ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಸಭಾ ಮಂದಿರದಲ್ಲಿ ಶ್ರೀಮತಿ ಲಕ್ಷ್ಮೀದೇವಿ ಮತ್ತು ಎಸ್.ರಾಮಚಂದ್ರ ಬಾಯರ್ ದತ್ತಿ, ಶ್ರೀಮತಿ ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ ದತ್ತಿ ಹಾಗೂ ಶ್ರೀಮತಿ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಹಳ್ಳಿ ದತ್ತಿ ಪ್ರಶಸ್ತಿಗಳ ಪ್ರದಾನ ಸಮಾರಂಭವು ದಿನಾಂಕ 04-8-2023ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಹಿ.ಚಿ.ಬೋರಲಿಂಗಯ್ಯನವರು ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ನಿಜವಾದ ಸಾಧಕರಿಗೆ ಯೋಗ್ಯ ಪ್ರಶಸ್ತಿಗಳು ಲಭ್ಯವಾಗುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಿಷ್ಟೆಯಿಂದ ಕೆಲಸ ಮಾಡುತ್ತಿದೆ. ನಮ್ಮ ದೇಶದಲ್ಲಿ ಅತಿಹೆಚ್ಚು ಜನಪದ ಕಲಾ ಪ್ರಾಕಾರಗಳು ಇವೆ. ನಮ್ಮ ನಾಡಿನಲ್ಲಿ ಬರೋಬರಿ 184 ಅಧಿಕೃತ ಕಲಾ ಪ್ರಾಕಾರಗಳನ್ನು ದಾಖಲಿಸಲಾಗಿದೆ. 21 ಜನಪದ ಮಹಾಕಾವ್ಯಗಳು ಪ್ರಕಟಗೊಂಡಿವೆ. ಆದರೂ ಕನ್ನಡ ನಾಡಿನಲ್ಲಿ ಬಹುತೇಕ ಜನಪದ ಕಲೆಗಳು ನಾಪತ್ತೆಯಾಗುವ ಹಂತಕ್ಕೆ ಬಂದಿವೆ. ಮೂಡಲಪಾಯ ಶೇ.99ರಷ್ಟು ನಾಪತ್ತೆಯಾಗಿದೆ.” ಎಂದು ಕಳವಳ ವ್ಯಕ್ತ ಪಡಿಸಿದರು.
ಪ್ರಶಸ್ತಿ ಪ್ರದಾನ ಮಾಡಲು ಆಗಮಿಸಿದ ಚಲನಚಿತ್ರ ನಿರ್ಮಾಪಕಿ ಶ್ರೀಮತಿ ಲಕ್ಷ್ಮೀ ವಜ್ರಮುನಿ ಮಾತನಾಡುತ್ತಾ “ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಉಳಿಸಿ ಬೆಳೆಸುವ ಕೆಲಸವನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತಿದೆ. ಆದರೆ ನಮ್ಮ ಜನರು ಕನ್ನಡದ ಮೇಲಿನ ಅಭಿಮಾನವನ್ನು ಕಡಿಮೆ ಮಾಡಿಕೊಳ್ಳದೆ ಕನ್ನಡದ ಕಾರ್ಯಕ್ರಮಗಳ ಜೊತೆಗೆ ನಾಟಕ, ಯಕ್ಷಗಾನ ಹಾಗೂ ಚಲನಚಿತ್ರಗಳನ್ನು ಹೆಚ್ಚು ಆಸಕ್ತಿಯಿಂದ ನೋಡುವ ಕಾರ್ಯಗಳು ನಡೆಯಬೇಕಿದೆ. ನಮ್ಮ ಸಂಸ್ಕೃತಿ ಉಳಿದಾಗ ನಮ್ಮ ಕನ್ನಡ ನವಿರಾಗಿ ನಳನಳಿಸುವುದು.” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು “ಕನ್ನಡದ ಜನಪದರು ಆರ್ಥಿಕವಾಗಿ ಬಡತನವನ್ನು ಕಂಡಿರಬಹುದು, ಆದರೆ ಅವರ ಕಲಾ ಸಿರಿವಂತಿಕೆಯ ಮುಂದೆ ಯಾವುದೇ ಐಶ್ವರ್ಯ ನಿಲ್ಲಲು ಸಾಧ್ಯವೇ ಇಲ್ಲ. ಕನ್ನಡ ನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಜನಪದರ ಕೊಡುಗೆ ಅಪಾರವಾದದ್ದು. ಕನ್ನಡ ಸಾಹಿತ್ಯ ಪರಿಷತ್ತು ಎಲೆಯ ಮರೆಯ ಪ್ರತಿಭೆಗಳನ್ನು ಗುರುತಿಸಿ, ಗೌರವಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಲೇ ಬಂದಿದೆ. ಅದಕ್ಕಾಗಿಯೇ ಸಮಸ್ತ ಕನ್ನಡಿಗರು ಕಳೆದ 108ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಅಪಾರವಾದ ಗೌರವ ಹಾಗೂ ವಿಶ್ವಾಸವನ್ನು ಇಟ್ಟುಕೊಂಡು ಬಂದಿದ್ದಾರೆ. ಪರಿಣಾಮವಾಗಿ ಪರಿಷತ್ತಿನಲ್ಲಿ 2000ಕ್ಕೂ ಹೆಚ್ಚು ದತ್ತಿ ಪ್ರಶಸ್ತಿಗಳನ್ನು ಕನ್ನಡಿಗರು ಅಭಿಮಾನದಿಂದ ಸ್ಥಾಪಿಸಿರುತ್ತಾರೆ. ದತ್ತಿ ಪ್ರಶಸ್ತಿಗಳು ಕೆಲವೇ ಕೆಲವು ಸಮುದಾಯಕ್ಕೆ ಸೀಮಿತವಾಗದೆ, ಸಮಾಜದ ಎಲ್ಲ ಕಲಾವಿದರನ್ನೂ ಹಾಗೂ ಭೌಗೋಳಿಕವಾಗಿ ಎಲ್ಲೆಡೆಯ ಸಾಧಕರನ್ನು ಗಮನಿಸಿ ಪ್ರಶಸ್ತಿ ನೀಡಲಾಗುತ್ತದೆ.” ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ತುಮಕೂರಿನ ಶ್ರೀ ಸಿ.ವಿ.ಮಹಾದೇವಯ್ಯ ಹಾಗೂ ಉಡುಪಿಯ ಶೀ ಟಿ.ಎನ್.ರಾಘವೇಂದ್ರ ರಾವ್ ಅವರಿಗೆ ಕ್ರಮವಾಗಿ 2021 ಹಾಗೂ 2022ನೆಯ ಸಾಲಿನ ಶ್ರೀಮತಿ ಲಕ್ಷ್ಮೀದೇವಿ ಮತ್ತು ಎಸ್.ರಾಮಚಂದ್ರ ಬಾಯರ್ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕಾಸರಗೋಡಿನ ಶ್ರೀ ಕಾಸರಗೋಡು ಚಿನ್ನ, ವಿಜಯಪುರದ ಶ್ರೀಮತಿ ಭಾರತಿ ಬಿಜಾಪುರ, ಬೆಂಗಳೂರಿನ ಶ್ರೀ ರಂಗಸ್ವಾಮಿ ಅವರಿಗೆ ಕ್ರಮವಾಗಿ 2021, 2022 ಹಾಗೂ 2023ನೆಯ ಸಾಲಿನ ಶ್ರೀಮತಿ ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಬಾಗಲಕೋಟೆ ಜಿಲ್ಲೆಯ ಶ್ರೀಮತಿ ದೊಡ್ಡನಾಗಮ್ಮ , ಚಾಮರಾಜನಗರ ಜಿಲ್ಲೆಯ ಶ್ರೀಮತಿ ಚಿನ್ನಮ್ಮ, ಹಾವೇರಿ ಜಿಲ್ಲೆಯ ಶ್ರೀಮತಿ ಸಾವಕ್ಕ ಯಲ್ಲಪ್ಪ ಓಲೆಕಾರ ಹಾಗೂ ಬಾಗಲಕೊಟೆ ಜಿಲ್ಲೆಯ ಶ್ರೀಮತಿ ಬೋರವ್ವ ಬಾಗನ್ನವರ ಇವರುಗಳಿಗೆ ಕ್ರಮವಾಗಿ 2019, 2020, 2021 ಮತ್ತು 2022ನೆಯ ಸಾಲಿನ ಶ್ರೀಮತಿ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಹಳ್ಳಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಕಾಸರಗೋಡು ಚಿನ್ನ “ಕಾಸರಗೋಡು ಕರ್ನಾಟಕದ ಅವಿಭಾಜ್ಯ ಅಂಗ. ಇತ್ತೀಚೆಗೆ ಕಾಸರಗೋಡಿನಲ್ಲಿ ಕನ್ನಡ ಶಾಲೆಗಳು ಕಮ್ಮಿಯಾಗುತ್ತಿವೆ. ಕನ್ನಡಿಗರು ಕಾಣೆಯಾಗುತ್ತಿದ್ದಾರೆ. ಅಲ್ಲಿರುವ ಕನ್ನಡಿಗರಿಗೆ ಭಾಷಾ ಅಭದ್ರತೆ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡು ಕಾಸರಗೋಡಿನ ವ್ಯಕ್ತಿಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿದ್ದು ಅಲ್ಲಿಯ ಜನರಿಗೆ ಪರಿಷತ್ತು ನಮ್ಮ ಜೊತೆ ಇದೆ ಎನ್ನುವ ವಿಶ್ವಾಸ ಮೂಡಿಸುವಂತಿದೆ. ಅದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕನ್ನಡ ಕಟ್ಟುವ ಕೆಲಸಕ್ಕೆ ನಮ್ಮ ಜನರಿಗೆ ಪ್ರೋತ್ಸಾಹ ನೀಡಬೇಕು” ಎಂದು ಕೇಳಿಕೊಂಡರು
ದತ್ತಿ ದಾನಿಗಾದ ಗಣೇಶ್ ಫುಡ್ ಪ್ರಾಡಕ್ಟ್ಸ್ ಪ್ರೈ.ಲಿ ನ ಶ್ರೀ ನಾಗರಾಜ ರಾವ್, ಶ್ರೀ ಶ್ರೀನಿವಾಸ ಜೋಗಿ ಬೆಂಗಳೂರು, ಶ್ರೀ ರಾಮಣ್ಣ ಎಚ್.ಕೋಡಿಹೊಸಹಳ್ಳಿ ಬೆಂಗಳೂರು ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು ಅವರು ಸ್ವಾಗತಿಸಿ, ಶ್ರೀ ನೇ.ಭ.ರಾಮಲಿಂಗ ಶೆಟ್ಟಿ ಅವರು ವಂದಿಸಿ, ಗೌರವ ಕೋಶಾಧ್ಯಕ್ಷರಾದ ಡಾ.ಬಿ.ಎಮ್.ಪಟೇಲ್ ಪಾಂಡು ಅವರು ಕಾರ್ಯಕ್ರಮವನ್ನು ನಿರೂಪಿಸಿದರು.