ಸೋಮವಾರಪೇಟೆ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸೋಮವಾರಪೇಟೆ ಕನ್ನಡ ಸಾಹಿತ್ಯ ಪರಿಷತ್ ಇದರ ಆಶ್ರಯದಲ್ಲಿ ಸೋಮವಾರಪೇಟೆ ಮಹಿಳಾ ಸಮಾಜದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಸಮಾರೋಪ ಸಮಾರಂಭ ದಿನಾಂಕ 30-11-2023ರಂದು ನಡೆಯಿತು.
ಈ ಸಮಾರಂಭದಲ್ಲಿ ಸಾಹಿತಿ ಶ.ಗ. ನಯನತಾರಾ ಪ್ರಕಟಿಸಿರುವ ‘ಶನಿವಾರಸಂತೆ ಕೊಡ್ಲಿಪೇಟೆ ಒಂದು ಸಾಂಸ್ಕೃತಿಕ ಪಕ್ಷಿನೋಟ’ ಕೃತಿ ಬಿಡುಗಡೆಗೊಳಿಸಿದ ಶಾಸಕ ಡಾ. ಮಂತರ್ ಗೌಡ ಇವರು ಮಾತನಾಡಿ “ನವೆಂಬರ್ ತಿಂಗಳಲ್ಲಿ ಶಾಲು ಹಾಕಿ, ಸಂಭ್ರಮಿಸಿದರೆ ಕನ್ನಡ ಬೆಳೆಸಲು ಸಾಧ್ಯವಿಲ್ಲ. ಕನ್ನಡ ನಾಡಿನಲ್ಲಿ ಹುಟ್ಟಿದವರು ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತರೂ ಮನೆಯಲ್ಲಿ ಮಕ್ಕಳೊಂದಿಗೆ ಬಾಯಿ ತುಂಬಾ ಕನ್ನಡದಲ್ಲಿ ಮಾತನಾಡಬೇಕು. ಮಕ್ಕಳು ಕನ್ನಡ ಸಾಹಿತ್ಯ ಓದಲು ಪ್ರೋತ್ಸಾಹ ನೀಡಿಬೇಕು. ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕನ್ನಡ ಕಲಿಕೆಗೆ ಅವಕಾಶ ಮಾಡಿಕೊಡಬೇಕು” ಎಂದು ಸಲಹೆ ನೀಡಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ “ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, 8 ಜ್ಞಾನಪೀಠ ಪ್ರಶಸ್ತಿ ಸಹ ಪಡೆದುಕೊಂಡಿದೆ. ಇಂತಹ ಶ್ರೀಮಂತ ಸಂಸ್ಕೃತಿ ಹೊಂದಿರುವ ಕನ್ನಡವನ್ನು ಉಳಿಸುವುದಕ್ಕೆ ಹೋರಾಟ ಮಾಡುವಂತ ದುಃಸ್ಥಿತಿ ಬಂದಿದೆ” ಎಂದು ಬೇಸರ ವ್ಯಕ್ತಪಡಿಸಿದರು. “ಕನ್ನಡ ಪರ ಹೋರಾಟದಲ್ಲಿ ಯುವಕರು ಧುಮುಕಬೇಕು. ಈಗಂತೂ ಹಿರಿಯರೇ ಕನ್ನಡದ ಕೆಲಸ ಮಾಡುತ್ತಿದ್ದಾರೆ” ಎಂದು ವಿರಾಜಪೇಟೆ ತಾಲ್ಲೂಕು ಕ.ಸಾ.ಪ. ಮಾಜಿ ಅಧ್ಯಕ್ಷ ಡಾ.ಚಂದ್ರಶೇಖರ್ ಹೇಳಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇ.100ರಷ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ಕಲಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪರಿಷತ್ ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಜಯವೀರಮಾತೆ ಚರ್ಚ್ ಧರ್ಮಗುರು ಜಾನ್ ಫರ್ನಾಂಡಿಸ್, ಹಿಂದು ಮಲೆಯಾಳ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ.ವಿಜಯ್, ಸಾಹಿತಿ ಜಲಾಕಾಳಪ್ಪ, ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೆರ ತುಳಸಿ, ಕ.ಸಾ.ಪ. ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಮುನೀರ್ ಅಹಮ್ಮದ್, ರೇವತಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.