ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ʻನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿʼ, ʻಪಂಕಜಶ್ರೀ ಸಾಹಿತ್ಯ ದತ್ತಿʼ, ʻಸತ್ಯವತಿ ವಿಜಯರಾಘವ ಚಾರಿಟೇಬಲ್ ಟ್ರಸ್ಟ್ ಧರ್ಮದರ್ಶಿಗಳ ದತ್ತಿʼ ಹಾಗೂ ʻಮಾಹಿತಿ ಹಕ್ಕು ತಜ್ಞ ಜೆ.ಎಂ. ರಾಜಶೇಖರ ದತ್ತಿʼ ಪ್ರಶಸ್ತಿಗಳ ಪ್ರದಾನ ಸಮಾರಂಭವು ದಿನಾಂಕ 06-08-2023ರಂದು ಪರಿಷತ್ತಿನ ಶ್ರೀ ಕೃಷ್ಣರಾಜ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ನಿರಂಜನ ವಾನಳ್ಳಿ ಅವರು “ದೇಶ ಕಟ್ಟುವಲ್ಲಿ ನಾಯಕರ ಪಾತ್ರ ಮುಖ್ಯವಲ್ಲ, ಬದಲಿಗೆ ನೆಲ ಮೂಲ ಸಂಸ್ಕೃತಿಯನ್ನು ಕಾಯುವ ಸಾಮಾನ್ಯ ಜನರ ಪಾತ್ರ ಮುಖ್ಯವಾದದು. ಆದರೆ ಸಾಮಾನ್ಯ ಜನರ ಕೊಡುಗೆಗಳನ್ನು ದಾಖಲಿಸುವವರು ಮರೆತು ಬಿಟ್ಟಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಸದ್ದಿಲ್ಲದೇ ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವವರನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಸಮಾಜದ ವಿವಿಧ ರಂಗಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸುವ ಕ್ರಾಂತಿಕಾರಕ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಮಾಡುತ್ತದೆ.” ಎಂದು ಹೆಮ್ಮೆ ವ್ಯಕ್ತ ಪಡಿಸಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಿಶ್ರಾಂತ ನ್ಯಾಯಮೂರ್ತಿಗಳಾದ ಶ್ರೀ ಬಿ.ವೀರಪ್ಪರವರು “ಈ ಜಗತ್ತಿನಲ್ಲಿ ಪ್ರಾಮಾಣಿಕರಿಗೆ ಕಷ್ಟಗಳು ಬರುತ್ತಲೇ ಇರುತ್ತದೆ. ಆದರೆ ಒಂದಿಲ್ಲೊಂದು ದಿನ ಅಂಥವರನ್ನು ಈ ಸಮಾಜ ಗುರುತಿಸುತ್ತದೆ. ಇವತ್ತಿನ ಎಲ್ಲಾ ರಂಗಗಳು ಕೆಡುತ್ತಿವೆ. ಸಂವಿಧಾನ, ಕಾಯ್ದೆ ಹಾಗೂ ಕಾನೂನುಗಳನ್ನು ದುರುಪಯೋಗ ಮಾಡಿಕೊಳ್ಳುವ ಜನರೇ ಜಾಸ್ತಿಯಾದ್ದಾರೆ. ಇಂಥವರ ಮಧ್ಯ ಕನ್ನಡ ಸಾಹಿತ್ಯ ಪರಿಷತ್ತು ಪ್ರಾಮಾಣಿಕವಾಗಿ ಕನ್ನಡ ಕಟ್ಟಿ ಬೆಳೆಸುವ ಕೆಲಸ ಮಾಡುತ್ತಿದೆ. ಪರಿಷತ್ತಿನ ಜೊತೆಗೆ ನಾವು ಸದಾ ನಿಂತು ಕನ್ನಡ ಕಟ್ಟುವ ಕೆಲಸಕ್ಕೆ ಸಹಕಾರಿಯಾಗಲಿದ್ದೇವೆ. ಒಳ್ಳೆಯ ಕೆಲಸ ಮಾಡುವಾಗ ತಗಾದೆ ಎತ್ತುವ ತುಂಟರು ಇದ್ದೇ ಇರುತ್ತಾರೆ. ಅವರ ಬಗ್ಗೆ ತಲೆಕೆಡಿಸಿಕೊಳ್ಳದೆ ಆತ್ಮಸಾಕ್ಷಿಗೆ ಗೌರವ ಕೊಟ್ಟು ನಮ್ಮ ಕರ್ತವ್ಯ ಮಾಡಬೇಕು.” ಎಂದು ಸಲಹೆ ನೀಡಿದರು.
ಪ್ರಶಸ್ತಿ ಪುರಸ್ಕೃತರ ಪರವಾಗಿ 2022ನೆಯ ನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ ಪ್ರಶಸ್ತಿ ಸ್ವಿಕರಿಸಿ ಮಾತನಾಡಿದ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಶ್ರೀ ಸುದರ್ಶನ ಚನ್ನಂಗಿಹಳ್ಳಿ ಅವರು ಕನ್ನಡ ಸಾಹಿತ್ಯ ಪರಿಷತ್ತು ಒಂದು ಪ್ರಶಸ್ತಿಯನ್ನು ಘೋಷಣೆ ಮಾಡುತ್ತಿದೆ ಎಂದರೆ ಅದರ ಗೌರವ ಅಗಣಿತ. ಪರಿಷತ್ತಿನ ಯಾವುದೇ ದತ್ತಿ ಪ್ರಶಸ್ತಿಯಾಗಲಿ ಅದಕ್ಕೆ ಸರಿ ಸಮನಾದ ಇನ್ನೊಂದು ಪ್ರಶಸ್ತಿಗಳು ಕಾಣುವುದಿಲ್ಲ. ಇಲ್ಲಿ ಕೊಡುವ ಪ್ರಶಸ್ತಿಗೆ ಅದರದ್ದೇ ಗೌರವ ಇರುತ್ತದೆ. ಅದರಲ್ಲಿಯೂ ಕ್ರಿಯಾಶೀಲ ಕೆಲಸ ಮಾಡಿದವರನ್ನು ಹುಡುಕಿ ಗೌರವಿಸುವುದು ಎಂದರೆ ಸ್ವಚ್ಛ ನಿರ್ಭಯ ಸಮಾಜ ನಿರ್ಮಾಣಕ್ಕೆ ಸದ್ದಿಲ್ಲದೇ ತೊಡಗಿಕೊಂಡಂತೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ನಿಜವಾದ ಸಾಧಕರನ್ನು ಹುಡುಕಿ ಗುರುತಿಸಿ ಗೌರವಿಸುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತದೆ. ಕೆಲಸ ಮಾಡುತ್ತಿದೆ” ಎಂದು ಹೇಳಿದರು.
2022ನೆಯ ಸಾಲಿನ ಪಂಕಜಶ್ರೀ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ಪತ್ರಕರ್ತೆ ಹಾಗೂ ಲೇಖಕಿ ಬೆಂಗಳೂರಿನ ಶ್ರೀಮತಿ ಶೋಭಾ ಹೆಚ್.ಜಿ.ಅವರಿಗೆ, 2023ನೆಯ ಸಾಲಿನ ಸತ್ಯವತಿ ವಿಜಯರಾಘವ ಚಾರಿಟಬಲ್ ಟ್ರಸ್ಟ್ ಧರ್ಮದರ್ಶಿಗಳ ದತ್ತಿ ಪ್ರಶಸ್ತಿಯನ್ನು ಬೆಂಗಳೂರಿನ ಕಲಾಶ್ರೀ ಡಾ.ವಿಜಯಮಾಲಾ ರಂಗನಾಥ್ ಮತ್ತು ಮೈಸೂರಿನ ಪತ್ರಕರ್ತ ಹಾಗೂ ಸಾಹಿತ್ಯ ಸಂಘಟಕ ಶ್ರೀ ಭೇರ್ಯ ರಾಮಕುಮಾರ ಇವರಿಗೆ ಹಾಗೂ 2023ನೆಯ ಸಾಲಿನ ಮಾಹಿತಿ ಹಕ್ಕು ತಜ್ಞ ಜೆ.ಎಂ.ರಾಜಶೇಖರ ದತ್ತಿ ಪ್ರಶಸ್ತಿಯನ್ನು ಬೆಳಗಾವಿ ಜಿಲ್ಲೆಯ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀ ಭೀಮಪ್ಪ ಗುಂಡಪ್ಪ ಗಡಾದ ಅವರಿಗೆ ಪ್ರದಾನ ಮಾಡಲಾಯಿತು.
ದತ್ತಿ ದಾನಿಗಳಾದ ಡಾ.ಎ.ಪುಷ್ಪಾ ಅಯ್ಯಂಗಾರ, ಶ್ರೀ ಎನ್.ಕೆ.ರಮೇಶ್ ಹಾಗೂ ಮೈಸೂರಿನ ಶಿಕ್ಷಕರ ಪ್ರತಿಭಾ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀ ಪಿ.ಮಹೇಶ್, ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ ಅವರು ಸ್ವಾಗತಿಸಿ, ಡಾ.ಪದ್ಮಿನಿ ನಾಗರಾಜು ಅವರು ವಂದಿಸಿ, ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಮ್.ಪಟೇಲ್ ಪಾಂಡು ಅವರು ಕಾರ್ಯಕ್ರಮವನ್ನು ನಿರೂಪಿಸಿದರು.