ಕಾಸರಗೋಡು : ಕೇರಳ ಪೋಕ್ಲೋರ್ ಅಕಾಡಮಿ ಪ್ರಶಸ್ತಿ – 2022ನೇ ಸಾಲಿನ ಪ್ರಶಸ್ತಿಗೆ ರಮೇಶ್ ಶೆಟ್ಟಿ ಬಾಯಾರ್ ಆಯ್ಕೆಯಾಗಿದ್ದಾರೆ. ಯಕ್ಷಗಾನದ ಪ್ರಸಿದ್ಧ ಕಲಾವಿದ ಕೆ. ರಮೇಶ್ ಶೆಟ್ಟಿ ಬಾಯಾರ್ ಅವರ ಕಲಾಕ್ಷೇತ್ರದ ಸಾಧನೆಯನ್ನು ಗುರುತಿಸಿ ಕೇರಳ ಸರಕಾರ 2022ರಸಾಲಿನ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ರಮೇಶ್ ಶೆಟ್ಟಿ ಬಾಯಾರ್ ಅವರು ಮಂಜೇಶ್ವರ ತಾಲೂಕಿನ ಪೈವಳಿಕೆ ಪಂಚಾಯಿತಿನ ಬಾಯಾರು ನಿವಾಸಿ. ಸುಮಾರು 57 ವರ್ಷದ ಕಲಾಅನುಭವಿ. ವೇಷಧಾರಿಯಾಗಿ, ನಿರ್ದೇಶಕರಾಗಿ, ಪ್ರಸಾಧನ ಕಲಾವಿದನಾಗಿ, ಯಕ್ಷಗಾನ ಶಿಕ್ಷಕನಾಗಿ ಹಾಗೂ ಹಿಮ್ಮೇಳವ ವಾದಕರಾಗಿ ಪ್ರಸಿದ್ಧರು. ಇವರು ಯಕ್ಷಗಾನ ಕಲಾವಿದ ಪ್ರಸಿದ್ದ ಸ್ತ್ರೀ ವೇಷಧಾರಿ ದಿ. ಐತ್ತಪ್ಪ ಶೆಟ್ಟಿ ಕುಳ್ಯಾರು ಮತ್ತು ಕಲ್ಯಾಣಿ ಹೆಂಗ್ಸು ಇವರ ಸುಪುತ್ರ. ತನ್ನ 12ನೇ ವಯಸ್ಸಿನಲ್ಲಿಯೇ ಯಕ್ಷಗಾನದಲ್ಲಿ ಅಭಿನಯಿಸಲು ಪ್ರಾರಂಭಿಸಿದ ರಮೇಶ್ ಶೆಟ್ಟಿ ತಂದೆಯಿಂದಲೇ ಪ್ರಾಥಮಿಕ ಯಕ್ಷ ಶಿಕ್ಷಣ ಹಾಗೂ ದಿ. ಪ್ರಕಾಶ ಚಂದ್ರ ರಾವ್ ಬಾಯಾರು ಇವರಿಂದ ಯಕ್ಷಗಾನದ ಸಂಪೂರ್ಣ ತರಬೇತಿ ಪಡೆದು ಯಕ್ಷಗಾನದ ಎಲ್ಲಾ ಪ್ರಕಾರದ ವೇಷಗಳನ್ನು ಸಮರ್ಥವಾಗಿ ನಿಭಾಯಿಸಿದವರು.
ದಕ್ಷಾಧ್ವರ, ಇಂದ್ರಜಿತು ಕಾಳಗ, ದೇವೀ ಮಹಾತ್ಮೆ, ಬಪ್ಪನಾಡು ಕ್ಷೇತ್ರ ಮಹಾತ್ಮೆ, ಕಂಸವಧೆ, ಹಿರಣ್ಯಾಕ್ಷ ವಧೆ, ಗದಾಯುದ್ಧ, ಜಾಂಬವತಿ ಕಲ್ಯಾಣ ಮುಂತಾದ 35ಕ್ಕೂ ಹೆಚ್ಚು ಪ್ರಸಂಗಗಳಲ್ಲಿ ಪ್ರಭಾವತಿ, ಗೌರಿ, ಚಿತ್ರಾಂಗದೆ, ಮೋಹಿನಿ, ರಂಬೆ, ಭಾರ್ಗವ, ರಾಮ, ಲಕ್ಷ್ಮಣ, ಬಾಬ್ರುವಾಹನ, ಕೃಷ್ಣ, ಅಭಿಮನ್ಯು, ದೇವೇಂದ್ರ ಹೀಗೆ ಅನೇಕ ಪಾತ್ರಗಳಲ್ಲಿ ಅಭಿನಯಿಸಿ ಜನಮೆಚ್ಚುಗೆ ಗಳಿಸಿದವರು. ನಾಟಕಗಳ ಬಗ್ಗೆಯೂ ಒಲವು ಹೊಂದಿರುವ ಇವರು ಹಲವಾರು ತುಳು ಹಾಗೂ ಕನ್ನಡ ನಾಟಕಗಳಲ್ಲಿ ಕಲಾವಿದರಾಗಿ ಹಾಗೂ ಪ್ರಸಾದನ ಕಲಾವಿದರರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇವರ ಕಲಾಸೇವೆಯನ್ನು ಗುರುತಿಸಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದವು ‘ಸುವರ್ಣ ಕನ್ನಡಿಗ’ ಪ್ರಶಸ್ತಿ, ಶ್ರೀ ಮಹಾಲಕ್ಷ್ಮಿ ಪ್ರತಿಷ್ಠಾನ ಶ್ರೀಧಾಮ ಮಾಣಿಲದಿಂದ ‘ಯಕ್ಷ ಸಂರಕ್ಷ’ ಪ್ರಶಸ್ತಿ , ಬಹರೈನ್ ಕನ್ನಡ ಸಂಘದಿಂದ ‘ಯಕ್ಷ ಗುರು’ ಬಿರುದು, ಯಕ್ಷ ಮಿತ್ರರು ದುಬೈ, ಮಸ್ಕತ್ ಕನ್ನಡ ಸಂಘ ಹೀಗೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನ ಹಾಗೂ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಈ ಸನ್ಮಾನ ಪ್ರಶಸ್ತಿಗಳ ಗೌರವಗಳು ಇವರ ಪ್ರಾಮಾಣಿಕ ಸಾಧನೆಗೆ ಸಂದ ಗೌರವ.