ತೆಕ್ಕಟ್ಟೆ : ತೆಕ್ಕಟ್ಟೆಯ ಹಯಗೀವ ಕಲ್ಯಾಣ ಮಂಟಪದಲ್ಲಿ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಆಯೋಜಿಸಿದ ಯಶಸ್ವಿ ಕಲಾವೃಂದದ ಬೆಳ್ಳಿ ಹಬ್ಬದ ಪ್ರಯುಕ್ತ ಶ್ವೇತಯಾನ ಶ್ವೇತ ಸಂಜೆ-13 ಕಾರ್ಯಕ್ರಮವು ದಿನಾಂಕ 31-03-2024 ರಂದು ನಡೆಯಿತು.


ಕಾರ್ಯಕ್ರಮಮವನ್ನು ಉದ್ಘಾಟಿಸಿ ಮಾತನಾಡಿದ ಯಕ್ಷಗಾನದ ಚಿಂತಕ ವಿಮರ್ಶಕರಾದ ಹೆಚ್. ಸುಜಯೀಂದ್ರ ಹಂದೆ “ಕಲಾ ಮಾದ್ಯಮಗಳಿಗೆ ಭಾಷೆ, ದೇಶ ಹಾಗೂ ಧರ್ಮಗಳ ಎಲ್ಲೆಯನ್ನು ಮೀರಿ ಜಗದ ಜನರ ಮನಸ್ಸುಗಳನ್ನು ಬೆಸೆಯುವ ವಿಶಿಷ್ಟ ಗುಣವಿದೆ. ಅದರಲ್ಲಿಯೂ ಯಕ್ಷಗಾನ ತನ್ನ ಅನನ್ಯತೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಯಕ್ಷಗಾನದ ನೇಪಥ್ಯ ಸಹಾಯಕರನ್ನೂ ಒಳಗೊಂಡು ಸರ್ವ ಕಲಾವಿದರ ಸಂಘಟಕರ ಪರಿಶ್ರಮ ಸಾರ್ಥಕವಾಗಬೇಕಾದರೆ ರಾಜ್ಯ ಕಲೆಯಾಗಿ ಮಾನ್ಯತೆ ಪಡೆಯಬೇಕು.” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ತೆಕ್ಕಟ್ಟೆ ಅವರನ್ನು ಸನ್ಮಾನಿಸಲಾಯಿತು.


ಯಕ್ಷಾಂಗಣ ಟ್ರಸ್ಟಿನ ಸಂಚಾಲಕ ಸುದರ್ಶನ ಉರಾಳ, ಯಶಸ್ವಿ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಕಾರ್ಯದರ್ಶಿ ವೆಂಕಟೇಶ ವೈದ್ಯ, ಬೆಳ್ಳಿಹಬ್ಬ ಸಮಿತಿಯ ಉಪಾಧ್ಯಕ್ಷ ಗಣಪತಿ ಶ್ರೀಯಾನ್, ಪ್ರಧಾನ ಕಾರ್ಯದರ್ಶಿ ಹೆರಿಯ ಮಾಸ್ಟರ್ ಉಪಸ್ಥಿತರಿದ್ದರು.


ಸಭಾಕಾರ್ಯಕ್ರಮದ ಬಳಿಕ ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ, ಸುದೀಪ ಉರಾಳ, ದಿನೇಶ್ ಕನ್ನಾರ್, ಸ್ಪೂರ್ತಿ ಭಟ್, ಸತೀಶ್ ಹಾಲಾಡಿ, ರಾಜೇಶ್ ಬೈಕಾಡಿ, ರಾಘವೇಂದ್ರ ತುಂಗ, ಪ್ರಶಾಂತ್ ಆಚಾರ್, ರಾಜು ಪೂಜಾರಿ ಇನ್ನಿತರರನ್ನು ಒಳಗೊಂಡ “ಕೃಷ್ಣಲೀಲೆ” ಯಕ್ಷಗಾನ ಪ್ರದರ್ಶನಗೊಂಡಿತು.