ಬೆಂಗಳೂರು: ಕಲಾವಿಲಾಸಿ ಬೆಂಗಳೂರು ಪ್ರಸ್ತುತಪಡಿಸುವ ಬೀchi ಯವರ ಅನುಭವಗಳ ವಿಡಂಬನಾ ರೂಪಕ ‘ಮಾನಸ ಪುತ್ರ’ ಇದೇ ಬರುವ ದಿನಾಂಕ 11-06-2023 ರಂದು ಬೆಂಗಳೂರಿನ ಮಲ್ಲತಹಳ್ಳಿಯ ವಿಶ್ವವಿದ್ಯಾಲಯ ಸಮೀಪದ ಕಲಾಗ್ರಾಮದಲ್ಲಿ ನಡೆಯಲಿದೆ.
ಬಸವರಾಜ ಎಮ್ಮಿಯವರು ರಚಿಸಿ ನಿರ್ದೇಶಿಸಲಿರುವ ಈ ನಾಟಕಕ್ಕೆ ಸತ್ಯ ರಾಧಾಕೃಷ್ಣ ಸಂಗೀತ ನೀಡಲಿದ್ದಾರೆ. ಬನದೇಶ್ ವಿ ಹಾಗೂ ಮೇಘ ಜೆ ಶೆಟ್ಟಿ ಕಲೆ ಹಾಗೂ ವಿನ್ಯಾಸ ಮಾಡಿದ್ದು ಮುರುಳೀಧರ ಚಿಮ್ಮಲಗಿ ವಸ್ತ್ರವಿನ್ಯಾಸ ಮಾಡಲಿದ್ದಾರೆ. ಸಿದ್ದರಾಮು ಕೆ. ಎಸ್ ಹಾಗೂ ಅಭಿಷೇಕ್ ಚಕ್ರಣ್ಣವರ್ ತಂಡದ ನಿರ್ವಹಣೆ ಮಾಡುತ್ತಿದ್ದು ವಿನೀತ್ ಚಿಮ್ಮಲಗಿಯವರ ಹಿನ್ನೆಲೆ ಸಹಕಾರವಿದೆ .
ನಾಟಕದ ಕುರಿತು:
“ಮಾನಸ ಪುತ್ರ” ನಾಟಕವು ಹಾಸ್ಯ ಬರಹಗಾರ ಚಿಂತಕ ಬೀಚಿಯವರ ಜೀವನಾಧಾರಿತ ನಾಟಕವಾಗಿರುತ್ತದೆ. ಪ್ರಮುಖವಾಗಿ ಬೀಚಿಯವರ ಆತ್ಮ ಚರಿತ್ರೆ ಹಾಗೂ ಅವರ ಇತರೆ ಸಾಹಿತ್ಯವನ್ನು ಆಧರಿಸಿ ಈ ನಾಟಕವನ್ನು ರಚಿಸಲಾಗಿದ್ದು, ಇಡಿಯಾಗಿ ಹಲವು ಭಾವಗಳುಳ್ಳ ನಾಟಕವು ಸಾಹಿತಿಯ ಬದುಕಿನ ಒಳ ನೋಟವನ್ನು ಪ್ರೇಕ್ಷಕರಿಗೆ ಕೊಡುತ್ತದೆ.
ನಾಟಕದ ಪ್ರಮುಖ ಆಕರ ಗ್ರಂಥವಾಗಿರುವ “ನನ್ನ ಭಯಾಗ್ರಫಿ” ಕೃತಿಯು ಸಾಮಾನ್ಯವಾಗಿ ನಮಗೆ ಕಾಣ ಸಿಗುವ ಒಂದು ಕ್ರಮಬದ್ದ ಜೀವನ ಚರಿತ್ರೆಯಂತೆ ಕಂಡು ಬರುವುದಿಲ್ಲ. ಬದಲಿಗೆ ತಮ್ಮ ಅಸಂಖ್ಯ ಅನುಭವಗಳ ಪ್ರಾಮಾಣಿಕ ಸಂಗ್ರಹದಂತೆ ಲೇಖಕರು ಆತ್ಮ ಚರಿತ್ರೆಯನ್ನು ಓದುಗರ ಮುಂದೆ ಇಡುತ್ತಾರೆ. ನಾಟಕವನ್ನೂ ಅದೇ ಆಶಯದಲ್ಲಿ ಕಟ್ಟಿ ಸಾಹಿತಿಯ ಗತ ಜೀವನವನ್ನು ರಂಗದ ಮೇಲಿನ ಬೆಳಕು ಭಾವಗಳ ಮೂಲಕ ಒರೆ ಹಚ್ಚಿ ನೋಡುಗರಿಗೆ ಪುನರ್ ಪರಿಚಯಿಸಲು ಪ್ರಯತ್ನಿಸಲಾಗಿದೆ.
ಬೀಚಿಯವರು ತಮ್ಮ ಜೀವನದ ಅನುಭವಗಳನ್ನು ‘ನನ್ನ ಭಯಾಗ್ರಫಿ’ಯಲ್ಲಿ ಬಿಡಿ ಬಿಡಿಯಾಗಿ ದಾಖಲಿಸಿದ್ದಾರೆ. ಪ್ರತಿಯೊಂದು ಅನುಭವಗಳನ್ನು ಅವರು ಜೀವನದ ಒಂದೊಂದು ಮೆಟ್ಟಿಲು ಎಂದು ಕರೆಯುತ್ತಾರೆ. ಅದರಲ್ಲಿ ಪ್ರಸ್ತುತ ಮಾನವೀಯ ಮನಸ್ಥಿತಿಗೆ ಅವಶ್ಯಕ ಎನ್ನಿಸುವ ಮತ್ತು ಬೀಚಿಯವರನ್ನು ಆಸಕ್ತಿದಾಯಕವಾಗಿ ಈಗಿನ ಸಮಾಜಕ್ಕೆ ಪರಿಚಯಿಸುವ ಕೆಲವು ಅನುಭವಗಳನ್ನು ಹಾಗೂ ಅವರ ಇತರ ಪುಸ್ತಕಗಳಲ್ಲಿ ದಾಖಲಿಸಲ್ಪಟ್ಟಿರುವ ಕೆಲವು ಸನ್ನಿವೇಶಗಳನ್ನು ಆರಿಸಿ ಈ ನಾಟಕ ಕಟ್ಟಲಾಗಿದೆ. ಹಾಸ್ಯ, ಸಂಗೀತ, ಭಾವ ಹೀಗೆ ಸಾಕಷ್ಟು ಮನೋರಂಜನಾ ಅಂಶಗಳನ್ನು ನಾಟಕ ಒಳಗೊಂಡಿರುತ್ತದೆ.
“ಕಲಾವಿಲಾಸಿ” ತಂಡದ ಬಗ್ಗೆ
ಕಲೆಯಲ್ಲಿ ಬದುಕನ್ನು ಕಾಣುವ ಬಯಕೆಯಲ್ಲಿ ಕಟ್ಟಿರುವ ಕಲಾ ತಂಡ. ವಿವಿಧ ಕ್ಷೇತ್ರಗಳಲ್ಲಿ ವೃತ್ತಿಪರರಾಗಿದ್ದುಕೊಂಡು ಕಲೆಯ ಕಡೆಗೆ ಅಪಾರ ಒಲವುಳ್ಳ, ರಂಗಭೂಮಿ ಮತ್ತು ದೃಶ್ಯ ಮಾಧ್ಯಮದಲ್ಲಿ ಸುಮಾರು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿರುವ ನಾಡಿನ ವಿವಿಧ ಭಾಗದ ಯುವಕರು ಸೇರಿ ಕಟ್ಟಿರುವ ಕಲಾತಂಡ ಇದಾಗಿರುತ್ತದೆ. ಇದರಲ್ಲಿ ಸಾಫ್ಟ್ವೇರ್ ಉದ್ಯೋಗಿಗಳು, ಮಾಧ್ಯಮ ಉದ್ಯೋಗಿಗಳು, ಸರ್ಕಾರಿ ಸೇವೆಯಲ್ಲಿರುವವರು ಹೀಗೆ ಹಲವಾರು ವೃತ್ತಿಪರರು ಇದ್ದಾರೆ. ಪಿ. ಲಂಕೇಶರ ಸ್ಟೆಲ್ಲಾ ಎಂಬ ಹುಡುಗಿ ನಾಟಕ, ಪಥಿಕ, ಮಂಥನ ಎನ್ನುವ ಕಿರು ಚಿತ್ರಗಳು, ಪಸರಿಸಲಿ ಕನ್ನಡ ಎನ್ನುವ ಹಾಡಿನ ನಿರ್ದೇಶನ ಹಾಗೂ ಕನ್ನಡ ರಂಗಭೂಮಿಯ ಕೆಲವು ಪ್ರಮುಖ ನಾಟಕಗಳಲ್ಲಿ ಕೆಲಸ ಮಾಡಿರುವ ಸಣ್ಣ ಅನುಭವ ತಂಡದ ಸದಸ್ಯರಿಗೆ ಇರುತ್ತದೆ. ಕನ್ನಡ ಕಲಾ ರಂಗದ ಶ್ರೀಮಂತಿಕೆಗೆ ಪೂರಕವಾಗುವಂತೆ ಕನ್ನಡತನವನ್ನು ಬಿಂಬಿಸುವ ಕೆಲಸವನ್ನು ಮಾಡುವ ಗುರಿಯನ್ನು ಕಲಾವಿಲಾಸಿ ಹೊಂದಿರುತ್ತದೆ.