ಉಡುಪಿ : ಮಾಹೆ ಮಣಿಪಾಲದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ವತಿಯಿಂದ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ -2023ಕ್ಕೆ ಲೇಖಕ ಶಂಕರ್ ಸಿಹಿಮೊಗ್ಗೆ ಅವರ ‘ಇರುವೆ ಮತ್ತು ಗೋಡೆ’ ಅಪ್ರಕಟಿತ ಕವನ ಸಂಕಲನ ಆಯ್ಕೆಯಾಗಿದೆ. ಪ್ರಶಸ್ತಿಯು 10,000 ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ ಎಂದು ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
ಮಲೆನಾಡು ಶಿವಮೊಗ್ಗದಲ್ಲಿ ಜನಿಸಿದ ಶ್ರೀ ಶಂಕರ್ ಸಿಹಿಮೊಗ್ಗೆಯವರು ಶ್ರೀ ಗೋವಿಂದರಾಜು ಹಾಗೂ ಶ್ರೀಮತಿ ನಾಗಮ್ಮನವರ ಸುಪುತ್ರ. ಪ್ರಸ್ತುತ ತನ್ನ ಜನ್ಮದಾತರು ಹಾಗೂ ಬಾಳ ಗೆಳತಿ ಅನುಷಾ ಹೆಗ್ಡೆಯವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಟೆಲಿಕಮ್ಯೂನಿಕೇಷನ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಇವರು ಖಾಸಗಿ ಕಂಪೆನಿಯೊಂದರಲ್ಲಿ ಸೀನಿಯರ್ ಸ್ಟಾಫ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆ, ಚಾರಣ ಮತ್ತು ನಾಟಕ ಮುಂತಾದ ಸೃಜನಶೀಲ ಕಾರ್ಯಗಳು ಇವರ ಹವ್ಯಾಸ. ವಿದ್ಯಾರ್ಥಿಯಾಗಿರುವಾಗಲೇ ರಂಗಭೂಮಿ ತರಬೇತಿಯನ್ನು ಪಡೆದುಕೊಂಡು ‘ನೀನಾಸಂ’ ಶಿಬಿರಗಳಲ್ಲಿ ಭಾಗವಹಿಸಿ, ಅಲ್ಲಿ ನಡೆಯುವ ಸಾಹಿತ್ಯ ಸಂವಾದ, ವಿಮರ್ಶೆಗಳಲ್ಲಿ ಪಾಲ್ಗೊಂಡು ತನ್ನ ಕಲಿಕೆಯ ಮೇಲೆ ಅದು ಹೆಚ್ಚು ಪ್ರಭಾವ ಬೀರಿದೆ ಎನ್ನುವ ಸಿಹಿಮೊಗ್ಗೆಯವರು ಉತ್ತಮ ನಟರು ಹೌದು. ಈಗಾಗಲೇ ಸುಮಾರು ಹತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದು ಪ್ರಶಂಸನೀಯ. ಸಾಹಿತ್ಯ ರಂಗಭೂಮಿಯತ್ತ ಒಲವಿಟ್ಟುಕೊಂಡಿರುವ ಇವರು ತಮ್ಮ ವೃತ್ತಿ ಜೀವನದ ನಡುವೆಯೂ ಬೆಂಗಳೂರಿನಲ್ಲಿ ಸ್ನೇಹಿತರೊಡಗೂಡಿ ‘ಚೈತ್ರಾಕ್ಷಿ ರಂಗಭೂಮಿ’ ಎಂಬ ರಂಗತಂಡವನ್ನು ಕಟ್ಟಿದ್ದಾರೆ. ಈ ರಂಗತಂಡದ ಮೂಲಕ ಈಗಾಗಲೇ ಮೂರು ನಾಟಕಗಳು ಪ್ರದರ್ಶನ ಕಂಡಿವೆ.
ಸಾಹಿತ್ಯವನ್ನು ಹವ್ಯಾಸ ಮಾಡಿಕೊಂಡ ಇವರ ಮೊದಲ ಕವನ ಸಂಕಲನ ‘ಕುದುರೆಯ ವ್ಯಥೆ’ 2015ರಲ್ಲಿ ಪ್ರಕಟಣೆಗೊಂಡಿದೆ. ಇವರ ಕವಿತೆ, ಕತೆ, ನಾಟಕ ವಿಮರ್ಶೆ ಮತ್ತು ಲೇಖನಗಳು ಪ್ರತಿಷ್ಠಿತ ದಿನಪತ್ರಿಕೆ, ವಾರ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅನೇಕ ಸ್ಮರಣ ಸಂಚಿಕೆಗಳು ಮತ್ತು ಸಂಪಾದಿತ ಕೃತಿಗಳಲ್ಲೂ ಇವರ ಬರಹಗಳು ಪ್ರಕಟಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿತ ‘ಕವಿತೆ-2021’ ಮತ್ತು ‘ಕವಿತೆ-2022’ ಸಂಪಾದಿತ ಕೃತಿಗಳಲ್ಲಿ ಇವರ ಕವಿತೆಗಳನ್ನು ನಾವು ಓದಬಹುದು. ಪ್ರಜಾವಾಣಿಯಲ್ಲಿ ಪ್ರಕಟಗೊಂಡಿದ್ದ ಇವರ ‘ಹೊಳಲೂರಿನ ಹಾಸ್ಟಲ್ ಹುಡುಗರು’ ಕತೆಯು ಬೆಂಗಳೂರು ವಿಶ್ವವಿದ್ಯಾಲಯದ ಬಿ.ವಿ.ಎ. ಮತ್ತು ಬಿ.ಎಫ್.ಎ. ಪದವಿಗೆ ಕನ್ನಡ ಭಾಷೆಯ ಪಠ್ಯವಾಗಿದೆ.
ಮಿಂಚುಳ್ಳಿ ಪ್ರಕಾಶನ ಮತ್ತು ಮಿಂಚುಳ್ಳಿ ಕಾವ್ಯ ಬಳಗದ ಮೂಲಕ ‘ಮಿಂಚುಳ್ಳಿ ಕವಿಗೋಷ್ಠಿ’, ‘ಪಳಗನ್ನಡ ಓದು’ ಮತ್ತು ನಿರಂತರ ಏಳು ದಿನಗಳ ‘ಬರಗೂರು ಕಾವ್ಯ ಸಪ್ತಾಹ’ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಹಿರಿಯ ಕವಿ ‘ಗೋಪಾಲಕೃಷ್ಣ ಅಡಿಗ’ರಿಗೆ ನೂರು ವಸಂತಗಳು ತುಂಬಿದ ಸಂದರ್ಭದಲ್ಲಿ ಗೆಳೆಯರು ಸೇರಿ “ನೂರು ಅಡಿ ನೂರು ಮಡಿ” ಎಂಬ ಫೇಸ್ಬುಕ್ ಲೈವ್ ಕಾರ್ಯಕ್ರಮ ಏರ್ಪಡಿಸಿ ಒಂದೇ ಸಮಯದಲ್ಲಿ ನೂರು ಜನ ಯುವಕವಿಗಳು ಅಡಿಗರ ಕವಿತೆಗಳನ್ನು ವಾಚನ ಮಾಡಿ ಕಾವ್ಯ ನಮನ ಸಲ್ಲಿಸಿರುವುದೊಂದು ಹೆಗ್ಗಳಿಕೆಯಾದರೆ ಕನ್ನಡ ಸಾಹಿತ್ಯ ವಲಯದೊಂದಿಗೆ ನಂಟು ಬೆಸೆಯುವ ಪ್ರಯತ್ನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ.