ಬೆಂಗಳೂರು : ‘ಸಮಷ್ಟಿ’ ಕನ್ನಡ ರಂಗತಂಡವು ನೀನಾಸಂ ಪದವೀಧರ ಮಂಜುನಾಥ ಎಲ್. ಬಡಿಗೇರ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಖ್ವಾಜಾ ನಸ್ರುದ್ದೀನ್’ ಎನ್ನುವ ಕನ್ನಡ ನಾಟಕವನ್ನು ದಿನಾಂಕ 07 ಮೇ 2025ರಂದು ರಂಗಶಂಕರದಲ್ಲಿ ಸಂಜೆ 7-30ಕ್ಕೆ ಪ್ರದರ್ಶಿಸಲಿದೆ.
ನಾಟಕದ ಬಗ್ಗೆ : ಖ್ವಾಜಾ ನಸ್ರುದ್ದೀನನ ಹೆಸರು ಕೇಳದ ದೇಶವೇ ಈ ಪ್ರಪಂಚದಲ್ಲಿ ಇಲ್ಲವೆಂದು ಹೇಳಬೇಕು. ಐತಿಹಾಸಿಕ ನೆಲೆಯಲ್ಲಿ ಅವನು ಬದುಕಿದ್ದಕ್ಕೆ ಇರುವ ಪುರಾವೆಗಳೆಲ್ಲಾ ಇದೆ ಮತ್ತು ಇಲ್ಲ ಅನ್ನುವಂತಿದೆ. ಅರೇಬಿಯಾದ ಇಸ್ಲಾಮಿಕ್ ಜಾನಪದ ಕತೆಗಳಲ್ಲಿ ಸದಾ ಕತ್ತೆಯೊಂದಿಗೆ ಬರುವ ಈ ಅಲೆಮಾರಿ ನಾಯಕ, ತನ್ನ ಹಾಸ್ಯಪ್ರಜ್ಞೆ, ಬುದ್ಧಿವಂತಿಕೆ, ಹೃದಯವಂತಿಕೆ, ಮಾನವೀಯತೆ ಇವೆಲ್ಲಾ ಗುಣಗಳು ಒಟ್ಟಿಗೆ ಮೇಳೈಸಿರುವ ವಿಶಿಷ್ಟ ಪಾತ್ರ.
ಪ್ರಸ್ತುತ ಸಮಷ್ಟಿಯ ಈ ನಾಟಕವು ‘ಅಡ್ವೆಂಚರ್ಸ್ ಇನ್ ಭುಕಾರ’ ಎಂಬ ರಷ್ಯನ್ ಪುಸ್ತಕವನ್ನು ಆಧರಿಸಿ ಕಟ್ಟಲಾಗಿದೆ. ಇದನ್ನು ಕನ್ನಡಕ್ಕೆ ಅನುವಾದಿಸಿದವರು ಎಲ್. ಗುಂಡಪ್ಪನವರು. ಈವರೆಗೂ ಪ್ರಪಂಚದಾದ್ಯಂತ ಇವನ ಬಗ್ಗೆ ಬೇರೆ ಬೇರೆ ಭಾಷೆಗಳಲ್ಲಿ ಸಿನೇಮಾ, ಧಾರಾವಾಹಿಗಳು ಬಂದಿರುವುದು ಇವನ ಪ್ರಸ್ತುತತೆಗೆ ಸಾಕ್ಷಿ. ಆದರೆ ಕನ್ನಡದಲ್ಲಿ ಇವನನ್ನು ಇಡಿಯಾಗಿ ಹಿಡಿಯುವ ಪ್ರಯತ್ನ ಇದೇ ಮೊದಲು. ಧರ್ಮದ ಹೆಸರಿನಲ್ಲಿನ ಬೂಟಾಟಿಕೆಯನ್ನು ಧರ್ಮ ಸೂಕ್ಷ್ಮತೆಯಿಂದಲೇ ನಿವಾರಿಸುತ್ತಾ, ಶೋಶಿತ ಜನರ ಪರವಾಗಿ, ಸರ್ವಾಧಿಕಾರ ವ್ಯವಸ್ಥೆಯ ವಿರುದ್ಧ ದ್ವನಿ ಎತ್ತುವ ಆತ ನಾಟಕದ ಉದ್ದಗಲಕ್ಕೂ ನಗೆ ಹುಟ್ಟಿಸುತ್ತಲೇ ಗಂಭೀರ ಪಾತ್ರವಾಗಿ ಬಿಡುತ್ತಾನೆ. ಪ್ರಸ್ತುತ ಪ್ರಯೋಗವು ಅತನ ಜೀವನ ಪಯಣದ ಅನೇಕ ಪ್ರಸಂಗಗಳನ್ನು ಹಾಸ್ಯಮಯ ಸನ್ನಿವೇಶಗಳಿಂದ ಕಟ್ಟಿಕೊಡುವ ಪ್ರಯತ್ನವಾಗಿದೆ.
ನಿರ್ದೇಶಕರ ಬಗ್ಗೆ : ಮಂಜುನಾಥ ಎಲ್. ಬಡಿಗೇರ ಇವರು ನೀನಾಸಂ ರಂಗಶಿಕ್ಷಣ ಕೇಂದ್ರದ ಪದವೀಧರರಾಗಿದ್ದು, ತಿರುಗಾಟದಲ್ಲಿ ನಟರಾಗಿ, ನಿರ್ದೇಶಕರಾಗಿ ದುಡಿದಿದ್ದಾರೆ. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಶಾಸ್ತ್ರೀಯವಾಗಿ ಯಕ್ಷಗಾನವನ್ನು ಅಭ್ಯಾಸ ಮಾಡಿರುವ ಇವರು ರಾಮನಗರದ ಜಾನಪದ ಲೋಕದಲ್ಲಿ ಜಾನಪದ ಡಿಪ್ಲೋಮಾ ಮಾಡಿರುತ್ತಾರೆ. ಪ್ರಸ್ತುತ ಬೆಂಗಳೂರಿನ ಸಮಷ್ಟಿ ತಂಡದಲ್ಲಿ ನಟರಾಗಿ, ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದುವರೆಗೆ ಇವರು ಹರಿಣಾಭಿಸರಣ, ಮಿಸ್. ಸದಾರಮೆ, ಬೊಮ್ಮನಹಳ್ಳಿಯ ಕಿಂದರಿ ಜೋಗಿ, ಕಥನ, ಸಾಫಲ್ಯ, ಪರಿತ್ಯಕ್ತ, ಸತ್ಯಾಗ್ರಹ, ಕೈದಿ, ಸಾಂಬಶಿವ ಪ್ರಹಸನ, ಚಿತ್ರಪಟ ರಾಮಾಯಣ, ದಶಾನನ ಸ್ವಪ್ನ ಸಿದ್ಧಿ, ಸೀತಾ ಸ್ವಯಂವರ, ಪ್ರಮೀಳಾರ್ಜುನೀಯಂ, ಚಿರಕುಮಾರ ಸಭಾ, ವಿಶಾಕೇ, ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಇವರು ಕಳೆದ 20 ವರ್ಷಗಳಿಂದ ರಂಗಭೂಮಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಂಡದ ಬಗ್ಗೆ : ಸಮಷ್ಟಿ ತಂಡವು 2000ದಲ್ಲಿ ಹುಟ್ಟಿಕೊಂಡ ತಂಡ. ಹೊಸ ಪ್ರತಿಭೆಗಳನ್ನು ಹುಡುಕಿ ಅವರಲ್ಲಿ ರಂಗಾಸಕ್ತಿಯನ್ನು ಬೆಳೆಸುವುದು ಇದರ ಉದ್ದೇಶ. ಈವರೆಗೆ ಇದು ‘ಆಷಾಡದ ಒಂದು ದಿನ’, ‘ಸಾಂಬಶಿವ ಪ್ರಹಸನ’, ‘ಮೃಚ್ಛಕಟಿಕ’, ‘ಹದ್ದು ಮೀರಿದ ಹಾದಿ’, ‘ಅಲೆಗಳಲ್ಲಿ ರಾಜಹಂಸಗಳು’, ‘ಹರಿಣಾಭಿಸರಣ’, ‘ಕಥನ’, ‘ಮಿಸ್. ಸದಾರಮೆ’, ‘ಕಥೆ ಹೇಳತೀವಿ’, ‘ಸಾಫಲ್ಯ’, ‘ಅವಾಂತರ’, ‘ಶಾಂಡಿಲ್ಯ ಪ್ರಹಸನ’, ‘ನಾಯೀಕತೆ’, ‘ಪ್ರಮೀಳಾರ್ಜುನೀಯಂ’, ‘ಚಿರಕುಮಾರ ಸಭಾ’, ‘ವಿಶಾಕೇ’, ‘ಚಿತ್ರಪಟ’, ‘ನೀರು ಕುಡಿಸಿದ ನೀರೆಯರು’, `ಮುಕ್ಕಾಂ ಪೋಸ್ಟ್ ಬೊಂಬಿಲವಾಡಿ’ ಮುಂತಾದ ನಾಟಕಗಳನ್ನು ಯಶಸ್ವಿಯಾಗಿ ರಂಗಕ್ಕೆ ತಂದಿದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ದೂರವಾಣಿ 9845163380, ಅಂತರ್ಜಾಲ : www.samashti.com