ಮುಳ್ಳೇರಿಯ : ಹಿರಿಯ ಸಾಹಿತಿ, ಬಹುಮುಖ ವ್ಯಕ್ತಿತ್ವದ ನಾಡೋಜಾ ಡಾ. ಕಯ್ಯಾರ ಕಿಂಞಣ್ಣ ರೈ ಅವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮವು ದಿನಾಂಕ 10-06-2024ರ ಸೋಮವಾರದಂದು ಮುಳ್ಳೇರಿಯ ಸಮೀಪದ ಕುಂಟಾರಿನ ಎ. ಯು. ಪಿ. ಶಾಲೆಯಲ್ಲಿ ನಡೆಯಿತು.
ಶಾಲೆಯ ವಿದ್ಯಾರ್ಥಿಗಳಾದ ಹರಿಕೃಷ್ಣ, ಕಾವ್ಯ, ದೀಕ್ಷಿತ್ ಮೊದಲಾದವರು ಕಯ್ಯಾರರ ಬದುಕು ಹಾಗೂ ಸಾಹಿತ್ಯ ಬಗ್ಗೆ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ಭವಿತ್, ಫಾಸಿಲ್, ಬೇಬಿ ಲಿಖಿತಾ, ಅನ್ವಿತಾ ಹಾಗೂ ಶಿವಾನಿ ಕೆ. ಇವರು ಕಯ್ಯಾರರು ರಚಿಸಿದ ಹಾಡುಗಳನ್ನು ಹಾಡಿದರು. ಈ ಸಂದರ್ಭದಲ್ಲಿ ಶಾಲೆಯ ಹಿರಿಯ ಶಿಕ್ಷಕಿ ದಾಕ್ಷಾಯಿಣಿ ಅವರ ನೇತೃತ್ವದಲ್ಲಿ ಕಯ್ಯಾರ ಕಿಂಞಣ್ಣ ರೈ ಅವರ ಕುರಿತ ರಸಪ್ರಶ್ನೆ ಸ್ಪರ್ಧೆ ನಡೆಯಿತು. ವಿದ್ಯಾರ್ಥಿಗಳಾದ ಹರಿಕೃಷ್ಣ ಹಾಗೂ ರನಾಫ್ ಫಾತಿಮಾ ಅನುಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದರು. ಸಭಾ ಕಾರ್ಯಕ್ರಮದ ಬಳಿಕ ವ್ಯಂಗ್ಯಚಿತ್ರಕಾರ ವಿರಾಜ್ ಅಡೂರು ಇವರಿಂದ ವ್ಯಂಗ್ಯಚಿತ್ರ ರಚನಾ ತರಬೇತಿ ಶಿಬಿರ ನಡೆಯಿತು. ವ್ಯಂಗ್ಯಚಿತ್ರ ರಚನೆಯಲ್ಲಿ ಮಕ್ಕಳು ಗಮನಿಸಬೇಕಾದ ಅಂಶಗಳು, ಚಿತ್ರಗಳ ಗಾತ್ರದಲ್ಲಿನ ಬದ್ಧತೆಗಳು, ವ್ಯಂಗ್ಯಚಿತ್ರಗಳಿಂದ ಭಾವ ಹೊಮ್ಮಿಸುವ ಶೈಲಿ ಮೊದಲಾದ ವಿಚಾರಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಯಿತು. ಶಿಬಿರದಲ್ಲಿ ನಡೆದ ಚಿತ್ರರಚನಾ ಸ್ಪರ್ಧೆಯಲ್ಲಿ ಮಹಮ್ಮದ್ ರಾಯಿಸ್ ಹಾಗೂ ಮುಸ್ತಫಾ ಅವರು ಅನುಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿಯರಾದ ಸುಮಂಗಲಾ ತಂತ್ರಿ, ವಿದ್ಯಾಗೌರಿ ಟೀಚರ್ ಹಾಗೂ ವಿಜಯಲಕ್ಷ್ಮೀ ಟೀಚರ್ ಸಹಕರಿಸಿದ್ದರು. ಸುಮಾರು 50ಕ್ಕೂ ಹೆಚ್ಚು ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು.

