ಕಾಸರಗೋಡು : ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರೀಯ ನಾಟ್ಯ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಇವರ ‘ಕರ್ಗಲ್ಲು ಯಕ್ಷ ಮಾರ್ಗ’ದ ಪ್ರಾಥಮಿಕ ಹಂತವನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ದಾಖಲೀಕರಿಸಿದ್ದು, ದಿನಾಂಕ 25 ಆಗಸ್ಟ್ 2026ರಂದು ಮಂಗಳವಾರ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ಯಕ್ಷ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ರವರು ಈ ದಾಖಲೀಕರಣದ ಕಿರು ಭಾಗವನ್ನು ಮಾದ್ಯಮಕ್ಕೆ ಬಿಡುಗಡೆಗೊಳಿಸಿದರು.
ಕಲಾವಿದರಾದ ಶ್ರೀ ಶಂಭಯ್ಯ ಕಂಜರ್ಪಣೆ, ಕಲಾವಿದ ಉಪನ್ಯಾಸಕ ಡಾ. ಶ್ರುತಕೀರ್ತಿರಾಜ ಉಜಿರೆ, ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ, ಸುಮಿತ್ರ ಆರ್. ಮಯ್ಯ ,ಶ್ರೀಮುಖ ಎಸ್.ಆರ್. ಮಯ್ಯ, ಶ್ರೀ ರಾಜ ಎಸ್.ಆರ್. ಮಯ್ಯ ಉಪಸ್ಥಿತರಿದ್ದರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಆರಂಭವಾದ ದಿನದಿಂದಲೇ ಕಲೆ-ಸಂಸ್ಕೃತಿ-ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ ಪ್ರಯತ್ನಶೀಲವಾಗಿದೆ. ಕಳೆದ ಹಲವಾರು ವರ್ಷಗಳಲ್ಲಿ ಪ್ರತಿಷ್ಠಾನದ ಚಟುವಟಿಕೆಗಳನ್ನು ಗಮನಿಸಿದರೆ ಹೆಚ್ಚಿನ ಕಾರ್ಯಕ್ರಮಗಳು ಅಧ್ಯಯನದೊಂದಿಗೆ ರಂಗ ಪ್ರದರ್ಶನಕ್ಕೂ ಯೋಗ್ಯವಾಗಿವೆ. ಈ ನಿಟ್ಟಿನಲ್ಲಿ ಇದರ ಮುಂದಿನ ಪ್ರಯತ್ನವಾಗಿ ಹಿಂದಿನ, ಇಂದಿನ ಯಕ್ಷಗಾನದ ನಾಟ್ಯ ಪ್ರಸ್ತುತಿಯನ್ನು ಗಮನಿಸಿ, ಅಂದಾಜು ನಾಲ್ಕು ದಶಕಗಳಿಗೂ ಹೆಚ್ಚು ವರುಷ ನಿರಂತರವಾಗಿ ಯಕ್ಷಗಾನ ಅಧ್ಯಯನ, ಅಧ್ಯಾಪನದೊಂದಿಗೆ ವಿಶೇಷವಾದ ಅನುಭವವನ್ನು ಹೊಂದಿರುವ ತೆಂಕುತಿಟ್ಟಿನ ಏಕೈಕ ಕಲಾವಿದರಾಗಿರುವಂತಹ ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ ರ ಅಮೂಲ್ಯ ನಾಟ್ಯ ಸಂಪತ್ತನ್ನು ಸಂರಕ್ಷಿಸುವ ಉದ್ದೇಶದಿಂದ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕಾಯಕದಂತೆ ಸಿರಿಬಾಗಿಲು ಪ್ರತಿಷ್ಠಾನವು ದಾಖಲಿಕರಣಗೊಳಿಸಿ ಪ್ರಸ್ತುತಪಡಿಸುತಿದೆ. ಮುಂದಿನ ದಿನಗಳಲ್ಲಿ ಯಕ್ಷಗಾನವು ವಿಶ್ವರಂಗದಲ್ಲಿ ಶಾಶ್ವತವಾಗಿ ಮೆರೆಯುವಂತಾಗಲು ಇದು ಪೂರ್ಣಪ್ರಮಾಣದಲ್ಲಿ ಸಹಕಾರಿಯಾಗಲಿದೆ. ಇಂದಿನ ಯಕ್ಷಗಾನ ನಾಟ್ಯ ಶಿಕ್ಷಕರು, ಕಲಾವಿದರುಗಳು, ವಿದ್ಯಾರ್ಥಿಗಳು ಇದನ್ನು ಗಮನಿಸಿ ಅಧ್ಯಯನ ಶೀಲರಾಗುವರೆಂದು ನಮ್ಮ ಆಶಯ. ಅಗತ್ಯತೆ ಇರುವವರು ಮಾತ್ರ ಪ್ರತಿಷ್ಠಾನವನ್ನು ಸಂಪರ್ಕಿಸಬೇಕೆಂಬ ಉದ್ದೇಶದಿಂದ ಮಾಧ್ಯಮದಲ್ಲಿ ಕೆಲವು ಕ್ಲಿಪಿಂಗ್ಸ್ ಮಾತ್ರವೇ ಪ್ರಕಟಿಸಿರುತ್ತೇವೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವನ್ನು ಸಂಪರ್ಕಿಸಬಹುದಾಗಿದೆ.

ಈ ಯೋಜನೆಗೆ ಶ್ರೀ ಕೆ.ಕೆ. ಶೆಟ್ಟಿ ಅಹಮದ್ ನಗರ, ಶ್ರೀ ವಾಸುದೇವ ಐತಾಳ ಪಣಂಬೂರು, ಶ್ರೀ ಮಹಾಬಲೇಶ್ವರ ಭಟ್ ಎಡಕ್ಕಾನ, ಶ್ರೀ ಮಧುರ ಉಪಾಧ್ಯ ಬೆಂಗಳೂರು ಇವರು ಆರ್ಥಿಕ ಸಹಕಾರ ಮಾಡಿರುತ್ತಾರೆ. ದಾಖಲೀಕರಣಕ್ಕೆ ಕಲಾವಿದರಾದ ಶ್ರೀ ಶಂಭಯ್ಯ ಕಂಜರ್ಪಣೆ, ಶ್ರೀ ಮಧೂರು ಗೋಪಾಲಕೃಷ್ಣ ನಾವಡ, ಶ್ರೀ ಲಕ್ಷ್ಮಣ ಕುಮಾರ್ ಮರಕಡ, ಶ್ರೀ ಶಿವಾನಂದ ಪೆರ್ಲ ಸಹಕರಿಸಿದರೆ, ಚಿತ್ರೀಕರಣವನ್ನು ಶ್ರೀ ಶ್ರೀಮುಖ ಮಯ್ಯ ಎಸ್.ವಿ. ವಿಷನ್, ಶ್ರೀ ಕಾರ್ತಿಕ ಕರ್ಗಲ್ಲು ಇವರು ದಾಖಲಿಸಿದ್ದಾರೆ. ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಆಸಕ್ತರಿಗೆ ಅಧ್ಯಯನಕ್ಕೆ ಮುಂದಿನ ದಿನಗಳಲ್ಲಿ ಈ ದಾಖಲೀಕರಣ ಲಭ್ಯವಾಗಲಿದೆ.

