ಮಂಗಳೂರು: ಮಂಗಳೂರಿನ ತುಳು ಸಾಹಿತ್ಯ ಅಕಾಡೆಮಿ ಇದರ ಸಿರಿಚಾವಡಿಯಲ್ಲಿ ವಿದ್ವಾಂಸರೊಂದಿಗೆ ಸಮಾಲೋಚನಾ ಗೋಷ್ಠಿ ಕಾರ್ಯಕ್ರಮವು 04 ಸೆಪ್ಟೆಂಬರ್ 2024ರ ಬುಧವಾರದಂದು ನಡೆಯಿತು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಕಾ. ತ. ಚಿಕ್ಕಣ್ಣ ಮಾತನಾಡಿ “ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ನಿರಂತರವಾಗಿ ಕನಕದಾಸರ ಬಗ್ಗೆ ಚಿಂತನ ಜಾಗೃತಿ ಕಾರ್ಯ ನಡೆಯುತ್ತಿದೆ. ಈಗಾಗಲೇ ಬೀದರ್‌ನಿಂದ ಕಾಸರಗೋಡು ವರೆಗೆ 250 ಕಾಲೇಜುಗಳ 50 ಸಾವಿರ ಮಕ್ಕಳಲ್ಲಿ ಕನಕದಾಸರ ಬಗ್ಗೆ ಚಿಂತನ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಕನಕದಾಸ ಹಾಗೂ ತತ್ವಪದಕಾರರ ಅಧ್ಯಯನದ ಭಾಗವಾಗಿ ರಾಜ್ಯಾದ್ಯಂತ ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ಸಂವೇದನೆ ರೂಪಿಸುವ ಭಾಗವಾಗಿ ‘ಕನಕ ಓದು’ ಎನ್ನುವ ಕಾರ್ಯಕ್ರಮ ನಡೆಸಲಾಗುತ್ತಿದೆ. ತತ್ವಪದಗಳ ಸಂಗ್ರಹ, ಪ್ರಕಾಶನ ನಡೆಯುತ್ತಿದೆ. 250 ತತ್ವಪದಕಾರರ ಪರಿಚಯ ಗ್ರಂಥ ಹೊರತರುವ ಯೋಜನೆ ಹಾಗೂ ಕನಕ ಸಾಹಿತ್ಯ, ಕೀರ್ತನೆ ಸಾಹಿತ್ಯಗಳ ತೌಲನಿಕ ಅಧ್ಯಯನ ಮಾಡುವುದಕ್ಕೂ ಯೋಜನೆ ರೂಪಿಸಲಾಗಿದೆ.” ಎಂದರು.
ಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ವಿದ್ವಾಂಸ ಪ್ರೊ. ಎ. ವಿ. ನಾವಡ “ಕನಕ ಅಧ್ಯಯನ ಮೂಲಕ ಹೊಸ ದೃಷ್ಟಿಕೋನವನ್ನು ಮೂಡಿಸುವ ಕೇಂದ್ರದ ಕಾರ್ಯ ಶ್ಲಾಘನೀಯ. ಕನಕದಾಸರ ತತ್ವಪದಗಳ ಹಾಗೂ ಕೀರ್ತನೆಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆದಿದೆ. ಆದರೆ ಅವರ ಮಹಾಕಾವ್ಯ ‘ಮೋಹನ ತರಂಗಿಣಿ’ ಬಗ್ಗೆ ಮತ್ತು ಅದರ ತಾತ್ವಿಕ-ಭಾಷಿಕ ಸಾಮರಸ್ಯದ ಬಗ್ಗೆ ಇನ್ನಷ್ಟು ಆಳವಾದ ಸಂಶೋಧನೆ ನಡೆಯಬೇಕು.” ಎಂದು ಸಲಹೆ ಮಾಡಿದರು.
ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ, ನಿವೃತ್ತ ಉಪನ್ಯಾಸಕ ಪ್ರೊ. ಉದಯ ಕುಮಾರ್ ಇರ್ವತ್ತೂರು, ಡಾ. ಮೀನಾಕ್ಷಿ ರಾಮಚಂದ್ರ, ರೂಪಕಲಾ ಆಳ್ವ ಮುಂತಾದವರು ಹಲವು ಉಪಯುಕ್ತ ಸಲಹೆ ನೀಡಿದರು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ ಗಟ್ಟಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್, ಮಂಗಳೂರು ವಿ. ವಿ. ಕನಕ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ಧನಂಜಯ ಕುಂಬ್ಳೆ, ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು. ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಸ್ವಾಗತಿಸಿದರು.