ಕೊಣಾಜೆ: ಮಂಗಳೂರು ವಿ. ವಿ. ಯ ಕನಕದಾಸ ಸಂಶೋಧನಾ ಕೇಂದ್ರದ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ‘ಕನಕ ಕೀರ್ತನ ಗಂಗೋತ್ರಿ’ ಶೈಕ್ಷಣಿಕ ಸಂಸ್ಥೆ ಗಳ, ಸಾರ್ವಜನಿಕರ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಕನಕದಾಸರ ಕೀರ್ತನೆಗಳ ಸಮೂಹ ಗಾಯನ ಕಾರ್ಯಕ್ರಮವು ದಿನಾಂಕ 02-02-2024ರ ಶುಕ್ರವಾರದಂದು ಮಂಗಳೂರು ವಿ. ವಿ. ಯ ಮಂಗಳಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿಯ ರಂಜನಿ ಮೆಮೋರಿಯಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಪ್ರೊ. ವಿ. ಅರವಿಂದ ಹೆಬ್ಬಾರ್ ಮಾತನಾಡಿ “ಕನಕದಾಸರು, ಪುರಂದರ ದಾಸರು, ವಾದಿರಾಜರು ಸಮಕಾಲೀನರು ಮತ್ತು ಭಕ್ತಿಪಂಥದ ವಕ್ತಾರರಾಗಿ ಗುರುತಿಸಿಕೊಂಡವರು. ಸಂಸ್ಕೃತ ಪಾಂಡಿತ್ಯವೇ ಅಧಿಕವಾಗಿದ್ದ ಕಾಲಘಟ್ಟದಲ್ಲಿ ವ್ಯಾಸಕೂಟದ ಬದಲಾಗಿ ದಾಸಕೂಟ ರಚನೆಯಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಮನ್ನಣೆ ದೊರೆಯಿತು. ದಾಸಕೂಟದ ಕನಕದಾಸರ ಆತ್ಮದ ಭಾಷೆ ಕನ್ನಡವಾಗಿತ್ತು. ಕನ್ನಡದಲ್ಲಿ ತನ್ಮಯರಾಗಿ ಅವರು ಭಕ್ತಿ ಮತ್ತು ವೈಚಾರಿಕತೆಯನ್ನು ಮಂಡಿಸಿದರು.” ಎಂದರು.
ಜಾನಪದ ವಿದ್ವಾಂಸ ಪ್ರೊ. ಚಿನ್ನಪ್ಪಗೌಡ ಮಾತನಾಡಿ “ಸಾಹಿತ್ಯದ, ಸಂಗೀತದ ವಿದ್ಯಾರ್ಥಿಗಳಿಗೆ ಕನಕ ಬಹಳ ಮುಖ್ಯವಾಗುತ್ತಾನೆ. ಪ್ರಾಚೀನ ಕನ್ನಡ ಸಾಹಿತ್ಯ ಪರಂಪರೆಗೆ ಸೇರಿಕೊಂಡ ಬಹಳ ವಿಶಿಷ್ಠವಾದ ಕಾವ್ಯಧಾರೆ ಕೀರ್ತನೆಗಳಾಗಿವೆ. ಕೀರ್ತನೆಗಳ ಮೂಲಕ ಸಾಹಿತ್ಯವು ಸಾರ್ವಜನಿಕ ವಲಯದಲ್ಲಿ ತೆರದುಕೊಂಡಿರುವುದನ್ನು ನಾವು ಗಮನಿಸಬಹುದು.” ಎಂದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿ.ವಿ. ಹಣಕಾಸು ಅಧಿಕಾರಿ ಪ್ರೊ.ವೈ. ಸಂಗಪ್ಪ ಮಾತನಾಡಿ “ಅಂದಿನ ಕಾಲದಿಂದ ಇಂದಿನ ಕಾಲದವರೆಗೆ ಸಮಾಜದಲ್ಲಿ ಎದುರಾಗುವ ಅನೇಕ ಜಟಿಲ ಸಮಸ್ಯೆಗಳಿಗೆ ವಚನಗಳಲ್ಲಿಯೇ ಪರಿಹಾರ ಮಾರ್ಗೋಪಾಯಗಳು ಇರುವುದನ್ನು ನಾವು ಕಂಡುಕೊಳ್ಳಬಹುದು.” ಎಂದರು.
ಮಂಗಳೂರು ವಿ. ವಿ. ಸಮಾಜಕಾರ್ಯ ಅಧ್ಯಯನ ವಿಭಾಗದ ಅಧ್ಯಕ್ಷ ಡಾ. ಮೋಹನ್ ಎಸ್. ಸಿಂಘೆ, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರೊ. ಸೋಮಣ್ಣ ಹೊಂಗಳ್ಳಿ ಮಾತನಾಡಿದರು.
ಡಾ. ಧನಂಜಯ ಕುಂಬ್ಳೆ ಸ್ವಾಗತಿಸಿ, ಶ್ರೀಮತಿ ವಿಸ್ಮಾ ವಂದಿಸಿದರು. ಡಾ. ಉಷಾರಾಣಿ ನಿರೂಪಿಸಿದರು. ಶ್ರೀದೇವಿ ಕಲ್ಲಡ್ಕ ಕನಕದಾಸರ ಕೀರ್ತನೆ ಹಾಡಿದರು. ಬಳಿಕ ‘ಕನಕ ಕೀರ್ತನ ಗಂಗೋತ್ರಿ’ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯ ಕ್ರಮ ನಡೆಯಿತು. ಸುಳ್ಯ, ಉಡುಪಿ, ಕಾರ್ಕಳ, ದ.ಕ ಜಿಲ್ಲೆಯ ವಿವಿಧೆಡೆಗಳಿಂದ 118 ಗಾಯಕರು ಭಾಗವಹಿಸಿದ್ದರು.