ಮಂಗಳಗಂಗೋತ್ರಿ : ವಿವಿಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ‘ಬಿತ್ತಿ’ ಪತ್ರಿಕೆಯ ವತಿಯಿಂದ ಏರ್ಪಡಿಸಿದ್ದ ಕಥೆ ಮತ್ತು ಕಾವ್ಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಕವಿಗೋಷ್ಠಿಯು ದಿನಾಂಕ 29-12-2023ರಂದು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಸೋಮಣ್ಣ ಇವರು ಮಾತನಾಡಿ “ಕಾವ್ಯ ಮೌನದಲ್ಲಿ ಹುಟ್ಟುತ್ತದೆ. ಆದರೆ ಕಾವ್ಯ ರಚನೆಗೆ ವಸ್ತು ನಿರ್ವಹಣೆ ಸಾಮರ್ಥ್ಯ ಮತ್ತು ಭಾಷಾ ಪ್ರೌಢಿಮೆ ಬೇಕು. ಭಾಷೆಯನ್ನು ಲೀಲಾಜಾಲವಾಗಿ ಬಳಸಬೇಕಾದರೆ ಕವಿಗೆ ಭಾಷಾ ಪದ ಸಂಪತ್ತು ಒಲಿದಿರಬೇಕು” ಎಂದು ಹೇಳಿದರು.
ಅತಿಥಿಯಾಗಿ ಭಾಗವಹಿಸಿದ್ದ ಡಾ. ಧನಂಜಯ ಕುಂಬ್ಳೆ ಮಾತನಾಡಿ “ಕವಿಗಳು ತಮ್ಮ ಭಾವನೆಗೆ ತಕ್ಕುದಾದ ಪ್ರತಿಮೆಗಳನ್ನು ಕಂಡುಕೊಳ್ಳುವುದು ಮತ್ತು ಕಾವ್ಯ ಲಯ ಹಾಗೂ ಭಾಷೆಯ ಲಾಲಿತ್ಯವನ್ನು ಕರಗತ ಮಾಡಿಕೊಳ್ಳುವುದು ಮುಖ್ಯ” ಎಂದರು. ಉಪನ್ಯಾಸಕ ಡಾ. ಯಶು ಕುಮಾರ್ ಮಾತನಾಡಿ “ಕತೆ ಬರೆಯುವವರು ಘಟನೆಗಳನ್ನು ಸೃಷ್ಟಿಸುವ ಮತ್ತು ಪಾತ್ರನಿರ್ವಹಣೆಯ ಕೌಶಲವನ್ನು ಹೊಂದಬೇಕು. ನಿರಂತರವಾದ ಓದು ಈ ಕೌಶಲ್ಯವನ್ನು ಒದಗಿಸಬಲ್ಲುದು” ಎಂದರು.
ಸಮಾರಂಭದಲ್ಲಿ ತೃಪ್ತಿ, ಬಸವರಾಜ್ ಎಲ್. ಧಾರವಾಡ, ಯಕ್ಷಿತ್, ದಿವ್ಯ ಕೃಷ್ಣವೇಣಿ, ಪ್ರತೀಕ್ಷಾ, ಸಂಧ್ಯಾ, ದೇವಮ್ಮ, ಶಂಕರಿ, ಲಿಖಿತ, ವಿಸ್ಮಾ, ಮಂಗಳ, ವೀಕ್ಷಿತಾ, ಹರ್ಷಿತ ಎಸ್. ಕವಿತಾ ವಾಚನ ಮಾಡಿದರು. ‘ಬಿತ್ತಿ’ ಪತ್ರಿಕೆ ಸಂಪಾದಕ ಬ್ರಿಜೇಶ್ ಸ್ವಾಗತಿಸಿ, ದ್ವಿತೀಯ ಎಂ.ಎ. ವಿದ್ಯಾರ್ಥಿನಿ ವಿಸ್ಮಾ ವಂದಿಸಿ, ಉಪಸಂಪಾದಕಿ ಮಂಗಳ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.