ಮುಡಿಪು : ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯು ದಿನಾಂಕ 05-05-2023ರಂದು ದೇರಳಕಟ್ಟೆಯ ಕಂಫರ್ಟ್ ಇನ್ ಸಭಾಂಗಣದಲ್ಲಿ ನಡೆಯಿತು.
ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗದ ವಿಶ್ರಾಂತ ನಿರ್ದೇಶಕ ಪ್ರೊ ಪಿ. ಶ್ರೀಕೃಷ್ಣ ಭಟ್ ಅವರು ‘ಕನ್ನಡ ನಾಡು ನುಡಿ : ಪರಿಷತ್ತಿನ ಜವಾಬ್ದಾರಿ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. “ಸಾಹಿತ್ಯ ಪರಿಷತ್ತು ಆರಂಭದಲ್ಲಿ ರಾಜಪ್ರಭುತ್ವದ ನೇತೃತ್ವದಲ್ಲಿದ್ದು ಕಾಸರಗೋಡಿನ ಸಾಹಿತ್ಯ ಸಮ್ನೇಳನದ ಬಳಿಕ ಸಾಹಿತಿಗಳನ್ನೇ ಅಧ್ಯಕ್ಷರನ್ನಾಗಿ ಮಾಡುವ ನಿರ್ಣಯ ತೆಗೆದುಕೊಂಡಿತು. ಅಂದಿನಿಂದಲೂ ಸಾಹಿತ್ಯ ಪರಿಷತ್ತು ಪ್ರಭುತ್ವದ ಅಡಿಯಾಳಾಗದೇ ಕನ್ನಡ ನಾಡು ನುಡಿ ಸಂವರ್ಧನೆಗೆ ಕಟಿಬದ್ಧವಾಗಿ ಕಾರ್ಯನಿರ್ವಹಿಸಿದೆ. ಸಾಹಿತ್ಯ ಪರಿಷತ್ತು ಬೆಳ್ಳಾವೆ, ಮಾಸ್ತಿ, ಡಿವಿಜಿ ಮೊದಲಾದ ಹಲವು ಸಾಹಿತಿಗಳ ಸಮರ್ಥ ಮುಂದಾಳತ್ವದಲ್ಲಿ ನಿಘಂಟು, ಹಳೆಗನ್ನಡ ಸಾಹಿತ್ಯ, ಗದ್ಯಾನುವಾದ ಮುಂತಾದ ಮೌಲಿಕ ಕೃತಿಗಳ ಪ್ರಕಟಣೆಯ ಮೂಲಕ ಅಧ್ಯಯನ ಮತ್ತು ಜ್ಞಾನಕೇಂದ್ರಿತ ಕಾರ್ಯಗಳನ್ನು ಮಾಡಿದೆ. ಈ ಪರಂಪರೆಯ ಅರಿವು ನಮಗಿರಬೇಕು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಉಳ್ಳಾಲ ತಾಲೂಕು ಕಸಾಪ ದ ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆ “ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿ ಕಾರ್ಯನಿರ್ವಹಿಸಲು ಸಾಕಷ್ಟು ಸಂಸ್ಥೆಗಳಿದ್ದರೂ ಇಂದಿಗೂ ಕನ್ನಡ ರಾಜಕೀಯ ಬಲವಾಗಿ ಬೆಳೆದಿಲ್ಲ. ಬರಲಿರುವ ಚುನಾವಣೆಯಲ್ಲಿ ಯಾವ ಪಕ್ಷದ ಪ್ರಣಾಳಿಕೆಗೂ ಕನ್ನಡ ಆದ್ಯತೆಯ ವಿಷಯವಾಗಿಲ್ಲ” ಎಂದರು.
ನಾಡಿನ ಪ್ರಸಿದ್ಧ ವಿದ್ವಾಂಸರೂ ಹಾವೇರಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳೂ ಆಗಿರುವ ಪ್ರೊ. ಕೆ. ಚಿನ್ನಪ್ಪ ಗೌಡ ಇವರು ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಸಂಘಟನೆ. ಇದರ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಕನ್ನಡದ ಕಾರ್ಯಕ್ರಮಗಳು ನಡೆದು ಕನ್ನಡದ ಸ್ವಾಭಿಮಾನ ಬಲಗೊಳ್ಳಬೇಕು” ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಹಿರಿಯರಾದ ಕಲಾವಿದ ತೋನ್ಸೆ ಪುಷ್ಕಳ ಕುಮಾರ್ ಮತ್ತು ಕವಿ ಗುಣಾಜೆ ರಾಮಚಂದ್ರ ಭಟ್ ಇವರನ್ನು ಪರಿಷತ್ತಿನ ಪರವಾಗಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಉಳ್ಳಾಲ ಹೋಬಳಿ ಕಸಾಪ ಅಧ್ಯಕ್ಷೆ ವಿಜಯಲಕ್ಷ್ಮಿ ರೈ ಕಲ್ಲಿಮಾರ್, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಉಪಸ್ಥಿತರಿದ್ದರು.
ಸುಮಾ ಕೋಟೆಯವರ ಕನ್ನಡ ಗೀತೆಗಳು ಎಲ್ಲರ ಮೆಚ್ಚುಗೆ ಪಡೆಯಿತು. ಘಟಕದ ಕಾರ್ಯದರ್ಶಿಗಳಾದ ರವೀಂದ್ರ ರೈ ಕಲ್ಲಿಮಾರು ಸ್ವಾಗತಿಸಿ, ಕೋಶಾಧಿಕಾರಿಗಳಾದ ಲಯನ್ ಚಂದ್ರಹಾಸ ಶೆಟ್ಟಿ ವಂದಿಸಿ ಹಾಗೂ ವಿಜಯಲಕ್ಷ್ಮಿ ಕಟೀಲು ಕಾರ್ಯಕ್ರಮವನ್ನು ನಿರೂಪಿಸಿದರು.