ಅಶ್ವತ್ಥಾಮ ನಾಟೌಟ್ – ರಚನೆ, ವಿನ್ಯಾಸ ಮತ್ತು ನಿರ್ದೇಶನ ಮೋಹನಚಂದ್ರ, ಪ್ರಸ್ತುತಿ ಅಯನ ನಾಟಕದ ಮನೆ. ತಂದೆ ದ್ರೋಣನಿಂದ ಪಡೆದ ಚಿರಂಜೀವಿತ್ವದ ವರವನ್ನು, ಪ್ರಾಸಂಗಿಕ ವೈಪರೀತ್ಯಗಳಿಂದ ಶಾಪವಾಗಿ ಅನುಭವಿಸುವಂತಾದ ಅಶ್ವತ್ಥಾಮನ ಪ್ರಸಂಗ. ಇಂದಿಗೂ ಅಶ್ವತ್ಥಾಮ ಬದುಕಿದ್ದಾನೆ ಎಂದೊಪ್ಪಿ, ಅದಕ್ಕೆ ಸರಿಯಾಗಿ ಆತನನ್ನು ಹುಚ್ಚಾಸ್ಪತ್ರೆಯಲ್ಲಿ ಗುರುತಿಸುವುದರೊಡನೆ ಪ್ರದರ್ಶನ ತೊಡಗುತ್ತದೆ. ಅಲ್ಲಿ ಅಶ್ವತ್ಥಾಮನ ಭ್ರಾಮಕ ಕಣ್ಣುಗಳಿಗೆ, ಚಿಕಿತ್ಸೆಗೆ ಮುಂದಾಗುವ ಮನೋವೈದ್ಯ ಮತ್ತು ಸಹಾಯಕರು (ಪ್ರಹರಿ) ಪುನರ್ಜನ್ಮದ ಕೃಷ್ಣ ಶಕುನಿಯರಾಗಿ ತೋರುತ್ತಾರೆ. ಅದನ್ನವರು ಪ್ರಜ್ಞಾಪೂರ್ವಕವಾಗಿ ತಿರಸ್ಕರಿಸಿದರೂ ಚಿಕಿತ್ಸಾಕ್ರಮವಾಗಿ ಒಪ್ಪಿ ನಡೆಯುವಲ್ಲಿಗೆ ನಾಟಕ ಹೊಸದೇ ಆಯಾಮವನ್ನು ಪಡೆಯುತ್ತದೆ. ಹಾಗೆ ನಡೆಯುವ ನಂಬಿಕೆ (ಉದಾ : ನೂರೊಂದು ಕೌರವರ ಜನನ, ದ್ರೌಪದಿ ಅಕ್ಷಯಾಂಬರ…) ಮತ್ತು ವೈಚಾರಿಕತೆಗಳ ಮುಖಾಮುಖಿ ಸ್ವಾರಸ್ಯವನ್ನು ಹೆಚ್ಚಿಸುತ್ತದೆ.
ಪುರಾಣ ವ್ಯಕ್ತಿ ಹಾಗೂ ಸತ್ಯಗಳು ಭಕ್ತ ಜನ ನಂಬಿದಂತೆ ಸಾತ್ವಿಕ (ಅಥವಾ ತಾಮಸಿಕ) ಏಕ ಪ್ರವಾಹವಲ್ಲ, ಎಲ್ಲ ಕಾಲದಲ್ಲೂ ಮಾನವ ಮತಿ ಮತ್ತು ಗತಿ ಬಹುಮುಖಿಯಾದದ್ದು ಮತ್ತು ಬಹುತೇಕ ಸ್ವಾರ್ಥಪರವಾದದ್ದು ಎನ್ನುವುದು ಸ್ಪಷ್ಟವಾಗುತ್ತದೆ. ಸಂಸಾರ ಸುಖ ವಂಚಿತನಾದ ಭೀಷ್ಮ, ಗಾಂಧಾರದ ಸೋಲಿನ ಪ್ರತೀಕವಾದ ಗಾಂಧಾರಿ, ದೊಡ್ಡ ಮನೆಯ ಅನಾಚಾರಗಳ ರೂಪಕವಾದ ನೂರೊಂದು ಕೌರವರು, ಬಂಧುಗಳ ಸಾವಿನ ಸೇಡಿಗೆ ದುಡಿದ ಶಕುನಿ, ಗೊಲ್ಲರಿಗೆ ನಿಷ್ಕಂಟಕ ರಾಜ್ಯರೂಪಿಸಿದ ಕೃಷ್ಣ…. ಈ ಸೂಕ್ಷ್ಮಗಳ ಕೊನೆಯಲ್ಲಿ ಉಪಪಾಂಡವರ ತಲೆ ತರಿದ ಅಶ್ವತ್ಥಾಮನಾದರೂ ದುರ್ಯೋಧನ ನಿಷ್ಠೆಯವನಲ್ಲ, ದ್ರುಪದನಿಂದಾದ ದ್ರೋಣಾಪಮಾನ ತೀರುವಳಿಗೇ ಹೆಣಗಿದವನು ಎಂಬಲ್ಲಿಗೆ ಕಥನ ಸಾರ್ವಕಾಲಿಕ ಸತ್ಯ ಸಾರಿ ಮುಗಿಯುತ್ತದೆ.
ಕಥೆಯ ಹೊಸತನ, ಸಂವಾದಗಳ ಸ್ಪಷ್ಟತೆ, ಮಹಾಭಾರತದಿಂದ ಆಧುನಿಕ ಭಾರತದವರೆಗೇನು, ನಾಟಕ ನೋಡಲು ನೆರೆದ ನಮ್ಮವರೆಗೂ ಸಾರಿದ ಸಂದೇಶದಿಂದ ಪ್ರಯೋಗ ನಿಸ್ಸಂದೇಹವಾಗಿ ಎಲ್ಲರನ್ನೂ ಹಿಡಿದಿಟ್ಟಿತ್ತು. ಆದರೂ ನನ್ನ ಒಂದು ನೋಟದ ಗ್ರಹಿಕೆಯ ಮಿತಿಯೊಳಗೆ ಮೂಡಿದ ಕೆಲವು ಭಿನ್ನ ಅಭಿಪ್ರಾಯಗಳನ್ನು ಹೇಳಬಹುದಾದರೆ, ಮೊದಲು ಭಾಷಾರೂಪಗಳ ನೆಲೆ ಸ್ಪಷ್ಟವಾದದ್ದು ಸಾಲದೆನ್ನಿಸಿತು (ವಾಚ್ ಮ್ಯಾನ್ ಉವಾಚ “ತಂಬಾಕಿನ ಧೂಮ ಸೇವನೆ”….). ಪ್ರಯೋಗದ ಓಘಕ್ಕೆ ಏನೂ ಹೊಂದದಂತೆ (ವಿಷಯ ಸರಿಯೇ ಇದ್ದರೂ) ವೈದ್ಯನಾದವನು ಮನೋವಿಜ್ಞಾನ ಪಾಠ ಮಾಡಿ, ಚಪ್ಪಾಳೆ ಗಿಟ್ಟಿಸುವುದು! ಆಶಯಗಳನ್ನು ವರ್ಷಗಳ ಅಥವಾ ಒಂದು ಆಯುರ್ಮಾನದ ಬಂಧ ಹಿಡಿಯಲಾರದು ಎನ್ನುವ ಚೂಪು ಪಡೆದದ್ದು ಸಾಕಾಗಲಿಲ್ಲ…. ಏನೇ ಇರಲಿ, ಅದ್ಭುತ ರಂಗಪ್ರಸ್ತುತಿ ನೋಡಿದ ಸಂತೋಷ ಕೊಟ್ಟದ್ದಕ್ಕೆ ‘ಅಯನ ನಾಟಕದ ಮನೆ’ಗೂ ವೇದಿಕೆಯಾದ ‘ಕಲಾಗ್ರಾಮ’ಕ್ಕೂ ಧನ್ಯವಾದಗಳು.
ಜಿ. ಎನ್. ಅಶೋಕವರ್ಧನ
ವಿಮರ್ಶಕರು, ಮಂಗಳೂರು
ಚಿತ್ರ ಕೃಪೆ – ಅರವಿಂದ ಕುಡ್ಲ