ಪೆರ್ಲ : ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳಿಗೆ ಅಮೂಲ್ಯ ಕೊಡುಗೆಗಳನ್ನು ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ‘ಪರಿಷತ್‌ನ ನಡಿಗೆ ಹಿರಿಯ ಸಾಧಕರ ಕಡೆಗೆ’ ಎಂಬ ಕಾರ್ಯಕ್ರಮದ ಅಂಗವಾಗಿ ಸಾಹಿತಿ, ಅಂಕಣಕಾರ ಹರೀಶ ಪೆರ್ಲ ಇವರನ್ನು ಪೆರ್ಲದಲ್ಲಿರುವ ಅವರ ನಿವಾಸ ‘ಗುಲಾಬಿ’ಯಲ್ಲಿ ದಿನಾಂಕ 26 ಏಪ್ರಿಲ್ 2025ರಂದು ಅಭಿನಂದಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಭಿನಂದನಾ ಭಾಷಣ ಮಾಡಿದರು. ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷರಾದ ಪ್ರೊ. ಪಿ. ಎನ್. ಮುಡಿತ್ತಾಯ, ಮಹಮ್ಮದ್ ಪೆರ್ಲ, ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಪ್ರಾಧ್ಯಾಪಕ ಹರೀಶ್ ನಾಯಕ್, ಹರೀಶ ಪೆರ್ಲರ ಬದುಕು, ಬರಹ, ವ್ಯಕ್ತಿತ್ವದ ಕುರಿತು ಮಾತನಾಡಿದರು.
ಗೀತಾ ಜಿ.ನಾಯಕ್, ವಿಜಯಲಕ್ಷ್ಮಿ ಪಿ. ಶೆಣೈ, ಆಯಿಷಾ ಎ. ಎ. ಪೆರ್ಲ, ಪ್ರೇಮಾ ಶೆಟ್ಟಿ ಮೂಲ್ಕಿ, ಆನಂದ ರೈ ಅಡ್ಕಸ್ಥಳ, ಸುಭಾಷ್ ಪೆರ್ಲ, ದಿಯಾ ಮೂಲ್ಕಿ, ವನಜಾಕ್ಷಿ ಚಂಬ್ರಕಾನ ಉಪಸ್ಥಿತರಿದ್ದರು. ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಉಮೇಶ ಕೆ. ಪೆರ್ಲ ವಂದಿಸಿದರು.