ಮಂಗಳೂರು: ಕಡಬ ಸಂಸ್ಮರಣಾ ಸಮಿತಿಯ ಪಂಚಮ ವಾರ್ಷಿಕೋತ್ಸವ ಹಾಗೂ ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 27 ಅಕ್ಟೋಬರ್ 2024ರ ಭಾನುವಾರದಂದು ರಥಬೀದಿಯ ಶ್ರೀಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ “ಮಕ್ಕಳಿಗೆ ಕೇವಲ ಶಿಕ್ಷಣವನ್ನು ಒದಗಿಸಿ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಸದೇ ಇದ್ದರೆ ಅವರಲ್ಲಿ ನಮ್ಮತನ ಬರುವುದಿಲ್ಲ. ಶಿಕ್ಷಣದ ಜೊತೆ ಸಂಸ್ಕೃತಿಯ ಪರಿಚಯ ಮಾಡಿಸಲು ಯಕ್ಷಗಾನ ಸಹಕಾರಿ.” ಎಂದು ಹೇಳಿದರು.
ಕಾಸರಗೋಡು ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮಾತನಾಡಿ “ಸಂದು ಹೋದ ಕಲಾವಿದರ ಸ್ಮರಣೆಯಿಂದ ಅವರು ಸದಾ ನಮ್ಮೊಂದಿಗೆ ಇರುತ್ತಾರೆ. ಅವರ ಕಲಾವಂತಿಕೆಯನ್ನು ಮುಂದಿನ ತಲೆಮಾರಿಗೆ ವರ್ಗಾಯಿಸಲು ಇದು ಸಹಕಾರಿ. ಮದ್ದಲೆಗಾರರಾದ ಕಡಬ ನಾರಾಯಣ ಆಚರ್ಯ, ಅವರ ಪುತ್ರ (ಮದ್ದಲೆಗಾರ) ಕಡಬ ವಿನಯ ಆಚಾರ್ಯ, ಈಚೆಗೆ ನಮ್ಮನ್ನು ಅಗಲಿದ ಯಕ್ಷಗಾನದ ಹೆಸರಾಂತ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯರ ಸಂಸ್ಮರಣೆ ಇನ್ನಷ್ಟು ಕಲಾವಿದರಿಗೆ ಪ್ರೇರಣೆ ಆಗಲಿದೆ.” ಎಂದರು.
ಯಕ್ಷಗಾನ ಕಲಾವಿದ ವಾದಿರಾಜ ಕಲ್ಲೂರಾಯ ಮಾತನಾಡಿ “ಬಂಟ್ವಾಳ ಜಯರಾಮ ಆಚಾರ್ಯರ ಪಾತ್ರಗಳನ್ನು ನೋಡಿದಷ್ಟು ಸಲವೂ ನಗು ಉಕ್ಕುತ್ತದೆ. ರಂಗಸ್ಥಳದಲ್ಲಿ ಅವರು ಹಾಸ್ಯವನ್ನು ಹುಟ್ಟಿಸುತ್ತಿದ್ದ ಪರಿಯೇ ವಿಸ್ಮಯ. ಯಕ್ಷಗಾನವನ್ನೇ ಜೀವನ ಧರ್ಮವನ್ನಾಗಿಸಿಕೊಂಡ ಅವರು ತಮ್ಮ ಪರಿಣಾಮಕಾರಿ ಆಂಗಿಕ ಅಭಿನಯ, ಮೊನಚು ಮಾತುಗಳಿಂದ ಛಾಪು ಮೂಡಿಸಿದ್ದರು. ಎಲ್ಲೋ, ಯಾವತ್ತೋ ನೋಡಿದ, ಕೇಳಿದ ಸನ್ನಿವೇಶವನ್ನು ಪಾತ್ರಕ್ಕೊಪ್ಪುವಂತೆ ಸಂದರ್ಭೋಚಿತವಾಗಿ ಬಳಸುವ ಅವರ ಪ್ರತಿಭೆಗೆ ಸಾಟಿ ಇಲ್ಲ. ಯಾವುದೇ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಬಲ್ಲ ಛಾತಿ ಹೊಂದಿದ್ದ ಅವರು ಭಾಗವತಿಕೆ, ಚೆಂಡೆ, ಮದ್ದಲೆಯಲ್ಲೂ ಎತ್ತಿದ ಕೈ.” ಎಂದರು.
ಅಧ್ಯಕ್ಷತೆ ವಹಿಸಿದ್ದ ಕಡಬ ಸಂಸ್ಮರಣಾ ಸಮಿತಿ ಅಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ ಮಾತನಾಡಿ “ಕಡಬದ್ವಯರ ಸಂಸ್ಮರಣೆಯ ರೀತಿಯಲ್ಲೇ ಬಂಟ್ವಾಳ ಜಯರಾಮ ಆಚಾರ್ಯ ಅವರ ಸಂಸ್ಮರಣೆಯನ್ನೂ ಹಮ್ಮಿಕೊಳ್ಳಲಿದ್ದೇವೆ.” ಎಂದರು.
ಕಟೀಲು ಮೇಳಗಳ ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಕಲ್ಲಾಡಿ, ಎಸ್. ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಉಪೇಂದ್ರ ಆಚಾರ್ಯ ಪೆರ್ಡೂರು, ರಥಬೀದಿಯ ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಹರೀಶ ಆಚಾರ್ಯ, ಉಮೇಶ ಆಚಾರ್ಯ ಪಾಂಡೇಶ್ವರ, ಕಡಬ ಸಂಸ್ಮರಣಾ ಸಮಿತಿಯ ಗೌರವಾಧ್ಯಕ್ಷರಾದ ಜಿ. ಟಿ. ಆಚಾರ್ಯ ಕಾರ್ಯದರ್ಶಿ ಗಿರೀಶ್ ಕಾವೂರು, ಖಜಾಂಚಿ ಡಿ. ಭಾಸ್ಕರ ಆಚಾರ್ಯ ಅಂಡಿಂಜೆ ಭಾಗವಹಿಸಿದ್ದರು. ದಾಮೋದರ್ ಕೆ. ಶರ್ಮಾ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕಾಳಿಕಾಂಬಾ ವಿನಾಯಕ ಯಕ್ಷಗಾನ ಕೇಂದ್ರದ ಸದಸ್ಯರು ದಿನಕರ ಪಚ್ಚನಾಡಿ ಇವರ ನಿರ್ದೇಶನದಲ್ಲಿ ಶ್ರೀರಾಮ ದರ್ಶನ ಯಕ್ಷಗಾನವನ್ನು ಪ್ರದರ್ಶಿಸಿದರು.