ಮಂಗಳೂರು : ಕಾರ್ವಾಲ್ ಕುಟುಂಬ ಮತ್ತು ಮಾಂಡ್ ಸೊಭಾಣ್ ಜಂಟಿಯಾಗಿ ಕೊಡಮಾಡುವ ಕಲಾಕಾರ್ ಪುರಸ್ಕಾರ ಹಸ್ತಾಂತರ ಸಂಭ್ರಮವು 03 ನವೆಂಬರ್ 2024ರಂದು ಶಕ್ತಿನಗರದ ಕಲಾಂಗಣದಲ್ಲಿ ನೆರವೇರಿತು.
ಕಾರ್ವಾಲ್ ಕುಟುಂಬದ ಪ್ರತಿನಿಧಿ ಹಾಗೂ ಭಾಷಾ ತಜ್ಞ ವಂ. ಡಾ. ಪ್ರತಾಪ್ ನಾಯ್ಕ್ ಪ್ರಸ್ತಾವಿಕ ನುಡಿಗಳಾನ್ನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮುಂಬಯಿಯ ಯಶಸ್ವಿ ಬ್ಯಾಂಕರ್ ಹಾಗೂ ಕೊಂಕಣಿ ಮುಂದಾಳು ಜೊನ್ ಡಿಸಿಲ್ವಾ ಇವರು 20 ನೇ ಕಲಾಕಾರ್ ಪುರಸ್ಕಾರಕ್ಕೆ ಆಯ್ಕೆಗೊಂಡ ಸಂಗೀತಗಾರ ರೋಶನ್ ಕ್ರಾಸ್ತಾ ಇವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಪ್ರಶಸ್ತಿಯು ಶಾಲು, ಫಲಪುಷ್ಪ, ಕೊಂಕಣಿ ಪೇಟ ಉರ್ಮಾಲ್, ಸನ್ಮಾನ ಪತ್ರ, ಸ್ಮರಣಿಕೆ ಹಾಗೂ ರೂಪಾಯಿ ಐವತ್ತು ಸಾವಿರದ ಚೆಕ್ ಒಳಗೊಂಡಿತ್ತು.
ಕಾರ್ವಾಲ್ ಕುಟುಂಬದಿಂದ ಫ್ಲೊರಿನ್ ಲೋಬೊ, ಫೆಲಿಕ್ಸ್ ಲೋಬೊ ಮತ್ತು ರೆನಿಟಾ ಲೋಬೊ ಹಾಗೂ ರೋಶನ್ ಪತ್ನಿ ರೇಷ್ಮಾ, ಮಗ ಯೊಹಾನ್, ತಂದೆ ತಾಯಿ ಸ್ಟ್ಯಾನಿ-ರೋಜಿ ಕ್ರಾಸ್ತಾ ಹಾಗೂ ಅತ್ತೆ ಲೀನಾ ಸಿಕ್ವೇರಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜೊನ್ ಡಿಸಿಲ್ವಾ “ಕೊಂಕಣಿಯ ಕೆಲಸಗಳ ನಿರಂತರತೆ ಬಗ್ಗೆ ಮಾಂಡ್ ಸೊಭಾಣ್ ಸಂಸ್ಥೆ ಮಾಡಿರುವ ಕಾರ್ಯ ಅಭಿನಂದನಾರ್ಹ.” ಎಂದರು., ಸನ್ಮಾನ ಸ್ವೀಕರಿಸಿ ರೋಶನ್ ಮಾತನಾಡಿ ಸಂಗೀತಗಾರರ ಕಷ್ಟಗಳ ಬಗ್ಗೆ ತನ್ನ ಮಾತುಗಳನ್ನು ಹಂಚಿಕೊಂಡು, ತನ್ನ ಸಂಗೀತ ಪಯಣದಲ್ಲಿ ಸಹಕರಿಸಿದವರನ್ನು ನೆನಪಿಸಿದರು.
ನಂತರ ರೂಪಾಯಿ ಒಂದು ಲಕ್ಷ ಮೊತ್ತದ ಎರಿಕ್ ಒಝೇರಿಯೊ ಅಮೃತೋತ್ಸವ ಸಂಶೋಧನಾ ಅನುದಾನಕ್ಕೆ ಆಯ್ಕೆಗೊಂಡ ಮಾಧ್ಯಮ ಮತ್ತು ಸಂವಹನ ಸ್ನಾತಕೋತ್ತರ ಪದವೀಧರೆ ಪ್ರಿಥುಮ ಮೊಂತೇರೊ, ವಾಮಂಜೂರು ಇವರ ಹೆಸರನ್ನು ಅರುಣ್ ರಾಜ್ ರೊಡ್ರಿಗಸ್ ಘೋಷಿಸಿದರು. `ಕೊಂಕಣಿ ಕ್ರೈಸ್ತರ ಜನಪದ: ನಡೆದು ಬಂದ ದಾರಿ’ ಈ ವಿಷಯದ ಬಗ್ಗೆ ಅವರು ಸಂಶೋಧನೆ ನಡೆಸುವರು.
ತಿಂಗಳ ವೇದಿಕೆ ಸರಣಿಯಲ್ಲಿ 275ನೇ ಕಾರ್ಯಕ್ರಮದ ತಂಡದ ಮುಖ್ಯಸ್ಥ ಗೋವಾದ ಪಿಯೊ ಆಗ್ನೆಲೊ ಇವರನ್ನು ಗೌರವಿಸಲಾಯಿತು. ಆದರೆ ಧಾರಾಕಾರ ಮಳೆಯ ಕಾರಣದಿಂದ ಈ ಕಾರ್ಯಕ್ರಮ ಮುಂದೂಡಲ್ಪಟ್ಟಿತು. ವಿತೊರಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.