ಮಂಗಳೂರು : ಕಲಾಂಗಣದಲ್ಲಿ ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 284 ನೇ ಕಾರ್ಯಕ್ರಮ ‘ಕವಿತಾ ಫುಲೊತಾ’ ದಿನಾಂಕ 03 ಆಗಸ್ಟ್ 2025ರಂದು ನಡೆಯಿತು.
ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಸಾಹಿತಿ ಗ್ಲೇಡಿಸ್ ರೇಗೊ ಇವರಿಗೆ ಲೇಖಕ ರೊನಿ ಅರುಣ್ ನುಡಿನಮನ ಸಲ್ಲಿಸಿದರು. ಪಶ್ಚಿಮ್ ಟ್ರಸ್ಟ್ ಇದರ ನಿರ್ದೇಶಕರಾದ ರೋಹಿತ್ ಸಾಂಕ್ತುಸ್ ಪುಷ್ಪಾಂಜಲಿ ಅರ್ಪಿಸಿದರು. ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಎಲ್ರೊನ್ ರೊಡ್ರಿಗಸ್, ಕ್ಲಾರಾ ಡಿಕುನ್ಹಾ, ರೈನಾ ಸಿಕ್ವೇರಾ, ಕೇರನ್ ಮಾಡ್ತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ಎವರೆಸ್ಟ್ ಕ್ರಾಸ್ತಾ ಇವರು ಗಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೊಂಕಣಿ ಕವಿ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ರೊನಿ ಕ್ರಾಸ್ತಾ ಕೆಲರಾಯ್ ಇವರ ಹನ್ನೆರಡು ಕವಿತೆಗಳಿಗೆ ಸ್ವರ ಸಂಯೋಜಿಸಿ, ಸಂಗೀತ ನೀಡಿ ಹಾಡಲಾಯಿತು. ಎರಿಕ್ ಒಝೇರಿಯೊ, ಜೊಯ್ಸ್ ಒಝೇರಿಯೊ, ಶಿಲ್ಪಾ ಕುಟಿನ್ಹಾ, ಸುನಿಲ್ ಮೊಂತೇರೊ, ರೊಬಿನ್ ಸಿಕ್ವೇರಾ, ರೈನಲ್ ಸಿಕ್ವೇರಾ, ಸೋನಲ್ ಮೊಂತೇರೊ, ಜೀವನ್ ಸಿದ್ದಿ, ಪ್ರಿಥುಮಾ ಮೊಂತೇರೊ, ಸಿಮೊನ್ ಮೊಂತೇರೊ ಮತ್ತು ಆಲನಿ ಡಿಸೋಜ ಈ ಹಾಡುಗಳನ್ನು ಪ್ರಸ್ತುತಪಡಿಸಿದರು. ಸಂಜಯ್ ರೊಡ್ರಿಗಸ್ ಸಂಗೀತ ನಿರ್ದೇಶನದಲ್ಲಿ ರೋಶನ್ ಬೇಳ, ಸಂಜೀತ್ ರೊಡ್ರಿಗಸ್, ವೀಕ್ಷಿತ್ ಮತ್ತು ಸ್ಟಾಲಿನ್ ಡಿಸೋಜ ಸಂಗೀತ ನೀಡಿ ಸಹಕರಿಸಿದರು.
ಮಾಂಯ್‌ಗೇ ಮ್ಹಜ್ಯೆ ಕೊಂಕಣಿ (ತಾಯೇ ಕೊಂಕಣಿ) ಹಾಡಿಗೆ ರಾಹುಲ್ ಪಿಂಟೊ ಸಂಯೋಜಿಸಿದ ನೃತ್ಯವನ್ನು ನಾಚ್ ಸೊಭಾಣ್ ಸದಸ್ಯೆ ಡೆಲಿಶಿಯಾ ಪಿರೇರಾ ಪ್ರಸ್ತುತ ಪಡಿಸಿದರು. ಈ ಹಾಡಿನ ಮೇಲೆ ಕಲಾವಿದ ವಿಲ್ಸನ್ ಕಯ್ಯಾರ್ ರಚಿಸಿದ ಚಿತ್ರವನ್ನು ಕಲಾವಿದರ ಸಹಾಯಾರ್ಥ ಹರಾಜು ಹಾಕಲಾಯಿತು. ಭಾಷಾಪ್ರೇಮಿ ಒಲ್ವಿನ್ ರೊಡ್ರಿಗಸ್ ಹರಾಜು ಗೆದ್ದರು. ಗ್ಲೋರಿಯಾ ವೇಗಸ್ ಹರಾಜು ನಡೆಸಲು ಸಹಕರಿಸಿದರು.
ಕವಿತೆಗಳು ಹಾಡುಗಳಾದ ಪರಿಯನ್ನು ಸುಂದರವಾಗಿ ವಿವರಿಸಿ, ರೊನಿ ಕ್ರಾಸ್ತಾ ಸಂಗೀತ ಸಂಜೆಯನ್ನು ನಿರೂಪಿಸಿದರು.

