ಕಾರ್ಕಳ: ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಕಾರ್ಕಳ ಸಮಿತಿ ಜಂಟಿಯಾಗಿ ಮತ್ತು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕಾರ್ಕಳದ ಹೋಟೇಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮವು ದಿನಾಂಕ 27-05-2023 ರಂದು ನಡೆಯಿತು.
ಆಳ್ವಾಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿರುವ ಶ್ರೀ ಹರೀಶ್ ಟಿ.ಜಿಯವರು ‘ಉಗಾಭೋಗಗಳೆಂಬ ರಸಘಟ್ಟಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ‘ದಾಸ ಪರಂಪರೆಯಲ್ಲಿ ಬಂದಂತಹ ಕೀರ್ತನಕಾರರು ದೊಡ್ಡ ಮಟ್ಟದಲ್ಲಿ ಕೀರ್ತನೆಗಳನ್ನು ಬರೆದಂತೆ ಶ್ಲೋಕ ರೂಪದ ಸಣ್ಣ ಸಣ್ಣ ಭಕ್ತಿಗೀತೆಗಳಾಗಿರುವ ಉಗಾಭೋಗಗಳನ್ನೂ ರಚಿಸಿದರು. ಇವು ಗಾತ್ರದಲ್ಲಿ ಚಿಕ್ಕದಾದರೂ ಆಧ್ಯಾತ್ಮಿಕ ಹಂಬಲ ಮತ್ತು ಅದರ ರೀತಿಯನ್ನು ಸರಳವಾಗಿ ಇಲ್ಲಿ ನಿರೂಪಿಸಲಾಗಿದೆ. ಕೆಲವೇ ಸಾಲುಗಳಲ್ಲಿ ಭಕ್ತಿಯ ಮಹತ್ವವನ್ನು ಸಾರುವ ಉಗಾಭೋಗಗಳು ಅರ್ಥಪೂರ್ಣವೂ, ಸತ್ವಪೂರ್ಣವೂ ಆಗಿದ್ದು ಅವು ಕೊಡುವ ಆನಂದ ಅಪರಿಮಿತವಾದುದು ಭಕ್ತಿ, ಶರಣಾಗತಿ ಮತ್ತು ಮೋಕ್ಷ ಪ್ರಾಪ್ತಿಯನ್ನು ಗುರಿಯಾಗಿಟ್ಟುಕೊಂಡು ರಚನೆಗೊಂಡ ಉಗಾಭೋಗಗಳಲ್ಲಿ ಶ್ರೇಷ್ಠವಾದ ತಾತ್ವಿಕ ಚಿಂತನೆಗಳು ಅಡಗಿವೆ. ಶರಣರ ವಚನಗಳಂತೆ ಉಗಾಭೋಗಗಳು ಕೂಡಾ ಪಠ್ಯಗಳಲ್ಲಿ ಸೇರ್ಪಡೆಗೊಳ್ಳಲು ಯೋಗ್ಯವಾಗಿವೆ’ ಎಂದರು.
ಅತಿಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕನ್ನಡ ಸಂಘದ ಅಧ್ಯಕ್ಷರಾದ ಡಾ.ನಾ.ಮೊಗಸಾಲೆ ಅ.ಭಾ.ಸಾ.ಪ.ದ ಗೌರವಾಧ್ಯಕ್ಷರಾದ ಎಸ್ ನಿತ್ಯಾನಂದ ಪೈ ಅಧ್ಯಕ್ಷರಾದ ಶ್ರೀಮತಿ ಮಿತ್ರಪ್ರಭಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಅನುಪಮಾ ಚಿಪ್ಲೂಣ್ಕರ್ ಪ್ರಾರ್ಥಿಸಿದರು. ಡಾ. ಸುಮತಿ ಪಿ. ಅವರು ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಮಿತ್ರಪ್ರಭಾ ಹೆಗ್ಡೆ ವಂದಿಸಿದರು.
- ಸದಾನಂದ ನಾರಾವಿ