ಕುಂದಾಪುರ : ಕೋಟ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಬ್ರಹ್ಮಾವರ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘ, ಕೋಟತಟ್ಟು ಗ್ರಾಮ ಪಂಚಾಯತ್, ಉಸಿರು ಸಂಸ್ಥೆ ಕೋಟ, ಗೀತಾನಂದ ಫೌಂಡೇಶನ್, ಕುಂದಾಪ್ರ ಕನ್ನಡ ಪರಿಷತ್ತು ಉಡುಪಿ ಜಿಲ್ಲೆ, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಇವರ ಸಂಯುಕ್ತ ಆಶ್ರಯದಲ್ಲಿ ‘ಕಾಂಬ 2025’ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನವು ದಿನಾಂಕ 04 ಮೇ 2025ರಂದು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ “ಕುಂದಾಪ್ರ ಕನ್ನಡದ ನಿಜವಾದ ಸೊಗಡು ಕಾಣ ಸಿಗುವುದು ಗ್ರಾಮಾಂತರ ಭಾಗದಲ್ಲಿ, ಗ್ರಾಮೀಣ ಭಾಗದ ನಟ್ಟಿ ನೆಡುವ ಹೆಂಗಸರು, ಉಳುಮೆ ಮಾಡುವ ಗಂಡಸರು, ಭತ್ತ ತುಳಿಯುವವರು ಹೀಗೆ ಹತ್ತಾರು ವಿಭಾಗಗಳಿಂದ ಕುಂದಾಪ್ರ ಕನ್ನಡದ ಸೊಗಡು ಹರಿದು ಬಂದಿದೆ. ಅವೆಲ್ಲದರ ದಾಖಲೀಕರಣ ಅಗತ್ಯ. ಭಾಷಿ ಬೆಳ್ಸಕರೆ ಮೊದಲ್ ಮಕ್ಕಳಿಗ್ ಹೇಳಿ ಕೊಡ್ಕ್. ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕುಂದಾಪ್ರ ಭಾಷಿ ಬಗ್ಗೆ ಕೆಲಸ ಮಾಡಬೇಕು” ಎಂದು ಹೇಳಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಡಾ. ಅಣ್ಣಯ್ಯ ಕುಲಾಲ ಉಳ್ತೂರು ಮಾತನಾಡಿ “ನಮ್ ಭಾಷಿನ ಪ್ರೀತಿ ಮಾಡ್ಕ್, ಬೇರೆ ಭಾಷಿ ಬಗ್ಗೆ ಆಸಕ್ತಿ ತೋರ್ಸ್ಕ್. ಆಗಳಿಕೆ ಎಲ್ಲ ವಿಚಾರ ತಿಳುಕೆ ಸಾಧ್ಯ. ಕುಂದಾಪ್ರ ಕನ್ನಡದ ಈ ಕಾರ್ಯಕ್ರಮ ಒಂದಷ್ಟು ಜನರಿಗೆ ಪ್ರೇರಣೆಯಾಗಲಿ” ಎಂದರು.
ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಸತೀಶ್ ಬಾರಿಕೆರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್, ಹಿರಿಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗೆ ಅಚ್ಲಾಡಿ, ಕಾರಂತ ಟ್ರಸ್ಟಿನ ಟ್ರಸ್ಟಿ ಸುಬ್ರಾಯ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ, ಕಾರಂತ ಟ್ರಸ್ಟಿನ ಕಾರ್ಯದರ್ಶಿ ನರೇಂದ್ರ ಕುಮಾರ್ ಸ್ವಾಗತಿಸಿ, ಸತೀಶ್ ವಡ್ಡರ್ಸೆ ಕಾರ್ಯಕ್ರಮದ ಆಶಯದ ಬಗ್ಗೆ ಮಾತನಾಡಿದರು. ಬ್ರಹ್ಮಾವರ ತಾಲೂಕು ಕ.ಸಾ.ಪ. ಅಧ್ಯಕ್ಷ ರಾಮಚಂದ್ರ ಐತಾಳ ವಂದಿಸಿದರು. ಕವಿಗೋಷ್ಠಿ, ಕುಂದಕನ್ನಡದ ಹರಟೆ, ಅಧ್ಯಕ್ಷರ ಜೊತೆಗೆ ಮಾತುಕತೆ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ “ಕುಂದಾಪುರ ಕನ್ನಡ ಎಂಬ ಗ್ರಾಮೀಣ ಸೊಗಡಿನ ಕನ್ನಡ ಭಾಷಿಗೆ ಕೇವಲ ಭಾಷೆಯಾಗಿ ಉಳಿದಿಲ್ಲ, ಬದಲಾಗಿ ಕುಂದಾಪುರ ಕನ್ನಡ ಕರಾವಳಿ ಭಾಗದ ಜನರ ಬದುಕಾಗಿ ಜನ ಜೀವನದಲ್ಲಿ ಹಾಸು ಹೊಕ್ಕಿದೆ. ಮೊದಮೊದಲು ಕುಂದಾಪುರದ ಕನ್ನಡವನ್ನು ಸಾರ್ವಜನಿಕವಾಗಿ ಮಾತನಾಡಲು ತಡಕಾಡುತ್ತಿದ್ದ ದಿನಗಳಿದ್ದವು. ಇಂದಿನ ದಿನಗಳಲ್ಲಿ ಕುಂದಾಪ್ರ ಕನ್ನಡಕ್ಕೆ ತನ್ನದೇ ಆದ ಗೌರವ, ಘನತೆಗಳು ಹೆಚ್ಚುತ್ತಿವೆ. ಆದ್ದರಿಂದ ಕುಂದಾಪ್ರ ಕನ್ನಡವನ್ನು ಹೆಮ್ಮೆಯಿಂದ ಹಂಚಿಕೊಳ್ಳೋಣ” ಎಂದು ಕರೆಯಿತ್ತರು.
ಕುಂದಾಪ್ರ ಕನ್ನಡದ ಚಿಂತಕ ಡಾ. ಅಣ್ಣಯ್ಯ ಕುಲಾಲ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಡಾ. ಅಣ್ಣಯ್ಯ ಕುಲಾಲ್ ದಂಪತಿಗಳನ್ನು ಕುಂದಾಪ್ರ ಕನ್ನಡಿಗರ ಪರವಾಗಿ ಸನ್ಮಾನಿಸಲಾಯಿತು. ಚಿಂತಕ ಡಾ. ಬಾಲಕೃಷ್ಣ ಶೆಟ್ಟಿ ಸಮಾರೋಪ ಭಾಷಣ ಮಾಡಿದರು. ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಕುಂದರ್‌ಬಾರಿಕೆರೆ, ಪಿಡಿಓ ರವೀಂದ್ರ ರಾವ್, ಕ.ಸಾ.ಪ.ದ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾರಂತ ಪ್ರತಿಷ್ಠಾನದ ಟ್ರಸ್ಪಿ ಸುಶೀಲ ಸೋಮಶೇಖರ, ಸರಸ್ವತಿ, ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್, ಕ.ಸಾ.ಪ.ದ ಪ್ರಧಾನ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಸತೀಶ ವಡ್ಡರ್ಸೆ ಉಪಸ್ಥಿತರಿದ್ದರು. ಅಚ್ಯುತ ಪೂಜಾರಿ ಕಾರ್ಕಡ, ರವಿ ಬನ್ನಾಡಿ, ಚಂದ್ರಕಾಂತ್ ಕಾರ್ಕಡ ಇವರಿಂದ ಕುಂದಗನ್ನಡ ಗೀತ ಗಾಯನ ಮತ್ತು ವಿಕಸನ ಶಿಬಿರದ ಶಿಬಿರಾರ್ಥಿಗಳಿಂದ ನೃತ್ಯ ವೈವಿಧ್ಯ ಪ್ರಸ್ತುತಗೊಂಡಿತು.