ಮಂಗಳೂರು: ಕಲಾಭಿ ಥಿಯೇಟರ್ ಮಂಗಳೂರು ಪ್ರಸ್ತುತ ಪಡಿಸುವ ಬುನ್ರಾಕು ಗೊಂಬೆಯಾಟ ‘ಪುರ್ಸನ ಪುಗ್ಗೆ’ಯು ದಿನಾಂಕ 28-05-2023 ರಂದು ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಕೆನರಾ ಪ್ರೌಢಶಾಲೆಯ ಶ್ರೀ ಭುವನೇಂದ್ರ ಸಭಾಭವನದಲ್ಲಿ ಪ್ರದರ್ಶನಗೊಳ್ಳಲಿದೆ.
ಆ ದಿನ ಗಂಟೆ 3.30, 5.30 ಮತ್ತು 7.30 ಹೀಗೆ 3 ಪ್ರದರ್ಶನಗಳಿದ್ದು ಪ್ರವೇಶ ದರವಾಗಿ ರೂಪಾಯಿ 100ನ್ನು ನಿಗದಿಪಡಿಸಲಾಗಿದೆ
ಬುನ್ರಾಕು ಗೊಂಬೆಯಾಟ
ಬುನ್ರಾಕು ಗೊಂಬೆಯಾಟ ಮೂಲತಃ ಜಪಾನಿನ ಜಾನಪದ ಕಲೆಯಾಗಿದ್ದು, ಜಪಾನಿನ ಅತ್ಯಂತ ಪ್ರಾಚೀನ ಹಾಗೂ ಪ್ರಸಿದ್ಧ ಕಲಾ ಪ್ರಕಾರವಾಗಿದೆ. ತನ್ನ ಉತ್ಕೃಷ್ಟ ಕಲಾತ್ಮಕ ತಂತ್ರಗಾರಿಕೆ ಹಾಗೂ ಸೂತ್ರಗಳು ಇಲ್ಲದೆಯೇ ನೇರ ಕೈಗಳ ಬಳಕೆಯಿಂದ ಗೊಂಬೆಗಳಿಗೆ ಜೀವ ತುಂಬುವ ಕ್ರಮದಿಂದಾಗಿ ರಂಗದ ಮೇಲೆ ನಮ್ಮ ವಾಸ್ತವಕ್ಕೆ ತೀರಾ ಹತ್ತಿರ ಎಂಬುವಷ್ಟು ಭಾವನೆ, ಚಲನವಲನಗಳ ಸಾದ್ಯತೆಗಳನ್ನು ಕಲ್ಪಿಸಿ ಬೇರೆ ಎಲ್ಲ ಮಾದರಿಯ ಗೊಂಬೆಗಳಿಂದ ಭಿನ್ನವಾಗಿ ನಿಲ್ಲುವುದು ಇದರ ವಿಶೇಷತೆ. ಇಲ್ಲಿ ಮೂರು ಜನ ಸೇರಿ ಒಂದು ಬೊಂಬೆಯನ್ನು ಅಡಿಸುತ್ತಿರುತ್ತಾರೆ. ಪ್ರಸ್ತುತ ನಾಟಕದಲ್ಲಿ ಬರುವ ಗೊಂಬೆಗಳು ಈ ಬುನ್ರಾಕು ಕಲಾಪ್ರಕಾರದ ಪ್ರಭಾವದಿಂದ ಹುಟ್ಟಿ ಕಥಾವಸ್ತುವಿಗನುಸಾರ ತನ್ನ ಕೆಲವು ಮೂಲ ಜಾನಪದ ಅಂಶಗಳನ್ನು ತೊರೆದು ಸಮಕಾಲೀನ ಶೈಲಿಯಲ್ಲಿ ವಿನ್ಯಾಸಗೊಂಡಿದೆ
ನಿರ್ದೇಶಕರು:
ಶ್ರವಣ ಹೆಗ್ಗೋಡು ಭಾರತೀಯ ರಂಗಭೂಮಿಯಲ್ಲಿ ತನ್ನದೇ ಆದ ವಿನೂತನ ರಂಗಶೈಲಿಯ ಮೂಲಕ ಗುರುತಿಸಿಕೊಂಡ ಸೃಜನಶೀಲ ನಿರ್ದೇಶಕ. ನಿನಾಸಮ್ ಪದವಿ ಪಡೆದ ನಂತರ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಬೆಂಗಳೂರು ಇಲ್ಲಿ ರಂಗವಿನ್ಯಾಸದ ಮೇಲೆ ವಿಶೇಷ ಅಧ್ಯಯನ ಮಾಡಿರುತ್ತಾರೆ. ಇವರು ನಿದೇಶಿಸಿದ ಪಪ್ಪೆಟ್ ನಾಟಕಗಳು ಟರ್ಕಿ, ಚೀನಾ, ಜಮರ್ನಿ, ಅಸ್ಟ್ರಿಯಾ ದೇಶಗಳ ಪ್ರತಿಷ್ಠಿತ ಪಪ್ಪೆಟ್ ರಂಗ ಉತ್ಸವಗಳಲ್ಲಿ ಪ್ರದರ್ಶನಗೊಂಡು ಜನಮೆಚ್ಚುಗೆ ಗಳಿಸಿವೆ.
ನಾಟಕಕಾರ: ಫ್ರೆಂಚ್ ಬರಹಗಾರ ಮತ್ತು ಮಕ್ಕಳ ಚಲನಚಿತ್ರ ನಿರ್ದೇಶಕ ಆಲ್ಬರ್ಟ್ ಲೆಮೊರಿಸ್ಸೆನ ಸಣ್ಣಕಥೆಯೊಂದನ್ನು ಆಧರಿಸಿ ಪ್ರಸ್ತುತ ಪ್ರಯೋಗವನ್ನು ಕಟ್ಟಿಕೊಳ್ಳಲಾಗಿದೆ. ತನ್ನ ಸಹಪಾಠಿಗಳ ಉಪಟಳದಿಂದ ಬೇಸತ್ತು ಸರಳ ಸ್ನೇಹಕ್ಕೆ ಹಾತೊರೆಯುತ್ತಿರುವ ಅರೇಳು ವರ್ಷಗಳ ಬಾಲಕ ಪುರ್ಸನಿಗೆ ಅನಿರೀಕ್ಷಿತವಾಗಿ ವಿಶೇಷವಾದ ಪುಗ್ಗೆಯೊಂದು ದೊರಕುತ್ತದೆ. ಪುಗ್ಗೆ ಮತ್ತು ಪುರ್ಸನ ನಡುವೆ ಅನಿರ್ವಚನೀಯ ಸಂಬಂಧವೊಂದು ಏರ್ಪಡುತ್ತದೆ. ಬೇರೆ ಯಾರ ಕೈಗೂ ಸಿಗದೇ ಪುರ್ಸನೊಂದಿಗೆ ಮಾತ್ರ ಎಲ್ಲೆಡೆ ತಿರುಗಾಡುವ ಪುಗ್ಗೆಯನ್ನು ಕಂಡು ಅಸೂಯೆಯಿಂದ ಕೆಲ ಪೊಲೀ ಹುಡುಗರು ಪುರ್ಸ ಹಾಗೂ ಪುಗ್ಗೆಯ ಬೆನ್ನು ಹತ್ತುತ್ತಾರೆ. ಪುಗ್ಗೆಯನ್ನು ಒಡೆದು ಹಾಕಲು ಹವಣಿಸುತ್ತಾರೆ. ಆದರೆ ಇಡೀ ಪಟ್ಟಣದ ಎಲ್ಲಾ ಪುಗ್ಗೆಗಳು ಒಟ್ಟಾಗಿ ಬಂದು ಪುರ್ಸನನ್ನು ಸಂತೈಸುವ ವಿಶಿಷ್ಟ ದೃಶ್ಯದೊಂದಿಗೆ ತೆರೆ ಬೀಳುತ್ತದೆ.
ಕಲಾಭಿ ಥಿಯೇಟರ್: ಇದು ಕಲಾಭಿಮಾನಿಗಳ ಕಲಾಭಿವ್ಯಕ್ತಿ, ಕಲೆಯ ಅಪ್ರಕಟಿತ ಸಮ್ಮೋಹಕ ಸೌಂದರ್ಯವನ್ನು ಹಂಚುವುದು ನಮ್ಮ ಧ್ಯೇಯ. ನಮ್ಮ ಈ ಕಲ್ಪನೆಗಳ ತುಡಿತಕ್ಕೆ ನಿಮ್ಮ ಅಸ್ವಾದನೆಗಳ ಮಿಡಿತವೇ ನಮಗೆ ಆಶೀರ್ವಾದ. ಈ ಹಾದಿಯಲ್ಲಿ ನಾವಿಡುವ ಪ್ರತಿಹೆಜ್ಜೆಯೂ ನಮಗೆ ಕಲಿಕೆ. ಇದು ನಮ್ಮ ಚಿಕ್ಕ ಕುಟುಂಬ, ದೊಡ್ಡ ಕನಸು ಮತ್ತು ಅರ್ಥಪೂರ್ಣ ಪಾಠಶಾಲೆ.
ತಂಡದಲ್ಲಿ: ಅಭಿಷೇಕ್ ಬಿ.ಎಚ್, ಅವಿನಾಶ್ ರೈ, ಅಕ್ಷತಾ ಕುಡ್ಲ, ಉಜ್ವಲ್ ಯು.ಬಿ., ಉದಿತ್ ಯು.ವಿ., ಕಾರ್ತಿಕ್ ಸನಿಲ್, ಗಣೇಶ್ ಕೆ.ವಿ., ಚೇತನ್ ಕೊಪ್ಪ, ದುರ್ಗೇಶ್, ಭುವನ್ ಮಣಿಪಾಲ್.
ಈ ಕಾರ್ಯಕ್ರಮದ ನಿರ್ವಹಣೆಯನ್ನು ಕಲಾಭಿ ಥಿಯೇಟರ್ ನ ವೈಭವಿ, ಸಂಚಿಯ ಏನ್.ಎಸ್ ಹಾಗೂ ಸ್ಕಂದ ನಿರ್ವಹಿಸಲಿರುವರು.