ ಜಾನಪದ ವಿಶ್ವ ಪ್ರತಿಷ್ಠಾನ 2023ನೆಯ ಸಾಲಿನ ‘ಕಾರಂತ ದೀಪ ಪ್ರಶಸ್ತಿ’ ನೀಡಿ ಗೌರವಿಸುತ್ತಿದೆ.
ಶ್ರೀ ಎಚ್.ಎನ್. ಸುರೇಶ್ : ಮೂಲತಃ ಬೆಂಗಳೂರಿನವರಾದ ಬಹುಮುಖಿ ವ್ಯಕ್ತಿತ್ವದ ಸುರೇಶ್ ವಾಣಿಜ್ಯ ಪದವೀಧರರು. ಕೆನ್ ಕಲಾಶಾಲೆಯಲ್ಲಿ ಹಡಪದ್ ಅವರಿಂದ ಸಾಂಪ್ರದಾಯಿಕ ಕಲಾಶಿಕ್ಷಣ ಪಡೆದವರು. ಸಾಹಿತ್ಯ, ಚಿತ್ರ-ಶಿಲ್ಪಕಲೆ ಹಾಗೂ ನೃತ್ಯ ಕಲೆಗಳಲ್ಲಿ ಅಂತರ್ ಶಿಸ್ತೀಯ ಅನುಸಂಧಾನಗಳ ಮೂಲಕ ಯುವ ಬರಹಗಾರರು ಮತ್ತು ಕಲಾವಿದರನ್ನು ಸಂಘಟಿಸಿ ಕಲಾ ವಿಮರ್ಶೆ, ಕಲಾನಿರೂಪಣೆ, ಕಲಾಪ್ರಸಾರದಂಥ ಸಮಾಜ ಸೇವಾ ಕೆಲಸಗಳಲ್ಲಿ 1972ರಿಂದ ತೊಡಗಿಸಿಕೊಂಡಿರುವರು. ಸಂಗೀತ ಮತ್ತು ನೃತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದವರು. ಬೆಂಗಳೂರು, ದೆಹಲಿ, ಯೂರೋಪ್, ಅಮೆರಿಕ ಮುಂತಾದೆಡೆ ಏಕವ್ಯಕ್ತಿ ಮತ್ತು ಸಮೂಹ ಚಿತ್ರಕಲಾ ಪ್ರದರ್ಶನಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಕಲಾಮೀಮಾಂಸಕರಾಗಿಯೂ ದುಡಿದಿದ್ದಾರೆ. ಭಾರತೀಯ ವಿದ್ಯಾಭವನದ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿರುವ ಇವರು, ಸಾವಿರಾರು ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಚಿತಕಲಾ ಪರಿಷತ್ತಿನ ಎಚ್.ಕೆ. ಕೇಜ್ರಿವಾಲ್ ಪ್ರಶಸ್ತಿ, ಲಲಿತಕಲಾ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಜಾನಪದ ವಿಶ್ವ ಪ್ರತಿಷ್ಠಾನ 2023ನೆಯ ಸಾಲಿನ ‘ಕಲಾದೀಪ ಪ್ರಶಸ್ತಿ’ ನೀಡಿ ಗೌರವಿಸುತ್ತಿದೆ.
ಶ್ರೀ ಚಂದ್ರಕಾಂತ ಮುಕುಂದ ಆಚಾರಿ: 14ನೆಯ ವಯಸ್ಸಿನಿಂದಲೇ ಕಮ್ಮಾರ ಕೆಲಸದಲ್ಲಿ ತೊಡಗಿಸಿಕೊಡಿರುವ ಇವರು ಸಂಪ್ರದಾಯಿಕ ರೀತಿಯಲ್ಲಿಯೇ ಕೃಷಿ ಸಲಕರಣೆಗಳನ್ನು ಮಾಡಿಕೊಡುತ್ತಿದ್ದಾರೆ. `ಹಲ್‌ಗತ್ತಿ’ಯ ಹಲ್ಲು ಮಸೆಯುವದು ಇವರಿಗೆ ಸಿದ್ಧಿಸಿದ ಕಲೆ. ಕೊಯ್ಲಿನ ಸಮಯದಲ್ಲಿ ರೈತರ ಸಾಲು ಇವರ ಮನೆ ಮುಂದೆ ನಿಂತಿರುತ್ತದೆ. ಇಂದು ಸಾಂಪ್ರದಾಯಿಕ ಬಾಗಿಲಿನ ಚಿಲಕ, ಮೊಳೆ, ಕೃಷಿ ಉಪಕರಣಗಳನ್ನು ಖರೀದಿಸುವವರು ಕಡಿಮೆಯಾಗಿದ್ದಾರೆ. ಕಮ್ಮಾರನ ಕೈ ಕೆಲಸಕ್ಕೆ ಮೌಲ್ಯವಿಲ್ಲ. ಯಂತ್ರನಿರ್ಮಿತ ಕತ್ತಿ ಕೊಡಲಿಗಳು ಬೇಗನೆ ಮೊಂಡಾಗಿ ಹೋಗುತ್ತಿವೆ. ಆದರೂ ಚಂದ್ರಕಾಂತರ ಜೀವನಕ್ಕೆ ಆಗುವಷ್ಟು ಹಣ ಕಮ್ಮಾರಿಕೆಯಿಂದ ಸಿಗುತ್ತಿದೆ. ಇಂದಿನ ಪೀಳಿಗೆಗೆ ಕಬ್ಬಿಣ ಕಾದಗ ಹೊಡೆಯುವಷ್ಟು ದೈಹಿಕ ಶಕ್ತಿ ಇಲ್ಲ ಎನ್ನುತ್ತಾರೆ ಅವರು. ‘ಕಮ್ಮಾರಿಕೆ’ಯ ಕೈ ಕೆಲಸ ಉಳಿಯಬೇಕೆಂದರೆ ಇಂಥವರನ್ನು ಗುರುತಿಸಿ ಹೊಸಹೊಸ ಆಕೃತಿಯ ಚಿಲಕ, ಡೋರ್ ನಾಬ್‌ಗಳನ್ನು ಮಾಡಿಸುವ ಪ್ರಯತ್ನ ಆಗಬೇಕಾಗಿದೆ. ಇವರ ಸಾಮಾಜಿಕ ಕಾಳಜಿಯ ಕೆಲಸವನ್ನು ಗುರುತಿಸಿ 2023ನೆಯ ಸಾಲಿನ ‘ದೇವಮ್ಮ ರಾಮನಾಯಕ ದೀಪ ಪ್ರಶಸ್ತಿ’ ನೀಡಿ ಗೌರವಿಸುತ್ತಿದೆ.
ಕುಮಾರಿ ಶ್ರೀನಿಧಿ ಪ್ರಕಾಶಗೌಡ : ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹಿತ್ತಲಮಕ್ಕಿಯವರಾದ ಕುಮಾರಿ ಶ್ರೀನಿಧಿ ಪ್ರಕಾಶಗೌಡ ಕುಂದಾಪುರದ ವೆಂಕಟ್ರಮಣ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಎಂಟನೆಯ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹಲವು ರಾಜ್ಯ ಮತ್ತು ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ. ದುಬೈನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಗೂ ಆಯ್ಕೆಯಾಗಿದ್ದಾರೆ. ಪ್ರಸ್ತುತ ಜಾನಪದ ವಿಶ್ವ ಪ್ರತಿಷ್ಠಾನ 2023ನೆಯ ಸಾಲಿನ ‘ವಿದ್ಯಾರ್ಥಿದೀಪ ಪ್ರಶಸ್ತಿ’ ನೀಡಿ ಗೌರವಿಸುತ್ತಿದೆ.