ಬೆಂಗಳೂರು : ಸಾಹಿತ್ಯಾಸಕ್ತರಿಗಾಗಿ ರಾಷ್ಟ್ರೋತ್ಥಾನ ಸಾಹಿತ್ಯವು ‘ಕನ್ನಡ ಪುಸ್ತಕ ಹಬ್ಬ’ದ 5ನೇ ಆವೃತ್ತಿಯು ಕೆಂಪೇಗೌಡ ನಗರದ `ಕೇಶವಶಿಲ್ಪ’ ಸಭಾಂಗಣದಲ್ಲಿ ದಿನಾಂಕ 01 ನವೆಂಬರ್ 2025ರಿಂದ 07 ಡಿಸೆಂಬರ್ 2025ರವರೆಗೆ 37 ದಿನಗಳ ಕಾಲ ನಡೆಯಲಿದೆ ಎಂದು ರಾಷ್ಟ್ರೋತ್ಥಾನ ಸಾಹಿತ್ಯದ ವಿಶ್ವಸ್ಥ ಕೆ.ಎಸ್. ನಾರಾಯಣ್ ತಿಳಿಸಿದ್ದಾರೆ.
ದಿನಾಂಕ 01 ನವೆಂಬರ್ 2025ರಂದು ಬೆಳಗ್ಗೆ 11-00 ಗಂಟೆಗೆ ಮೈಸೂರು ರಾಜವಂಶಸ್ಥರು, ಕೊಡಗು-ಮೈಸೂರು ಕ್ಷೇತ್ರದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪುಸ್ತಕ ಹಬ್ಬವನ್ನು ಉದ್ಘಾಟಿಸಲಿದ್ದಾರೆ. ಈ ಬಾರಿಯ 37 ದಿನಗಳ ಪ್ರತಿದಿನ ಬೆಳಗ್ಗೆ 10-00 ಗಂಟೆಯಿಂದ ರಾತ್ರಿ 9-00 ಗಂಟೆವರೆಗೆ ನಡೆಯುವ ಪುಸ್ತಕ ಹಬ್ಬದಲ್ಲಿ ರಾಷ್ಟ್ರೋತ್ಥಾನ ಪ್ರಕಾಶನದ ಪುಸ್ತಕಗಳು ಮಾತ್ರವಲ್ಲದೇ, ಬೇರೆ ಬೇರೆ ಪ್ರಕಾಶಕರ ಪ್ರಮುಖ ಸಾಹಿತಿ-ಲೇಖಕರ ಪುಸ್ತಕಗಳು 10%ರಿಂದ 50% ವರೆಗಿನ ರಿಯಾಯಿತಿಯಲ್ಲಿ ದೊರೆಯಲಿವೆ. ಪ್ರತಿದಿನ ಸಂಜೆ ಸಂಗೀತ, ನೃತ್ಯ, ಜಾನಪದ, ಏಕವ್ಯಕ್ತಿ ತಾಳಮದ್ದಲೆ, ಯಕ್ಷಗಾನ, ಹಾಸ್ಯ, ಮ್ಯಾಜಿಕ್, ವಿವಿಧ ವಾದ್ಯಗೋಷ್ಠಿಗಳು, ಹರಿಕಥೆ, ಗಮಕ, ನಾಟಕ, ಅಷ್ಟಾವಧಾನ, ತಾಳವಾದ್ಯ ಕಚೇರಿ ಹೀಗೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇದರೊಂದಿಗೆ ಈ ಬಾರಿ ಸುಮಾರು 10 ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಮತ್ತು ಚರ್ಚಾಸ್ಪರ್ಧೆ, ಶಾಲಾ ವಿದ್ಯಾರ್ಥಿಗಳಿಗಾಗಿ ಪುಸ್ತಕ ಪರಿಚಯ ಮತ್ತು ಲೇಖನ ಸ್ಪರ್ಧೆಗಳನ್ನು ಯೋಜಿಸಲಾಗಿದೆ. ಮಕ್ಕಳಿಗಾಗಿ ಮಂಕುತಿಮ್ಮನ ಕಗ್ಗ ಹೇಳುವ ಸ್ಪರ್ಧೆ, ಕನ್ನಡ ಗದ್ಯ ಮತ್ತು ಪದ್ಯಭಾಗಗಳನ್ನು ತಪ್ಪಿಲ್ಲದೆ ಓದುವ ಸ್ಪರ್ಧೆ ಹಾಗೂ ಆಶುಭಾಷಣ ಸ್ಪರ್ಧೆಗಳು ನಡೆಯಲಿದ್ದು, ಇವುಗಳಿಗೆ ಉಚಿತ ಪ್ರವೇಶ ಇರುತ್ತದೆ.
