ಹೊನ್ನಾವರ : ಹೊನ್ನಾವರ ತಾಲೂಕಿನ ಗುಣವಂತೆಯ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಸಂಸ್ಥೆಗೆ ವಿಶ್ವಸಂಸ್ಥೆಯ ಮಾನ್ಯತೆ, ಗೌರವ ದೊರೆತಿದೆ ಎಂದು ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ.
2024ರ ಜೂನ್ ತಿಂಗಳಿನಲ್ಲಿ ಯುನೆಸ್ಕೊ ಮುಖ್ಯ ಕಚೇರಿಯಲ್ಲಿ ನಡೆದ 10ನೇ ಅಧಿವೇಶನದಲ್ಲಿ ಮಂಡಳಿಗೆ ಮಾನ್ಯತೆ ಘೋಷಿಸಲಾಗಿದೆ. ಯುನೆಸ್ಕೊ 2003ರ ಅಮೂರ್ತ ಸಾಂಸ್ಕೃತಿಕ ಪರಂಪರೆ, ಸಂರಕ್ಷಣೆ, ಆಂತರಿಕ ಸಮಿತಿಗೆ ಸಲಹೆ ಮಾಡಲು ಮಂಡಳಿ ಮಾನ್ಯತೆ ಪಡೆದಿದೆ ಎಂದು ತಿಳಿಸಿದ್ದಾರೆ.
ಯಕ್ಷಗಾನ ಸಂಸ್ಥೆಯೊಂದು ವಿಶ್ವಸಂಸ್ಥೆಯ ಮಾನ್ಯತೆಗೆ ಪಾತ್ರರಾಗಿರುವುದು ಇದೇ ಪ್ರಥಮ ಬಾರಿ. ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದಿರುವ ಕೆರೆಮನೆ ಯಕ್ಷಗಾನ ಮಂಡಳಿ ಯಕ್ಷಗಾನ ರಂಗ ಭೂಮಿಯ ಇತಿಹಾಸವನ್ನು ಹಲವು ಸರ್ವ ಪ್ರಥಮಗಳ ದಾಖಲೆ ನಿರ್ಮಿಸಿದ್ದು, ವಿಶ್ವಸಂಸ್ಥೆಯ ಗೌರವ ಪಡೆದುಕೊಂಡಿದೆ.
ಯುನೆಸ್ಕೋ ಮಾನ್ಯತೆಯು ಇಡಗುಂಜಿ ಮಂಡಳಿ ಸುಧೀರ್ಘವಾಗಿ ನಡೆಸುತ್ತಾ ಬಂದ ಯಕ್ಷಗಾನದ ಸಂವರ್ಧನೆ, ಪರಂಪರೆಯ ಪ್ರಸಾರ, ಪ್ರಚಾರ ಹಾಗೂ ದಾಖಲಾತಿ ಈ ಎಲ್ಲಾ ಪ್ರಯತ್ನ ಹಾಗೂ ಅಂತಾರಾಷ್ಟ್ರೀಯ ಸಾಧನೆಗೆ ಸಾಂಸ್ಕೃತಿಕ ಪರಂಪರೆಯ ಸಮುದಾಯದಲ್ಲಿ ಸಿಕ್ಕ ಗೌರವ ಎಂದು ಕೆರೆಮನೆ ಶಿವಾನಂದ ಹೆಗಡೆ ಸಂತಸ ವ್ಯಕ್ತಪಡಿಸಿದ್ದಾರೆ. 90ರ ಸಂಭ್ರಮದಲ್ಲಿರುವ ಕೆರೆಮನೆ ಯಕ್ಷಗಾನ ಮಂಡಳಿ ‘ನಾತ್ಯೋತ್ಸವ’, ‘ರಾಷ್ಟ್ರೀಯ ಅಧ್ಯಯನ’ ಕಾರ್ಯಾಗಾರ ಮುಂತಾದ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.