ಬೆಂಗಳೂರು: ಹಿರಿಯ ನಾಟ್ಯಗುರು ವಿದ್ವಾನ್ ಪುಲಿಕೇಶಿ ಕಸ್ತೂರಿ ಅವರ ನುರಿತ ಗರಡಿಯಲ್ಲಿ ರೂಹು ತಳೆದ ಕಲಾಶಿಲ್ಪ ಕು. ಜೆ. ಜಸ್ವಂತ್ ಉದಯೋನ್ಮುಖ ಭರವಸೆಯ ನೃತ್ಯಕಲಾವಿದ. ಕಳೆದ 12 ವರ್ಷಗಳಿಂದ ನಿಷ್ಠೆಯಿಂದ ನೃತ್ಯ ಕಲಿಯುತ್ತಿರುವ ಜಷ್ವಂತ್, ಅಷ್ಟೇ ಆಸಕ್ತಿಯಿಂದ ಮೃದಂಗವಾದನವನ್ನೂ ಅಭ್ಯಾಸ ಮಾಡುತ್ತಿರುವ ಬಹುಮುಖ ಪ್ರತಿಭೆ. ಶ್ರೀ ರಾಜೇಂದ್ರನ್ ಮತ್ತು ಜಯಕುಮಾರಿ ದಂಪತಿಗಳ ಪುತ್ರನಾದ ಇವರು ಈಗಾಗಲೇ ‘ಗೆಜ್ಜೆಪೂಜೆ’ಯನ್ನು ನೆರವೇರಿಸಿಕೊಂಡಿದ್ದು, ನಾಡಿನಾದ್ಯಂತ ನೃತ್ಯಪ್ರದರ್ಶನಗಳನ್ನು ನೀಡಿದ್ದಾರೆ. ಓದಿನಲ್ಲೂ ಸಮಾನ ಆಸಕ್ತಿ ಹೊಂದಿರುವ ಜಷ್ವಂತ್ ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿ. ಇದೀಗ ಇವರು ಕಲಾರಸಿಕರ ಸಮ್ಮುಖ ತನ್ನ ನೃತ್ಯ ನೈಪುಣ್ಯವನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ. ದಿನಾಂಕ 09-12-2023ನೇ ಶನಿವಾರ ಸಂಜೆ 5 ಗಂಟೆಗೆ, ವೈಯಾಲಿಕಾವಲ್ಲಿನಲ್ಲಿರುವ ‘ಶ್ರೀ ಕೃಷ್ಣದೇವರಾಯ ರಂಗಮಂದಿರ’ದಲ್ಲಿ ವಿದ್ಯುಕ್ತವಾಗಿ ‘ರಂಗಪ್ರವೇಶ’ ಮಾಡಲಿದ್ದಾನೆ. ಈ ಪ್ರತಿಭಾನ್ವಿತ ಕಲಾವಿದ ಜಷ್ವಂತರ ಸುಮನೋಹರ ನೃತ್ಯವಲ್ಲರಿಯನ್ನು ವೀಕ್ಷಿಸಲು ಎಲ್ಲರಿಗೂ ಸುಸ್ವಾಗತ.
ಜಷ್ವಂತ್ ತನ್ನ 9ನೆಯ ವಯಸ್ಸಿನಿಂದಲೇ ಭರತನಾಟ್ಯ ಮತ್ತು ಗುರು ಜಿ.ಎಸ್. ನಾಗರಾಜರ ಬಳಿ ಮೃದಂಗ ಕಲಿಯುತ್ತಿದ್ದು, ಕರ್ನಾಟಕ ಸರ್ಕಾರ ನಡೆಸುವ ಮೃದಂಗದ ಜ್ಯೂನಿಯರ್ ಪರೀಕ್ಷೆಯಲ್ಲಿ ಅತ್ಯುಚ್ಛ ಅಂಕಗಳನ್ನು ಹಾಗೂ ಭರತನಾಟ್ಯದಲ್ಲಿ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯಪರೀಕ್ಷೆಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುವುದು ಇವರ ಅಗ್ಗಳಿಕೆ. ಸತತ ಅಭ್ಯಾಸದಿಂದ ಸಾಧನಾಪಥದಲ್ಲಿ ಸಾಗುತ್ತಿರುವ ಇವರು, ಅನೇಕ ವೇದಿಕೆಗಳ ಮೇಲೆ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವು- ವಿಶ್ವ ನೃತ್ಯದಿನಾಚರಣೆ, ನೃತ್ಯೋಲ್ಲಾಸ, ರಾಮನವಮಿ-ದಸರಾ-ಶಿವರಾತ್ರಿ ಮುಂತಾದ ನೃತ್ಯೋತ್ಸವಗಳು. ಇವಲ್ಲದೆ, ಆಳ್ವಾರ್ ದರ್ಶನ, ಪುರಂದರ ನಮನ, ಸಮುದ್ರಮಂಥನ ನೃತ್ಯರೂಪಕಗಳಲ್ಲಿಯೂ ಭಾಗವಹಿಸಿದ ಖ್ಯಾತಿ ಇವರದು.
ಓದಿನಲ್ಲಿ ಚಿಕ್ಕಂದಿನಿಂದ ಚುರುಕಾಗಿರುವ ಇವರು, ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಜಾಲಹಳ್ಳಿ ಏರ್ಫೋರ್ಸ್ ಶಾಲೆಯಲ್ಲಿ, ಪಿಯೂಸಿಯನ್ನು ಸೇಂಟ್ ಜೋಸೆಫ್ ಕಾಲೇಜಿನಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣನಾಗಿ , ಪ್ರಸ್ತುತ ಏಟ್ರಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ಪದವಿಯ ಅಂತಿಮದರ್ಜೆಯಲ್ಲಿ ಓದುತ್ತಿದ್ದಾರೆ. ಇಂದಿನ ತಂತ್ರಜ್ಞಾನ ವಿಷಯದಲ್ಲಿ ಅತ್ಯಾಸಕ್ತಿಯುಳ್ಳ ಜಷ್ವಂತ್ ನೃತ್ಯದ ಬಗ್ಗೆಯೂ ಸಮಾನ ಆಸಕ್ತಿ-ಬದ್ಧತೆಗಳನ್ನು ಹೊಂದಿದ್ದಾರೆ. ಕಾಲೇಜು ಮತ್ತು ತನ್ನ ನೃತ್ಯಸಂಸ್ಥೆಯನ್ನು ಪ್ರತಿನಿಧಿಸಿ ವಿಸ್ತಾರ, ಸಪ್ತರಂಗ್ ಮತ್ತು ವರ್ಣಉತ್ಸವಗಳಲ್ಲಿ ಭಾಗವಹಿಸಿದ ಹಿರಿಮೆ ಇವರದು.
- ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.