ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ‘ಡಾ. ಟಿ. ವಿ. ವೆಂಕಟಾಚಲಶಾಸ್ತ್ರೀ ವಿದ್ವತ್ ದತ್ತಿ ಪ್ರಶಸ್ತಿ’ ಮತ್ತು ‘ಶ್ರೀಮತಿ ಟಿ. ಗಿರಿಜ ಸಾಹಿತ್ಯ ದತ್ತಿ ಪ್ರಶಸ್ತಿ’ ಪ್ರದಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಯ ನೂರನೇ ಸಂಪುಟದ ವಿಶೇಷ ಸಂಚಿಕೆ ಬಿಡುಗಡೆ ಜೊತೆಗೆ 90 ವರ್ಷಗಳನ್ನು ಪೂರೈಸಿದ ಹಿರಿಯ ವಿದ್ವಾಂಸರಾದ ನಾಡೋಜ ಡಾ. ಟಿ.ವಿ ವೆಂಕಟಾಚಲಶಾಸ್ತ್ರೀ ಅವರಿಗೆ ಸನ್ಮಾನ ಕಾರ್ಯಕ್ರಮವು ದಿನಾಂಕ 01-09-2023ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ವಿಶಾಲ ಮೈಸೂರು ಎಂದಿದ್ದ ನಮ್ಮ ನಾಡಿನ ಹೆಸರು ‘ಕರ್ನಾಟಕ’ ಎಂದು ಹೆಸರಾಗಲು ನಾಡೋಜ ಡಾ. ಟಿ.ವಿ.ವೆಂಕಟಾಚಲಶಾಸ್ತ್ರಿಗಳು ಬರೆದ ‘ನಮ್ಮ ಕರ್ನಾಟಕ’ ಎನ್ನುವ ಕೃತಿಯ ಪ್ರಭಾವವಿದೆ. ಕರ್ನಾಟಕದ ಪದದ ಮೂಲವನ್ನು ಶಾಸನ-ಶಾಸ್ತ್ರೀಯ ಗ್ರಂಥಗಳಾದಿಯಾಗಿ ಅವರು ಹುಡುಕಿದ ಕ್ರಮ ಮಾದರಿಯಾಗಿದೆ. ಈ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ್ದು ಹೆಮ್ಮೆಯ ಸಂಗತಿ. ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿಗಳು ನಮ್ಮ ನಾಡು ನುಡಿಗಳ ಹಿರಿಮೆ ಗರಿಮೆಗಳ ಪ್ರವರ್ತಕರಾಗಿ ನಿರಂತರ ಕಂಗೊಳಿಸುತ್ತಾ ಬಂದವರು. ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಲೋಕದ ವಿದ್ವತ್ ಪತ್ರಿಕೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಕನ್ನಡ ಸಾಹಿತ್ಯ ಪತ್ರಿಕೆಯ 100ನೇ ಸಂಪುಟವನ್ನು ನಾಡಿನ ಹಿರಿಯ ವಿದ್ವಾಂಸರಾದ ಟಿ.ವಿ.ವೆಂಕಟಾಚಲ ಶಾಸ್ತ್ರೀ ಅವರ ಕೈಯಲ್ಲಿ ಇಂದು ಬಿಡುಗಡೆ ಮಾಡುತ್ತಿರುವುದೇ ಸಂತಸದ ಸಂಗತಿ. ಇನ್ನೂ ವೆಂಕಟಾಚಲಶಾಸ್ತ್ರಿಗಳು ಕನ್ನಡ ಸಾಹಿತ್ಯ ಪರಿಷತ್ತಿಗೆ ಕೊಟ್ಟಿರುವ ಕೊಡುಗೆ ಅಪಾರ. ಇಂದು ಚಂದ್ರಯಾನ-3ರ ಬಗ್ಗೆ ನಾವೆಲ್ಲಾ ಹೆಮ್ಮೆ ಪಡುತ್ತೇವೆ. ಆದರೆ ಶಾಸ್ತ್ರೀಗಳು ಬಹಳ ಹಿಂದೆಯೇ ‘ಚಂದ್ರ ಮೇಲೊಂದು ಚಂದದ ಪಯಣ’ ಎನ್ನುವ ಕೃತಿಯನ್ನು ರಚಿಸುವ ಮೂಲಕ ಅಂದೇ ಎಲ್ಲರ ಗಮನ ಸೆಳೆದವರು. ಮುಂದಿನ ದಿನಗಳಲ್ಲಿ ಅವರಿಂದ ನಡುಗನ್ನಡದ ಶಬ್ದಕೋಶ ಆಗಬೇಕು ಎನ್ನುವುದು ಕನ್ನಡ ಸಾಹಿತ್ಯ ಪರಿಷತ್ತಿನ ಬಯಕೆಯಾಗಿದೆ. ಆಗ ಅವರು ಆಧುನಿಕ ಕಿಟಲ್ ಆಗುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಹಿರಿಯ ಲೇಖಕರು ಹಾಗೂ ಬಿ.ಎಮ್.ಶ್ರೀ ಪ್ರತಿಷ್ಠಾನದ ನಿಕಟಪೂರ್ವ ಅಧ್ಯಕ್ಷರಾದ ಡಾ. ಆರ್. ಲಕ್ಷ್ಮೀನಾರಾಯಣ ಅವರು ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರಶಸ್ತಿಗೆ ಎಲ್ಲಿಲ್ಲದ ಮನ್ನಣೆಯಿದೆ. ಅದಕ್ಕೆ ಕಾರಣ ಪರಿಷತ್ತಿನಲ್ಲಿ ಪಾಲಿಸಿಕೊಂಡು ಬಂದಿರುವ ಪರಂಪರೆ. ಆ ಪರಂಪರೆಯನ್ನು ಸಮರ್ಥವಾಗಿ ಇಂದಿಗೂ ನಡೆಸಿಕೊಂಡು ಹೋಗಲಾಗುತ್ತದೆ. ಕನ್ನಡ ಭಾಷೆಯ ಅನೇಕ ಸಾಧಕರನ್ನು ಗುರುತಿಸುವದರ ಜೊತೆಗೆ ಸಾಧಕರಲ್ಲಿ ನಾಡು ನುಡಿಗಾಗಿ ಜವಾಬ್ದಾರಿಯನ್ನು ಹೆಚ್ಚಿಸುವ ಕೆಲಸ ಆಗುತ್ತದೆ” ಎಂದು ಹೇಳಿ ನಾಡೋಜ ಡಾ. ಟಿ.ವಿ.ವೆಂಕಟಾಚಲ ಶಾಸ್ತ್ರಿಗಳ ಜೊತೆಗಿನ ತಮ್ಮ ಒಡನಾಟವನ್ನು ಹಂಚಿಕೊಂಡು ಅವರು ಕನ್ನಡ ಪರಂಪರೆಗೆ ನೀಡಿದ ಕೊಡುಗೆಯನ್ನು ವರ್ಣಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಯ ನೂರನೇ ಸಂಪುಟದ ವಿಶೇಷ ಸಂಚಿಕೆ ಬಿಡುಗಡೆಮಾಡಿ ಮಾತನಾಡಿದ ನಾಡೋಜ ಡಾ. ಟಿ.ವಿ.ವೆಂಕಟಾಚಲಶಾಸ್ತ್ರಿಗಳು “ಮನುಷ್ಯ ಎಷ್ಟು ವರ್ಷ ಬದುಕಿದ ಎನ್ನುವಕ್ಕಿಂತ ಬದುಕಿದಾಗ ಏನು ಮಾಡಿದ ಎನ್ನುವುದು ಮುಖ್ಯ. ಅದಕ್ಕೆ ನಿತ್ಯವೂ ಚಟುವಟಿಕೆಯಿಂದ ಇದ್ದಾಗ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ. ಸತ್ಕಥಾ ಸಾಂಗತ್ಯದಲ್ಲಿ ಕಾಲಕ್ಷೇಪ ಮಾಡುತ್ತಿರಬೇಕು ಆಗ ಸಜ್ಜನರ ಸಂಘದಿಂದ ಪ್ರಬುದ್ಧ ವಿಚಾರಗಳು ಹುಟ್ಟಿಕೊಳ್ಳಲು ಸಾಧ್ಯ. ಅದು ಮುಂದೆ ಪ್ರಬುದ್ಧ ಕರ್ನಾಟಕ ನಿರ್ಮಾಣ ವಾಗುವುದಕ್ಕೆ ಕಾರಣವಾಗುವುದು. ‘ಪ್ರಬುದ್ಧ ಕರ್ನಾಟಕ’ ಹಾಗೂ ‘ಕನ್ನಡ ಸಾಹಿತ್ಯ ಪತ್ರಿಕೆ’ ನಾಡಿನ ಎರಡು ಕಣ್ಣುಗಳಿದ್ದಂತೆ. ಹಳೆಯ ಸಂಚಿಕೆಗಳನ್ನು ಓದುವುದು ಎಂದರೆ ಹೊಸದಾಗಿ ವಿದ್ಯಾಭ್ಯಾಸ ಮಾಡಿದಂತೆ. ನಮ್ಮ ಹಿರಿಯರು ಬರೆದಿವುದು ಮುಂದಿನ ಜನಾಂಗಕ್ಕೆ ದಿಕ್ಸೂಚಿ” ಎಂದರು.
2022ನೆಯ ಹಾಗೂ 2023ನೆಯ ಸಾಲಿನ ‘ಡಾ. ಟಿ. ವಿ. ವೆಂಕಟಾಚಲಶಾಸ್ತ್ರೀ ವಿದ್ವತ್ ದತ್ತಿ ಪ್ರಶಸ್ತಿ’ಯನ್ನು ಮೈಸೂರಿನ ಸಂಶೋಧಕಿ ಡಾ. ವೈ.ಸಿ.ಭಾನುಮತಿ ಅವರಿಗೆ ಮತ್ತು ಬೆಂಗಳೂರಿನ ವಿದ್ವಾಂಸರಾದ ಪ್ರೊ.ಜಿ. ಅಶ್ವತ್ಥನಾರಾಯಣ ಅವರಿಗೆ ಪ್ರದಾನ ಮಾಡಲಾಯಿತು. 2022 ಹಾಗೂ 2023ನೆಯ ಸಾಲಿನ ಶ್ರೀಮತಿ ಟಿ. ಗಿರಿಜ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ದಾವಣಗೆರೆಯ ಸಾಹಿತಿ ಶ್ರೀಮತಿ ಜಿ. ಎಸ್. ಸುಶೀಲಾದೇವಿ ಆರ್. ರಾವ್ ಮತ್ತು ಮೈಸೂರಿನ ಸಾಹಿತಿ ಶ್ರೀಮತಿ ಚಂಪಾವತಿ ಶಿವಣ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ವಿದ್ವಾಂಸರಾದ ಪ್ರೊ.ಜಿ. ಅಶ್ವತ್ಥನಾರಾಯಣ ಅವರು “75 ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತನ್ನು ಹತ್ತಿರದಿಂದ ಗಮನಿಸುತ್ತ ಬಂದಿದ್ದೇನೆ. ಪರಿಷತ್ತು ಯಾವ ರೀತಿಯಲ್ಲಿ ಬದಲಾವಣೆಗಳು ಕಾಣುತ್ತಿದೆ ಎನ್ನುವುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಮನುಷ್ಯನಿಗೆ ಹೊಣೆಗಾರಿಕೆ ಎನ್ನುವದು ಇದ್ದಾಗ ಸಾಧನೆ ಮಾಡಬಹುದು. ಅದೇ ಸಾಧನೆ ಗುರುತಿಸಿಬಿಟ್ಟರೆ ಇನ್ನಷ್ಟು ಜವಾಬ್ದಾರಿಯ ಕೆಲಸಗಳು ಆಗುತ್ತವೆ” ಎಂದು ಅಭಿಪ್ರಾಯ ಪಟ್ಟರು.
ಸಂಶೋಧಕಿ ಡಾ. ವೈ.ಸಿ.ಭಾನುಮತಿ ಮಾತನಾಡಿ “ಮನುಷ್ಯ ಏನಾದರು ಸಾಧನೆ ಮಾಡಬಹುದು, ಆದರೆ ಅದನ್ನು ಸಮರ್ಥವಾಗಿ ಗುರುತಿಸುವವರು ಬೇಕಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚಿನ ದಿನಗಳಲ್ಲಿ ಕನ್ನಡದ ಪ್ರಾಮಾಣಿಕರನ್ನು ಹುಡುಕುವ ಪ್ರಯತ್ನ ಮಾಡುತ್ತಿದೆ. ವೃತ್ತಿ ಪ್ರವೃತ್ತಿಯ ಜೊತೆ ಕಾರ್ಯತತ್ಪರತೆ ಇಟ್ಟುಕೊಂಡಾಗ ಬದುಕು ಭಾಗ್ಯವಾಗುವುದು” ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ ಅವರು ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪತ್ರಿಕೆಯ ಸಂಪಾದಕರಾದ ಡಾ.ಎಸ್.ಎಲ್.ಶ್ರೀನಿವಾಸಮೂರ್ತಿ ಪತ್ರಿಕೆಯ ಕುರಿತು ಮಾತನಾಡಿದರು. ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಡಾ.ಬಿ.ಎಮ್.ಪಟೇಲ್ ಪಾಂಡು ಅವರು ಕಾರ್ಯಕ್ರಮ ನಿರೂಪಿಸಿದರು, ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಪ್ರೊ. ಎನ್.ಎಸ್. ಶ್ರೀಧರ ಮೂರ್ತಿ ಅವರು ಪ್ರಶಸ್ತಿ ಪುರಸ್ಕೃತರ ವಿವರಣೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಅವರು ವಂದಿಸಿದರು.