ಮಂಗಳೂರು : ಬಹು ಓದು ಬಳಗ ಹಾಗೂ ಆಕೃತಿ ಆಶಯ ಪ್ರಕಾಶನ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಕವಿಗೋಷ್ಠಿ ಮತ್ತು ‘ಕರಾವಳಿ ಕವನಗಳು 2001-2025’ ಪುಸ್ತಕ ಬಿಡುಗಡೆ ಸಮಾರಂಭವು ದಿನಾಂಕ 14 ಡಿಸೆಂಬರ್ 2025ರಂದು ಮಂಗಳೂರಿನ ಬಲ್ಮಠ ಸಹೋದಯ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಅಂಕಣಕಾರ ಅರವಿಂದ ಚೊಕ್ಕಾಡಿಯವರು ಮಾತನಾಡಿ “ತೀರಾ ಸಾಮಾನ್ಯ ಜನರೂ ಸಾಹಿತ್ಯ ಬರೆಯುವಂತಾಗಬೇಕು. ಆಯಾ ಭಾಷೆಯನ್ನು ಬಳಸುವ ಎಲ್ಲರ ಸಾಹಿತ್ಯವನ್ನು ಸ್ವೀಕರಿಸುವಂತಹ ಸ್ಥಿತಿ ನಿರ್ಮಾಣವಾಗಬೇಕು. ಅಂತಹ ಸ್ವಾತಂತ್ರ್ಯವಿದ್ದರೆ, ಭಾಷೆ ಸಶಕ್ತ ಹಾಗೂ ಸಮೃದ್ಧವಾಗುತ್ತದೆ. ಮರಾಠಿಯಲ್ಲಿ ಸಾಮಾನ್ಯ ಜನರೂ ಸಾಹಿತ್ಯ ಬರೆಯುತ್ತಾರೆ. ಕೂಲಿಕಾರರ ಆತ್ಮಕತೆಗೂ ಮರಾಠಿಯಲ್ಲಿ ಸ್ಥಾನವಿದೆ. ಹಾಗಾಗಿಯೇ ಆ ಭಾಷೆಗೆ ಶಕ್ತಿ ಬಂದಿದೆ. ಅಲ್ಲಿನ ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕಾರಣಿಗಳು ಸಭಿಕರ ಸಾಲಿನಲ್ಲಿ ಕುಳಿತು ಅಲಿಸುತ್ತಾರೆ. ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಜನ ಟಿಕೆಟ್ ಪಡೆದು ಭಾಗವಹಿಸುತ್ತಾರೆ. ಅದು ಕನ್ನಡಕ್ಕೂ ಸಾಧ್ಯವಾಗಬೇಕು” ಎಂದು ಹೇಳಿದರು.

ಕೃತಿ ಬಿಡುಗಡೆಗೊಳಿಸಿದ ಮೈಸೂರಿನ ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರದ ಸಂಶೋಧಕ ಚಲಪತಿ ಆರ್. “ಈ ಕೃತಿಯ ಕವಿತೆಗಳಲ್ಲಿ ದೊಡ್ಡವರು, ಸಣ್ಣವರು, ಪುರುಷರು ಮಹಿಳೆಯರು ಎಂಬ ಭೇದವಿಲ್ಲ. ಜಾತಿ, ಲಿಂಗ, ಪ್ರದೇಶ, ಕೆಲಸ, ಆದರ್ಶ, ಪ್ರೀತಿ, ಪ್ರೇಮ ವೈಫಲ್ಯ, ಪ್ರತಿಭಟನೆ, ತಂತ್ರಜ್ಞಾನ, ಪರಿಸರಪ್ರೇಮ, ಹಣ, ರಾಜಕಾರಣ… ಹೀಗೆ ಎಲ್ಲ ತರಹದ ಯೋಚನಾ ಲಹರಿಗಳು ಇದರಲ್ಲಿವೆ” ಎಂದರು.

ಪ್ರಾಧ್ಯಾಪಕಿ ನಿಕೇತನ ಮಾತನಾಡಿ, “ಪುರಾಣ ಇತಿಹಾಸ, ಎಡ, ಬಲ ಸಿದ್ಧಾಂತಗಳೆಲ್ಲವನ್ನೂ ಈ ಕೃತಿ ನುಚ್ಚು ನೂರಾಗಿಸಿ. ಹೃದಯದ ಭಾಷೆಯನ್ನು ಅನುಭವಿಸಲು ಅವಕಾಶ ಕಲ್ಪಿಸಿದೆ” ಎಂದರು. ಲೇಖಕ ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಬಹು ಓದು ಬಳಗದ ಸಂಚಾಲಕ ಸತೀಶ್ ಚಿತ್ರಾಪು ಹಾಗೂ ಕೃತಿಯ ಪ್ರಧಾನ ಸಂಪಾದಕಿ ಉಷಾ ಪ್ರಕಾಶ್ ಭಾಗವಹಿಸಿದ್ದರು. ಜ್ಯೋತಿಪ್ರಿಯಾ ಕಾರ್ಯಕ್ರಮ ನಿರೂಪಿಸಿ, ಪ್ರಕಾಶಕ ಕಲ್ಲೂರು ನಾಗೇಶ ಸ್ವಾಗತಿಸಿ, ರಾಘವೇಂದ್ರ ಜಿಗಳೂರ ವಂದಿಸಿದರು.

ಇದಕ್ಕೂ ಮುನ್ನ ನಡೆದ ಕವಿಗೋಷ್ಠಿಯಲ್ಲಿ ಕವಿ ರಘು ಇಡ್ಕಿದು ಆಶಯ ಭಾಷಣ ಮಾಡಿದರು. ವಿದ್ಯಾರ್ಥಿನಿ ದಿಯಾ ಉದಯ್ ಡಿ. ಇವರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕಿ ಮೀನಾಕ್ಷಿ ರಾಮಚಂದ್ರ, ಉಳ್ಳಾಲದ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸಿಹಾನ ಬಿ.ಎಂ., ಸಹಾಯಕ ಪ್ರಾಧ್ಯಾಪಕಿ ಆಶಾಲತಾ ಚೇವಾರು ಭಾಗವಹಿಸಿದ್ದರು.
