ಕಾರ್ಕಳ : ಕರ್ಕಳದ ಕ್ರಿಯೇಟಿವ್ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿದ ಸಂಸ್ಥೆಯ ಸಹ ಸಂಸ್ಥಾಪಕರಾದ ಶ್ರೀ ಅಶ್ವತ್ ಎಸ್. ಎಲ್. ಮಾತನಾಡಿ “ಕನ್ನಡ ನಾಡು ತನ್ನದೇ ಆದ ಇತಿಹಾಸ ಪರಂಪರೆಯನ್ನು ಹೊಂದಿದ್ದು, ಈ ನಾಡನ್ನು ಕಟ್ಟುವಲ್ಲಿ ಅನೇಕ ಮಹನೀಯರ ತ್ಯಾಗ, ಹೋರಾಟ, ಬಲಿದಾನಗಳು ನಮ್ಮೆಲ್ಲರಿಗೂ ಸ್ಪೂರ್ತಿದಾಯಕ. ಕನ್ನಡ ನಾಡಿನ ನೆಲ, ಜಲ, ಭಾಷೆಯನ್ನು ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಕ್ರಿಯೇಟಿವ್ ಸಂಸ್ಥೆಯು ಸಾಹಿತ್ಯ ಕ್ಷೇತ್ರದಲ್ಲಿನ ಮಹನೀಯರನ್ನು ಗುರುತಿಸಿ ಗೌರವಿಸಿ ಅವರ ಸಾಧನೆ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವಲ್ಲಿ ಕಾರ್ಯೋನ್ಮುಖವಾಗಿದೆ.” ಎಂದರು.
ಈ ಸಂದರ್ಭದಲ್ಲಿ ಕನ್ನಡ ಉಪನ್ಯಾಸಕರಾದ ಶ್ರೀ ಶಿವಕುಮಾರ್, ಶ್ರೀ ಸಂತೋಷ್ ಹಾಗೂ ವಾಣಿಜ್ಯ ಶಾಸ್ತ್ರದ ಉಪನ್ಯಾಸಕರಾದ ಶ್ರೀ ರಾಘವೇಂದ್ರ ಮತ್ತು ನಿಲಯ ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕ್ರಿಯೇಟಿವ್ ಸಂಸ್ಥೆಯ ವಿದ್ಯಾರ್ಥಿನಿಯರಿಂದ ಕನ್ನಡ ಗೀತ ಗಾಯನ ನೆರವೇರಿತು.