ಬೆಂಗಳೂರು: ಕನ್ನಡ ಪುಸ್ತಕೋದ್ಯಮ ಸಂಕಷ್ಟದಲ್ಲಿದ್ದು ಕನ್ನಡ ಪುಸ್ತಕಗಳನ್ನು ಖರೀದಿಸಲು ಮುಂಬರುವ ಬಜೆಟ್ ನಲ್ಲಿ 25ಕೋಟಿ ಮೀಸಲಿಡಬೇಕು ಎಂದು ಪ್ರಕಾಶಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ನಿಯೋಗವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರನ್ನು 30-05-2023ರ ಮಂಗಳವಾರ ಭೇಟಿಮಾಡಿ ಪುಸ್ತಕೋದ್ಯಮದ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿಕೊಂಡರು.
ಸಾರ್ವಜರಿಕ ಗ್ರಂಥಾಲಯ ಇಲಾಖೆಯು ಏಕಗವಾಕ್ಷಿ ಯೋಜನೆಯಡಿ 2020 ರಿಂದ 3 ವರ್ಷಗಳ ಪುಸ್ತಕ ಖರೀದಿ ನಡೆಸಿಲ್ಲ. ಇದರಿಂದಾಗಿ ರಾಜ್ಯದ ಎಲ್ಲೆಡೆ ಓದುಗರು ಹೊಸ ಕೃತಿಗಳಿಂದ ವಂಚಿತರಾಗಿದ್ದಾರೆ ಬಿ.ಬಿ.ಎಂ.ಪಿ 450ಕೋಟಿ ಗ್ರಂಥಾಲಯ ಕರ ಸಂಗ್ರಹಿಸಿದೆ ಇದನ್ನು ಸಂಬಂಧಿಸಿದ ಇಲಾಖೆಗೆ ಹತ್ತಾಂತರಿಸಿಲ್ಲ ಇದರಿಂದಾಗಿ ಪ್ರಕಾಶನ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ ಎಂದು ಪ್ರಕಾಶಕರು ಹೇಳಿದರು. ಪುಸ್ತಕ ಪ್ರಕಟಣೆ ವೆಚ್ಚ ಗಗನಕ್ಕೇರಿದೆ ಆದರೆ ಸಗಟು ಖರೀದಿಯಲ್ಲಿ ಮಾತ್ರ ಹಳೆಯ ದರವನ್ನೇ ನಿಗದಿಪಡಿಸಲಾಗಿದೆ.
ಹೆಚ್ಚಿರುವ ಕಾಗದ, ಮುದ್ರಣ ಬೆಲೆ, ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ಪ್ರಕಾಶನ ರಂಗ ತತ್ತರಿಸಿದೆ. ಆದ್ದರಿಂದ ಒಂದು ಪುಟದ ಬೆಲೆಯನ್ನು ಇನ್ನೂ 40 ಪೈಸೆ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಧು ಬಂಗಾರಪ್ಪ, ‘ರಾಜ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಪ್ರಕಾಶನ ರಂಗ, ಕೆಲವು ವರ್ಷಗಳಿಂದ ದುಸ್ಥಿತಿಗೆ ತಲುಪಿರುವುದು ಗಮನಕ್ಕೆ ಬಂದಿದೆ. ಈ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲಾಗುವುದು. ಪುಸ್ತಕ ಸಂಸ್ಕೃತಿಯನ್ನು ಬಲಪಡಿಸಲಾಗುವುದು’ ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ಸಂಘದ ಅಧ್ಯಕ್ಷ ನಿಡಸಾಲೆ ಪುಟಸ್ವಾಮಯ್ಯ, ಕಾರ್ಯದರ್ಶಿ ಆರ್. ದೊಡ್ಡೇಗೌಡ, ಪ್ರಕಾಶಕರಾದ ನಿತಿನ್ ಶಾ, ಜಿ.ಎನ್. ಮೋಹನ್, ಮಾನಸ, ಬಿ.ಕೆ.ಸುರೇಶ್, ನಿಡಸಾಲೆ ವಿಜಯ್ ಇದರು.