ಬೆಂಗಳೂರು: ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ 20ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 24-06-2023 ರ ಶನಿವಾರದಂದು ಬೆಂಗಳೂರಿನ ಕುಮಾರಪಾರ್ಕ್ ಪೂರ್ವದಲ್ಲಿರುವ ಗಾಂಧಿ ಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ ನಡೆಯಿತು.
ಡಾ| ಪಿ. ಎಸ್. ಶಂಕರ್, ಕೌಶಿಕ್ ಕೂಡುರಸ್ತೆ, ಪ್ರೊ.ಬಿ.ಎನ್.ಶ್ರೀರಾಮ, ಜಿ. ಎಚ್. ಕೃಷ್ಣಮೂರ್ತಿ ಅವರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪ್ರಶಸ್ತಿ ನೀಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಲವು ಸಾಹಿತಿಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಭಂಗ ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದಾಗ, ಮಾತನಾಡಿದ ಸಿದ್ದರಾಮಯ್ಯನವರು “ಸಾಹಿತಿಗಳ ಬಗ್ಗೆ ತಮಗೆ ಅಪಾರ ಗೌರವ ಇದೆ. ಸಮಾಜವನ್ನು ತಿದ್ದುವ ನಿಮ್ಮ ಗೌರವಕ್ಕೆ ಧಕ್ಕೆ ಬರಲು ಬಿಡುವುದಿಲ್ಲ” ಎಂದರು.
ಸಂಘದ ಅಧ್ಯಕ್ಷ ನಡೆಸಾಲೆ ಪುಟ್ಟಸ್ವಾಮಯ್ಯ ಮಾತನಾಡಿ “ರಾಜ್ಯದಲ್ಲಿ ಮೂರು ವರ್ಷದಿಂದ ಗ್ರಂಥಾಲಯಗಳಿಗೆ ಪುಸ್ತಕ ಖರೀದಿ ಮಾಡಿಲ್ಲ. ಬಜೆಟ್‌ನಲ್ಲಿ ಪುಸ್ತಕ ಖರೀದಿಗೆ ರೂ25 ಕೋಟಿ ಹಾಗೂ ಜ್ಞಾನಭಾಗ್ಯ ಯೋಜನೆಗೆ ರೂ50 ಕೋಟಿ ಮೀಸಲಿಡಬೇಕು ಎಂದರು.” ನಾಡೋಜ ಹಂ.ಪ.ನಾಗರಾಜಯ್ಯ ಸಾಹಿತಿಗಳಿಗೆ ಸಾಹಿತ್ಯ ಭಾಗ್ಯ ನೀಡಬೇಕೆಂದು ಮನವಿ ಮಾಡಿದರು.
ಸಾಹಿತಿಗಳಾದ ಪ್ರೊ. ಜಿ. ಎಸ್. ಸಿದ್ದರಾಮಯ್ಯ, ಮರುಳಸಿದ್ದಪ್ಪ, ಕಮಲಾ ಹಂಪನಾ, ಡಾ| ವಿಜಯಾ, ಡಾ| ವಸುಂಧರಾ ಭೂಪತಿ ಉಪಸ್ಥಿತರಿದ್ದರು.