ಕಾಸರಗೋಡು : ಡಾ. ಎಂ.ಜಿ.ಆರ್. ಅರಸ್ ಇವರು ಸಂಸ್ಥಾಪಕ, ಪ್ರಧಾನ ಸಂಚಾಲಕರಾಗಿರುವ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಮೈಸೂರು ಇದರ ಕೇರಳ ಗಡಿನಾಡ ಘಟಕವಾದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ 2001ರಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ ಕಾಸರಗೋಡು ಇದರ ಅಧ್ಯಕ್ಷರಾದ ಶಿವರಾಮ ಕಾಸರಗೋಡು ಇವರ ಅಧ್ಯಕ್ಷತೆಯಲ್ಲಿ ಗಡಿನಾಡು ಕಾಸರಗೋಡಿನಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಈಗಾಗಲೇ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನವನ್ನು ಆರು ಬಾರಿ ಕಾಸರಗೋಡು ಜಿಲ್ಲೆಯಾದ್ಯಂತ ಏರ್ಪಡಿಸಲಾಗಿದೆ. ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 27 ಮಾರ್ಚ್ 2025ರ ಗುರುವಾರದಂದು ಕಾಸರಗೋಡು ಜಿಲ್ಲಾ ಏಳನೇ ‘ಚುಟುಕು ಸಾಹಿತ್ಯ ಸಮ್ಮೇಳನ’ವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ವಿ.ಕೆ.ಎಂ. ಕಲಾವಿದರು (ರಿ.) ಬೆಂಗಳೂರು ಇದರ ನೇತೃತ್ವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕನ್ನಡ ಗ್ರಾಮ ಕಾಸರಗೋಡು ಇದರ ಸಹಕಾರದಲ್ಲಿ ಕಾಸರಗೋಡು-ಬೆಂಗಳೂರು ಕನ್ನಡ ನಾಟಕೋತ್ಸವ -2025 ಕಾರ್ಯಕ್ರಮವನ್ನು ಸಂಯೋಜಿಸಲಾಗಿದೆ. ನೂರಾರು ಕಲಾವಿದರು, ರಂಗಭೂಮಿ ನಿರ್ದೇಶಕರು, ರಂಗ ನಟರು, ಸಾಹಿತಿಗಳು, ವಿದ್ವಾಂಸರು, ಮಾಧ್ಯಮದವರು, ಸಾಂಸ್ಕೃತಿಕ ಕಲಾಭಿಮಾನಿಗಳು ಭಾಗವಹಿಸಲಿದ್ದಾರೆ.
ಕಾಸರಗೋಡು ಜಿಲ್ಲಾ ಏಳನೇ ಚುಟುಕು ಸಾಹಿತ್ಯ ಸಮ್ಮೇಳನ -2025 ಇದರ ಅಂಗವಾಗಿ ಕಾಸರಗೋಡು ಜಿಲ್ಲೆ ಸಹಿತ ಕೇರಳ ರಾಜ್ಯದ 200 ಚುಟುಕು ಕವಿಗಳು ಹಾಗೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸಹಿತ ಕರ್ನಾಟಕ ರಾಜ್ಯದ 300 ಚುಟುಕು ಕವಿಗಳ ವಿಳಾಸದ ಡೈರೆಕ್ಟರಿಯನ್ನು ಪ್ರಕಟಿಸಲು ನಿರ್ಧರಿಸಲಾಗಿದೆ. ಆದುದರಿಂದ ಚುಟುಕು ಕವಿಗಳು, ಕವಯಿತ್ರಿಯರು ತಮ್ಮ ಹೆಸರು, ಮನೆ ವಿಳಾಸ, ಕಚೇರಿಯ ವಿಳಾಸ, ಪಿನ್ ಕೋಡ್, ಜನ್ಮ ದಿನಾಂಕ, ತಿಂಗಳು, ವರ್ಷ, ಜನ್ಮಸ್ಥಳ, ತಾಲೂಕು, ಜಿಲ್ಲೆ ಹಾಗೂ ತಮ್ಮ ಪ್ರಕಟಿತ ಕೃತಿಗಳ ಸಂಖ್ಯೆ, ಕೃತಿಗಳ ಮಾಹಿತಿಗಳು, ಚುಟುಕು ಪರಿಚಯ, ವಾಟ್ಸಾಪ್ ಮೊಬೈಲ್ ಸಂಖ್ಯೆಯನ್ನು ಬರಹದ ಮೂಲಕ ಕಳುಹಿಸಲು ಕೋರಲಾಗಿದೆ.
ಚುಟುಕು ಕವಿಗಳು, ಕವಯಿತ್ರಿಯರು ತಮ್ಮ ಹೆಸರು, ವಿಳಾಸವನ್ನು ಕನ್ನಡ ಮತ್ತು ಇಂಗ್ಲೀಷ್ ಕ್ಯಾಪಿಟಲ್ ಅಕ್ಷರಗಳಲ್ಲಿ ಬರೆಯಬೇಕು. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಶಾಲಾ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿ ಕವಿಗಳು ತಮ್ಮ ಮನೆ ಮತ್ತು ಶಾಲಾ -ಕಾಲೇಜಿನ ವಿಳಾಸ, ಮೊಬೈಲ್ ಸಂಖ್ಯೆಯನ್ನು ಬರೆದು ಕಳುಹಿಸಬೇಕು. ಅಂಚೆ ಕಾರ್ಡಿನಲ್ಲಿ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ 25 ಚುಟುಕು ಕವಿಗಳ ವಿಳಾಸಗಳ ಡೈರೆಕ್ಟರಿ- 2025 ಎಂದು ಪ್ರತ್ಯೇಕವಾಗಿ ಬರೆಯಬೇಕು.
ಕಾಸರಗೋಡು ಜಿಲ್ಲಾ ಏಳನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಕೇರಳ-ಕರ್ನಾಟಕ ರಾಜ್ಯಮಟ್ಟದ ಅಂಚೆ ಕಾರ್ಡ್ ಕಥಾ ಸ್ಪರ್ಧೆ ಮತ್ತು ಅಂಚೆ ಕಾರ್ಡ್ ಚುಟುಕು ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಅಂಚೆ ಕಾರ್ಡಿನಲ್ಲಿ ಸ್ವರಚಿತ ಕಥೆ ಮತ್ತು ಸ್ವರಚಿತ ಚುಟುಕುಗಳನ್ನು ಬರೆದು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಗಳನ್ನು ಬರೆದು ಕಳುಹಿಸಬೇಕು. ಸ್ಪರ್ಧಾಳುಗಳಿಗೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಎಲ್ಲರೂ ಮುಕ್ತವಾಗಿ ಭಾಗವಹಿಸಬಹುದು.
ಕಾಸರಗೋಡು ಜಿಲ್ಲಾ ಏಳನೇ ಚುಟುಕು ಸಮ್ಮೇಳನದಲ್ಲಿ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ, ರಾಜ್ಯಮಟ್ಟದ (ಅಂಚೆ ಕಾರ್ಡ್) ಕಥಾ ಗೋಷ್ಠಿಯಲ್ಲಿ ಚುಟುಕು ವಾಚಿಸಲು ತಮ್ಮ ಸ್ವರಚಿತ ನಾಲ್ಕು ಸಾಲಿನ ಮೂರು ಚುಟುಕುಗಳನ್ನು ಬರೆದು ಕಳುಹಿಸಬೇಕು. ಸಮ್ಮೇಳನದಲ್ಲಿ ಚುಟುಕು ಕವಿಗಳಿಗೆ ಪ್ರಮಾಣ ಪತ್ರ , ಸ್ಮರಣಿಕೆ ಮತ್ತು ಊಟೋಪಚಾರದ ವ್ಯವಸ್ಥೆ ಇರುತ್ತದೆ. ಹೊಸ ಕೃತಿಗಳನ್ನು ಬಿಡುಗಡೆ ಮಾಡಲು ಇಚ್ಚಿಸುವವರು ತಮ್ಮ ಪ್ರಕಟಿತ ಕೃತಿಯ 10 ಪ್ರತಿಯನ್ನು ಮುಂಚಿತವಾಗಿ ಕಳುಹಿಸಬೇಕು. ತಮ್ಮ ಕೃತಿಯ ಹೆಸರು, ಕೃತಿ ಪರಿಚಯ ಮತ್ತು ತಮ್ಮ ಚುಟುಕು ಪರಿಚಯವನ್ನು ಬರೆದು ಕಳುಹಿಸಬೇಕು.
ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ‘ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಗೌರವ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುವುದು. ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಮತ್ತು ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ವಿಳಾಸದ ಡೈರಕ್ಟರಿಯಲ್ಲಿ ಪ್ರಕಟಿಸಲಾಗುವುದು. ಆದುದರಿಂದ ಎಲ್ಲಾ ಜಿಲ್ಲಾ ಘಟಕದ ಅಧ್ಯಕ್ಷರನ್ನು ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಮುಖ್ಯ ಅತಿಥಿ ಹಾಗೂ ವಿಶೇಷ ಆಹ್ವಾನಿತರನ್ನಾಗಿ ಆಮಂತ್ರಿಸಲಾಗುವುದು.